Wednesday, February 13, 2013

ತಿರುವ ಬಯಸಿದ ಅಂತ್ಯ


--------------------

ಸಾವಿನರಮನೆಯ ಹೊಸಿಲಲಿ ರಾಜಕುಮಾರಿ,
ಅಸೌಖ್ಯವೆಳೆತಂದಿತ್ತು ಬಿಡುಗಡೆಯ ಸ್ವರ್ಗದಂಚಿಗೆ.

ಕಾದಿದೆ ಬೇಕಾದ್ದ ತಿನುವ, ಕಹಿಮದ್ದುಗುಳುವ,
ನೋವ ಸೋಲಿಸುವ ಸ್ವತಂತ್ರ ಅರಸೊತ್ತಿಗೆ.

ನಗುತ ಬಲಗಾಲೆತ್ತಿ ಒಳಗಡಿಯಿಡಲಾಶಿಸುತಾ,
ಮೈಮನದ ಅಳಲಿಗೆ ತಿಲಾಂಜಲಿಯರ್ಪಿಸುತಾಳೆ.

ನಗೆಕಣ್ಣನೊಮ್ಮೆ ಹಿಂದೆ ಹೊರಳಿಸಿದೆ ಕೊನೆಯಾಸೆ

ಅದೋ.. ಕಾದಿದ್ದ ಪ್ರೇಮ ಕಣ್ತುಂಬಿ ಕೈಚಾಚಿ ಕರೆಯುತಿದೆ..

ಎಲ್ಲಿದ್ದೆ ಇಷ್ಟುದಿನ, ನಾನಿರದೆ ಹೇಗಿದ್ದೆ...
ನೂರು ಪ್ರಶ್ನೆಯೆಳೆ ಹಿಡಿದು ಕಾಲಿತ್ತ ಎಳೆಯುತಾಳೆ.

ಮೌನದ ನೂರುಮಾತುಗಳ ಅರ್ಥೈಸಿಕೊಳುತಾ,
ಬತ್ತಲೆ ನಿರುತ್ತರಕೆ ಕ್ಷಮೆಯುಡುಗೆ ಕೊಡುತಾಳೆ.

ಈಗಾಕೆಗೆ ಅರಮನೆಯೂ ಬೇಕಿಲ್ಲ, ಸ್ವಾತಂತ್ರ್ಯವೂ..
ನೋವಿಗೂ, ಪಥ್ಯಕೂ, ಮದ್ದಿಗೆಲ್ಲಕೂ ಸೈ ಅನ್ನುತಾಳೆ.

ಭಾರಕೆ ಕಣ್ಣೆವೆ ಮುಚ್ಚುತಿವೆ, ಆಕೆ ಬಿಡಿಸುತಾಳೆ,
ಅರೆ ಉಸಿರು ಹೊರಗುಳಿದುದ, ಒಳಗೆಳೆಯುತಾಳೆ.

ಮುಗಿದು ಬತ್ತಿಯೂ ಎಣ್ಣೆಯೂ ದೀಪವಾರುತಿದೆ,
ಕಂಡವರ, ಕಾಣದವರ ಎಣ್ಣೆ-ಬತ್ತಿಗೆ ಬೇಡುತಾಳೆ.

ಸಾವ ಯಾಚಕಿಯಾಗಿದ್ದವಳು ಕ್ಷಣದ ಹಿಂದೆ,
ಅದೇ ವಿಧಿಯಲಿಂದು ಕೆಲಕ್ಷಣಗಳ ಬೇಡುತಾಳೆ.

ವರವೋ, ಶಾಪವೋ- ಬಿಲ್ಲುಬಿಟ್ಟು ಹೊರಟ ಬಾಣ,
ತಲುಪಲವಳ ಧಾವಿಸಿದೆ ಸಾವು, ಅವಳೋಡುತಾಳೆ.

ಕಾಲ ಹಾಡಿದೆ ಬಾಳಗಾನದ ಕೊನೆಯ ಚರಣ,
ತಾನೇ ಶ್ರುತಿಯಾಗಿದ್ದಳು, ಈಗ ಕಿವಿಮುಚ್ಚುತಾಳೆ.

ಮುದ್ದಿಸಿ ಆಮಿಷವೊಡ್ಡಿ ಕೈಹಿಡಿದೊಯ್ಯುತಿದೆ ಸಾವು,
ವ್ಯರ್ಥ ಕೈಕಾಲು ಬಡಿದು ಕೂಸಂತೆ ಬರೆನೆನುತಾಳೆ.

ಅಸಹಾಯಕತೆ ಕೈಚೆಲ್ಲಿ ಬಸವಳಿದು ಕೂತಿದೆ,
ಪ್ರೇಮವದರೊಳು ಬಂಧಿ ನಿಂತಲ್ಲೇ ನಿಂತಿದೆ...

No comments:

Post a Comment