Wednesday, August 7, 2013

ಮತ್ತೆ ಎದುರಾಗದಿರು

ಮರೆವ ಯತ್ನಕೆ ಮತ್ತೆ
ತೊರೆವ ನಡಿಗೆಗೆ ಮತ್ತೆ
ಎದುರಾಗದಿರು ನೀನು
ಮುನ್ನಡೆಯಲಾರೆ....
 
ಮತ್ತದನೇ ನೆನಪಿಸಿ
ನಿನ್ನ ನೆರಳಾಗಿಸಿ
ಒಂಟಿಹಾಡ ಯಾನವ
ಧಾಟಿ ತಪ್ಪಿಸದಿರು
 ನನಗಿಲ್ಲೆ ಉಳಿವಾಸೆ
ಬೇಡ ನಿನ ನೋವಿನೊತ್ತಾಸೆ
ತಂದು ಮುಂದಿಡದಿರು
ಒತ್ತಾಯಿಸಿ ಉಳಿಸೀತು ಅದು
 
ಗೆಲುವ ದಾರಿಯಲಿರುವೆ
ಅಳುತಲೇ ಗೆಲುತಿರುವೆ
ಕೊಳೆತು ನಾನೇ ಬೆಳೆದ
ಬೆಳೆಯ ಅಳಿಸುತಲಿರುವೆ...
 
ತಪ್ಪು-ಒಪ್ಪಿನ ತೂಕ
ಬಟ್ಟು ಮರೆಯಾಗಿದೆ
ನಿಟ್ಟುಸಿರ ಭಾರಕೆವೆ
ಮುಚ್ಚಿ ಕಣ್ಕುರುಡೀಗ...
 
ಕಪ್ಪು ಸಾಗರದಲ್ಲಿ
ತೆಪ್ಪ ಬರಿದೇ ತಿರುಗಿ
ದಿಕ್ಕುದಿಶೆ ಮರೆತರೂ
ತೀರ ಬಯಸದ ಹಾಗೆ..
 
ಗೆಲುವೆಂದರೆ ಸಾವೇ.
ಗೊತ್ತಿದ್ದೂ ನಡೆದತ್ತಲೇ
ಅದಕೆ ಸವೆಯುತ್ತಿರುವೆ
ಒಲವಿರದೆ ಜಪಿಸುವ ಹಾಗೆ..
 
ಕುರುಡು-ಕಿವುಡಲಿ
ಬಾಳುವ ಬವಣೆಗೆ
ನಗುವುಡಿಸಿ ಸಾಗುವೆ
ನಿನ್ನಳಲು ಕರೆಯದಿರೆ..
 
ಎದುರಾಗದಿರು ಮತ್ತೆ
ಮುನ್ನಡೆಯಲಾರೆ....

2 comments:

 1. ಕೆಲ ಸಂಬಂಧಗಳು ಕಳಚಿಕೊಳ್ಳುವ ಮುನ್ನ ಇಂತಹ ನಿರ್ಧಾರಕ್ಕೆ ಬಂದರೆ ನಮಗೆ ಒಳಿತು.

  ReplyDelete
 2. ಎದುರಾಗದಿರು ಮತ್ತೆ
  ಮುನ್ನಡೆಯಲಾರೆ....

  ಈ ದುಃಖವೇ ಚನ್ನಾಗಿದೆ...
  very nice....

  ReplyDelete