Thursday, July 21, 2016

ಅಪ್ಪನ ಕೊಂದ ಸರ್ಪಕುಲದಾಹುತಿ ಜನಮೇಜಯನ ಚಿಂತೆ.
ಆಮೇಲೆ "ಅಯ್ಯೋ...." ದಟ್ಟ ಪಶ್ಚಾತ್ತಾಪದೊರತೆ!
ಅಪ್ಪ ನೆಟ್ಟಾಲದ ಮರ, ಭಾಗವತ ಸಪ್ತಾಹ ಮರುಕಳಿಸಿತೇ?!
ಸುಳ್ಳು ಉಪಾಯವ ಸುಳ್ಳುಸುಳ್ಳೇ ಮೊರೆ ಹೋಗುವುದು ನಿಲ್ಲಲ್ಲವಂತೆ..

ಗಜಿಬಿಜಿ ಸರಸ್ವತಿಪುರಂ ಹದಿನಾಲ್ಕನೇ ಮೇನು.
ಕೆಫೆ ಮಲ್ಲಿಗೆಯೆಂದರೆ ಅಸಹಜವೊಂದು ಮೌನಧೇನು!
ಸುಮ್ಮಸುಮ್ಮನೆ ಹೆಡೆಯೆತ್ತುವ ಸಣ್ಣದೊಂದು ಕೀಳರಿಮೆ ತೆವಳಿ
ತಂಪು ಚಚ್ಚೌಕ ಕೋಣೆಯೊಳಗೆ; ಬೆಪ್ಪು ಮಂಜುಗಣ್ಣೆದುರು ದುಬಾರಿ ಮೆನು!

ಹಸಿದು, ಬಾಯಾರಿರುತ್ತಿರಲಿಲ್ಲ ಆಗೆಲ್ಲ!
ಬಾರಿಬಾರಿ ಹೊಕ್ಕದ್ದು ಉಗುರುಕಚ್ಚುವೊಂದು ಅಭ್ಯಾಸ ಹೋಗಲಾಡಿಸಲಿಕ್ಕೆ.
ಅದ್ಯಾರೋ ಬಿತ್ತಿ, ಯಾವ್ಯಾವುದೋ ಪೆಟ್ಟಿನಾರೈಕೆಗೆ ಬೆಳೆದಿತ್ತಲ್ಲಾ,
ನಿರ್ವರ್ಣ ಘಮದ ನೋವಹೂವರಳಿಸುವ ಬಾಲ್ಯದ ಆ ಕೊಡುಗೆ ಹರಿದು ಚೂರಾಗಿಸಲಿಕ್ಕೆ!

ಅಪ್ಪನ ಖಾಲಿಜೇಬೊಳಗಣ ನಮ್ಮ ಬಟ್ಟೆ, ಮಾತು, ತಿಂಡಿಗಳ ಹೆಸರಿನವಜ್ಞೆ;
ತುಂಬಿದ ಹೊಟ್ಟೆಗಳ ಮುಸುಮುಸು ನಗು; ಇಲ್ಲಿ ಅಳುಕು ಹುಟ್ಟುತಾ ಅಲ್ಲೊಂದು ತಾಜಾ ಜೋಕು!
ತಲೆತಗ್ಗಿಸಿ ಅಪ್ಪ ಸೈಕಲ್ ಸ್ಟ್ಯಾಂಡ್ ಹಾಕಿ ಹೋಟೆಲ್ ಹೊರಗೊಂದು ಮೂಲೆಯಲಿಡುವಾಗ
ಬಲು ಅಪೂರ್ಪ ಒಳನಡೆವ ನನ್ನೆದೆಗೆ ನಗೆಸುತ್ತಿಗೆ ಬಡಿಬಡಿದು ಮೆದುವಾಗಿಸಹೊರಟರೆ, ನಾ ಪೆಡಸಾಗುತಿದ್ದೆ.

ಯಾವ ಮಾಯೆಯೋ ಬಾಲ್ಯ ಓಡಿದ್ದು! ಯೌವ್ವನವೂ ಓಡಿದ್ದೇ; ನಡುಪ್ರಾಯವಷ್ಟೆ ಕುಂಟುವುದು.
ಅದೆಂತೋ ಸಂಸಾರ ದೂಡುತಾ ಹೈರಾಣಾಗುತಾ ಸಾಲ ಮಾಡಿ ಬೈಕ್ ಕೊಳುವಾಗ,
ಹೀಗೆ ಕೆಫೆ ಮಲ್ಲಿಗೆಗೆ ಬಂದು ಬಂದು ಸಪ್ರಯತ್ನ ನಗೆಗಷ್ಟು ಬಣ್ಣ ಹಚ್ಚುತಾ ಕೂರುವಾಗ
ಮತ್ತೆ ಮತ್ತೆ ಅಪ್ಪನ ಪೆಚ್ಚುಮುಖ, ಮತ್ತದರಲಿ ಜನಮೇಜಯನೂ, ಅವನಪ್ಪ ಪರೀಕ್ಷಿತನೂ..

Monday, July 4, 2016

ನಾಳೆ ಬರುವೆ ಅಂದಿದ್ದಾನವ.

ಹಕ್ಕಿಗೂಡಿಟ್ಟಿದ್ದ ಪಾರಿಜಾತದ ಗೆಲ್ಲು
ಗಾಳಿಗೂ ಅಲ್ಲ, ಕೊಡಲಿಗೂ ಅಲ್ಲ;
ನೆಟ್ಟ ಕೈಗಳೇ ಮುಟ್ಟಿದಷ್ಟಕ್ಕೇ ಪಟ್ಟನೆ ಮುರಿದುಬಿತ್ತು.

ಸೊಪ್ಪು ಹಾಸಿನ ಮೇಲೆ ಬೆಚ್ಚನೆ
ಕುಪ್ಪಳಿಸಿ ಕೆಚ್ಚಲು ಚೀಪುತ್ತಿದ್ದ ಕರು ಕಪಿಲೆ
ಮನೆಮಗಳ ಬಳುವಳಿ ಪಟ್ಟಿ ಸೇರಿ, ಸೋರದೆಯೂ ಹಟ್ಟಿ ನೆಲ ಒದ್ದೆಒದ್ದೆ!

ಏನೋ ಎಲ್ಲ ಮುರಿದು
ಇನ್ನೇನೇನೋ ಜರಿದು ಒಳಗೆಂಬ ಒಳಗೆಲ್ಲ ಕಕ್ಕಾಬಿಕ್ಕಿ
ಗುಪ್ತಗಾಮಿನಿ ಉಪ್ಪು ಕಡಲು ಹರಿದಿದೆ ಸೊಕ್ಕಿ ಉಕ್ಕಿಉಕ್ಕಿ.

ಬೆಳಗು, ನಡು, ಕಳೆದು ಸಂಜೆಯೂ ಬಂತು,
ಯಾವ ರಾಗ-ರಂಗಿನ ಹಂಗಿಲ್ಲದೆ ಸರಿದುಹೋಗಿ
ರಾತ್ರಿಯೂ ನಿದ್ದೆಯೂರಲಿ ಬಹಿಷ್ಕೃತ, ಭಣಭಣ ಕವಿದಿದೆ.

ಹಾರ ಕಡಿದು ಮಣಿ ಚಲ್ಲಾಪಿಲ್ಲಿ
ಕೊಂಡಿ ಕಳೆದುಹೋಗಿದೆ, ದೃಷ್ಟಿಯಿಲ್ಲ ಕಣ್ಣಲ್ಲಿ.
ಪೋಣಿಸುವ ಬೆರಳೂ ಸ್ತಬ್ಧ; ಇಂದೊಂದು ಸಾವಕಾಶ ಸಾಯುತ್ತಲಿದೆ.

ಅಂದೊಮ್ಮೆ ಹೀಗೇ ಸಾಯುತಿತ್ತು; ಬರೀ ಮುಟ್ಟಿ ಉಸಿರಿತ್ತಿದ್ದ,
ಮತ್ತೆ ನಾಳೆ ಬರುವೆ ಅಂದಿದ್ದಾನವ!
ಬೇಡ ಬರಬೇಡೆಂದ ಇಂದಿನ ಕ್ಷೀಣ ರೋಧನಕೆ ಬೆಚ್ಚಿಬಿದ್ದಿದೆ ಸಾವು.