Friday, February 22, 2013

ಚಂದ ನೋಡು

---------------------
ಹೇಳಬೇಕಿತ್ತು ನೂರು,
ಬಾಯಿಯಿಂದ ಬಾಯಿಗೆ ಹಾಕಿ ಬೀಗ,
ಒಳಗವನು ನೀ ಭದ್ರವಾಗಿರಿಸುತ್ತಿದ್ದಾಗಲೇ
ಹೇಗೋ ನಾಚಿಕೆ ಮಾತ್ರ ಹೊರನುಸುಳಿ ಬಂದು
ಕೆನ್ನೆಕುಳಿಗಳಲಿ ಮನೆಮಾಡಿ ಕೂತ ಚಂದ ನೋಡು..

ಹಾಡಬೇಕಿತ್ತು ನೂರು,
ನಿನ್ನೊಳಗಿನ ರಾಗತಾಳ ಹಿಮ್ಮೇಳದಲ್ಲಿ
ಪ್ರೇಮದ ಮೌನಗಾನ ನೀ ಸವಿಯುತಿದ್ದಾಗಲೇ,
ಹೇಗೋ ನಮ್ಮ ಹೆಸರ ಅಕ್ಷರಗಳು ಪಲುಕುಗಳಾಗಿ
ಲಯದಿ ತೇಲಿ ಜೀವಗಾನದಾಲಾಪವಾದ ಚಂದ ನೋಡು..

ನೋಡಬೇಕಿತ್ತು ನೂರು,
ಮುಚ್ಚಿದೆವೆಯಡಿ ಮೂಡಿದ ನಿನ್ನ ಬಿಂಬ,
ಕಂಡು ಮನಸಾರೆ ನಾ ತಣಿಯುತ್ತಿದ್ದಾಗಲೇ,
ಹೇಗೋ ವಿರಹದ ಕಲ್ಪನೆ ಅದರುದ್ದಗಲಕು ಹರಡಿ
ಒಳಗಿಂದ ಹೊರಹರಿದು ಕಣ್ತುಂಬಿ ನಿಂತ ಚಂದ ನೋಡು..

ಒಲವೇ, ನೀನಿಲ್ಲಿರುವ ಕ್ಷಣ ಚಂದ,
ನೀನಿಲ್ಲಿಲ್ಲದ್ದು ಅದಕಿಂತಲೂ ಚಂದ,
ನಿನ್ನ ಹೊಂದುವಾಸೆ ಬೆಳ್ಮುಗಿಲು
ಹೊಂದಿದ ತೃಪ್ತಿ ಬೆಳ್ಳಕ್ಕಿ ಸಾಲು
ಅದ ಧರಿಸಿ ಇದು, ಇದ ಹೊತ್ತು ಅದು
ನನ್ನ ಇಂದು ನಾಳೆಗಳನಾಗಿಸಿವೆ
ಏಳು ಬಣ್ಣದಾಗರ ಶುಭ್ರ ಬಿಳಿಯ ಬಾನು.







No comments:

Post a Comment