Saturday, August 31, 2013

ಭಿನ್ನವಾದೀತೇ ಈ ರಾತ್ರಿ?!

ಭಿನ್ನವಾದೀತೇ ಈ ರಾತ್ರಿ?!
----------------------
ಮತ್ತದೇ ರಾತ್ರಿ, ಮತ್ತದೇ ಕತ್ತಲು
ಮತ್ತದೇ ಮೌನ, ಮತ್ತದೇ ಒಗಟು
ಎಲ್ಲಾ ನಿನ್ನೆಯಂತೆಯೇ..
ಅದರಿಂದೊಂದು ಕರಿಮೋಡದಂಚಿನ
ಮಿಂಚಿನೆಳೆಯಂತೆ ಆಸೆ..
ಅಂದಿನಂತೆ ಇಂದೂ ಎಲ್ಲೋ
ಮತ್ತೊಂದು ಜನನವಾದೀತೇ?!
ಒಂದೇ ಆಗಿ ಹರಿಯುತಿರುವ
ಕಾಲಪ್ರವಾಹವಿಂದು
ಮತ್ತೆ ಚಮತ್ಕಾರದಂತೆ
ಸರಿತಪ್ಪುಗಳೆರಡಾಗಿ ಸೀಳಿ
ನಡುವೊಂದು ಪಥ ನಿರ್ಮಿಸಿ
ಪ್ರೇಮದೊಂದು ಹೊಸವ್ಯಾಖ್ಯಾನವ
ಲೋಕನಂದನಕೆ ಒಯ್ದು ಕೊಟ್ಟೀತೇ?!
ತಾಯ್ತನದ ಅಪೇಕ್ಷೆಯೊಂದಕೆ ಅನಿರೀಕ್ಷಿತ
ತೃಪ್ತಿಯೊಂದು ಮಗ್ಗುಲಲಿ
ರಾತ್ರಿಯುಡುಗೊರೆಯಾಗಿ ಬಂದೀತೇ?!
ಬಂಧಸಂಬಂಧ, ಮೋಹಸ್ನೇಹಗಳು,
ಭಕ್ತಿಪ್ರೀತಿ, ಪ್ರೇಮ, ನಿಷ್ಕಾಮಕರ್ಮಗಳು
ಮೂಲರೂಪದಿ ನೈಜತೆಯುಟ್ಟು
ಆ ಜನನೋತ್ಸವಕೆ ಧರೆಗಿಳಿದು ಬಂದಾವೇ?!
ಮನಸೋತಿಲ್ಲಿ ಮನೆಮಾಡಿಯಾವೇ?!
ಅವ.. ಅವನೇ ಆವತಾರನಾದಾನೇ ಮತ್ತೆ?!
ಕೈಕಟ್ಟಿ ಬಾಯ್ಮುಚ್ಚಿ ಅವ ಕೂತ ಭೂತಕಾಲ
ಮಿತಿಮೀರಿದ ಕೆಡುಕು ಹೆತ್ತ ವರ್ತಮಾನ ದಾಟಿ
ಮತ್ತದೇ ಅವನ ಲೀಲೆಗಳ ನಾಳೆಗಡಿಯಿಟ್ಟೀತೇ?!

**

ಸುಳ್ಳೆಂದರೆ ಸುಳ್ಳಾಗಿಯೇ
ನಿಜವೆಂದರೆ ನಿಜವಾಗಿಯೇ
ಒಲ್ಲೆನೆನುವವರಿಗೂ ಒಪ್ಪುವವರಿಗೂ
ಒಂದೇ ಸಮ ಒದಗಬಲ್ಲ
ಬಯ್ಗುಳದಲೋ ಕೀರ್ತನೆಯಲೋ
ಸದಾ ತಾನಡಗಿ ಕೂರುತಾ
ಇಲ್ಲವೆಂದರೆ ಇಲ್ಲವಾಗುತಾ
ಇದ್ದೀಯೆಂದರೆ ಅರಿವಿಗಿಳಿಯುತಾ
ನೆನೆವ ಮನದಲಿ ನಗುತಾ
ನೆನೆಯದವಗೆ ಬೆಂಗಾವಲಾಗಿರುತಾ
ಕಳ್ಳತನ ಸುಳ್ಳುಗಳ ತಾ ಹೊಕ್ಕು
ಅಲ್ಲದ್ದ ಮಾಡಲೆಳಸುವರ ಇತ್ತ ಎಳೆಯುತಾ
ತನ್ನ ದಾಸರದೂ ದಾಸರಲ್ಲದವರದೂ
ದಾಸನಾಗಿ ಒಡೆಯನಾಗಿ
ಕಂದನಾಗಿ ಅಪ್ಪನಾಗಿ
ಅಣ್ಣನಾಗಿ ಸಖನಾಗಿ
ಸರ್ವಸಮರ್ಪಣೆಯೊಂದು ಆದರ್ಶವಾಗುತಾ
ಇಲ್ಲ ಅನಿಸಿದ ಕ್ಷಣ ವ್ಯಕ್ತವಾಗುತಾ
ಮರೆವಿಗೆಂದೂ ವಶವಾಗದ
ಸದಾ ಹಸಿರು ವ್ಯಕ್ತಿತ್ವವೊಂದರ
ಘನತೆಗೆ ಆಪ್ತತೆಗೆ ಆತ್ಮೀಯತೆಗೆ
ದಿನದಿಂದ ದಿನಕೆ ಆಕರ್ಷಿಸುತಲೇ ಸಾಗುವ
ಚಂದಕೆ ಹುಟ್ಟುಹಬ್ಬದ ಸಂಭ್ರಮವಂತೆ
ನೆರಳಿಗೂ ಮೀರಿ ಜೊತೆಯಿತ್ತ
ಋಣವವನದು, ನಾವೇನು ಕೊಡಬಹುದು?
ಹಣೆಗೂ ಪಾದಕೂ ಒಂದೊಂದು ಮುತ್ತು
ಹೆಜ್ಜೆಹೆಜ್ಜೆಗೂ ನೆನೆದು ಸುಖದ ಭಾಷ್ಪಬಿಂದು
ಒಂದಿಷ್ಟು ಚಕ್ಕುಲಿ, ಒಂದಿಷ್ಟು ಉಂಡೆ,
ಪಂಚಕಜ್ಜಾಯದವಲಕ್ಕಿ, ಒಂದಿಷ್ಟು ಬೆಣ್ಣೆ..
ಕರ್ಷತೇತಿ ಇತಿ ಕೃಷ್ಣಃ
ಕೃಷ್ಣಾಯತುಭ್ಯಂ ನಮಃ

Tuesday, August 27, 2013

**

ಕಣ್ಣು ವಿಹಂಗಮಕೆ ನೆಟ್ಟದ್ದೇ
ತಪ್ಪೆನುವಂತೆ ರೆಕ್ಕೆ ಮುರಿದೊಂದು ಹಕ್ಕಿ.
ಊರಲ್ಲದೊಂದೂರಿಗೆ ವಲಸೆಯ ಸ್ವಪ್ನಜಾಲ
ನಡೆವ ಕಾಲ್ಬೆರಳು ಸಿಕ್ಕಿಬಿದ್ದು
ರೆಕ್ಕೆಗೆ ಚಾಲನೆ ಜಾಲ ಸಮೇತ.
ಇದ್ದ ಶಕ್ತಿಯೆಲ್ಲಾ ಹೊರದಬ್ಬಿ
ನೆಲದ ಕಾಳ ಸೆಳೆತ ಮೀರಿ
ಇತ್ತೋ ಇಲ್ಲವೋ ಇದ್ದಂತನಿಸಿದ
ನೆಲಬಿಟ್ಟ ನೆಲೆಯ ಸೆಳೆತಕೆ ಶರಣಾಗಿ..
ಕಂಡ ಕ್ಷಣ, ಸೆಳೆದ ಕ್ಷಣ
ಅದು ನಂಬಿಸಿ ಇದು ನಂಬಿದ ಕ್ಷಣ,
ಮತ್ತದು ನಿಲುಕಿತೆನಿಸಿದ ಕ್ಷಣವಷ್ಟೇ ದಕ್ಕಿದ್ದು,
ತನ್ನದೆನುವದೇನೋ ಹರಿದು ಚಿಂದಿ..
ನೆಲವಲ್ಲದ ನೆಲೆ ಗಾಳಿಗುದುರೆಯ ಬೆನ್ನೇರಿ
ದೂರ ದೂರ ವಿಹಂಗಮ, ಕ್ಷಿತಿಜದತ್ತ..
ಕಾಲ್ಬೆರಳು ನಡೆಯಗೊಡದೀಗ,
ಹರಿದ ರೆಕ್ಕೆ ಹಾರಗೊಡದು..
ಹಕ್ಕಿ ಕಾದೇ ಕಾದಿದೆ ಹಾರಲಿಕಾದರೂ ಹೌದು,
ಮತ್ತೆ ಹಾರುಹಕ್ಕಿಯಲ್ಲ, ಅದಲ್ಲಿಲ್ಲವೆನಿಸಲಿಕೆ
ಇನ್ನಿಲ್ಲವೆನಿಸಲಿಕಾದರೂ ಹೌದು...
ಇನ್ನೊಮ್ಮೊಮ್ಮೆ ಅದು ಹೀಗಂದಂತಿದೆ..
ರೆಕ್ಕೆ ಮುರಿದರೇನು, ಇನ್ನೊಂದಿದೆ ಹರಿಯಲಿಕೆ,
ಅದೂ ಮುರಿದ ಕ್ಷಣ ಇನ್ನೂ
ಹಕ್ಕಿಯದೆಂಬ ಹೃದಯವೊಂದಿದೆ
ಮತ್ತೆ ನೆಟ್ಟಿವೆ ಕಣ್ಣು ವಿಹಂಗಮಕೆ
ಇನ್ಯಾವುದೋ ಒಂದೆಡೆಯ ವಲಸೆ,
ಮತ್ತದರ ಸ್ವಪ್ನಜಾಲಕೆ...
ಬಂಧಿಸುವ ಜಾಲವೇ ಹೌದು,
ಆದರೆ ಕನಸಿಲ್ಲದೇ ಬದುಕಿಲ್ಲ,
ಕನಸಲ್ಲದ ಬದುಕಿಲ್ಲ...

Monday, August 26, 2013

ಮಡಿ ಮಾಡುವುದು

ಮಡಿ ಮಾಡಲೆತ್ತಿರಿಸಿದ ಬಟ್ಟೆರಾಶಿ
ಕೊಳೆಯಾದದ್ದು, ಕಲೆಯಾದದ್ದು,
ಬೆವರು ಹತ್ತಿಸಿಕೊಂಡದ್ದು,
ಮಡಿಚಿಡದೆ ಮುದ್ದೆಯಾದದ್ದು,
ಶುದ್ಧವಾಗಬೇಕಾದದ್ದೆಲ್ಲ
ಕೋಣೆಯ ಮೂಲೆಯಲೊಂದು
ತುಂಬಿತುಳುಕುವ ಚೀಲದಲ್ಲಿ..
ನಾನದರ ಗುಂಗಲ್ಲಿ..
ತೊಳೆಯಬೇಕಿದೆ ನಾನೇ,
ಆಳು ಮಾಡುವ ಕೆಲಸ ಹಾಳು.
ತಿಕ್ಕಿ ಒಗೆದೂ ಕಲೆಬಿಡದವನೆಲ್ಲ
ಉಡಲಿಕ್ಕಲ್ಲ, ನೆಲ ಒರೆಸಲಿಡಬೇಕು,
ಶುಭ್ರವಾದವ ಮಡಿಚಿ
ಒಳಗೆತ್ತಿ ಇಡಬೇಕು..
 ಒಳಗೆಲ್ಲೋ ದೊಡ್ಡ ಮನೆಯಂಥ ಮನ
ಹಲವು ಕೋಣೆ, ಉದ್ದಗಲವಲ್ಲ ಸಮಾನ
ಅಗತ್ಯದ್ದು, ಅಗತ್ಯವಿಲ್ಲದ್ದು
ಗಾಳಿಬೆಳಕಾಡುವವು, ಕಡುಕತ್ತಲೆಯವು
ಸದಾ ಗಿಜಿಗಿಜಿ ಕೆಲವು, ಸತ್ತಂತೆ ನೀರವ ಕೆಲವು
ಜಡಿದ ಬೀಗದವು, ಗುಡಿಸಿ ಒರೆಸದೆ ರಾಡಿ..
ಹಜಾರ ಪಡಸಾಲೆಗಳಿವೆ, ಗ್ರಾಸಕೇರ್ಪಾಟಿದೆ..
ತೊಳೆವ ಜಾಗವೊಂದಂಗುಲವೂ ಇಲ್ಲ..
ಪ್ರತೀ ಕೋಣೆಯೊಂದು ಮೂಲೆಯಲೊಂದು
ಚೀಲ, ತುಂಬಿ ತುಳುಕುವದ್ದು
ಈಗಿದು ನೋಡು ಕ್ಲುಪ್ತ ಸಮಯ,
ನಾಕು ಗೋಡೆ ಒಂದು ಬಾಗಿಲ
ಮಡಿಕೋಣೆಗಿಡಬೇಕು ಅಡಿಪಾಯ..
ಕೊಳೆಯಾದ, ಕಲೆಯಾದ,
ಶುದ್ಧಿ ಬೇಡುವ ಭಾವವನಲ್ಲಿ
ತೊಳೆದು, ಜಾಲಾಡಿ, ಹರವಿ ನೋಡಿ
ಕಲೆ-ಕೊಳೆ ಬಿಟ್ಟವನಷ್ಟೇ ಒಯ್ದೆತ್ತಿರಿಸಿ ಜೋಪಾನ
ತಿಳಿಯಾಗದ್ದ ತೊರೆದು, ಬಿಟ್ಟು ಅನುಮಾನ..
 
 
 
 
 
 

Sunday, August 25, 2013

ಮುತ್ತು ಮಾತಾಡಿದ್ದು

"ಅದೇ ಅದೇ" ಅನ್ನುತ್ತಾ ಕಣ್ಣಲಿ
ನೂರು ಮಿಂಚರಳಿಸಿ ನಕ್ಕವನ
ಸುಮ್ಮನೇ ಕೇಳಿದೆ
, "ಅದಲ್ಲದಿದ್ದರೆ?!"
ಮಿಂಚು ಸಣ್ಣಗೆ ಗುಡುಗಾಯ್ತು
ಗುಡುಗು ಸೋನೆ ಮಳೆಯಾಯ್ತು
ತಾಕಿ ನೀರಾಗಿಸುವ ಗುಡ್ಡ ಅವನೆಂದಿದ್ದೆ
ನೀರಾಗುವ ಮೋಡವೆಂದರಿವಾದದ್ದೇ
ಮನವೀಗ ನವಿಲು
, ರೆಕ್ಕೆಬಿಚ್ಚಿ
ಒಂದೊಂದು ಕಣ್ಣಲೂ ಒಂದೊಂದು ನೋಟ
ಅಷ್ಟೇ ಭಾವ, ಅಷ್ಟೇ ಪುಳಕ...
ಗುಡುಗಿ ಸುರಿದುದಕೆ ಅವನು
ಅಡಗಿ ನೆನೆದುದಕೆ ನಾನು
ನವಿಲ ಹೆಜ್ಜೆ ತೊಟ್ಟಿದೆ ಗೆಜ್ಜೆ
..
ಕೊರಳೆತ್ತಿ ಬಿಂಕದಿ ಹಾಡಿ
ನಲಿವ ಹೆಜ್ಜೆಗುರುತೆಲ್ಲಾ
ಹಿತವಾದ ಸವಿಮಾತು
.
ಮಾತು ಹುಟ್ಟಿಸಿವೆ ಮುತ್ತು.
ಹಣೆ ಕತ್ತು ಕಿವಿ ಕೈಯ್ಯಲಂಕರಿಸಿ
ಮುತ್ತು ಮಾತಾಡಿದೆ
, ಕೂಗಿ ಹೇಳಿದೆ
"ಅವ ಹೇಳಿದ್ದು ಸರಿ
ಅದು ಅದೇ, ಈಗಿಬ್ಬರೂ ಸುಮ್ಮನಿರಿ..."  
 
 
 
 
 
 

Saturday, August 24, 2013

**

ಅವ ಕೇಳುತಾನೆ, ಅವಳನ್ನುತಾಳೆ..
--------------------------
"
ನೀನೇಕೆ ಸುರಿಯಲೊಲ್ಲೆ? "
ಅವ ಕೇಳುತಾನೆ, ಅವಳನ್ನುತಾಳೆ..
"
ಮೋಡವಲ್ಲ ನಾನು, ಹೊತ್ತಿಲ್ಲ ಬಾನು,
ಕಾದು ಕೆಳಗೆ ಹರಡಿಕೊಂಡಿಲ್ಲ ನೀನು"

"
ನೀನೇಕೆ ಹರಿಯಲೊಲ್ಲೆ?"
ಅವ ಕೇಳುತಾನೆ, ಅವಳನ್ನುತಾಳೆ..
"
ನದಿಯಲ್ಲ , ಹರಿವು ಹುಟ್ಟಿಸುವ ದಂಡೆಗಳಿಲ್ಲ ...
ಕೈಯ್ಯಗಲಿಸಿ ಕರೆಯುವ ಸಾಗರವಲ್ಲ ನೀನು"

"
ನೀನೇಕೆ ಕರೆಯಲೊಲ್ಲೆ?"
ಅವ ಕೇಳುತಾನೆ, ಅವಳನ್ನುತಾಳೆ..
"
ನಾ ಕೋಗಿಲೆಯೇನು? ಮೂಕ ಕಂಠವೆನದು
ವಸಂತನಲ್ಲ, ಮಾವು ಚಿಗುರಿಸಿಟ್ಟಿಲ್ಲ ನೀನು"

"
ನೀನೇಕೆ ಅರ್ಥೈಸಲೊಲ್ಲೆ?"
ಅವ ಕೇಳುತಾನೆ; ಅವಳನ್ನುತಾಳೆ..
"
ನಾ ಶಂಖವಲ್ಲ, ಒಳಗೆ ತೀರ್ಥವಿಲ್ಲ
ರಕ್ತದ ಭಾಷೆ, ಧಾಟಿಗಳನರಿತಿಲ್ಲ ನೀನು"

"
ನೀನೇಕೆ ಮರೆಯಲೊಲ್ಲೆ?"
ಅವ ಕೇಳುತಾನೆ; ಅವಳನ್ನುತಾಳೆ..
"
ನಾನಲ್ಲ, ಉಸಿರು ನೆನಪ ಜತನ ಮಾಡಿಟ್ಟಿರುವುದು
ಅದೇ ಉಸಿರ ಆಧರಿಸಿ ಜೀವಂತ ನಾನು"

**

ಉತ್ತರ ಗೊತ್ತಿದ್ದ ಪ್ರಶ್ನೆಗಳವು,
ಉತ್ತರ ಮರೆತ ಪ್ರಶ್ನೆಗಳವು,
ಉತ್ತರ ಗೊತ್ತಿರದ ಪ್ರಶ್ನೆಗಳವು..
ಹೀಗೇ ಪ್ರಶ್ನೆಗುತ್ತರ ಬಯಸುವವು
ಬಂದು, ಬಂದಂತೆ ಹೋದವೆಷ್ಟೋ ಪರೀಕ್ಷೆಗಳು..
ಕೆಲವು ಮುನ್ನಡೆಸುವ,
ಕೆಲವು ನಿಂತಲ್ಲೇ ಹುದುಗಿಸುವ,
ಇನ್ನೂ ಕೆಲವು ಸಾಗಿಬಂದ ಹಾದಿಯ
ಮೊದಲ ಬಿಂದುಗೊಯ್ದುಬಿಟ್ಟವುಗಳು...
ಇದೆಂಥಹುದೋ
ಜೀವವೇ?!
ಪ್ರಶ್ನೆಗಳೇ ಇಲ್ಲದ ಬರೀ ಉತ್ತರಗಳ ಸಾಮ್ರಾಜ್ಯ.
ಕಾರಣ, ಸಮಜಾಯಿಷಿ,
ತಪ್ಪೊಪ್ಪಿಗೆ, ಸಾಕ್ಷಿಪುರಾವೆ,
ಅರೋಪ-ಪ್ರತ್ಯಾರೋಪಗಳೆಂಬ
ಉತ್ತರಗಳೆಲ್ಲಾ ಭೂತಗನ್ನಡಿ ಹಿಡಿದು..
ಭರದಿ ಹುಡುಕಾಡುವಾಗ
ಪ್ರಶ್ನೆ ಹೆದರಿ ಭೂಗತ.
ಸುತ್ತಿ ಸವೆದು ಕುಸಿದುಕೂತಿವೆ ಉತ್ತರಗಳು.
ಗೊಂದಲ; ಪ್ರಶ್ನೆಯಂತನಿಸಿದಾಗ ತಮದೇ ನೆರಳು
ಅದಲುಬದಲಾದ ಪಾತ್ರಗಳಲಿ
ಒಂದಕೆ ಮುಖತಪ್ಪಿಸುವ ಗೋಳು..
ಉಳಿದುದಕೆ ಮುಗಿಯದ ಪರೀಕ್ಷೆ ಬಾಳು..

Friday, August 23, 2013

ಮುಂದುವರಿಸುವುದೂ, ನಿಲಿಸುವುದೂ..

ಎಷ್ಟೆಲ್ಲ ಮಾಡಬೇಕು ಹಾಗೇ
ಮಾಡುತಿರುವದನು ಮುಂದುವರಿಸುವುದಕೆ!
ನೋಡಿ ನೂರುನೋಟ ಒಂದು ಸೆಳೆದಾಗ
ಅರಿವ ನೆಲದಾಳಕೊಂದು ಕುಳಿ ತೋಡಿ,
ಬಿತ್ತ ಮಾಡಿ ಬಿತ್ತಬೇಕು, ಕಾಯಬೇಕು.
ಅನುಭವವೆರೆದು, ಜ್ಞಾನಸೂರ್ಯಗೊಡ್ಡಿ
ಭಾವಫಲಕೆ ಮತ್ತೆ ಕಾಯಬೇಕು
ಫಲ ಕುಯ್ದು ಅಕ್ಕರಗಳೊಳಗಿಟ್ಟು
ಮತ್ತೆ ಕಾಯಬೇಕು ಕಾವಿಗೆ ಮಾಗಲು.
ಫಲ ತಾನುಂಡು ಮೆಲುಕು ಹಾಕುತಿರಬೇಕು..
ರುಚಿ ಪಸರಿಸಿ ಅಕ್ಕರದೆದೆಯೊಳಗದು
ಸಂಸ್ಕರಿತ, ಮಧುಭರಿತ ಮತ್ತಾಕರ್ಷಕ...
ಸುಪುಷ್ಟವಾದವನೆತ್ತಿ ಶಬ್ಧ ಪೋಣಿಸಬೇಕು
ಶಬ್ಧ ಬರೀ ಚಂದದವನಲ್ಲ; ಸಬಲವಾದವನೆತ್ತಿ
ಅಕ್ಕಪಕ್ಕ ಹೊಂದಿಕೊಂಡು ತಾಳಿಕೊಂಡು
ಜಯಿಸಬಲ್ಲುವ ಸಾಲು ನಿಲ್ಲಿಸಬೇಕು
ಪ್ರಶ್ನೆ, ಅಲ್ಪವಿರಾಮ, ಆಶ್ಚರ್ಯಸೂಚನೆ
ವಿರಾಮಗಳೊಳಗೆ ನಿವೇದನೆಯಿಡಬೇಕು
ಒಂದು ಹೆಚ್ಚಾದರಜೀರ್ಣ,
ಕಮ್ಮಿಯಾದರದು ಅಪೂರ್ಣ...
ಅಕ್ಕರ ಶಬ್ಧ ಸಾಲುಗಳ ನಡುವೆ
ತನ್ನತನ ಮೊಗೆಮೊಗೆದು ತುಂಬಬೇಕು
ಅದಕಲ್ಲಿಗೆ ತನ್ನನೇ ಒಡ್ಡಿಕೊಳಬೇಕು...
ಇಷ್ಟೆಲ್ಲಾ ಆದಾಗ ಮುಂದುವರಿವುದಾದೀತು..
ಆದರೆ ನೋಡು ಜೀವವೇ,
ನಿಲ್ಲಿಸಲಿಕಿನ್ನೇನೂ ಬೇಡ; ಸಾಕೆನಿಸಿದಲ್ಲಿ
ಬಿಂದುವೊಂದಿಕ್ಕಿ ಸುಮ್ಮನಿದ್ದುಬಿಟ್ಟರಾಯಿತು.

Thursday, August 22, 2013

ಸ್ವಲ್ಪ ಅವನಳಲೂ ಕೇಳಿ...

ದಾಟಿ ಬಾರೆಯಾ ರಾಧೆ ಎಲ್ಲ ಎಲ್ಲೆ
ಅರಳಿಸಲು ನನ್ನೆದೆಯ ಮೊಗ್ಗುಮಲ್ಲೆ
 
ಕಾಯುತಿರುವುದು ನೀನು
ಕಾಣುವ ದೇಹವಂಟಿಸಿ
ನಾ ನಡೆದ ಹಾದಿಗೆ
ಲೋಕವೆಂದಿಗೂ ವಿರಹಿ ನಿನ್ನ ಪರವೇ
 
ಬೇಯುತಿರುವುದು ನಾನು
ಕಾಣದೆನ್ನ ಮನವ ಕಾಯಿಸಿ
ನೀನಿರದ ಉರಿಗೆ..
ಲೋಕದರಿವಿಗೆ ನಿನ್ನ ಕಾಯಿಸುವ ಪಾಪಿ ನಾನೇ..
 
ನೂರು ಕಾರ್ಯಕಾರಣ
ಗಮನಿಸಲಾಗಿಲ್ಲ;
ನನಗಪರಿಚಿತ ಇತ್ತೀಚೆಗೆ
ನನ್ನದೇ ಮನ.
 
ಮುಚ್ಚಿರುವೆ ಮೇಲೊಂದು
ಉಪೇಕ್ಷೆಯ ಕಲ್ಲುಚಪ್ಪಡಿ;
ಕಾಣುತಿಲ್ಲವಾದರೂ ಗೋರಿಯಂತೆ
ಮಲಗಿರಬಹುದಲ್ಲಿ ಸಾವೇ, ಸದ್ದಿಲ್ಲದಂತೆ.
 
ಅತ್ತೆ ಮಕ್ಕಳ, ಅವರ ಮಡದಿಯ
ಸಂಧಾನದ, ಯುದ್ಧವಿಧಾನದ
ವಿದುರನಾತಿಥ್ಯದ
ಅಳಿಯನಳಿವಿನ
ಕರ್ಣನನೊಲಿಸುವ
ಪಾಪ ತೊಲಗಿಸುವ
ಹೀಗೇ ಕರೆವ ನೂರುಕರೆಗಳಬ್ಬರದಲಿ
ನುಡಿಸಿದರೂ ಕೊಳಲು ನುಡಿಯುತಿಲ್ಲ..
ಭಯವೆನಗೆ, ಮರೆತೇ ಬಿಟ್ಟೇನು...
 
ಅಭಯ, ಆಶ್ವಾಸನೆ,
ಆಣೆ, ಅಪ್ಪಣೆ,
ಭರವಸೆ, ಒತ್ತಾಸೆ,
ಒತ್ತಾಯ, ಉಪಾಯ
ಗುಟ್ಟುಬಯಲು, ಮತ್ತೆ ಕೆಲಸುಳ್ಳು
ಹೀಗೇ ನೂರುಮಾತಿನ ಭರಾಟೆಗೆ
ಸವಿ ಗುರುತಿಸುತಿಲ್ಲ ನಾಲಿಗೆ
ಬೆಣ್ಣೆ ಬೆಣ್ಣೆಯೆನಿಸುತಿಲ್ಲ ಅದಕೆ
ಭಯವೆನಗೆ ಮರೆತಿರುವೆನೇ ನಾನು?
 
ಬಿತ್ತಲ್ಲಿ ಬಂದಿರುವೆ ಆಸೆಬೀಜ
ಮತ್ತೆ ಕೊಳಲೂದುವುದಕೆ
ಕದ್ದುಮುಚ್ಚಿ ಬೆಣ್ಣೆ ಸವಿಯುಣುವುದಕೆ
ಕಣ್ಮುಚ್ಚಿ ಅಂದ ಸವಿವುದಕೆ
ಮುಟ್ಟದೆಯೇ ಅನುಭವಿಸಲಿಕೆ
ಆಡದೆಯೇ ವರ್ಣಿಸಲಿಕೆ
ಮಾತಿರದ ಅನುಭೂತಿಯಲೆಲ್ಲ
ಕ್ಷಣ ತುಂಬಲಿಕೆ..
 
ನೀರುಣಿಸುತಿರು ನೀನು
ಅದು ಮೊಳೆತು ಬೆಳೆಯಲಿ
ನಾ ಮರೆತರೂ ಆಗೊಮ್ಮೆ
ಕೊಳಲೂದುವುದು, ಬೆಣ್ಣೆಯುಣುವುದು
ಮತ್ತಿನ್ನೇನೋ ಎಲ್ಲ,
ಕಲಿಸಬೇಕು ನೋಡು ನೀ ಮತ್ತೆ
 
ಖಾಲಿ ಕಾಯುತಲೇ ಕೂರದಿರು
ಮೆಲುಕು ಹಾಕುತಿರು
ಜಾರದಿರಲಿ ನಮ್ಮ ಆ ಹೊತ್ತು
ನಿನ್ನ ಈ ಹೊತ್ತಿನ ಮರೆವಿನಾಳಕೆ..
ಕರ್ತವ್ಯದೊಳಗಿದ್ದರೂ ನಾನು
ಕಾಯುತಿರುವುದು ಬರೀ ಆ ಮಿಲನಕೆ...
 
 

ಕಾಲನಿಗೊಂದು ಶರತ್ತು

ಅಮ್ಮ ಹೇಳುತಾಳೆ
"ಇನ್ನಿರಬಾರದು ಕಂದಾ.."
ಅಪ್ಪ ಹೇಳುತಾರೆ
"ತಟ್ಟಂತ ಬಿದ್ ಹೋಗಬೇಕು ಕಣೋ.." 
"
ಸುಮ್ಮನಿರಮ್ಮಾ... " ಗದರುತ್ತಿದ್ದ ದನಿಯಿಂದೇಕೋ ಮೌನ..
 
ಕ್ಷಣಭಂಗುರದ ಜೀವನದ
ಏರುಹಾದಿಯಲಿ ಆ ಕರುಳಕುಡಿ
ಸಾವಿನರಮನೆಯ ಹೊಸ್ತಿಲ
ಕಾಲಿಗಂಟಿಸಿಕೊಂಡು ತಿರುಗುತ್ತಿದ್ದಾನೆ
ಗಳಿಗೆಕೂಡಿದ ಹೊತ್ತು
ಒಳಗಡಿಯಿಡಲು..
 
ಕಿತ್ತು ತಿನ್ನುವ ನೋವಲೂ ಅಮ್ಮಗನುತಾನೆ,
"
ಮೊಮ್ಮಗುವಿಗೆ ಎಣ್ಣೆಸ್ನಾನಕ್ಯಾರು ಗತಿಯೇ ಅಮ್ಮಾ?"ಸವೆಯುತಿರುವ ಜೀವನಪ್ರೀತಿಯಲೂ ಅಪ್ಪಗನುತಾನೆ
"ಅಕ್ಷರಾಭ್ಯಾಸಕ್ಯಾರ ಕರೆಯಲೋ ಅಪ್ಪಾ?" 
ಹೆಣ್ಣು ಹುಡುಕಿ ಸೋತ ಕಂಗಳು ಪ್ರಶ್ನೆಯಾಗುತ್ತವೆ..
"
ಹೆಣ್ಣೊಂದನೂ ಒಪ್ಪದೇ ಮೊಮ್ಮಗುವಿನ ಕನಸೇ?ಬರೀ ನಿರಾಕರಿಸುವ ಕೈಗಳಿಗೆ ತಾಳಿ ಕಟ್ಟುವ ಕನಸೇ?"
ಮತ್ತೆ ಭರದಿಂದ ಚಾಳೀಸುಟ್ಟುಕೊಂಡು
ಜಾತಕದ ಪಿಂಡಿಯೊಳಗಲೆಯುತ್ತವೆ..
 
ಕದ್ದುಮುಚ್ಚಿ ಉಣ್ಣುವ ಮಾತ್ರೆಯೂಟಕೆ
ಉಬ್ಬರಿಸಿದ ಹೊಟ್ಟೆಗಿಂದು ಅಮ್ಮ ಬಡಿಸಿದ್ದೆಲ್ಲ ತುರುಕುತಾನೆ..
ಕಣ್ಬಿಡಲಾಗದ ಸಂಕಟದಲೂ
ಅಪ್ಪಗೆ ನಗೆಬುಗ್ಗೆಯೋದಿ ನಗಿಸುತಾನೆ..
ನಾಳೆ ಖಚಿತವಿಲ್ಲ ಅವಗೆ..ಯಾರಿಗ್ಗೊತ್ತು,
ಅಸ್ತು ದೇವತೆ ಈ ಮನೆಯಲೇ ಇದ್ದರೆ!?
 
ಅಪ್ಪ ಸವೆದ ಮೆಟ್ಟುಟ್ಟು ಕಾಲೆಳೆದ ನಡಿಗೆಯಲಿ
ಮಗನ ಭುಜದಾಸರೆಯ ಭರವಸೆ,
ಅಮ್ಮನ ನಡುಗುಕೈ ತೆಗೆದ ಕಾಯಿಹಾಲಲಿ
ಮಗ ಒತ್ತುಶ್ಯಾವಿಗೆಯೊತ್ತಿಕೊಡುವ ಒತ್ತಾಸೆ,
ಕಂಡು, ಕಾಣಿಸದಂತೆ ಕಣ್ಣೀರಾಗುತಾನೆ
ನಗೆಯ ಧಿರಿಸುಡುತಾನೆ..
 
ಕಾಲನ ಬೇಡುತಾನೆ..
"
ಬಂದು ಬಿಡೋ ಈಗ ನನ್ನೆಡೆಗೆ..ನೋವು ತಯಾರಾಗಿಸಿದೆ,
ಪ್ರತಿಭಟಿಸದೆ, ಎದುರಾಡದೆ,
ಹೋರಾಡದೆ, ಲೋಕಕಂಟಿದೆಲ್ಲ
ನಂಟಿನಂಟು ಕಿತ್ತು ನಾನೇ
ನಗುತ ಕೊರಳೊಡ್ಡುವೆ ಕುಣಿಕೆಗೆ
ವರನೊಡ್ಡಿದಂತೆ ಕತ್ತವಳ ಹಾರಕೆ..
ಆದರೊಂದು ಶರತ್ತು..
ಒಂದೇ ಒಂದು ಕ್ಷಣ ಮೊದಲು
ಇವರನೊಯ್ಯಬೇಕು ನೋಡು ನೀನು.."

**

ಅಲ್ಲಿಲ್ಲಿನ ಶಬ್ಧಕೆ ಹೆದರಿ ಮುದುರುವುದೇಕೆ?
ನಿನ್ನೊಳಗೆ ಸ್ಥೈರ್ಯ ಶಂಖವೂದಿರುವಾಗ!
 
ತೆವಳುವಂತೆಯೇ ಕಾಣಿಸಲಿ ಜಗಕೆ
ಸಾಗುವುದು, ಸಾಗುತಿರುವುದು ಮುಖ್ಯ ನಿನಗೆ..
 
ಅಡಗಿದಂತೆಯೇ ಕಾಣಿಸಲಿ ಜಗಕೆ
ವ್ಯಕ್ತವಾಗುವುದು, ಅರ್ಥವಾಗುವುದು ಮುಖ್ಯ ನಿನಗೆ..
 
ಗುರಿ ಹಾಸ್ಯಾಸ್ಪದವೆನಿಸಲಿ ಜಗಕೆ
ತಲುಪುವುದು, ಸ್ಪರ್ಶಿಸುವುದು ಮುಖ್ಯ ನಿನಗೆ
 ಸತ್ವಹೀನ ಒಳಗೆನಿಸಲಿ ಜಗಕೆ
ಒಡೆಯದುಳಿವುದು ಗಟ್ಟಿಯುಳಿವುದು ಮುಖ್ಯ ನಿನಗೆ
 ಅಭಿವ್ಯಕ್ತಿ ಪೊಳ್ಳೇ ಅನಿಸಲಿ ಜಗಕೆ
ತೆರೆದುಕೊಳುವುದು, ಒಳಗೊಳುವುದು ಮುಖ್ಯ ನಿನಗೆ
 ನೀ ಸುಳ್ಳೇ ಅನಿಸಲಿ ಜಗಕೆ,
ಟೊಳ್ಳಾಗದಿರುವುದು ಜೊಳ್ಳಾಗದಿರುವುದು ಮುಖ್ಯ ನಿನಗೆ

ನಿನ್ನೆ ಇಂದಾದಾಗ

ತುಂಬುಚಂದ್ರಗೂ ನನಗೂ
ನಡುವೊಂದು ತಾಳೆಗರಿ
ಅವ ತುಂಡುತುಂಡಾದಂತೆ...
 
ಕಪ್ಪುಆಗಸದಲ್ಲಿ ಬೆಳ್ಳಿಚುಕ್ಕಿ
ಒಂಟಿತನದ ಹತಾಶೆಯಲಿ
ಮಿನುಗು ಮಂಕಾದಂತೆ...
 
ನಿದ್ದೆ ಕದ್ದೊಯ್ದು ಜಗದ ಮಾತು
ಎದೆತುಂಬಾ ಮಾತಾಗದ ಮೌನ
ಉಬ್ಬೇರಿ ನೋವುಲ್ಬಣಿಸಿದಂತೆ...
 
ದುಖಃದಲೇ ತೋಯ್ದು
ಮುಂಜಾವು ಕೆಂಪಾಗಿಸಿ ಕಣ್ಣುಕೆನ್ನೆ
ಕರ್ತವ್ಯಕಷ್ಟೇ ಹಾಜರಾದಂತೆ...
 
ನಿನ್ನೆ ಇಂದಿಗಡಿಯಿಡುವಾಗ
ಮುದ ನೀಡಿದ್ದವೆಲ್ಲ
ಬದಲಾದವೇಕೆ?!
 
ನಿನ್ನೆ ನನ್ನೊಳಗಿದ್ದೆ; ಉಡಿಸಿ
ಕಣ್ಣಿಗೆ ಬಣ್ಣದ ಪಾರದರ್ಶಕ ಪರದೆ
ಹೊಸಿಲ ದಾಟಿದೆಯೇನು?

Wednesday, August 21, 2013

ಅಳುವವರಿರದ ಕೊನೆಯುಸಿರು.

ಅಂಗಡಿಯಿನ್ನೂ ತೆರೆದೇ ಇದೆ,
ಕದ ಮುಚ್ಚಿ, ತೆರೆಯೆಳೆಯಹೊರಟಿದ್ದ,
ಬಟ್ಟು ತಕ್ಕಡಿಗಳನೊರೆಸಿ ಬದಿಗಿರಿಸಿದ್ದ,
ಲೆಕ್ಕಪತ್ರ ಪೂರ್ಣವಿರಾಮವಿಟ್ಟು ಮುಚ್ಚಿದ್ದ,
ಗಲ್ಲಾದ ಬಾಗಿಲೆಳೆದು ಬೀಗವೂ ಜಡಿದಿದ್ದ,
ಅಂಗಡಿಯಾತ, ಕೊಂಡುಕೊಂಡು ಕೊಡುವಾತ...
ಆಗಲೇ... ಸುಳಿದು ಬಂದಿತ್ತು ರಭಸದಲಿ
ಒಂದು ಕಂತೆ ಗಾಳಿ, ಹೊತ್ತೊಂದು ಕತೆ..
ಕೊಟ್ಟುಕೊಳ್ಳಬಂದಿತ್ತು ಬೆಲೆ ನಿಗದಿಪಡಿಸಿ.
ಏನಿರಲಿಲ್ಲವಲ್ಲಿ!! ಎಲ್ಲವೆಂದರೆ ಎಲ್ಲ...
ಪೀಠಿಕೆಯಿಂದ ಉಪಸಂಹಾರದವರೆಗೆ..
ಬೇಕಿದ್ದೂ ಬೇಡದ್ದೂ ಮತ್ತಿನ್ನೇನೋ...
ಒಳದೃಷ್ಟಿ ಹೇಳಿದ್ದೇನೋ, ಅವ ಕಂಡದ್ದೇನೋ
ಕೊಳ್ಳುವುದವನ ವೃತ್ತಿ, ಬಳಕೆ ಪ್ರವೃತ್ತಿ.
ಜತನದಿಂದೆತ್ತಿರಿಸಿ, ಬೆಲೆಯೀಗ ಕೇಳಿದ್ದ
ಎಷ್ಟಿದ್ದರೂ ಭರಿಸಬಲ್ಲ ಹುಚ್ಚು ಅಭಿಮಾನ..
ಬೀಗತೆಗೆದೆತ್ತಿ ಎಲ್ಲಾ ಗಳಿಕೆ
ಅಂದಿನದು ನಿನ್ನೆಯದು ಮತ್ತೆಲ್ಲಾ ನಿನ್ನೆಗಳದು..
ಮೊತ್ತ ಹೊಂದಲಿಲ್ಲ ಗಾಳಿಯೊಂದು ಮುಷ್ಟಿಯಾಸ್ತಿಗೆ..
ಗಾಳಿ ತುಂಬಿತಂದ ಮುಷ್ಟಿಯೊಡ್ಡಿಕೊಂಡಿತ್ತು,
ಬಿಚ್ಚಿಕೊಂಡಿತ್ತು
, ಒಪ್ಪಿಸಿಕೊಂಡಿತ್ತು..ಖಾಲಿಯದನೆದುರು ಇಟ್ಟಿತ್ತು..
ಆದರೂ ಕಾಲೊಂದು ಹೊರಗೇ ನೆಟ್ಟಿತ್ತು..
ಸೋರಿಕೆಗೆ ಖಾಲಿ ಮುಷ್ಟಿಯ ಸಂಶಯಿಸಿದ್ದಾಯ್ತು
ಬಲುಜಾಸ್ತಿ ಬೆಲೆಗೆ ಮೂಗುಮುರಿದುದೂ ಆಯ್ತು.
ಆ ಕಣ್ಣು ಹೊರಗಿನ ಕಾಲ ಮೇಲಿತ್ತು,
ಕಳಿಸಿಕೊಡಲೊಪ್ಪದೆ ಚೌಕಾಸಿಗಿಳಿದಿತ್ತು
ಕೊನೆಗೊಮ್ಮೆ ಬೆಲೆ ನಿಗದಿಸಿದ ಗಳಿಗೆ,
ಗಾಳಿ ಮೊಗ ತಿರುಗಿಸಿತ್ತು ಜೊತೆಗೆ
ಕಣ್ಣೂ ಕಾಲನು ಮುಕ್ತಗೊಳಿಸಿತ್ತು.
ಕೊಳ್ಳುವ, ಕೊಟ್ಟುಕೊಳ್ಳುವ ಉಮೇದು ಮುಗಿದು
ಬೆಲೆಕಟ್ಟುವ ಮಾತುಕತೆಯ ಭರಾಟೆಯಳಿದು
ಅಲ್ಲೊಂದು ವಿಚಿತ್ರ ಮೌನ, ಛಿದ್ರ ಕ್ಷುದ್ರ ಶಾಂತಿ..
ಕೊಡುಕೊಳ್ಳುವಿಕೆ ಬರೀ ವ್ಯಾಪಾರವಾಗಿ,
ಕೊನೆಯುಸಿರೆಳೆಯುತಾ ನರಳಲಿಲ್ಲ,
ಅಲ್ಲ್ಯಾರೂ ಅಳಲಿಲ್ಲ..
ಗಾಳಿ ಮತ್ತೆ ಹೊತ್ತೊಯ್ದಿತು ಕತೆಯ
ಮುಚ್ಚಲಣಿಯಾದ ಇನ್ನೊಂದು ಅಂಗಡಿಯ,
ಅಂಗಡಿಯಾತನ ಹುಡುಕಿ...
 
 
  
 
 

Monday, August 19, 2013

ಬದುಕು

ಬದುಕು ಭರವಸೆಯಲ್ಲ;
ಹೇಳದೆಕೇಳದೆ ಕೈತುಂಬ ಕೊಡುವುದು
ಕಳೆದರೆ ಮತ್ತೀವೆನೆನುವುದಿಲ್ಲ.
 
ಬದುಕು ಆಣೆಯಲ್ಲ;
ವಿಶ್ವಾಸಾರ್ಹವಾಗಿ ನಡಕೊಳ್ಳುವುದು,
ಸಂಶಯಿಸಿದರೆ ಸಮರ್ಥಿಸಿಕೊಳುವುದಿಲ್ಲ.
 
ಬದುಕು ನಂಬಿಕೆಯಲ್ಲ;
ಸತ್ಯವಾಗಿಯೇ ಒದಗುವುದು
ಸುಳ್ಳೆಂದರೆ ನಂಬಿಸಲೆತ್ನಿಸುವುದಿಲ್ಲ.
 
ಬದುಕು ದ್ರೋಹಿಯಲ್ಲ;
ಕೊನೆವರೆಗೂ ಕೈಹಿಡಿದೊಯ್ಯುವುದು
ಮೊದಲೇ ಬಿಡಿಸಿಕೊಂಡರೆ ಮತ್ತೆ ಹಿಡಿವುದಿಲ್ಲ.
 
ಬದುಕು ಕನಸಲ್ಲ;
ನಡುಗಿಸುವ ಬವಣೆಚಳಿಗೆ ಕನಸ ಚಾದರ ಹೊದಿಸುವುದು
ಕಿತ್ತೊಗೆದು ಚಳಿಯೆಂದರೆ ಮತ್ತೆ ಹೊಚ್ಚಿಸುವುದಿಲ್ಲ..
 
ಬದುಕು ಕಣ್ಣ ನೋಟವಲ್ಲ;
ಮೀರಿಯೂ ಇರುವದ್ದು ತೋರಿಸುವುದು
ಕಣ್ಮುಚ್ಚಿಕೊಂಡರೆ ಒತ್ತಾಯಿಸುವುದಿಲ್ಲ.
 
ಬದುಕು ಅಂತಿಮವಲ್ಲ;
ಕ್ಷಣಕ್ಷಣವೂ ಸತ್ತು ಮತ್ತೆ ಹುಟ್ಟುವುದು
ಮನಸು ಜಡ್ಡಾದರೆ ಸ್ಪರ್ಶಕೊದಗುವುದಿಲ್ಲ.
 
ಬದುಕು ಬರೀ ಪ್ರೇಮವೂ ಅಲ್ಲ;
ಪ್ರೀತಿಯನೇ ಮೊಗೆಮೊಗೆದೆದುರು ತರುವುದು
ದ್ವೇಷವನೇ ಬಯಸಿದರೆ ಇಲ್ಲವೆನುವುದೂ ಇಲ್ಲ...

Saturday, August 10, 2013

ಕಣ್ಣಿರುವ ಕನ್ನಡಿ.

ಕನ್ನಡಿಗೂ ಬಂತೇ ಕಣ್ಣು?!
ಇಷ್ಟಗಲ ಅರಳಿಸಿ ನೋಡಿ
ಕರಗಿದ ಕುಂಕುಮ ಒಪ್ಪಮಾಡಿ
ಮುಂಗುರುಳು ತೀಡಿ
ಕದಡಿದ ಕಣ್ಣು ತಿಳಿಮಾಡಿ
ಓರೆಕೋರೆಗಷ್ಟು ತಿದ್ದುಪಡಿ
ತಾ ಮೆಚ್ಚುವ ರೂಪ ನೀಡಿ
ಬಿಂಬವಿಳಿಸಿಕೊಂಡಿತೇ?!
 
ಬಿಂಬ ಮನಮೆಚ್ಚಿತು
ಕನ್ನಡಿಯುತ್ತರಿಸಿತು..
"
ಇಂದಿನಾಸ್ತಿ ನಾನು, ಇಂದಿಗೊದಗಬೇಕು
ನಿನ್ನೆಮೊನ್ನೆಯಂತೆ
ಎದುರಿದ್ದುದ ಪ್ರತಿಫಲಿಸೆ
ಬೇಡಿಕೆಯಿಂದಿರದು ಖರೆ..
 
ನೆಲಕಂಟಿದ ಇಂದಲಿ ನಿಂತಾಗ
ಎಲ್ಲ ಮಾರ್ಪಡಿಸಬೇಕು,
ಪ್ರಸ್ತುತಾರ್ಹವೆನಿಸಬೇಕು,
ಸ್ತುತಿಯ ಜಾಡಲಿಡಬೇಕು,
ಪ್ರಸಿದ್ಧಿ ಕುದುರೆ ಹತ್ತಬೇಕು
ಕುದುರೆ ಎಡವಿದರೂ ಕಾಲ್ತೊಡರಿದರೂ
ಬಿದ್ದರೂ ಒಮ್ಮೆ, ಮೀಸೆಮಣ್ಣು
ಒರೆಸಬೇಕು, ಮರೆಮಾಡಬೇಕು
ಹೆಸರ ಮಾನದಂಡದೂರುಗೋಲು
ಊರಿ ಮೆಟ್ಟಿ ಒತ್ತಿ ತುಳಿದೇರಬೇಕು..

ಏರಿದಾಗ ಮೇಲಲ್ಲಿ
ಮೊಂಡುಮೂಗು, ಕೆಂಡಕಣ್ಣು
ದಪ್ಪತುಟಿ, ಉಬ್ಬುಹಲ್ಲು
ಎಲ್ಲವೂ ಚಂದವೇ..
ಅಲ್ಲಿ ಬೇಡ ನಾನು,
ನನ್ನ ಮಾರ್ಪಾಟು.
ಅಪ್ಪಿ ಒಪ್ಪುವ ಕಂಗಳೇ
ನಿನ್ನ ಚಂದ ತೋರಿಯಾವು
ಮೆಚ್ಚಿ ಸತ್ಕರಿಸಿಯಾವು..
 
 
ಕಣ್ಣು, ಕೈ, ಬಾಯಿರದ
ಬರೀ ಕನ್ನಡಿಯಂಥ ಕನ್ನಡಿ
ನಿನ್ನ ಇಂದಿನಲಿ ಹುಡುಕದಿರು
ಇಲ್ಲ, ಕನ್ನಡಿ ಮುಂದೆ ನಿಲ್ಲದಿರು
ನಿಂತರೂ ಒಮ್ಮೆ ಕೆಂಗಣ್ಣಾಗದಿರು
"ಕನ್ನಡಿಗೂ ಬಂತೇ ಕಣ್ಣು?!"ಕನ್ನಡಿಗೂ ಕಣ್ಣು ಬೇಕಿಂದು
ತಿದ್ದಿತೀಡಿ ನೀ ಮೆಚ್ಚಿ
ಕಾಣುವಂತಾಗಿಸಲು ನಿನ್ನ,
ಮತ್ತೆ ಕನ್ನಡಿಯನ್ನ..
"

Thursday, August 8, 2013

ಕಣ್ಣ ಕೊಳ ನಕ್ಕಿದ್ದು

ಕಣ್ಣಕೊಳಕೆಸೆದು ಬಲೆ
ಕಾದು ಕೂತ ಅವನ ಕಿರಣ
ಹಲಕಾಲದ ಮೇಲೊಮ್ಮೆ
ಹೊತ್ತು ತಂದಿತ್ತು ಸೊಗಸು
ಮೂಕವಾಗಿತ್ತು ಮನಸು
ರೆಕ್ಕೆ ಬಿಚ್ಚಿತ್ತು ಕನಸು.
 
ಅಂದೊಮ್ಮೆ
ಖಾಲಿಖಾಲಿ ಸಮೃದ್ಧಿ
ಜಲರಾಶಿಗೆ ಪಸೆಯಿಲ್ಲದ
ನಿರಂತರತೆಗೆ ನಡೆಯಿಲ್ಲದ
ಕೊಳದ ನೀರಿನ ನಿಶ್ಚಲತೆ
 ಉಕ್ಕೇರುವ ಭರತದಲೂ
ರಭಸವಿಲ್ಲದ ಹರಿವಲಿ
ಸದಾ ಮೊಳಗುತಿತ್ತಲ್ಲಿ
ಅದು ನದಿಯಲ್ಲದ ಕತೆ..
 
ಆ ದಡದ ಕೊರತೆ
ಈ ದಡದ ಒರತೆಗಳ
ಎರಡಕಂಟಿಕೊಂಡು ಸಾಗಿಯೂ
ಒಂದುಗೂಡಿಸಿ
ಒದಗಿಸಿಕೊಡಲಾಗದ ವಿವಶತೆಯೂ...
 
ಹರಿಹರಿದೂ ತಲುಪಲಾಗದ
ಹೊಳೆಹೊಳೆದೂ ನಗಲಾಗದ
ಉಳಿದುಳಿದೂ ಉಳಿಸಲಾಗದ
ಬಯಸಿಯೂ ಬೆರೆಸಲಾಗದ
ಅಸಹಾಯಕತೆಯೂ...
 
ಆಗಲೇ.. ಆಗಲೇ ಬೆಳಗಾಗಿದ್ದು
ಅವನೇರಿ ಬಂದದ್ದು
ಮೂಕ ಮನಸಲಿದ್ದದ್ದು
ನಿಶ್ಯಬ್ಧ ರಾಗ
ರೆಕ್ಕೆ ಬಿಚ್ಚಿದ ಕನಸದನೇ
ಹಾಡಿದ್ದು ಅವಗಾಗಿ,
ಅವನ ಕಿರಣಕಾಗಿ
 ಬೀಸಿದ ಬಲೆ ಯಾವುದಕಿತ್ತೋ
ಕಣ್ಣಲದೇ ಇತ್ತೋ
ಬಲೆಯೊಳಗಿಳಿಯಿತೋ
ಕಣ್ಣಿಗೂ ಅರಿವಿಲ್ಲ; ಬಹುಶಃ
ಅವಗೂ ಗೊತ್ತಿಲ್ಲ.
 
ಅವ ಗುನುಗಿದ್ದಷ್ಟೇ
ಕೊಳದರಿವಿಗಿಳಿದದ್ದು
ಕೊಳ ಬರೀ ಕೊಳವಲ್ಲವೆಂದದ್ದು
ಭರತಕೊಮ್ಮೆ,
ಅಲ್ಲದೆಯೂ ಒಮ್ಮೊಮ್ಮೆ
ಉಕ್ಕಿ ಹರಿವುದ ಕಲಿಸಿದ್ದು.
 
ಅವನೊಡಲಾಳದಿಂದ
ಒಂದೇಒಂದು ಬೆಳಕಿನೆಳೆ
ಆ ದಡದ ಕೊರತೆಯ
ಕೊಳದೊಂದು ಕೈಗಿತ್ತು
ಒರತೆಯಿನ್ನೊಂದಕಿತ್ತು
ಚಪ್ಪಾಳೆ ತಟ್ಟಿಸಿತು..
ದಡಗಳಲ್ಲೇ ಇದ್ದು
ಕೊರತೆಗೊದಗಿ ಒರತೆ
ಅಳುವ ಕೊಳ ನಕ್ಕಿತು...

Wednesday, August 7, 2013

ಮತ್ತೆ ಎದುರಾಗದಿರು

ಮರೆವ ಯತ್ನಕೆ ಮತ್ತೆ
ತೊರೆವ ನಡಿಗೆಗೆ ಮತ್ತೆ
ಎದುರಾಗದಿರು ನೀನು
ಮುನ್ನಡೆಯಲಾರೆ....
 
ಮತ್ತದನೇ ನೆನಪಿಸಿ
ನಿನ್ನ ನೆರಳಾಗಿಸಿ
ಒಂಟಿಹಾಡ ಯಾನವ
ಧಾಟಿ ತಪ್ಪಿಸದಿರು
 ನನಗಿಲ್ಲೆ ಉಳಿವಾಸೆ
ಬೇಡ ನಿನ ನೋವಿನೊತ್ತಾಸೆ
ತಂದು ಮುಂದಿಡದಿರು
ಒತ್ತಾಯಿಸಿ ಉಳಿಸೀತು ಅದು
 
ಗೆಲುವ ದಾರಿಯಲಿರುವೆ
ಅಳುತಲೇ ಗೆಲುತಿರುವೆ
ಕೊಳೆತು ನಾನೇ ಬೆಳೆದ
ಬೆಳೆಯ ಅಳಿಸುತಲಿರುವೆ...
 
ತಪ್ಪು-ಒಪ್ಪಿನ ತೂಕ
ಬಟ್ಟು ಮರೆಯಾಗಿದೆ
ನಿಟ್ಟುಸಿರ ಭಾರಕೆವೆ
ಮುಚ್ಚಿ ಕಣ್ಕುರುಡೀಗ...
 
ಕಪ್ಪು ಸಾಗರದಲ್ಲಿ
ತೆಪ್ಪ ಬರಿದೇ ತಿರುಗಿ
ದಿಕ್ಕುದಿಶೆ ಮರೆತರೂ
ತೀರ ಬಯಸದ ಹಾಗೆ..
 
ಗೆಲುವೆಂದರೆ ಸಾವೇ.
ಗೊತ್ತಿದ್ದೂ ನಡೆದತ್ತಲೇ
ಅದಕೆ ಸವೆಯುತ್ತಿರುವೆ
ಒಲವಿರದೆ ಜಪಿಸುವ ಹಾಗೆ..
 
ಕುರುಡು-ಕಿವುಡಲಿ
ಬಾಳುವ ಬವಣೆಗೆ
ನಗುವುಡಿಸಿ ಸಾಗುವೆ
ನಿನ್ನಳಲು ಕರೆಯದಿರೆ..
 
ಎದುರಾಗದಿರು ಮತ್ತೆ
ಮುನ್ನಡೆಯಲಾರೆ....

Tuesday, August 6, 2013

ಪ್ರೀತಿಯವಳದು, ಸೆಳೆತ ನಿನಗೇ..

ನೆಲದ ಮೇಲಿನ ಮನಸೇ,
ಎಷ್ಟೆತ್ತರ ಹಾರಿದರೂ ಮತ್ತಲ್ಲಿಗೇ
ಹೊರ‍ಳಿ ಮುಟ್ಟುವ ಪಾದ ನಿನ್ನವೇ
ನಿನಗಷ್ಟೊಂದು ಸೋಜಿಗವೇ?!
 
ಚಿಂತಿಸಿ, ಯೋಚಿಸಿ ನಿಂತವಳ ಮೇಲೇ
ಗುರುತ್ವಾಕರ್ಷಣೆ ಅದವಳದೇ ಎಂದೆ
ಎದೆಯ ಕೇಂದ್ರ ಸೆಳೆತದ ಮೂಲವೆಂದೆ
ನಿನ್ನ ಹೊಂದುವ ದಾಹ ಅವಳದೆಂದೆ...
 
ತುಸು ನೆಲೆ ಬದಲಿಸಿ ನೋಡು,
ಅವಳ ತೂಕವೈಶಾಲ್ಯದೆದುರು
ನಿನ್ನ ಕಿರುಗಾತ್ರ;
ಆ ಪರಿಧಿ ಬಿಟ್ಟು ಹೊರನಡೆಯದ
ನಿನ್ನ ಸೀಮಿತ ಪಾತ್ರ;
ಇದಲ್ಲವೇ ಸತ್ಯ; ಮತ್ತದೇ ಕಾರಣಕೆ
ನೀ ಸೆಳೆತಕೊಳಪಡುವುದು ತಾನೇ ?!
 
ನೀರು-ಹಸಿರು ಮಣ್ಣು-ಕಲ್ಲಂತೇ
ಪ್ರೀತಿ ಸೆಳೆತವವಳಿಗೆ ಜನ್ಮದತ್ತ.
ಒಮ್ಮೆ ಸ್ಪರ್ಶಿಸಲವಳ ನಿನ್ನದಾಗುವುದೆಲ್ಲ ..
ಅಡಿಯಿಟ್ಟು ನೋಡೊಮ್ಮೆ ಅವಳ ಬಿಟ್ಟತ್ತ
ಆಕರ್ಷಣೆಯೂ ಇಲ್ಲ, ನೀ ಮರಳಬೇಕಿಲ್ಲ...
ಮರಳಿದರೆ ಪ್ರೀತಿಯಿಲ್ಲಿಲ್ಲದೆಯೂ ಇಲ್ಲ..
ಪ್ರೀತಿ ಶಾಶ್ವತ, ನಿಯಮಕೆ ನಿಲುಕದೆ, ಶುದ್ಧ.
ಸೆಳೆತ ನಿಯಮಿತ, ನಿಯಮಬದ್ಧ ...
 
ಅವಳು ನಿನ್ನ ಹಿಂದಿಲ್ಲ, ನೀನವಳಿಗೆ ಬದ್ಧ
ತೊರೆದುದೆಲ್ಲ ಸೆಳೆತಮುಕ್ತ ಮಾಡಲವಳು ಸಿದ್ಧ
ದೂರದಿರು, ದೂರಿ,ದೊಡ್ಡವನಾಗಲಾರೆ
ಪ್ರೀತಿಯವಳದು, ಸಂಶಯಿಸಿ ಗೆಲ್ಲಲಾರೆ
ಸೆಳೆತ ನಿನದು, ಅವಳೊಳಗಿದ್ದು ಎದುರಿಸಲಾರೆ...

Monday, August 5, 2013

**

ಒಂದೂರು
ಊರಿಗೊಬ್ಬ ನಾಯಕ,
ಚಪ್ಪಾಳೆ ಪರಾಕುಗಳೊಡೆಯ
ಜೊತೆಗೊಬ್ಬ ಖಳನಾಯಕ
ಕೆಂಗಣ್ಣುರಿ, ಬಯ್ಗುಳದ ಹಕ್ಕುದಾರ
ನಡುವೊಬ್ಬ ಸಾಮಾನ್ಯ ಯುವಕ
ಅವನ ಎಕ್ಕರಿಸಿ ಕಾಣುತಲೇ
ಇವನ ಕೆಕ್ಕರಿಸಿ ಉಗಿಯುತಲೇ
ಆರಕೇರದೆ ಮೂರಕಿಳಿಯದೆ ಬಾಳುವ
 ಗುಬ್ಬಚ್ಚಿಯೊಂದೇಟಾಗಿ
ರೆಕ್ಕೆ ಮುರಿದು ಬಿದ್ದ ಕ್ಷಣ
ನರಮುಟ್ಟಿದ ಹಕ್ಕಿ ಗೂಡೊಳ
ಸೇರದೆಂದು ನಡೆದನವ ಸುಮ್ಮನೇ....
ಇವನೆತ್ತಿ ಪಟ್ಟಿಕಟ್ಟಿ
ಸಾಕಿಸಲಹಿ ಹಾರಿಬಿಟ್ಟ ಸುಮ್ಮನೇ ...
 
ಯುವಕ ಬಯ್ಯುತಲೇ ನಡೆದಿದ್ದ
ಹಾರಿಹೋದುದೆಲ್ಲಿಗೆ ಹೋದೀತು
ಗೂಡಿಲ್ಲದೇ ಹೇಗುಳಿದೀತು?!
ನಾಯಕನ ಹೊಗಳುತಲೇ ನಡೆದಿದ್ದ
ಗೂಡಿಗಾಗಿ ಗುಬ್ಬಿ ಮುಟ್ಟದುಳಿದ ಹಿರಿತನಕೆ..
 
ಹಾರಿಹೋದ ಗುಬ್ಬಚ್ಚಿ ಹೊಸಗೂಡಿಗೆ
ಕಸಕಡ್ಡಿ ಆರಿಸುತಿತ್ತು,
ಪಟ್ಟಿಕಟ್ಟಿ ಮುರಿದುದ ಜೋಡಿಸಿದವನ
ಬಿಡದೆ ನೆನೆಯುತಿತ್ತು..

Sunday, August 4, 2013

ಹೊಸದಿಗಂತದಲ್ಲಿ ಕವನವೊಂದು ಪ್ರಕಟವಾದ ಶುಭದಿನ ಇಂದು ..

**

ನೀ ಬದುಕ ಕ್ಷಣಕ್ಷಣ ಸವಿಯುವ ಸಾಧನ
ಆದರೆ ನೋವುಣಿಸುತಲೇ ಬಂದಿರುವುದು
,
ನೀ ಬದುಕಿನ ಅದಮ್ಯ ಧೈರ್ಯದ ಸೆಲೆ
ಆದರೆ ಅಧೀರಗೊಳಿಸುತಲೇ ಬಂದಿರುವುದು
,
ನೀ ಬದುಕಿನ ಚೈತನ್ಯದ ಚಿಲುಮೆ
ಆದರೆ ಕುಗ್ಗಿಸುತಲೇ ನಡೆದಿರುವುದು,

ನೀ ಬದುಕಿನ ಅವಿಭಾಜ್ಯ ಅಂಗ
ಆದರೆ ಕಳಚಿಕೊಳುತಲೇ ಸಾಗಿರುವುದು
,
ನೀ ಉಸಿರಿನ ಹೆಮ್ಮೆಯ ಹೆಸರು
ಅದ ತಲೆಯೆತ್ತದಷ್ಟು ಭಾರ ಮಾಡಿರುವುದು
,
ನೀ ಬಂಧಗಳ ಗಳಿಕೆಯ ಗರಿಮೆ,
ಆದರೆ ಬರಿಗೈಯ್ಯಲುಳಿಸಿರುವುದು..
ವರವಾಗಿದ್ದೂ ಪ್ರಸಾದವಾಗಿ
ಈ ಬೊಗಸೆಗೆ ದಕ್ಕದಿರುವ ಪರಿ
ಜಗ ನಿನ್ನ ಸಂಭ್ರಮಿಸುವ ದಿನವೇ
ನಾ ನೆನೆಯುತಿರುವುದು
ವಿಪರ್ಯಾಸವೇ ಹೌದು.

Friday, August 2, 2013

ಉಳಿವ ದೀಪ ಬಯಸುವ ಮೊದಲು...

ಅಂದೂ ಅನ್ನದಂತೆ
ಪಡೆದೂ ಪಡೆಯದಂತೆ
ಹೊಂದಿಯೂ ಹೊಂದದಂತೆ
ಇಲ್ಲಿನದೆಲ್ಲವ ಸಂಬೋಧಿಸಿ ಮತ್ತೆಮತ್ತೆ
ನೀನಾಡಿದ್ದೆಲ್ಲ ಅಡ್ಡಗೋಡೆಯ ಮೇಲಿನ ದೀಪ.
ನನಗೆ ಕೇಳಿದ್ದು ಅದು ಹರಡಿದ ಬೆಳಕಿನಾಲಾಪ..
 
ಇರಲಿಬಿಡು ಯಾವುದಿದೆ ಶಾಶ್ವತ ನಾವಿರುವಲ್ಲಿ?!
ನಾನೇ, ನೀನೇ, ಸತ್ಯವೇ, ಸುಳ್ಳೇ, ಒಲವೇ, ದ್ವೇಷವೇ..?
ತೂಗುತಕ್ಕಡಿ ಸಮಭಾರವೆರಡೂ ಕಡೆ ಹೊತ್ತಾಡಿದಂತೆ...
ಒಮ್ಮೆ ಅದು ಕೊಂಚ ಮೇಲೆ, ಒಮ್ಮೆ ಇದು.
ಅವರವರ ಪಾಲು ಬೇರೆಬೇರೆಯಾದ ಮೇಲೆ
ಮತ್ತೊಮ್ಮೊಮ್ಮೆ ಎರಡೂ ತಟ್ಟೆ ಖಾಲಿಯುಳಿವ ಹಾಗೆ.
 
ಉರಿವಷ್ಟು ಕಾಲ ಅನಿಶ್ಚಿತತೆಯನಾದರೂ ಬೆಳಗಲಿಬಿಡು
ದೀಪವದು, ಬೆಳಗುವಾಸೆಯದಕೆ ಪಾಪ!!
ಮಿಣುಕುಮಿಣುಕೆನುತಲೇ ಆಗಲಿ,
ಎಣ್ಣೆ ಚೆಲ್ಲುತಲೇ ಆಗಲಿ,
ಅನಿರ್ದಿಷ್ಟತೆಯ ಪರಮಾವಧಿಯಲೇ ಆಗಲಿ,
ತುಸುಹೊತ್ತಾದರೂ ಬೆಳಗಿದ ಗರಿಮೆ ಹೊತ್ತಾರಲಿ.
 
ಇಲ್ಲ, ನಾ ಅಂಜಲಿಕೋಟೆ ಕಟ್ಟಲಾರೆ,
ಏನಿದ್ದರೂ ಅದಿದ್ದಷ್ಟು ಹೊತ್ತು ಕಣ್ಣೊಡ್ಡಬಲ್ಲೆ,
ಎದೆ ತುಂಬಿಸಿಕೊಂಡಿಟ್ಟುಕೊಳಬಲ್ಲೆ,
ಅರಸುವುದ ಬೇಗಬೇಗ ಅರಸಿ
ಹೊಂದಬಲ್ಲೆ, ಮುದಗೊಂಡದರ
ಕುಣಿದಾಟವನೂ ಮನದುಂಬಿ ಮೆಚ್ಚಿ,
ನಾನಳಿವವರೆಗೆ ಮಾಸದಿರುವ ಭಾವಚಿತ್ರ
ಮನಕಿಳಿಸಬಲ್ಲೆ, ಮತ್ತಾ ಸಾನ್ನಿಧ್ಯವಿತ್ತವಗೆ
ಮನಸಾರೆ ನಮಿಸಬಲ್ಲೆ...ಅಷ್ಟೇ;
ಆರುವುದ ಮುಂದೂಡಲಾರೆ...
 
ಅಡ್ಡಗೋಡೆಯ ಮೇಲಿಟ್ಟು ದೀಪ
ಉಳಿಸುವ ಮಾತಾಡುವುದುಂಟೇ?
ಉರಿದುಳಿವುದು ಅದರ ಜಾಯಮಾನವಲ್ಲ,
ನಾ, ನೀ ಬಯಸಿದರದು
ತನ್ನತನ ಬಿಟ್ಟುಕೊಡುವುದೂ ಇಲ್ಲ.
ನಿಗದಿಯಾಗಿದೆ ಉರಿವ ಮತ್ತಾರುವ ಗಳಿಗೆ
ಒಂದು ಕ್ಷಣವೂ ಹೆಚ್ಚುಕಮ್ಮಿ ಉಳಿವುದಿಲ್ಲ.
 
ಉಳಿವ ದೀಪ ಬಯಸುವುದಾದರಿಲ್ಲಿ ಬಾ.
ತೆರೆದಿದೆ ಕದ, ಎದೆಹಣತೆ ಕಾದಿದೆ ಸದಾ.
ನಂಬಿಕೆಯೆಣ್ಣೆ ಸುರಿದು, ಸ್ನೇಹದೀಪ ಹಚ್ಚಿನೋಡು..
ಬೆಳಗುತಿರುವುದ ನೋಡಬಯಸುವ
ಕಣ್ಮುಚ್ಚಿದ ಮೇಲೂ ಉರಿಯುತಿರಬಲ್ಲದ್ದು.
ಇದು ಇದರ ಜಾಯಮಾನ,
ನಾ, ನೀನೆಷ್ಟೇ ಬಯಸಿದರೂ
ಇದೂ ತನ್ನತನ ಬಿಟ್ಟುಕೊಡದೆ
ಉರಿಯುತಲೇ ಉಳಿದು ತೋರುವುದು...

Thursday, August 1, 2013

ಸ್ವಪ್ನದೂಟದ ಮೆಲುಕು


ಅಂಕೆಯಿರದೆ ಚಾಚಿದೆ
ಆಗಸ ಕರಿಹಂದರ,
ಅದರುದ್ದಕು ಹಬ್ಬಿದೆ
ದೃಷ್ಟಿಬಳ್ಳಿ ಸುಂದರ.
 
ಹಗಲ ಮಡಿಲಿಂದ ಜಾರಿ
ಜಗವಿರುಳ ಜೋಲಿಗೆ,
ತೂಕಡಿಸಿದೆ ಜೀವರಾಶಿ
ತಂಪುತಂಪು ಲಾಲಿಗೆ..
 
ತಡವಿಲ್ಲ, ನೂರು ತಾರೆ
ಹೂವರಳಿ ಹೊಳೆದಿವೆ.
ನಡುವೆ ದುಂಡುಹಣ್ಣು
ಚಂದ್ರ ಬಿಡದೆ ಸೆಳೆದಿದೆ..
 
ಕನಸದುಂಬಿ ತಾರೆಸುತ್ತ
ಸುತ್ತಿಸುಳಿದು ಹಾರಿದೆ.
ಸೊಗದ ಮಧುವ ಕಣ್ಗೆ ಸುರಿದು
ಮೈ-ಮನದಿ ಹರಡಿದೆ...
 
ಮುಚ್ಚಿದೆವೆಯ ಒಳಗೆ ಹುಟ್ಟಿ
ಮಿನುಗು-ಹೊಳಪ ಸಾಮ್ರಾಜ್ಯ
ಕಣ್ಣ ಕಪ್ಪುಬೊಂಬೆಗಂತು
ನಗೆ; ಜೊತೆಗೆ ಆಶ್ಚರ್ಯ!
 
ನೋವಿಲ್ಲ, ಕಾವಿಲ್ಲ,
ವಿರಹದುರಿ ಮೊದಲಿಲ್ಲ;
ಸಿಟ್ಟು-ಕಟ್ಟುಪಾಡಿಲ್ಲ,
ದೂರು-ದುಮ್ಮಾನವಿಲ್ಲ...
 
ಬೆಳಕು ಹರವಿಟ್ಟಿದೆ
ಸ್ಫಟಿಕಸದೃಶ ನಗು,
ಸೇತುವಾಗಿ ಒಳ-ಹೊರಗಿಗೆ
ಕಪಟವಿರದ ಸೊಬಗು.
 
ತನ್ನದೊಂದೂ ಅಲ್ಲಿಲ್ಲ,
ಅಲ್ಲವೆನಿಸಿದ್ದೂ ಇಲ್ಲ.
ಹೊತ್ತು ನಡೆವವರಿಲ್ಲ,
ಧೊಪ್ಪನೆಸೆವವರಿಲ್ಲ...
 
ಆತ್ಮಸಖ್ಯದ ನಡೆ
ಸ್ನೇಹ-ಪ್ರೀತಿ ದಿಕ್ಸೂಚಿ.
ಮಿಲನ ದೂರದ ಗುರಿ
ಅಲ್ಲಿವರೆಗಿರದ ತಡೆ..
 
ದ್ವೇಷ ದಮನಕೆ
ಪ್ರೇಮ ಸಾಧನ.
ಗೆರೆಯ ಗಾಯಕೆ
ಹಣೆಗೆ ಚುಂಬನ..
 
ಕಾಲ ಬಡಿಸಿದೆ
ಸಿಹಿ ಸ್ವಪ್ನದೂಟ
ಚಪ್ಪರಿಸಿ ಮೆಲುಕಿನಲಿ
ಹಾರೈಸಿದೆ ಒಳಗಣ್ಣು..
 
ಹಗಲಿಗೂ ಹರಡಲಿ
ಈ ಇರುಳ ಕನಸು
ಅಲ್ಲಾಗಿ ಅದು ನಿಚ್ಚಳ,
ನಿರಾಳವೊಂದು ನನಸು...