Thursday, August 8, 2013

ಕಣ್ಣ ಕೊಳ ನಕ್ಕಿದ್ದು

ಕಣ್ಣಕೊಳಕೆಸೆದು ಬಲೆ
ಕಾದು ಕೂತ ಅವನ ಕಿರಣ
ಹಲಕಾಲದ ಮೇಲೊಮ್ಮೆ
ಹೊತ್ತು ತಂದಿತ್ತು ಸೊಗಸು
ಮೂಕವಾಗಿತ್ತು ಮನಸು
ರೆಕ್ಕೆ ಬಿಚ್ಚಿತ್ತು ಕನಸು.
 
ಅಂದೊಮ್ಮೆ
ಖಾಲಿಖಾಲಿ ಸಮೃದ್ಧಿ
ಜಲರಾಶಿಗೆ ಪಸೆಯಿಲ್ಲದ
ನಿರಂತರತೆಗೆ ನಡೆಯಿಲ್ಲದ
ಕೊಳದ ನೀರಿನ ನಿಶ್ಚಲತೆ
 ಉಕ್ಕೇರುವ ಭರತದಲೂ
ರಭಸವಿಲ್ಲದ ಹರಿವಲಿ
ಸದಾ ಮೊಳಗುತಿತ್ತಲ್ಲಿ
ಅದು ನದಿಯಲ್ಲದ ಕತೆ..
 
ಆ ದಡದ ಕೊರತೆ
ಈ ದಡದ ಒರತೆಗಳ
ಎರಡಕಂಟಿಕೊಂಡು ಸಾಗಿಯೂ
ಒಂದುಗೂಡಿಸಿ
ಒದಗಿಸಿಕೊಡಲಾಗದ ವಿವಶತೆಯೂ...
 
ಹರಿಹರಿದೂ ತಲುಪಲಾಗದ
ಹೊಳೆಹೊಳೆದೂ ನಗಲಾಗದ
ಉಳಿದುಳಿದೂ ಉಳಿಸಲಾಗದ
ಬಯಸಿಯೂ ಬೆರೆಸಲಾಗದ
ಅಸಹಾಯಕತೆಯೂ...
 
ಆಗಲೇ.. ಆಗಲೇ ಬೆಳಗಾಗಿದ್ದು
ಅವನೇರಿ ಬಂದದ್ದು
ಮೂಕ ಮನಸಲಿದ್ದದ್ದು
ನಿಶ್ಯಬ್ಧ ರಾಗ
ರೆಕ್ಕೆ ಬಿಚ್ಚಿದ ಕನಸದನೇ
ಹಾಡಿದ್ದು ಅವಗಾಗಿ,
ಅವನ ಕಿರಣಕಾಗಿ
 ಬೀಸಿದ ಬಲೆ ಯಾವುದಕಿತ್ತೋ
ಕಣ್ಣಲದೇ ಇತ್ತೋ
ಬಲೆಯೊಳಗಿಳಿಯಿತೋ
ಕಣ್ಣಿಗೂ ಅರಿವಿಲ್ಲ; ಬಹುಶಃ
ಅವಗೂ ಗೊತ್ತಿಲ್ಲ.
 
ಅವ ಗುನುಗಿದ್ದಷ್ಟೇ
ಕೊಳದರಿವಿಗಿಳಿದದ್ದು
ಕೊಳ ಬರೀ ಕೊಳವಲ್ಲವೆಂದದ್ದು
ಭರತಕೊಮ್ಮೆ,
ಅಲ್ಲದೆಯೂ ಒಮ್ಮೊಮ್ಮೆ
ಉಕ್ಕಿ ಹರಿವುದ ಕಲಿಸಿದ್ದು.
 
ಅವನೊಡಲಾಳದಿಂದ
ಒಂದೇಒಂದು ಬೆಳಕಿನೆಳೆ
ಆ ದಡದ ಕೊರತೆಯ
ಕೊಳದೊಂದು ಕೈಗಿತ್ತು
ಒರತೆಯಿನ್ನೊಂದಕಿತ್ತು
ಚಪ್ಪಾಳೆ ತಟ್ಟಿಸಿತು..
ದಡಗಳಲ್ಲೇ ಇದ್ದು
ಕೊರತೆಗೊದಗಿ ಒರತೆ
ಅಳುವ ಕೊಳ ನಕ್ಕಿತು...

4 comments:

  1. ಅಳುವ ಕೊಳ ನಕ್ಕಿತು, ನನ್ನ ಕಂಡು!

    ReplyDelete
    Replies
    1. ನನ್ನನ್ನು ಕಂಡು ಅಲ್ಲ ಸರ್, ಅದರಷ್ಟಕ್ಕೆ ನಕ್ಕದ್ದು, ತನಗೆ ಬೇಕಾದದ್ದು ಆಯಿತು ಅಂತ ಖುಷಿಯಲ್ಲಿ ನಕ್ಕದ್ದು ಕಣ್ಣಕೊಳ.. .

      Delete
  2. ಅದೇನೇ ಇದ್ದರೂ ನದಿಯೊಳಗೊಂದು ಸೆಳಹು....
    ಕಣ್ಣೊಳಗೊಂದು ಬೆಳಕು...
    ಎಲ್ಲೋ ಬಿದ್ದ ಕಿರನ ಎಲ್ಲಿಗೋ ಗೋಚರ,.....
    ಕಣ್ಣ ಕೊಳವುಕ್ಕುವುದು...
    ಸಂತಸಕೂ... ದುಃಖಕೂ........

    ReplyDelete
    Replies
    1. ಏ ತಮ್ಮಾ... ಇದು ಏನಂತ ನಂಗೆ ಅರ್ಥ ಆಗಲಿಲ್ಲ...

      Delete