Tuesday, October 6, 2015

ಸಂಜೆಮಲ್ಲಿಗೆ ಅರಳಿ
ಮುಗಿಲಮಲ್ಲಿಗೆಯುದುರುವ ಹೊತ್ತು,
ಗಾಳಿ ತಂಗಾಳಿಯಾಗಿ
ಬಾನು ಬಣ್ಣದೋಕುಳಿಯಾಡುವ ಹೊತ್ತು,
ನೀನು ಹಾಗೆ ಬಂದು
ಹೀಗೆ ಹೋಗಿಬಿಡುವೆ.

ಹೆಜ್ಜೆಗುರುತಿನ ಜಾಡಲೇ
ಹಣೆಹಚ್ಚಿ ಹೋಗಿಬಂದ ನೋಟ
ಮೆತ್ತಿಕೊಂಡು ಪುಳಕ; ನಲ್ನಗೆಯ ಮಾಟ!
ಜಗ ನನ್ನ ಸುಳ್ಳುಸುಳ್ಳೇ ನಗುವ ಸುಳ್ಳಿಯಂತು.
ಸುಳ್ಳೆಂದೂ ನಗೆಯಾಗಿರುವುದಿಲ್ಲ
ತಿಳಿಹೇಳುವ ಪರಿಯೆಂತು?

ವಿರಹದ ಸವಿಯೊಂದೆಳೆ ಪಾಕದಲದ್ದಿ
ಕತ್ತಲು ಬೊಗಸೆದುಂಬಿ ತಂದ
ರಾತ್ರಿಯಷ್ಟುದ್ದದ ಒಂದೆಳೆ ನಿದ್ದೆ!
ಲೋಕ ಉದ್ದುದ್ದ ನಿದ್ರಿಸುವ ಎಚ್ಚರಿಲ್ಲದವಳಂತು.
ನಿದ್ದೆಯಲೂ ನೀ ಬಲುಸ್ಪಷ್ಟ; ಕಣ್ಣಲ್ಲದಿನ್ನೇನೂ ಮುಚ್ಚಿರುವುದಿಲ್ಲ
ತಿಳಿಹೇಳುವ ಪರಿಯೆಂತು?

ವಿರಸದೊಂದು ಗುಕ್ಕು ಕಹಿಗುಕ್ಕಿದ ಬಿಕ್ಕಳಿಕೆ
ಭಾವದೆಳೆ ಸಿಕ್ಕಿನಲಿ ಹರಿದ ಧಾರೆ!
ಜಗ ನನ್ನ ದುಗುಡವ ಪಾಪಿಚಿರಾಯು ಅಂತು.
ಹನಿಹನಿಯ ವರ್ಣಚಿತ್ತಾರದಲಿ ಬರಿ ನೀನೇ;
ನೀನಿರುವಲ್ಲಿ ಪಾಪವಿರುವುದಿಲ್ಲ;
ತಿಳಿಹೇಳುವ ಪರಿಯೆಂತು?

ಕಿವಿಯ ಲೋಲಾಕು ಗುನುಗಿನಲಿ
ಸೊಟ್ಟ ಹಣೆಬೊಟ್ಟ ಬಳುಕಿನಲಿ
ಕರಗಿದ ಕಣ್ಕಪ್ಪಿನ ನಾಚಿಕೆಯಲಿ
ಕುಣಿವ ಕೆನ್ನೆಕುಳಿ ಕೆಂಪಲಿ
ಸುಮ್ಮನದುರುವ ತುಟಿಯಲಿ
ನೆನಪಿಗೇ ಬೆವರುವ ಹಣೆಯ ಹನಿಯಲಿ
ಮಾರ್ನುಡಿಯುತದೆ ನೀನಂಟಿಸಿಹೋದ
ಸುಖದ ಹೆಜ್ಜೆಯುಲಿ!
ಸುಮ್ಮಸುಮ್ಮನೆ ನಗುತ, ಉದ್ದುದ್ದ ನಿದ್ರಿಸುತ,
ಮತ್ತೆಮತ್ತಳುತ ನಾನದರ ಜೊತೆಗಿರುತೇನೆ.

ನನಗೀಗೀಗ ನೀನಲ್ಲದ್ದೇನೂ ತಿಳಿಯುವುದಿಲ್ಲ.
ಲೋಕ ನನ್ನ ಅಲ್ಲದ್ದರಲಿ ಎಲ್ಲ ಮರೆತ ಹುಚ್ಚಿ ಅಂತು.
ಪ್ರೀತಿಯೆಂದರೆಲ್ಲ ಮರೆವ ಹುಚ್ಚಲ್ಲದೆ ಬೇರೆಯಲ್ಲ
ತಿಳಿಹೇಳುವ ಪರಿಯೆಂತು?

2 comments:

  1. ಆಹಾ ...ಆರಾಧನೆ , ಹುಚ್ಚು ಪ್ರೀತಿ , ಹೆಚ್ಚು ಪ್ರೀತಿ ಎಷ್ಟು ಚಂದದ ಭಾವ . ಅವಳೇ ನಾನಾದ ಭಾವ ...ಸುಖವಾದ ಓದು ಅನು :)

    ReplyDelete
    Replies
    1. ಹೌದಾ ಸ್ವರ್ಣಾ...
      ಅವಳೇ ನೀನಾಗುವುದು ಸಾಧ್ಯವಾಗುವುದಾದರೆ ನಾನು ಅವಳನ್ನ ಚಿತ್ರಿಸಿದ್ದು ಸಾರ್ಥಕ..

      thank you..

      Delete