Friday, November 27, 2015

ಜೋಲಿ ಕಟ್ಟಿ ಕತ್ತಲು,
ಲಾಲಿ ಹಾಡುವಾಗ ನೆನಪುಗಳು
ನಿದ್ದೆಯೊಂದು ನಿದ್ದೆಹೋಗಿದೆ.
ಕಣ್ಣ ಹೊಸಿಲಲೇ ಕಾದಿದೆ
ಕಪ್ಪು ಹರವಿನ ಬೆಳ್ಳಿನಕ್ಷತ್ರವಾಗುವ ಕನಸು.
ಕಾಣೆಯಾದ ನಿದ್ದೆ ಹುಡುಕುತಲೋಡೋಡಿ
ಬಿದ್ದೆದ್ದು ಮತ್ತೆ ಮತ್ತೆಚ್ಚರಾಗುವ ಮನಸು..

ಅಂಗಳದ ನೂರು ಚುಕ್ಕೆ ಬೆಸೆಯುತಾ
ಬೆಳಗಿನ ಬೆರಳು ನರ್ತಿಸುವಾಗ
ಬಳ್ಳಿ ಬಳುಕುವಲೆಲ್ಲ ನಕ್ಷತ್ರ ರಂಗೋಲಿ.
ಬೆರಳಂಚಲೇ ಕಾದಿದೆ
ಬಾನ ಚುಕ್ಕಿ ಹೆರುವ ಬೆರಳತುದಿಯ ಕನಸು.
ನಿಲುಕದೆತ್ತರಕೆ ಹಾಕಲು ಏಣಿ
ತುದಿಗಾಲಲಿ ಎಕ್ಕರಿಸುವ ಮನಸು..

ವರದಂತೆ ಬೊಗಸೆದುಂಬಿದ ಕ್ಷಣಗಳ ಕ್ರಮಿಸುತಾ
ಓಡುವ ವಯಸನು ಹಿಂಬಾಲಿಸುವಾಗ
ನಕ್ಷತ್ರ ಮೂಡಿಸುತಾವೆ ಅಂಗಾಲ ಗೆರೆ.
ಪಾದದಡಿಗೇ ತಗಲಿಕೊಂಡಿದೆ
ತಾರೆಮಿನುಗನು ತಲುಪುವ ಹೆಜ್ಜೆಯ ಕನಸು.
ಬರೆಬರೆದು ನಾಳೆಯ ನೀಲಿನಕಾಶೆ
ಮತ್ತೆ ದೂರ ಲೆಕ್ಕ ಹಾಕುವ ಮನಸು.

ಆಸೆಗೇನು ನೂರಿದ್ದವು.
ಇನ್ನೊಂದಷ್ಟು ಕಾಲ ಹೆರುತ್ತಿತ್ತು; ನಾನು ಹೊರುತ್ತಿದ್ದೆ.
ಕೆಲವು ತೀರಿದವುಗಳೆಂದು
ಕೆಲವು ದುಃಖಕ್ಕೆ ಮೂಲವೆಂದು
ಚಿವುಟಲು ಹೇಳಿದೆ; ನಾ ಕಿತ್ತೆಸೆದೇ ಬಿಟ್ಟೆ.
ಕಣ್ಣ ಹೊಸಿಲಿಗೆ, ಬೆರಳ ತುದಿಗೆ, ಪಾದದಡಿಗೆ
ಕನಸ ರಂಗು ಅಂಟಿಸಿದ್ದು ಯಾಕೆ ಹೀಗೆ?
ಬಣ್ಣವ ಬೆಂಬತ್ತುವ ಮೋಡಿಗೆ
ಬಿಳಿಯ ಮನಸ ದೂಡಿದ್ದು ಯಾಕೆ ಹೀಗೆ?
ನೋಡೀಗ ಮಿನುಗು ನೋಡುವಾಸೆಯಿದ್ದಲ್ಲಿ
ತಾನೇ ಮಿನುಗುವ ಕನಸೊಂದು ಹುಟ್ಟಿಬಿಟ್ಟಿದೆ.
ನಿದ್ದೆಹೋಗಿರುವ ನಿದ್ದೆಯಲಿ,
ನೆಲದ ರಂಗೋಲಿಯಲಿ,
ಓಡುವ ವಯಸ ಬೆಂಬತ್ತಿರುವ ಹೆಜ್ಜೆಯಲಿ
ತಂತಾನೇ ಹೊಕ್ಕು
ಪುಟಿಪುಟಿವ ಉತ್ಸಾಹದಲಿ ಹೇಳುತಿದೆ,
ಬಾನೆತ್ತರದ, ಬಾನ ಬಣ್ಣದ, ಬಾನ ಹರವಿನ,
ಬೆಳಗು-ಬೈಗು, ಸೂರ್ಯ-ಚಂದ್ರ,
ನಕ್ಷತ್ರ, ಮತ್ತದರ ಹೊಳಪಿನ ಕತೆ.
"ಆಗಿಹೋದವರು ಆಗುವರೆನುವ
ನಕ್ಷತ್ರವೇ ನಾನಾಗಬೇಕೆನಿಸುವುದೆಂಬಲ್ಲಿಗೆ
ಕಷ್ಟಪಟ್ಟು ಆ ಜೋಡಿಕಣ್ಣಲಿ ಸಿಕ್ಕಿದ್ದ ನಾನು
ಒಂದೋ ಕಳೆದುಹೋಗುತ್ತಿದ್ದೇನೆ,
ಇಲ್ಲಾ ಅಳಿದುಹೊಗುತ್ತಿದ್ದೇನೆ."
ಇದೋ
ಆ ಕತೆಯ ನೆರಳಲಿ ಹುಟ್ಟಿದ್ದು ಈ ಉಪಕತೆ.

2 comments: