Friday, May 31, 2013

ನಾ ಬರುತಿರುವೆ.


ಆ ಎತ್ತರ ಎತ್ತರವೇ,
ನಾನಲ್ಲಿರಿಸಿದ್ದು ನಿನ್ನ,
ನೀನಿರುವುದಲ್ಲಿಯೇ...

ನೀ ಬಾಗುವುದಾದರೆನ್ನ
ಹಣೆ ಚುಂಬಿಸಲಿಕಿರಬೇಕು,
ತಪ್ಪು ಹೊರಲಾರದ್ದಕ್ಕಲ್ಲ.

ತಪ್ಪುಸರಿಗಳ ಸಾಪೇಕ್ಷತೆ
ಇಂದ್ದು ನಿನ್ನೆಯದಲ್ಲ,
ನಾಳೆಯಳಿವದ್ದೂ ಅಲ್ಲ..

ಇಂದು ಹೌದೆನಿಸಿದ್ದು ನಾಳೆ,
ನಿನಗೆ ಹಾಗನಿಸಿದ್ದು ನನಗೆ,
ಹಾಗನಿಸುವುದಿಲ್ಲ.

ಸತ್ಯಮಿಥ್ಯ, ಧರ್ಮಾಧರ್ಮಗಳೂ
ಹೀಗೆ ವೈದೃಶ್ಯ ಜೋಡಿಗಳೆಲ್ಲವೂ
ಸಾಪೇಕ್ಷ ಸಿದ್ಧಾಂತದಡಿಯಾಳುಗಳು..

ಒಂದಷ್ಟೇ ಇಂಥದ್ದು ನೋಡು ಜಗದಿ
ವೈದೃಶ್ಯ ಜೋಡಿಪದ ಬಂಧವಿಲ್ಲದ್ದು..
ಅದು ಪ್ರೇಮ... ಹಾಂ ಅದೇ..

ನನ್ನ ನಿನ್ನಲ್ಲಿ ಹಂಚಿಹೋದದ್ದು
ಹಂಚಲ್ಪಟ್ಟು ಇಮ್ಮಡಿಸಿದ್ದು...
ನೀಡಿದಷ್ಟೂ ವೃದ್ಧಿಯಾದದ್ದು..

ಬೆಳೆಯುತಾ ಆಯುಷ್ಯ
ಹೆಚ್ಚಿಸಿಕೊಳುವದ್ದು..
ಲೋಕರೂಢಿಗೆಂದೂ ಅರ್ಥವಾಗದ್ದು

ಜಟಿಲವೂ ಹೌದು, ಸರಳವೂ..
ನೋವೂ ಹೌದು, ನಲಿವೂ..
ನನದೂ ಹೌದು ನಿನದೂ...

ಏನನಾದರೂ ಸಾಗಿಸಬಲ್ಲುದು
ಒಂದುಗೂಡಿಸುವ ಸೇತುವದು,
ನಿರಾಕರಣೆಯೊಂದು ಬಿಟ್ಟು...

ಬಾಗದಿರು ಒಲವೇ...
ಇರು ನಿನ್ನೆತ್ತರಕೆ ನಾನೇರಲಿರುವೆ,
ತೂಕ ಕಳಕೊಳತಿರುವೆ,
ಹಗುರಾಗುತಿರುವೆ, ನಾ ಬರುತಿರುವೆ..

ಅಭಿನಂದನೆ, ಅಭಿವಂದನೆ...


ಅಲ್ಲೆಲ್ಲೋ ಮಳೆಹನಿಯೊಂದು ಹುಟ್ಟಿ
ನೆಲದೊಡಲ ತಾಕಿದ ಆ ಕ್ಷಣಕೆ,

ಒಳಹೊಕ್ಕು ಅಡಗಿದ್ದ ನಿಧಿ ಶೋಧಿಸಿ
ಕಂಪಾಗಿಸಿ ಗಾಳಿ ಹೆಗಲೇರಿಸಿದ ವಿಧಿಗೆ,

ಮೈಲುಮೈಲು ಸಾಗಿ ಹೊತ್ತದ ತಂದಿಲ್ಲಿ
ನನ್ನೆದೆ ಹೊಗಿಸಿ ನವಿರೇಳಿಸಿದ ಗಾಳಿಗೆ,

ಬಾಯ್ದೆರೆದಿದ್ದ ಚಿಪ್ಪೊಂದು ಸ್ವಾತಿಹನಿಗೆ
ಮುತ್ತಾದಂತೆ ಅಲ್ಲರಳಿದ ಕಾವ್ಯ ಸಂಭ್ರಮಕೆ...

ಇದೋ ಉಸಿರುಸಿರಲೂ ಅಕ್ಷಯವಾಗುವ
ಅಭಿನಂದನೆ, ಅಭಿವಂದನೆ...

ಅದೇ ಗಳಿಗೆ ಮತ್ತೊಡಮೂಡುವ ಸೂಚನೆಯಲಿ,
ನಾಳೆಯ ನಸುಕದ ಹೊತ್ತು ತರುವ ಶಕುನದಲಿ,
ಕಾಯಲಾರದೆನ್ನೆದೆ ನೂರು ಮರುಹುಟ್ಟಿಗಾಗಿ
ಇಂದೇ ಹಾರೈಸಿಬಿಟ್ಟಿದೆ....

ನಾನಿಲ್ಲವೇನೇ?


ಉದುರಿ ಬಿದ್ದಿವೆ ಅಂಗಳದ ತುಂಬ
ಹಳದಿ ರತ್ನಗಂಧಿಯ
ಹಳದಿ ಒಣಗಿದೆಲೆಗಳು
ಹಳದಿ ಪೂಸಿದ ಬಾಣಂತಿ ಹಸಿಮೈ
ಮಿಂದಿಳಿಸಿದ ಹೊನಲಧಾರೆಯಂತೆ...


ಕವುಚಿ ಬಿದ್ದಿವೆ ಅಲ್ಲೇ ಸ್ವಲ್ಪ ಪಕ್ಕ
ಕಳಚಿ ಅರಳಿಸಿದ ಋಣ
ಬಿಳಿ ಪಾರಿಜಾತ ಹೂಗಳು
ಇರುಳುಟ್ಟ ತಾರೆಸೀರೆ ಕಂಡಿಂದು
ಇಳೆಯುಟ್ಟ ಹೂಬುಟ್ಟದ ಸೀರೆಯಂತೆ...

ಮೆಲುಗಾಳಿ ತುಸುವೇ ಬೀಸಿದ್ದಕೆ
ಎಲೆ-ಹೂ ಹಾರಿ ದೂರಾಗುತಿವೆ.
ಮೈಮನ ತಣಿಸಿದರೂ ತಂಗಾಳಿ ಹೊತ್ತಿದೆ
ಹಳದಿ ಹೊಳೆ, ಬಿಳಿ ಸೀರೆ ಕಲ್ಪನೆ ಕದಡುವ,
ಗುಡಿಸಿಟ್ಟ ಅಂಗಳ ರಾಡಿಯಾಗುವ ಭಯ.

ಕಲ್ಪನೆಯ ಪಲ್ಲಕ್ಕಿಯಲಿ ಸಾರಿ
ನಗು ಚಂದದ ರಾಜಕುಮಾರಿ
ಮುಖ ಮಂಟಪಕಿಳಿದವಳು,
ಜೀಕಿ ಉಯ್ಯಾಲೆಯಾಡಿದವಳು
ತಂಗಾಳಿಯ ಸಂಚಿಗೆ ಬಿಳಿಚಿದಂತೆ....

ಹೆದರಬೇಡವೇ ನಗೆಯೇ....ನಾನಿಲ್ಲವೇ?!
ನೆಲಕಂಟಿಸಿದರಾಯ್ತು, ಅಲ್ಲ ಗೋಂದಿನಿಂದಲ್ಲ
ಹಾರಗೊಡದಿದ್ದರಾಯ್ತು, ಅಲ್ಲ ಭಾರವಿಟ್ಟಲ್ಲ,
ವಿಶ್ವಾಸದ, ನಂಬಿಕೆಯ ಹಸಿಹನಿ ಹಲವಿವೆಯಲ್ಲಾ...
ಹನಿಸಿದರಾಯ್ತು, ಕಲ್ಪನೆ- ಹೂ-ಎಲೆ ಚದುರದಂತೆ......

ಕಲ್ಪನೆಯಾದರೂ, ವಾಸ್ತವವಾದರೂ
ನನದಾಗಿದ್ದು, ನನ್ನೊಳಗಿನದು
ನಾ ಹಾರಗೊಡದೆ, ಬೀಳ್ಕೊಡದೆ
ಹೊರಗೆಂತು ಹಾರೀತು?!
ಬಿಟ್ಟೆಂತು ಹೋದೀತು?!
ಇಲ್ಲವೆಂದೆಂತಾದೀತು!?

Thursday, May 23, 2013

ಎಚ್ಚರಿಕೆ!!

ಬೆಂಕಿಯುರಿಯುತಿತ್ತು ಧಗಧಗ
ಗಾಳಿ ಬೀಸುತಿತ್ತು ಸರಾಗ
ಅದಕೆ ಶಂಕೆಯಿಲ್ಲ, ಇದಕೆ ಅಂಕೆಯಿಲ್ಲ.

ಎರಡು ಸಂಧಿಸಿದ ಗಳಿಗೆ
ತುಣುಕೊಂದು ಬೆಂಕಿಯದು
ಗಾಳಿಯೊಂದಲೆಯ ಮೇಲೇರಿ
ಒಮ್ಮೆ ಸೀದ, ಒಮ್ಮೆ ಸೊಟ್ಟ
ಏರುತೊಮ್ಮೆ, ಇಳಿಯುತೊಮ್ಮೆ
ಸುತ್ತುತಾ, ಮತ್ತೊಮ್ಮೆ ರೇಖೆಯಾಗುತಾ
ಹೀಗೆ ಸಾಗಿದವು
ಒಂದನೊಂದು ಸಂಭಾಳಿಸುತಾ..

ಗಾಳಿ ಹೊತ್ತ ಚೂರು
ಉರಿದು ಬೆಂಕಿಗಿಂತ ಜೋರು
ಪ್ರಕಾಶವೇ ತಾನೆಂದು ಬೀಗುತಿತ್ತು
ಹಳದಿಯ ಹುಮ್ಮಸ್ಸೆಲ್ಲ ಹೊತ್ತಿತ್ತು.
ಗಾಳಿ ಮೆಚ್ಚಿ ಮುದ್ದಿಡುತಿತ್ತು.
ಕಿಡಿಯಿನ್ನಷ್ಟು ಪ್ರಜ್ವಲಿಸುತಿತ್ತು.

ಉದುರಿದ್ದ ತರಗೆಲೆಯೆನುತಿತ್ತು
"ಕಾಲಾಯತಸ್ಮೈನ್ನಮಃ"
ಗಾಳಿತೇರಲಿ ಜ್ವಾಲೆ ಪೂಜೆ,
"ನಾನು" ಎಂಬುದೇ ಬೀಜಮಂತ್ರ
ಕಿಡಿಯೆಲೆಯ ಬಳಿಸಾರಿತು
ಅದಿದಕೆ ಇದದಕೇನೋ ಹೇಳಬಯಸಿತ್ತು.

ಎಲೆ ಕೊನೆ ಕೇಳುತಿತ್ತು,
ಜ್ವಾಲೆ ಉತ್ಥಾನ ಬಯಸಿತ್ತು
ಒಂದಕೊಂದು ತಾಗಿದ ಕ್ಷಣ
ಬಯಸಿದ ತಾಣಕಾಹ್ವಾನ
ಎಲೆ ಸುಟ್ಟ ಕಿಡಿಯವತಾರ
ಭಗಭಗನುರಿದು ಬೂದಿಯಲಿ ಸಮಾಪ್ತಿ.

ಗಾಳಿ ಬೀಸುತಿದೆ,
ಬೆಂಕಿಯುರಿಯುತಿದೆ.
ಇನ್ನೊಂದು ಕಿಡಿಯೆದ್ದೀತು,
ಗಾಳಿ ಹೊತ್ತು ಸಾಗೀತು, ಎಚ್ಚರಿಕೆ!ನಿನ್ನ ಜಾಡು, ನನ್ನ ಪಾಡು.


ನೀ ಬೆಳೆವ ಮಾತಾಡುತ್ತೀ,
ನಾನುಳಿಸಿಕೊಳುವ ಬಗೆ ಹುಡುಕುತ್ತೇನೆ.

ನೀ ವಿಸ್ತಾರಕೆಲ್ಲೆಡೆ ಶೋಧಿಸುತ್ತೀ,
ನಾ ಅಸ್ತಮಿಸುವ ರವಿಗಾಗಿ ಅಳುತ್ತೇನೆ.

ನೀ ಅರಳುವ ಗಳಿಗೆಗೆ ಕಾಯುತ್ತೀ,
ನಾ ಉದುರುವೆಲೆಯೊಳ ನಡೆಯುತ್ತೇನೆ.

ನಾನೇನು ಹೇಳಲಿ ಒಲವೇ...
ನೀನೇರುವೆತ್ತರ, ನಿನಗಾಗಿ ನನ್ನೆಲ್ಲಾ
ಆಶಯದಾಶ್ರಯತಾಣವೂ ಹೌದು.
ಅಲ್ಲೆನ್ನ ಕಲ್ಪಿಸಿಕೊಳಲಾಗದ
ಅಳುಕಿನಡಗುದಾಣವೂ ಹೌದು.

ನಿಜ, ನರಗೂ ಮರಕೂ ಒಂದೇ ವಿವಶತೆ.
ಅಲ್ಲಿ ಬೆಳೆವುದೆಂದರೆ ದೂರಾಗುವುದು ಅಷ್ಟೇ..
ಬೇರಿಗಂಟಿಕೊಂಡರೆ ಮರವೆನಿಸದ
ನೆಲಕೆ ದೂರಾಗದೆ ವಿಶಾಲವಾಗದ
ಅಸಹಾಯಕತೆ ಗ್ರಾಸ ಬೆಳವಣಿಗೆಗೆ ...

ಬೇರಿಳಿಸಿ ಮಕಾಡೆ ನೆಲಕಂಟುವ ನಿರ್ಧಾರ ನಾನು
ಸೂತ್ರವದೇ ಬಿಂದುವಪ್ಪಿದ ನಿರ್ಭಾರ ಗಾಳಿಪಟ ನೀನು.
ಬಿಡಿಸುವುದೇನು, ಸಡಿಲಿಸಲೂ ಆಗದ,
ಗಂಟಿನೆರಡು ತುದಿಗಳು ನಾವೀಗ.
ನೀ ಸಾಗಬೇಕು, ನಾ ಬರಲಾರೆ.

ಭಯ ನಾನು, ನಿಸ್ಸಂಶಯ ನೀನು,
ಜಡ ನಾನು, ನಿರಂತರ ನೀನು.
ನಿಂತಲ್ಲೇ ಹಿಂಬಾಲಿಸುವ ಕನಸೊಳಗೆ ನಾ,
ನಡೆಯುತಾ ನನ್ನೊಸಗೆಯ ಕಲ್ಪನೆಯಲಿ ನೀ.
ದಿನ ಹೀಗೇ ಸಾಗುತಿರಲು ಅಲ್ಲಲ್ಲೊಮ್ಮೊಮ್ಮೆ..

ನೀ ಮತ್ತೆ ಬೆಳೆಯುವ ಮಾತಾಡುತ್ತೀ..
ನಾನುಳಿಸಿಕೊಳುವ ಬಗೆ ಹುಡುಕುತ್ತೇನೆ.Wednesday, May 22, 2013

ಬುದ್ಧನ ಬೋಧಿವೃಕ್ಷ ಬಾಡಿದ್ದು.
ಬುದ್ಧನ ಬೋಧಿವೃಕ್ಷ ಬಾಡುತಿದೆಯಂತೆ..

ಮರ ಮರುಗದು ಇರದುದಕೆ
ಪ್ರತಿ ಕೇಳದು ತಾನಿತ್ತುದಕೆ.
ನರಗರ್ಥವಾಗದು ನಿಸ್ವಾರ್ಥತೆ,
ನಿರ್ಲಿಪ್ತತೆ, ನಿರಾಕಾರತೆ ಮತ್ತು ನಿರ್ಮಮತೆ...
ಅವ ಬಯಸುತಾನೆ.
ಕೀಳಿ, ಕಿತ್ತು, ಕೆತ್ತಿ, ಕೊನೆಗೆ ಕಡಿದೇ ಬಿಡುತಾನೆ ಖಾಲಿಯಾಗಿಸಿ.
ಇಲ್ಲ ಅತಿ ನಂಬುತಾನೆ,
ಮೆಚ್ಚಿ, ಮೆಚ್ಚಿಸಿ, ಅಪ್ಪಿಒರಗಿ, ಒಳಗಿಳಿದು,
ಆವರಿಸಲ್ಪಟ್ಟು ಕೊನೆಗೆ ತಾನಿಲ್ಲವಾಗುತಾನೆ ಖಾಲಿಯಾಗಿ.

ತನ್ನಂತೆ ಪರರ ಬಗೆದ ನರಮನಸು
ಮರಕೂ ಈವೆನೆಂದು ಹೊರಟಿದೆ.
ಸಿದ್ಧಾರ್ಥ ಬುದ್ಧನಾದೆಡೆಯ ಮಣ್ಣಿಗೆ
ತಾನೆರೆಯತೊಡಗಿದೆ,
ನೆಲೆಯ ಬೆಳಗತೊಡಗಿದೆ,
ಉದ್ಧಾರಕತೃವ ಉಪಕೃತವಾಗಿಸಿ
ತಾನೆತ್ತರಕೇರಬಯಸಿದೆ.

ಅಲ್ಲ......
ತಂಪಿತ್ತುದಕೆ ಕಂಪೀವುದಕೆ,
ಬೆಳಕಿತ್ತ ನೆಲೆಯ ಬೆಳಗಲಿಕೆ,
ಮಳೆಹೊತ್ತ ಬಸಿರ ತಣಿಸಲಿಕೆ,
ಉಸಿರಿತ್ತ ಹಸಿರಿಗೆ ನಮಿಸಲಿಕೆ
ಧಾವಿಸಿ ಬಹ ನರಜಾತ್ರೆಯಬ್ಬರಕಲ್ಲ....

ಬುದ್ಧನ ಹಿಂಬಾಲಿಸಿ,
ನುಡಿಗಳನುಚ್ಛರಿಸಿ,
ಮಂತ್ರ ಬದಲಾಯಿಸಿ,
ತಂತ್ರಗಳ ಅರಗಿಸಿ,
ಏನೇನು ಮಾಡಿದರೂ
ಮುಂದೊಬ್ಬ ಬುದ್ಧ ಹುಟ್ಟದುಳಿದುದಕೆ...

ನಾಳೆಯ ರೂಪಿಸುತಾ, ಕೂಡಿಕಳೆದು,
ವೇಳಾಪಟ್ಟಿ ಬರೆದು, ಅಕಾಶಕೇಣಿ ಹಾಕುತಾ
ಇಂದುಗಳ ಬದಿಸರಿಸುವ,
ಆಸೆಯ ಕೊನೆಯ ಸಾರುವಲ್ಲಿ
ಆಸೆಯನೇ ದಿಕ್ಸೂಚಿ ಮಾಡಿ ಸಾಗುವ,
ಆಸೆಗಾಸೆಯದೇ ಛದ್ಮವೇಷ ತೊಡಿಸುವ,
ಮೌಢ್ಯದ ಬಿರುಸ ನಾಲ್ಕು ತಲೆಮಾರಲೂ
ತಂಗಾಳಿ-ನೆರಳಿತ್ತು ಶಾಂತವಾಗಿಸಲಾಗದ ಕೊರಗಿಗೆ...

ಬುದ್ಧನ ಬೋಧಿವೃಕ್ಷ ಬಾಡುತಿದೆಯಂತೆ..Monday, May 20, 2013

ಸ್ಪಷ್ಟವಾಗದಿರು ಸತ್ಯವೇ...


ಇಂದು ಬೆಳಗಾಗಲಿಲ್ಲ,
ಬರೀ ಸೂರ್ಯನಷ್ಟೇ ಬಂದ.
ಭಾವಗಳಿಗಸ್ಪರ್ಶೆ ಉಷೆ
ಬಣ್ಣವುಟ್ಟರೂ ಒಪ್ಪವೆನಿಸದ
ಗೆಜ್ಜೆ ತೊಟ್ಟರೂ ಲಯವಿಲ್ಲದ
ನಗು ಇದ್ದರೂ ಸೊಗವೆನಿಸದ
ಸಪ್ಪೆ ನಡೆ, ಗೈರು ಅಂದಚಂದ.

ಕೋಳಿ ಕೂಗು ಕರ್ತವ್ಯವೆಂಬಂತೆ,
ಹಕ್ಕಿಯಿಂಚರ ಪಸೆ ಕಳಕೊಂಡಂತೆ
ದೂರ ದೇಗುಲದ ಗಂಟೆಯೂ,
ಗಡಿಯಾರದೆಚ್ಚರಿಕೆಯೂ ಒಂದೇ ಎಂಬಂತೆ,
ದಪ್ಪ ಚರ್ಮದ ಮನಕಿಂದು ಭಾವಜಾಡ್ಯತೆ.

ಒಳಗೆಲ್ಲ ಏನೋ ಆವರಿಸಿದಂತೆ
ತನುಮನದ ಪರಿಧಿ ತಿಳಿವು ದಾಟಿದಂತೆ
ಚಾಚಿ ಕರೆಯಲಾಗದ ಕೈ,
ಹೆಸರಿಟ್ಟು ಕೂಗಲಾಗದ ಬಾಯಿ..
ಅಂಗ ಮತ್ತರಿವಿನ ಸೇತು ಕಡಿದು ಹೋದಂತೆ...

ವಿಸ್ತರಿಸುತಾ ನಿರ್ವಾತ ಉಸಿರ ಕೊಲ್ಲುತಿದೆ,
ತುಂಬಿದ್ದೆಲ್ಲ ಮೊಗೆಮೊಗೆದು ಹೊರಚೆಲ್ಲುತಿದೆ,
ನಿನ್ನೆಯೊಳ ಬಗಿದು ಕರುಳ ಮಾಲೆಯುಡುವ ಸಿಟ್ಟು,
ಅಳಿಸಿ ಪಡೆವಾತುರದಿ ಶೂನ್ಯದಲೆ ಹೊಸಹುಟ್ಟು.

ಪ್ರಶ್ನೆ ಹುಟ್ಟಿಯೇನೋ ಬಿಟ್ಟಿದೆ, ದನಿಯಾಗಲಿಲ್ಲ..
ನೆನಪ ಹೊತ್ತ ರಥಕೀಗ ಚಕ್ರಗಳೇ ಇಲ್ಲ,
ದೂಡುತಿಹ ತೀವ್ರತೆಗೆ ನಾ ನಿಲಲಾಗುತಿಲ್ಲ,
ಖಾಲಿಯಾಗಿಸುವ ನಡೆಗಿಲ್ಲಿ ವೇಗಮಿತಿಯಿಲ್ಲ...

ಅಸ್ಪಷ್ಟತೆಯ ಬಸಿರಲಿ ಅಂಥ ಬೀಜದ ಕುರುಹು,
ಕಂಡೂ ಕಾಣದಂತೆ ಬಿತ್ತಿದ ಕೈಗಳದೂ ಅಚ್ಚು,
ಮಂದ ದೃಷ್ಟಿ ಬೇಡವೆನುತಿದೆ ಇನ್ನೂ ಸ್ಪಷ್ಟತೆ,
ಆ ಕೈರೇಖೆಯಲಿ ನನ್ನ ನಿನ್ನೆ-ನಾಳೆ ಬರೆದಂತಿದೆ.

Saturday, May 18, 2013

ನಿನ್ನೆಯ ತಟಪಟ ಮಳೆ..

ಬಾನಿನೊಡತಿ ನಿಶೆಯಿಂದು ಕಪ್ಪಿಲ್ಲ,
ಮೇಘರಾಜ ತಂದಿತ್ತ ಕೊಡುಗೆ
ಕೆಂಪುಟ್ಟು ನಾಚಿಯೋ;
ಭಾನು ತೆರಳಿದ ಈ ಅವೇಳೆ
ಬಂದಾತನಪ್ಪಿದ ಬಿಗಿತಕೆ ಬೆವರಿಯೋ;
ನೀರಾಗಿಹಳು, ನೀರಿಳಿಸಿಹಳು...
ಚಂದ್ರ-ತಾರೆಗಳೂ ಮರೆ,
ಏಕಾಂತಕಿರದಿರಲಿ ಭಂಗವೆಂಬಂತೆ..

ಹನಿ ನೋಡಿದೋ ಕೆಳಗುದುರಿವೆ,
ಉಕ್ಕುವ ತೀವ್ರತೆಯೇರುವ ಉತ್ಸಾಹದ
ಉತ್ಪನ್ನವೂ ಬಾಗಬೇಕು ಗುರುತ್ವಾಕರ್ಷಣೆಗೆ.
ಕೆಳಗೊಂದು ಮೈಚಾಚಿದ ನೆರಳು
ಧರೆ ಕಾದು ಕಾದಿಹಳು, ಬಾಯ್ದೆರೆದಿಹಳು..
ನಡುವೆಷ್ಟೋ ಅಡೆತಡೆಗಳು,
ನಿಲ್ದಾಣಗಳು, ವಿರಾಮಧಾಮಗಳ
ದಾಟಿ ಬಂದಿವೆ ಋಣಿ ಹನಿಗಳು.

ಒಂದೊಂದೆಡೆ ಒಂದೊಂದು ಪರಿಣಾಮ-
ವಜನಿಲ್ಲದೆಲೆಯ ಮೇಲಿಂದ ಮೆಲ್ಲ ಜಾರಿವೆ
ಬಿದ್ದೂ ನೋವಾಗದಂತೆ, ಬದಲಾಗದಂತೆ..
ಹಕ್ಕಿರೆಕ್ಕೆ ಪುಕ್ಕದ ನಡು ಸಿಲುಕಿ
ಕಾವಿಗೆ ಬೆಚ್ಚನೆ ಮಲಗಿ ನಿದ್ದೆ ಹೋದಂತೆ..
ಕಲ್ಲ ಮೇಲೆ ಬಿದ್ದೊಳ ನಡೆಯಲಾಗದ
ನಿರಾಸೆಗೆ ಪುಡಿಪುಡಿಯಾದಂತೆ..
ಕಣ್ಣಿಗಿಳಿದು ಕಂಬನಿಯಡಗು ತಾಣಗಳಂತೆ.
ಬಡಿದು ಮಾಡಿನಿಳಿಜಾರಲಿಳಿದು
ಅಡಿಯ ಜೀವನಕೆ ತಟಪಟ ಸಂದೇಶವಿತ್ತಂತೆ..
ಕೊನೆಗೆಲ್ಲ ಮೀರಿ ನೆಲಕಿಳಿದವು.. ಕೆಲವೆಡೆ
ತಾಕಿದೊಡನೆ ಬಿಸಿಗಾವಿಯಾದಂತೆ.
ಕೆಲವೆಡೆ ಕಾದ ಮನದಾತ್ಮೀಯತೆಯ
ಅಪ್ಪುಗೆಯಲಿ ಸಿಕ್ಕಿ ಕರಗಿದಂತೆ...
ಕಾದು ತಾಳ್ಮೆಗೆಟ್ಟ ಒರಟುಮೈಗೆ
ಬಡಿದು ಚೂರಾಗಿ ಚದುರಿದಂತೆ..

ಮಳೆಹನಿಗಳ ಈ ನಡಿಗೆ
ಎದೆಯಾಳಕಿಳಿವಾಗ
ಹಲಭಾವಗಳ ಉಡುಗೆ
ತೊಡಿಸಿ ನೋಡಿ ನಲಿದ ಸುಖ ಮನಕೆ...Friday, May 17, 2013

ನಿನ್ನನಲ್ಲಿಟ್ಟು ನೋಡಿಕೋ...


ಕುಂಬಳ ಕದ್ದ ಪಾಡು
ಹೆಗಲಿಗಂಟಿದ ಪುಡಿಬೂದಿ
ಒಣ ಅಬ್ಬರವಾಗಿ
ಸ್ವಾನುಕಂಪದ ಗಾಳಿಗೆ
ಚದುರಿ ಚಲ್ಲಾಪಿಲ್ಲಿ ಇಲ್ಲಿ.

ಗಳಿಸುವ ಕೈ ಬೇಕು,
ಲಕ್ವ ಹೊಡೆದು ನಿಷ್ಕ್ರಿಯವಾದರೆ
ಅರ್ಧ ಹೊಟ್ಟೆಗೊದಗುವ ಬಾಳಲಿ
ತಿಂದುಂಡದ್ದಲ್ಲಿಗೂ ಒದಗುವುದು
ವ್ಯರ್ಥವೆಂದು ಕಡಿದೀಯೇನೋ ತಮ್ಮಾ?

ಓಡುವ ಕಾಲು ಬೇಕು,
ಸಿಹಿಯುಂಡ ಬಾಯಿ ತಂದ ಕಾಯಿಲೆಗೆ
ಕೊಳೆತು ಹುಣ್ಣಾದಾಗಲೂ,
ನಂಜು ದೇಹವೇರುತಿದ್ದಾಗಲೂ,
ಕಡಿದೆಸೆಯಲು ಅಳುವುದಿಲ್ಲವೇನೋ ತಮ್ಮಾ?

ಬಳಸಿಕೊಂಡ ಜೀವಂತಿಕೆ
ಮೂಲೆಸೇರುವ ಹೊತ್ತು
ಪೂಜಿಸಿದ ಕೈಗಳೇ ಕಡಿವುದ
ಮೆಚ್ಚಿ ಅಹುದಹುದೆನುವ
ನರಗೂ ಮೃಗಕೂ ಭೇದವೆಲ್ಲಿಯದೋ ತಮ್ಮಾ?

ಉರುಳುವ ಕಾಲಕೆ ಮಣಿದು
ಕುಣಿದು ಕುಪ್ಪಳಿಸಿದ ತನುಮನವು
ಸೋತು ಚಲನೆ ಮರೆತಾಗಲೂ
ಪಡೆದಾದರೂ ಉಸಿರ ಎರವಲು
ಸಾವ ಮುಂದೂಡಬಯಸುವುದು
ಏರಿ ಹೆಗಲ ಹೊರೆಯಾಗಿ ಬಾಳಬಯಸುವುದು

ಜೀವಕಣವೊಂದೂ ರಚಿಸಲಾಗದ
ಮರುಕ್ಷಣವನೂ ದರ್ಶಿಸಲಾಗದ
ಹುಲುಜೀವಿಗಳು ಹೇಗೆ ನಿರ್ಧರಿಸಬಲ್ಲೆವು-
ಅಳಿಯಬೇಕಾದ್ದ್ಯಾವುದು,
ಉಳಿಯಬೇಕಾದ್ದ್ಯಾವುದು....Thursday, May 16, 2013

ಈ ಕತೆ ಕೇಳಿ.


ಅಕ್ಷರಗಳ ಸಾಲುಸಾಲು ಮೆರವಣಿಗೆ
ಭಾವತೇರಲಿ ಕಾವ್ಯದೇವಗದು ನಿತ್ಯೋತ್ಸವ
ಅಭಿವ್ಯಕ್ತಿಯಬ್ಬರ ಆವೇಶದ ದೈವ
ಮೈದುಂಬಿ ಮನ ತೂರಾಡಿವೆ.

ಒಂದು ಕುಪ್ಪಳಿಸುವ ನಗುವ ಮುಗ್ಧತೆಯ
ಬಿಕ್ಕಳಿಸುವ ನೋವಿನ ಸ್ಥಬ್ಧತೆ ತಾಕಿದೆ.

ಮುಖ ಮರೆಸುವ ಆ ವ್ಯವಸ್ಥೆಯಲಿ

ಮನ ನಂಬಿದ ಸೇತು ಗಟ್ಟಿ ನಿಂತಿದೆ.

ನೋವುಟ್ಟ ಶಲ್ಯ ಕಣ್ಣೀರಲಿ ತೊಯ್ದುಹೋಯ್ತು
ನಗೆಯ ಸೀರೆಸೆರಗಂಚು ಕಣ್ಣೊರೆಸೆ ಬಂತು.
ಆ ಭಾವಕಾವೇರಿಯ ತಲಕಾವೇರಿ ತಲುಪಿ
ಮಿಂದು ಮಡಿಯಾಯ್ತು ಸ್ನೇಹಸಿಂಚನದಲಿ.

ತೇಲುವ ತರಗೆಲೆಯಲೇ ನಗುವಿನ ಭೂಭ್ರಮಣ
ತೂಕದ ಲಹರಿಗೂ ಅಸಾಧ್ಯ ನೋವ ಸಂಕ್ರಮಣ.
ನಿಂತಲ್ಲೇ ನಿಂತು ನೋವು ಬೇಯುತಿತ್ತು,
ಹೊಸಿಲು ದಾಟಿ ನಗು ಹಾಡಿ, ಕುಣಿದು ರಮಿಸಿತು.

ರಭಸಕೊಮ್ಮೊಮ್ಮೆ ಕಂಗೆಟ್ಟರೂ,
ಒಡ್ಡಿಕೊಂಡ ತಲೆ ತಗ್ಗಬೇಕಾದರೂ,
ಕಾಣದ ಸಂಧಿಗ್ಧತೆ ಕಂಗೆಡಿಸಿದರೂ
ನೋವ ನಗಿಸುವ ಹಠ ನಗೆಗೇನೇ ಆದರೂ...

ತಣಿಯುತಿಲ್ಲ ನೋವು ಬಡಪೆಟ್ಟಿಗೆ.
ಕೈಹಾಕಿದೆ ಮೆಲ್ಲ ಕೈಯ್ಯಳತೆಯ ಸೆರಗಿಗೆ.
ಮುನ್ನುಗ್ಗುವ ನಗೆಯ ಪುಟಿವ ಹೆಜ್ಜೆ
ಹಿಮ್ಮೆಟ್ಟುತಾ ಪ್ರಶ್ನೆಯಾಗಿದೆ ತಾನೇ ತನಗೆ.

ಮುಖ ವ್ಯಕ್ತಿತ್ವದ ಕನ್ನಡಿ,
ಮುಖ ಕಾಣದುತ್ಸವದಲಿ
ನೋವ ಸಂತೈಸುವ ನಿಟ್ಟಿನಲಿ
ನಗುವೊಂದು ನೋವಾದ ಈ ಕತೆ ಕೇಳಿ.

Tuesday, May 14, 2013

ಹೀಗೊಂದು ಭೇಟಿ..

ಬಿರುಬಿಸಿಲಲಾತ ಓಡೋಡುತ ಬಂದ,
ಬೆವರೊರೆಸುತ ನಿಂದ,
ತಡವಾಯಿತು ಮನ್ನಿಸೆನ್ನನೆಂದ,
ಮಂಡಿಯೂರಿ ಕೂತ.

ಅಷ್ಟರಲ್ಲಾಗಲೇ ಆ ತಾವು ತಂಪಾಗಿತ್ತು
ಅವಳೆದೆ ಪ್ರೀತಿಯುಕ್ಕಿಸಿತ್ತು,
ಪ್ರೀತಿ ತಂಗಾಳಿಗೆ ಬೆವರೊಣಗುವ ತಂಪು
ಮತ್ತವಳ ನಗೆಯ ಕಂಪು.

ಬೆವರಲಿ ನೆನೆದು ಪಸೆಯುಟ್ಟ ನೆರಳೆರಡರ
ಮಿಲನಕೆ ಸುಡುವ ಸೂರ್ಯ ಸಾಕ್ಷಿಯಾದ.
ಒಳತಾಪದ ಜೊತೆ ತನ್ನುರಿಯೂ ದಹಿಸದ
ಪ್ರೀತಿಯ ತಂಪಿಗೆ ಬೆರಗಾದ, ಮರೆಯಾದ.

"ನಡೆ ಹೋಗೋಣ" ಅವನೆಂದ,
"ತಲುಪಿಯಾಯಿತಲ್ಲಾ, ಇನ್ನೆಲ್ಲಿಗೆ" ಅವಳ ನಗೆ.
"ಪರಸ್ಪರರಿಗಲ್ಲ, ಯಾರೂ ತಲುಪದೆತ್ತರಕೆ
ಕೈ ಚಾಚುವುದೀಗ ನಮ್ಮ ಗುರಿ"- ಅವನಂದ.

"ಸರಿ ಕೊಡಿಲ್ಲಿ ನಿನ್ನ ಪ್ರಾಣ, ಹಕ್ಕಿಯ ಈ ರೆಕ್ಕೆಗದ,
ಆ ರೆಕ್ಕೆಗೆ ನನದ ಕಟ್ಟಿಬಿಟ್ಟು ಹಾರಿಬಿಡುವ.
ಹಾರುವುದದು ದಿಗಂತಕೆ, ಅಕ್ಷಿಯಳತೆಯ ಮೀರಿ
ಗುರಿಯೆಂಬುದನೂ ದಾಟಿ, ಇಹದೊಳಗಿಂದ ಜಾರಿ."

ಮತ್ತದೇ ನಗೆ ಸಾರಿದ ಮಾತು ಅವಗರಿವಾಯಿತು.
ಕೈಕಾಲಿಲ್ಲೇ ಇರಲಿ, ಕರ್ತವ್ಯ ನಿರ್ವಹಿಸಲಿ.
ಮನವಷ್ಟೇ ಹಾರಲಿ, ಮನ್ವಂತರಕು ಹಬ್ಬಲಿ
ಲೋಕದೊಳಗಿದ್ದೂ ದಾಟುವ ಪ್ರೀತಿಯುಳಿಯಲಿ.

ಅಂಗದ್ದಲ್ಲದ ಮಿಲನದಿ ಅರಿವ ಕೂಸಿನ ಜನನ
ನೆರಳು ಸೇರಿ ಮತ್ತಗಲಿದ ಮುಕ್ತಮುಕ್ತ ಕ್ಷಣ
ಮತ್ತವನದೇ ಆ ದಿಕ್ಕು, ಅವಳದೇ ಈ ದಿಕ್ಕು
ಅನಿವಾರ್ಯತೆಯಪ್ಪಿ ನಿರೀಕ್ಷೆಯ ಮುತ್ತಿಕ್ಕಿದ ಹೊತ್ತು.
ಸಂಜೆಯಾಗಿತ್ತು, ಕನಸಮೂಟೆ ಎರಡೂ ಹೆಗಲೇರಿತ್ತು.
ಇರುಳಲೂ ನಾಳಿನಾಗಮನದ ಸಂದೇಶದ ಬೀಜವಿತ್ತು.ಅವ ಶಬ್ಧವಂತೆ, ಅವಳರ್ಥವಂತೆ.

ಅವ ಮಾತಾಗಬಲ್ಲ, ಅವಳಲ್ಲ

ಅವ ಹಾಡಾಗಬಲ್ಲ, ಅವಳಲ್ಲ

ಅವ ಕತೆಯಾಗಬಲ್ಲ, ಅವಳಲ್ಲ

ಆದರೇನು ಅವಳಿಲ್ಲದ ಅವನ ಬಾಳು

ಎಲ್ಲ ಇದ್ದೂ ಅವಗದು ದಕ್ಕದ ಪಾಡು.

ಅಕ್ಕನಂಥ ಅಕ್ಕತಂಗಿಯರಿಗೆ..


ನೀನೂ ಅಷ್ಟೇ ಕಣೇ, ನನಗೊಂದು ಪ್ರಶ್ನೆ.
ಅಕ್ಕನಾಗುವ ಹಕ್ಕು ನಿನ್ನದೂ ಇತ್ತು,
ಹುಟ್ಟುವಾಗದು ಸುಪ್ತಗುರಿಯೂ ನಿನದಿತ್ತು,
ಅಕ್ಕನಾಗದುಳಿದೆ, ಕಾರಣವದೇನೇ?

ನಿನ್ನ ಕ್ಷಣಗಳ ತಮ್ಮ ಹಕ್ಕೆನುವ ನಿನ್ನವರೂ ಇದ್ದರು.
ನೀ ನೀನಾಗ ಹೊರಟೆ, ಅವರು ಹೊರಗೆಳೆದರು,
ಬಿಟ್ಟೊಳನಡೆಯದೆ ಹೊರಗುಳಿದೆ, ಅವರೊಳಗಿಳಿದರು.
ಕುಬ್ಜಳಾದೆ ಅಕ್ಕನೆದುರು, ಅವರವರಾಗೇ ಉಳಿದರು.

ನಿನ್ನೊಳಗೂ ಚಿಮ್ಮಿದೆ ವೈರಾಗ್ಯವೆಲ್ಲೆಡೆ,
ಹಿಡಿದೆಳೆವ ಮೋಹಪಾಶ ಹತ್ತಿಕ್ಕುತಿದೆ.
ಎದ್ದೆಬ್ಬಿಸುವ ಕ್ರಾಂತಿಯ ಮೊಳಕೆಯಿದೆ,
ತಗ್ಗಿನಡೆವಮ್ಮನ ಬುದ್ಧಿಮಾತದ ಮುರುಟಿಸಿದೆ.

ಎದೆಗೆ ಕೈಹಾಕುತ ಎದೆಮೆಟ್ಟಿ ಒಳಹೊಕ್ಕುವ,
ಮತ್ತದೇ ಎದೆಗಧಿಪತಿಗಳೆನಿಸುವ,
ಎದೆಯಮೃತ ಮೆಲ್ಲುತ ಎದೆಗೊದೆದು ನಗುವ,
ಬೆಳೆದದೇ ಎದೆಯೆಳೆಯ ಕತ್ತರಿಸುವ ಬಂಧ ಬೇಕೇನೇ?!

ಕೈಬೇಡಿ ಬಳೆ, ಸರಪಳಿ ಗೆಜ್ಜೆಯೆಂದುದು ಸಾಕು.
ಒಳ್ಳೆಯತನದ ವಸ್ತ್ರ ಕಿತ್ತೊಗೆದು ಬೆತ್ತಲಾಗು.
ನಿನದೇ ಆಸ್ತಿ ನೀನು, ಬಯಸಿದಲ್ಲಿ ಬಯಲಾಗು,
ನಿನ್ನದೇ ಪರದೆಯಿದೆ, ಬೇಕಾದಲ್ಲಿ ಮರೆಯಾಗು.

ವ್ಯವಸ್ಥೆಯುಳಿಸುವ ಸೋಗು, ತಾಳ್ಮೆಸಹನೆಯ ಸೊಬಗು,
ಅಪರಿಚಿತ ಮಾಡುತಿವೆ ನಿನ್ನ ನಿನಗೆ
ಬಿಂಬವದೇ ಒಳಗುಂಟು ಶುಭ್ರ ಕನ್ನಡಿಯಲ್ಲಿರೆ,
ಪೀಠದಲಿಟ್ಟಲ್ಲ, ಅವಳನೆದುರಿಟ್ಟು ನೋಡು.Sunday, May 12, 2013

ಅಕ್ಕಾ, ನೀನೊಂದು ಪ್ರಶ್ನೆಯೆನಗೆ


ಅಕ್ಕಾ, ನೀ ಪಕ್ಕಾ ಹಾಗೇ ಇದ್ದೆಯೇನೇ?!
ಒಪ್ಪಲಾಗದೊಂದಪ್ಪಟ ಸೋಜಿಗ ನೀನೆನಗೆ.

ಜಗದ ಜಾಣಕುರುಡು ಆಗಿಂದೀಗಿಗೂ
ಪರಿಶುದ್ಧತೆಯೆಡೆಗೇ ಹೌದು.
ಮತ್ತದರ ಅತ್ಯುತ್ಸಾಹ ಬಗೆಬಗೆದು
ಕೆಡುಕ ಕಾಂಬೆಡೆಗೂ ಹೌದು.
ನಿರೂಪಿಸಿ ನಿನ್ನ ಅಕ್ಕನಾಗೇ ಹೇಗುಳಿದೆ?!

ನಿಷ್ಪಾಪ ಮನವೇನೋ ಸರಿ,
ಬಾಣ ಚುಚ್ಚಿದ ಗಾಯ ಮುಚ್ಚಬಹುದು.
ನಿರ್ವಸ್ತ್ರ ಮೈಯ್ಯ ಹೇಗೆ ಸಂಭಾಳಿಸಿದೆ?!
ದೃಷ್ಟಿ ಬಟ್ಟೆಯ ದಾಟಿಯೂ ಚುಚ್ಚುತಾವೆ,
ನೇರ ಚರ್ಮವ ಹೇಗೆ ಕಾಪಾಡಿದೆ?!

ಶಕ್ತಿ ನಿನದಿದ್ದರೆ ಲೋಕಕೂ ಇತ್ತು,
ದಿವ್ಯ ನಿನದಾದರೆ, ಅದಕೂ ಶೌರ್ಯವಿತ್ತು.
ಧನಬಲ, ಜನಬಲವದರದು ದಿಕ್ಕೆಡಿಸದಿತ್ತೇ?!
ತನು ಬೇಡಿಬೇಡಿ ನಿನದು ಕಂಗೆಡಿಸದಿತ್ತೇ?!
ಬರೆದು ವೈರಾಗ್ಯ ತಾರುಣ್ಯವ ಹೇಗೆ ತುಂಬಿದೆ?!

ನೀನೀಗ ಇಲ್ಲ, ಅಳಿದುದ ಹೊಗಳಲಿಕೆ ಜಗಕಳುಕಿಲ್ಲ,
ಇದ್ದಾಗಲೂ ಹೀಗೆಯೇ ಹಾಡಿ ಹರಸಿತ್ತೇನೇ?
ಬಲ್ಲೆ, ಅದಕಷ್ಟು ದೊಡ್ದ ಬಾಯಿಲ್ಲ, ಇರಿದಿರಿದು
ಸಂಶಯದಕ್ಷಿ ನಿನ್ನತನ ಚೂರಾಗಿಸಿರಬಹುದು,
ಜೋಡಿಸಿ ಮತ್ತದ ಹೇಗೆ ಇಡಿಯಾಗಿಸಿದೆ?!

ಇಂದೇ ಏನು, ಪ್ರತಿ ಹೆಜ್ಜೆಗೂ ನೀ ಕಾಡಿರುವೆ ನನ್ನ,
ನನ್ನನೇ ಏನು, ಪ್ರತಿ ಹೆಣ್ಣುಮನವನ್ನ.
ಪ್ರಶ್ನೆಯಾಗೊಮ್ಮೆ, ಇರುಳಂಥ ಅಸ್ಪಷ್ಟತೆಯಲಿ
ಹಿಂಬಾಲಿಸಲಾಗದ ವೇಗದ ನಡೆಯಾಗೊಮ್ಮೆ.
ಕಾಡುತಲೇ ಒಮ್ಮೆ ಉತ್ತರವಾಗು, ಓಡಿ ಬರುತಿರುವೆ,
ಸಿಕ್ಕೊಮ್ಮೆ ಇಲ್ಲೊಳಗೆ ಪ್ರತಿಷ್ಠಾಪನೆಯಾಗು.(ನಮ್ಮ ಊರಿನ ಅಕ್ಕನ ಬಳಗದವರು ಇವತ್ತು ಅಕ್ಕನ ಜಯಂತಿಯನ್ನ (ಚುನಾವಣಾ ನೀತಿಸಂಹಿತೆಯ ಪ್ರಯುಕ್ತ ಮುಂದೂಡಲ್ಪಟ್ಟದ್ದು) ಇವತ್ತು ಇಲ್ಲಿನ ಬಸವಸಮಿತಿಯಲ್ಲಿ ಆಚರಿಸಿದರು, ನಾನೂ ಆಕೆಯ ಕೆಲವಚನಗಳನ್ನ ಹಾಡಿದೆ, ಹಾಡುತ್ತಲೇ ಮೂಡಿದ ಕೆಲ ಭಾವನೆಗಳಿವು.)ಆ ಅಕಾಲ ಮಿಲನವೂ, ಈ ಅಕಾಲ ಮಳೆಯೂ...


-----------------------------------------------

ತಪದೊಳಗೆ ಕಶ್ಯಪನ ಮನ,
ಧೃತಿಗೆಟ್ಟಾಸೆಯಲಿ ದಿತಿಯ ತನು

ಹೆಣ್ಣ ಕಣ್ಣಲಿ ಕಣ್ಣಿಲ್ಲದ ಕಾಮಾತುರತೆ
ಸಲ್ಲದ ವೇಳೆ- ಒಪ್ಪಲಾಗದ ಋಷಿಯ ವ್ಯಥೆ.
ಎಚ್ಚರಾಗದ ಚಿತ್ತದಿ ಮೋಹ ಗೆದ್ದಿತು.
ಮಿಲನ ಫಲಿಸಿ ಹೆಣ್ತನ ಫಲ ಹೊತ್ತಿತು.
ಎಲ್ಲ ಮರೆಸುವ ಅಕಾಲ ಆಶಾಪಾಶ
ಮನಸೆಂಬುದಿದ್ದಲ್ಲಿ ಕ್ಷೀಣಕ್ಷಣದಿ ಅದರ ವಶ.
ಅದರ ಗೆಲುವು ಕಾಲಸಹಜ ನಡೆಗೆ ಸೋಲು
ಅಂಥ ಕ್ಷಣಗಳ ಮೊತ್ತ ಗೊಂದಲದ ಗೂಡು.
ಅರಿವು ಮೈಮರೆತ ಒಂದು ಕಪ್ಪುಚುಕ್ಕೆ
ಶುಭ್ರ ಸಾತ್ವಿಕ ಬಸಿರ ತಾಮಸದಿ ತುಂಬಿತು.
ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಅದೇ..
ಬಿತ್ತಿ ತನದು ಮತ್ತವನ ಬಾಳಲಿ ಬರೀ ಗೊಂದಲ,
ಋಷಿಪತ್ನಿ ಹೊತ್ತೇನೋ ಹೆತ್ತಳು ಅಸುರನ,
ಒಪ್ಪಲಾರದೆ ನೊಂದಳು ಬೆಳೆವ ಕಂದನ ಕ್ರೂರತೆ.

ಇಳೆಹೆಣ್ಣೂ ಈಚೆಗೆ ಅಂಥದೊಂದು ಲಹರಿಯಲಿಹಳು
ಅಲ್ಲಸಲ್ಲದ ವೇಳೆ ವರುಣನ ಮಿಲನಕ್ಕೆ ಕರೆವಳು.
ತಡೆದು, ಸಂಯಮಿಸಿ, ಮುಂದಿಟ್ಟ ಹೆಜ್ಜೆಯಾತ ಹಿಂದಿಟ್ಟರೂ
ನಿರಾಸೆಯಾಕೆಯ ಕುಗ್ಗಿಸದು, ಆಕೆ ಹಿಮ್ಮೆಟ್ಟಳು.
ನಿವೇದಿಸುತಾ ಬೆತ್ತಲಾಗುತಲೇ ಹತ್ತಿರಾಗುವಳು.
ತೆರೆದಿಟ್ಟಾಕೆಯ ಮೈಮನದುರಿಗಾತ ಕರಗುತಾನೆ
ತಾನು ಹನಿಸುತಾನೆ, ಆಕೆ ತಣಿಯುತಾಳೆ.
ಆಕೆಯೊಡಲಲಿದ್ದ ಬಸಿರು ಕಂಗೆಟ್ಟು ಅಕಾಲ ವರ್ಷಕೆ,
ಹಾಳಾಗಿದೆ, ಕೊಳೆತಿದೆ, ಕೊನೆಗೊಮ್ಮೆ ನಾಶವಾಗಿದೆ.
ಅಕಾಲ ತಾಳುತಿದೆ ಆಕಾರ ಈ ಮಿಲನದ ಫಲ,
ಸಲ್ಲದ ಕಾಲಮಾನದಲದೂ ತಾನಾಗಿ ಬೆಳೆಯುತಿಲ್ಲ.
ಪೂರ್ಣ ಬೆಳೆಯದ ಮೊಳಕೆಗಳು ಹುಣ್ಣಾಗುತಾವೆ,
ತಾಯ ಮಡಿಲ ತುಂಬಿ ನೋವಲಿ ಜೊಳ್ಳೆನಿಸುತಾವೆ.


ಬದಲಾದ ಕಾಲದಿ ಧರೆ ನಡೆ ಬದಲಿಸಿಹ,
ನರ ಮರೆತ ನಿಯಮವ ತಾನೂ ತೊರೆವ ಸೂಚನೆಯೇ?!
ಕಾಲಚಕ್ರವ ದಿಕ್ಕುತಪ್ಪಿಸಿ ತಿರುಗಿಸುವಾಲೋಚನೆಯೇ?!
ತುಳಿತುಳಿದು ಶೋಷಿಸಿದ್ದಕೆ ಸಿಡಿದೆದ್ದ ಸುಡುಭಾವನೆಯೇ?!
ಸ್ತ್ರೀ ಸ್ವಾತಂತ್ರ್ಯದ ಮೊದಲ ಸ್ವತಂತ್ರ ನಡೆಯಾಗಿ,
ಋತುಮಾನ ತಿರುಗುಮುರುಗಾಗಿಸುವ ಯೋಜನೆಯೇ?!
ಸಂಯಮವ ಮರೆತು, ಕಾಲಧರ್ಮ ತೊರೆದು ಅವನಿ,
ಸ್ವಾರ್ಥಕ್ಕೆ ಮಣಿದು, ಒಡಲಕುಡಿಗಳನೂ ಕಡೆಗಣಿಸುವ,
ಕುರುಡಿಗೆ ಶರಣಾದಂತನ್ನಿಸಿತು, ಯಾಕೋ ಭಯವೆನಿಸಿತು...

Thursday, May 9, 2013

ಕಲೆಯಿದು ಕಲೆಯಷ್ಟೇ ಅಲ್ಲ.

ಮಾತು ಸುತ್ತಿದೆ ದಿಕ್ಕೆಲ್ಲ, ಬರೀ ಲೇವಡಿ.
ಜಗವಾಗಿಬಿಟ್ಟಿದೆ ಪರೀಕ್ಷಕರ ಚಾವಡಿ.
ಶ್ರೋತೃ, ವೀಕ್ಷಕ, ಸಹೃದಯ ಓದುಗನಿಲ್ಲ,
ಸಿಗಿದು ವಿಮರ್ಶೆ ಮಾಡಬಂದವರೆ ಎಲ್ಲ.

ಇಷ್ಟು ದಪ್ಪದ ಭೂತಗಾಜು,
ಕಣ್ಮನವಾವರಿಸೊ ಚಾಳೀಸು.
ತಪ್ಪಿದ್ದರೆ ಸಾಸುವೆಯಷ್ಟು,
ಕಾಣಬೇಕದು ಸ್ಪಷ್ಟ ಬಂಡೆಯಷ್ಟು.

ತನದಲ್ಲದ ಗೆಲುವ,
ತನಗಿಲ್ಲದ ಚೆಲುವ,
ಗೆಲುವಲ್ಲ, ಚೆಲುವಲ್ಲ ಎನುವವ
ಕೈಲಾಗದವನಲ್ಲದೇ ಇನ್ನೇನಿರಬಲ್ಲ?!

ಕಲೆ ಜಗದಳಲ ಮರೆಸುವ,
ಮರೆಯಾಗಿಸುವ ಸಾಧನ,
ಎದೆಯಿಂದೆದೆಗೆ ಭಾವನದಿಯಾಳದ
ಸಿರಿಯ ಸಂವಹನ.
ತಾಯಿ ಶಾರದೆ ಸಂತೈಸೆ
ಕೈಗಿತ್ತ ಗೊಂಬೆಯಾಟಿಕೆ.
ಮಗುವಾಗಿ ಪಡೆದು ಸುಖಿಸದೆ
ವಾರೆ ನೋಟವೇಕೆ?

ಕೇಳು, ಕಲೆಗಿಲ್ಲ ಆದಿಅಂತ್ಯ,
ಉದ್ದಳತೆಯ ಹಂಗು,
ಹಗುರಾಗಿಸಬಲ್ಲುದೆಂಬುದೇ
ಕೃತಿಯ ಹಿರಿಮೆ ನಂಬು.
ನನ್ನಿಂದ ಕಲೆಗಲ್ಲ,
ಕಲೆಯೊಳಗೆನಗೆ ತಾವು.
ಕಟ್ಟೋಣ ಕಲೆಯಗೂಡು
ನಾ ಸ್ವಲ್ಪ ನೀ ಸ್ವಲ್ಪ
ದುಂಬಿಗಳಾಗಿ
ತಂದಲ್ಲಿಲ್ಲಿಂದ ಜೇನು.

  ಎಟುಕಿದವರು ಪಡೆದಾರು,
ಪಡೆದವರು ಸವಿದಾರು,
ಎಟುಕದವಗೆಂದೂ
ಜೇನಿರಲಿ, ದ್ರಾಕ್ಷಿಯಿರಲಿ
ಅದು ಬರೀ ಹುಳಿಹುಳಿ.

ಇಲ್ಲೆಲ್ಲವೂ ಬರೀ ತಂಪು


ಸಂಜೆ ಜಂಜಡದ ಕೊನೆಗೊಮ್ಮೆ
ನಿನ್ನೆದುರು ನಿಂತಾಗ,
ನೀ ನಕ್ಕರೂ ನಗದಿದ್ದರೂ,
ಭಾರವಿದ್ದುದೆಲ್ಲ ಹಗುರ ನೋಡು.

ನೀ ಬಿಟ್ಟುಬಿಡು,
ಕಂಗಳಿಗೆ ಗೊತ್ತು,
ನೇವರಿಸಿ ಮೈಮರೆಸುವ ಪರಿ.
ತುಟಿಗಳಿಗೆ ಗೊತ್ತು,
ದಾಹವಿಳಿಸಿ ಸಂತೈಸುವ ಪರಿ.
ನಾಲಿಗೆಗೆ ಗೊತ್ತು,
ಕಿವಿಗೆ ಸಿಹಿ ಸುರಿವ ಪರಿ.
ನಿನ್ನೆದೆಗೆ ಗೊತ್ತು,
ನನ್ನೆದೆಯ ತಲುಪುವ ದಾರಿ.

ಸೋತಾಗಲೂ ಗೆದ್ದಾಗಲೂ
ನಾನೋಡಿ ಬರುವುದೇ ನಿನ್ನೆಡೆಗೆ.
ತಲೆಯೇನೋ ಆಡಿ ಆಡಿ ಇಲ್ಲವೆಂದರೂ,
ನಿನ್ನ ಕೆಲಕ್ಷಣ ನನ್ನವಾಗುವವು ಕೊನೆಗೆ.
ಕೊಟ್ಟ ಬಲಗೈ ಎಡಗೈಗೆ ಹೇಳದೆ,
ನೀ ನನಗೊದಗುವೆ ನಿನಗೇ ಅರಿವಿಲ್ಲದೆ.

ಗೊತ್ತು ಒಲವೇ,
ನಿನ್ನ ಪರೀಕ್ಷೆಗೊಂದು ಪ್ರಶ್ನೆ ನಾನು,
ಮತ್ತುತ್ತರದ ಹುಡುಕಾಟದ ಪ್ರಯೋಗ ಪಶು.
ಉತ್ತರವೆಂದೂ ಆಗಲಾರೆ,
ಆದುದೇ ಆದರೆ ನೀನದನೊಪ್ಪಲಾರೆ.
ಜೀವಾಳವಲ್ಲ, ಆಧಾರವಲ್ಲ, ಉಸಿರಲ್ಲ,
ಕೊನೆಗೆ ಬಂಧದೊಂದು ಬಸಿರೂ ನಾನಿನಗಲ್ಲ.

ಇರಲಿ ಬಿಡು,
ನೀನುತ್ತರವ ಸಾರಿದ ಕ್ಷಣ
ನನ್ನ ಸವರಿ ಹೋಗಬಹುದು.

ಅದನಪ್ಪಿಕೊಳುವಾಗ,
ನನ್ನ ನೋಡಬಹುದು.

ಮುಕ್ತವಾಗಿಸೆ ಭೂತದ ತಂತು ಕಡಿವಾಗ
ನನ್ನ ಮುಟ್ಟಬಹುದು.

ನನ್ನ ಸ್ಪಂದನಕೆ ದೂರ ತಾಪವಲ್ಲ,
ಅವಲಂಬನೆಗೆ ವಿರಹ ಉರಿಯಲ್ಲ,
ಪ್ರೇಮಕ್ಕೆ ಉಪೇಕ್ಷೆ ಬೇಗೆಯಲ್ಲ.
ನಿನ್ನೆವೆಯಡಿಯಲ್ಲಿ ನನ್ನ ಕಂಡುಕೊಂಡಿರುವೆ.
ಇಲ್ಲೆಲ್ಲವೂ ಬರೀ ತಂಪು ತಂಪು.

ರಸ್ತೆದೀಪವಲ್ಲ, ದಾರಿದೀಪ ಬೇಕೀಗ.


ಇಕ್ಕೆಲ ವೃಕ್ಷ ತೂಗಾಡಿ ಕರಚಾಚಿ ಹಾಡಿವೆ,
"ರತ್ತೋರತ್ತೋ ರಾಯನ ಮಗಳೆ..."
ರಸ್ತೆದೀಪದ ಸುತ್ತ ಹಾತೆ ಹಾರಾಡಿ ಆಡಿವೆ
ಪಾರಾದವೆಷ್ಟೋ, ಸತ್ತವೆಷ್ಟೋ...

ಅಲ್ಲೆಲ್ಲೋ ಬುಧ್ಧನ ಶಾಂತಮುಖ
"ಆಸೆಯೇ ದುಖಃಕ್ಕೆ ಮೂಲ"
ಪಕ್ಕದಲೇ ದಾಸರ ಲಯಬಧ್ಧ ರಾಗ
"ಈಸಬೇಕು ಇದ್ದು ಜೈಸಬೇಕು,
ಸಂಸಾರವೆಂಬಂಥ ಭಾಗ್ಯವಿರಲಿ.."

ಅಶೋಕ ಕಳಿಂಗದಿ ಹೊಂದಿದ ವಿರಾಗ,
ಅರ್ಜುನಗೆ ರಣದಿ ಸುಳ್ಳೆನಿಸಿದ ಜಯದ ವೈಭೋಗ,
ವಿರೋಧವನೆತ್ತಿ ಕುಕ್ಕುವ ಕ್ಷಣ ಬಾಹುಬಲಿಯ ತ್ಯಾಗ
ಬಹಳ ಕಾಡುತಾವೆ, ನಶ್ವರತೆಯೇ ಹೌದಾದರೆ ತೋರುವ
ನಿಮಿತ್ತವೆಲ್ಲಿಹುದೋ, ಎಂದೊದಗುವುದೋ?!

ಸವೆದ ದಾರಿ ಹಳತೆನಿಸಿ, ಭೋಧನೆ ಸವಕಲೆನಿಸಿ,
ನೇಮಾದಿಗಳು ಬೂಟಾಟಿಕೆ, ಕಟ್ಟುಪಾಡು ಪೊಳ್ಳೆನಿಸಿ,
ಇಕ್ಕೆಲ ವೃಕ್ಷ ತೂಗಾಡಿ ಹಾಡಿದ್ದು, ಹಾತೆ ಹಾರಾಡಿದ್ದು,
ಬೀಳಿಸಿ ನೋಡುವಾಟಕೊಂದು ನಾಂದಿಯಾದಂತೆ,
ಪ್ರಕೃತಿಯೇ ಸೆರೆಹಿಡಿವ ಜಾಲ ಬೀಸಿದಂತೆ...

ಸತ್ಯವೆಂದಾದರೆ ಅದರ ಶಕ್ತಿ,
ಸುಳ್ಳೆಂದಾದರೆ ಅದರ ನೈಜಾವತಾರ
ತೋರುವ ದಾರಿದೀಪ ಬೇಕೀಗ,
ರಸ್ತೆದೀಪದ ಸೆಳೆತಕೊಳಗಾದ ಹಾತೆಗಳಿಗೀಗ,
ಜ್ಞಾನೋತ್ಕರ್ಷ ಬೇಕಿದೆ, ಬರೀ ಆಕರ್ಷಣೆಯಲ್ಲ.Tuesday, May 7, 2013

ಅಲ್ಲೆಲ್ಲೋ ಅದೂ ಇದ್ದೀತು.

---------------------------
ಎಷ್ಟು ಅಬ್ಬರಿಸಿದರೂ ಅಷ್ಟೇ,
ಎಷ್ಟು ಗೋಗರೆದರೂ ಅಷ್ಟೇ..
ಇಂದು ನಿನ್ನೆಯಾಗಿ, ನಾಳೆ ಇಂದಾಗಿ
ನಿಲದೆ ಗಡಿಯಾರದ ಕೋಲು
ಗರಗರ ತಿರುಗಿಯೇ ಶುದ್ಧ.

ಒಂದು ಭಾಗದ ಬೆಲ್ಲ,
ಅಲ್ಲೇ ಪಕ್ಕದ ಮುಳ್ಳು
ಮೈಮನ ಸವರಲೇಬೇಕು.
ಕಾಲಚಕ್ರದ ವೇದಿಕೆಗೆ
ನಾವು ಕಾಲೂರಿದಾಗ.

ವಿಧಿ ಬರೆದ ನಾಟಕ,
ಕಾಲದ್ದೇ ನಿರ್ದೇಶನ.
ನೇಪಥ್ಯದಿ ಸೂತ್ರಧಾರ.
ತೃಣಕೂ ಪಾತ್ರವೊಂದುಂಟು,
ಪ್ರತಿ ಪಾತ್ರಕೂ ಹಣೆಬರಹವುಂಟು..

ನಾನೇನು, ನೀನೇನು?!
ಒಮ್ಮೆ ನಟ, ಒಮ್ಮೆ ವೀಕ್ಷಕ.
ಸರಸರ ವೇಷ ಬದಲಿಸಬೇಕು,
ಒಲ್ಲದ ಮನಸಲ್ಲಿಂದಿಲ್ಲೆಳತರಬೇಕು.
ಒಳಗಿದ್ದೂ ಹೊರಗುಳಿವ ಕಲೆ ತೋರಬೇಕು.

ಬಾಯ್ಮುಚ್ಚಿ ಹಾಡುವ ಕಂಠ,
ಕಣ್ಮುಚ್ಚಿ ಸಾಗುವ ನಡೆ,
ಮನಮೆಟ್ಟಿ ಏರುವ ಮೆಟ್ಟಿಲು,
ನೀನಿರದೆಯೂ ಉಳಿಸುವ ಉಸಿರು...
ಒಂದಂಕದಲಿದ್ದೀತು, ತಿರುಗುಚಕ್ರ ತಂದೀತು.

Monday, May 6, 2013

ನಿನಗೆಲ್ಲ ದಕ್ಕಲಿ.

---------------

ನಿಂತಲ್ಲೆ ನಿಶ್ಚಲ ನಿಂತಿದ್ದೆ,
ಕನಸು ನನಸಾದಿನ್ನೊಂದು ಕನಸಲ್ಲಿ.
ಅಲುಗಾಡಿಸಿತ್ತು, ಉಸಿರಾಗಿ ಹೊಕ್ಕಿತ್ತು,
ಮೈಯ್ಯೆಲ್ಲ ಕಂಪಾಗಿಸಿತ್ತು ನೀ ಬಂದ ಘಮ..

ಗಾಳಿಯಲೆ ಹೊತ್ತು ತಂದಿತ್ತು
ನೀ ಹೇಳಿದ್ದು, ಹೇಳದೆ ಅರುಹಿದ್ದು,
ಭಾವಿಸಿದ್ದು, ಭಾವಿಸದೆ ಅನುಭವಿಸಿದ್ದು,
ಯೋಚಿಸದೆ ಅನಾಯಾಸ ಕಳಚಿ ಕಳಿಸಿದ್ದು.

ನಿರೀಕ್ಷಿಸಿರಲಿಲ್ಲ, ಬಲು ಭಾರದುಡುಗೊರೆಗೆ ಕೈ ಜಗ್ಗಿದೆ.
ಹೌದು-ಅಲ್ಲಗಳ, ಇದೆ-ಇಲ್ಲಗಳ, ಪ್ರಶ್ನೆಗಳ,
ಎಲ್ಲಕ್ಕಿಂತ ಹೆಚ್ಚು ನಿಟ್ಟುಸಿರ ರಾಶಿಯೊಳಗೆ
ಕುಸಿದು ಹೂತೇ ಹೋಗಿದೆ ನೀ ನೆಲೆಸಿದ್ದ ಮನ..

ಇರಬಹುದು,
ಕಳುಹುವ ಮುನ್ನ ಪರೀಕ್ಷಿಸಿಲ್ಲದೆ,
ಆರಿಸಿಲ್ಲದೆ, ತಿದ್ದುಪಡಿ ಮಾಡಿಲ್ಲದೆ,
ದುಡುಕಲಿ ನೀ ದೂಡಿದ್ದೇ ಇರಬಹುದು.

ಆದರೂ ನೋಡು...
ಬಂದುಬಿಟ್ಟಿದೆ ಬಾಣ, ಇಲ್ಲವೆನಲಾಗದು.
ಮುಟ್ಟಿಬಿಟ್ಟಿದೆ ಗುರಿಯ ವಿಷಲೇಪಿತ ಅಲುಗು.
ನೀಲಿ ತಿಳಿಮನಸು, ರಾಡಿ ಉಳಿದ ಬದುಕು..

ನೀನೆಂದೂ ನೀನೇ ಇಲ್ಲಿ, ಬಹುಶಃ ನಾನುಳಿದಿಲ್ಲ ನಾನಾಗಲ್ಲಿ.
ಸಿಕ್ಕಿದ್ದು ಭಾಗ್ಯ, ಸಿಕ್ಕದ್ದು ನನದಲ್ಲದ್ದೇ ಸರಿ.
ದಕ್ಕಿದ್ದು-ದಕ್ಕದ್ದು ನನಗಿಲ್ಲಿ, ಎಲ್ಲ ದಕ್ಕಲಿ ನಿನಗಲ್ಲಿ.
ಹಾಗೋ, ಹೀಗೋ.. ಹೇಗೋ ಒಂದು ತರದಲ್ಲಿ.

Sunday, May 5, 2013

ಕಾಯುವುದು ಮುಗಿವುದೇ ಇಲ್ಲ.

-------------------------

ಹೂವಿಲ್ಲ, ಗಿಡ ವಿವಶ, ಕದ್ದದ್ದು ಬೇಲಿ
ನಗುವಿಲ್ಲ, ಮನ ವಿವಶ, ಕಿತ್ತದ್ದು ನೀನು.
ನೀರಿಲ್ಲ, ನೆಲ ಬರಡು, ಪ್ರಕೃತಿ ವಿಕೋಪ
ಪಸೆಯಿಲ್ಲ, ಎದೆ ಬರಡು, ಈ ಪ್ರತಾಪ ನಿನದು.

ಕಾರ್ಯಕಾರಣ ಬೇಕಿಲ್ಲ ಜಗಕೂ, ನನಗೂ..
ಒಪ್ಪುವುದಷ್ಟೇ ದಾರಿ ಅಂದಿಗೂ ಇಂದಿಗೂ...
ಕಂಗಳು ಬತ್ತಿ, ನಿರ್ಜಲ ನಿರ್ಜೀವ ನೋಟ,
ನಕ್ಕ ಕ್ಷಣ ನೆನಪಾಗುತಿಲ್ಲ, ಬಿಕ್ಕಿನದೇ ಕಾಟ.

ಒಳಹೊರಗೆ ಸಮ ತಾಪ, ಒಂದೇ ಸಮ ಒತ್ತಡ,
ಭಾವಸಂಚಾರ ಸಲೀಸು ಈಗ ಅಲ್ಲಿಂದಿಲ್ಲಿಗೆ.
ಮಿಳಿತವೆರಡಾತ್ಮಗಳು ಸಮ ಸ್ಥಿತಿಯೊಂದು ಚಣ
ನನ್ನಳಲು ಜಗದೊಳಗೆ, ಜಗದ್ದು ನನ್ನೊಳಗೆ.

ಪ್ರಶ್ನೆಯೊಂದು ಮರಿಮೊಗ್ಗು, ಬಿರಿವಾಸೆ ಬರದಲೂ.
ಹುಟ್ಟುತಿದೆ, ಮುರುಟುತಿದೆ, ಮತ್ತೊಮ್ಮೆ ಮೂಡಲಿಕೆ.
ದಾರಿಯಿಲ್ಲದ ಪಯಣವದಕೆ, ಗುರಿಯಿಲ್ಲದ ಬಾಳು,
ಹಾಡೆಂದು ಮೈಮರೆಯುತಿದೆ ಮೂಕ ಮೌನಕೆ.

ಕಾಯುತಿದೆ ಇಲ್ಲದುತ್ತರದ ಹನಿಗೆ,
ಮುಚ್ಚುತಿರುವೆವೆಯ ಬಲಹಾಕಿ ಬಿಡಿಸಿ,
ನಿಲ್ಲುತಿರುವೆದೆಗೆ ನಾಗಾಲೋಟದ ಪಾಠ ಕಲಿಸಿ,
ಹನಿ ನೀರಿಲ್ಲದಲೂ "ಬಾಯಾರಿಕೆ.." ಎಂದುಸುರುತಿದೆ..

ಜಗ ನನ್ನೊಳಗೆ ಮುನ್ನಡೆದಿದೆ, ನಾನದರೊಳಗೆ.
ಕಾಯುವುದು ನಿಂತಿಲ್ಲ, ನಿಲ್ಲುವುದೂ ಇಲ್ಲ.
ಹುಟ್ಟಿನೆದುರು ಸಾವು, ಸಾವಿನೆದುರು ಹುಟ್ಟು ಸೋತರೂ
ರದುದಕೆ ಕಾಯುವುದು ಸೋಲುವುದೇ ಇಲ್ಲ.