Monday, August 18, 2014

ಹೊರಳುಹೊರಳಿಗೂ ಬಿಮ್ಮನರಳಿದ ನೂರು ನೆನಪ ಹೂವು
ಹೊರಾವರಣ ದರ್ಶನಕಿಟ್ಟ ಉತ್ಸವಮೂರ್ತಿ ಮೇಲುದುರಿದವು
ಪುಳಕಿತವೋ, ಮುಳ್ಳಸ್ನಾನವೋ, ಮೂರ್ತಿ ಹುಯ್ಯಿಸಿಕೊಂಡಿತು
ಅಂತೂ ಪುಷ್ಪಾರ್ಚನೆ ಉತ್ಸವಮೂರ್ತಿಯ ಮುಚ್ಚಿಯೇಬಿಟ್ಟಿತು.

ಅಗೋ, ಜನಮನ ತಟ್ಟನೇ ಗರ್ಭಗುಡಿಯತ್ತ ದಾಂಗುಡಿ
ಕದ ಮುರಿಯತೊಡಗಿದೆಯಂತೆ, ಗುಂಪಿಗಿರುವುದಿಲ್ಲ ಬುದ್ಧಿ.
ಮೊದಲೇ ಮರೆಮಾಡಿದ ಅಷಾಡ ಕಳೆದ ಮಿಲನದ ಶ್ರಾವಣ;
ಗಾಳಿಯಲೆಯಲೆಯಲೂ ಉಕ್ಕುವುತ್ಸಾಹ, ದರ್ಶನದ ತಲ್ಲಣ.

ಗರ್ಭಗುಡಿಯೊಳಗಿಂದ ಕ್ಷೀಣ ದನಿಯಾದರೂ ಭಾವ ಸಶಕ್ತವಿದೆಯಲ್ಲಾ!!
ಅಲ್ಲ ಮಂತ್ರವಲ್ಲವೇ ಅಲ್ಲ, ಪೂಜೆ ನಿಂತು ವರ್ಷಗಳೇ ಸಂದಿವೆಯಲ್ಲಾ!!
ಒಳಗೆ ಭಗ್ನಗೊಂಡ ನಗ್ನಮೂರ್ತಿ ಮೆಲ್ಲನುಸುರಿದೆ, ಮಾತನಾಡಿದೆ ಕಲ್ಲು,
"ಗುಟ್ಟು ನಾ, ಅಂತೆಯೇ ಉಳಿಯಬೇಕದಕೀಗ ಹೊರಳುವುದು ನೀ ನಿಲಿಸಬೇಕು."

1 comment:

  1. ಹಲವು ವ್ಯಾಪಾರೀಕರಣಗೊಂಡ ದೇಗುಲಗಳ ಆತಂರ್ಯ ಬಿಚ್ಚಿಟ್ಟ ಮತ್ತು ಮೂಢ ಬಕುತರು ತೋರುವ ಡಂಬಾಚಾರವನ್ನೂ ಝಾಡಿಸುವ ಕವನ.

    ReplyDelete