Saturday, October 1, 2016


ಹೊಗೆಸುರುಳಿಯಿಂದ ಹೊರಬಂದ ದಿಟದ ಘಮವೇ,
ಗಂಧಕಡ್ಡಿಯಾದರೂ,  ಮಂದಧೂಪವಾದರೂ
ಲೋಕವೀಗೀಗ ಹೇಳುವುದಿಷ್ಟೇ-
"ಹೊಗೆ ಹೊಮ್ಮುವುದು ಸುಟ್ಟಾಗಲೇ ತಾನೇ?"

ದೂರದ ಇಳಿಜಾರಲೊಂದು ರಾಗದ ಅವರೋಹಣ,
ಮುರಿದಂತಿದೆ; ಕೊಳಲ ಕೊರಳ ಅಪಶ್ರುತಿಯ ರಿಂಗಣ..
ಇರಲಿಬಿಡು:
ರಾಗವೆಂದರೆ ಆರೋಹಣಾವರೋಹಣಗಳ ಮೊತ್ತ;
ಕೊರಳೆಂದರೆ ಸ್ವರಾಪಸ್ವರಗಳ ಸಂತೆ!
ಬಳುಕುವ ಬೂದು ಚಂದವೇ,
ಏರುಬೀಳು ತಿದ್ದಿ, ಬಣ್ಣ ಹೊದಿಸಹೊರಡದಿರು.
ಲೋಕಕೀಗೀಗ ಕಾಣುವುದಿಷ್ಟೇ-
"ಹೊಗೆಯೆಂದರೊಂದು ನಿರ್ವರ್ಣಮೌನ!"

ಸಾಗುತಿರು ನೀ ಊರ್ಧ್ವಮುಖಿಯಾಗಿ
ಎದೆಗೊತ್ತಿಕೊಳುವ ಅದೇ ಉನ್ಮಾದವಾಗಿ!
ಹೊಕ್ಕುಬಿಡು ನಿಲ್ಲದೆಯೇ
ದಿಗಂತದ ಹೊಕ್ಕುಳಲಿ
ಅದ್ಭುತವೊಂದು ಪುಳಕವಾಗಿ!
ಕಣ್ಣಿಲ್ಲದ ಬಯಲ ಕಿವಿಯಲಿ
ದಿಶೆ ಮೀರಿದ ನಶೆಯ ಗುಟ್ಟಾಗಿ!
ಖಾಲಿಯಾಗಸದ ನೀಲಿಯಲಿ
ಚಿತ್ತಾರವಾಗುವ ಹತ್ತಿಮೋಡವಾಗಿ!
ಬಿಡು, ಲೋಕಕೆ ಗೊತ್ತಿರುವುದಿಷ್ಟೇ-
"ತೂಕದ್ದಲ್ಲ; ಹೊಗೆಯೆಂದರೆ ಬಲುಹಗುರ"

No comments:

Post a Comment