Saturday, October 31, 2015

ಇದೆಂಥ ಪ್ರೀತಿ ಹೇಳು
ಮೂರ್ಲೋಕದೆಲ್ಲ ವ್ಯವಹಾರದ ಕೊನೆಗೆ
ತೀರದುಳಿದ ಒಂದೆರಡೇ ಎರಡು ಗಳಿಗೆ
ಕಳ್ಳಹೆಜ್ಜೆಯಲಿ ನೀನೊಳಗಡಿಯಿಕ್ಕುವಾಗ
ಸುಳ್ಳು ಹೊತ್ತ ಧಾವಂತದ ಆ ಕಣ್ಣು,
ಮಣ್ಣು ಮೆತ್ತಿದ ಕಾಲ ಆ ಹೆಬ್ಬೆಟ್ಟು
ನೋಡುತಾ ಸಹಸ್ರಾಕ್ಷವಾಗಿಬಿಡುವ ಮನಸಿಗೆ
ಮತ್ತೆಮತ್ತೆ ಅವೆರಡನೇ ಮುತ್ತಿಕ್ಕುವ ಕನಸು!

ಇದೆಂಥ ಪ್ರೀತಿ ಹೇಳು
ಮನೆಯ ಗೋಡೆ-ಕಿಟಕಿ-ಬಾಗಿಲ ನಡುವೆ
ಹೊಟ್ಟೆಪಾಡಿನ ಆತುರ-ಕಾತುರದ ಹೆಜ್ಜೆ ಜೊತೆಜೊತೆಗೆ
ನಡೆದುಬರುವ ನೆರಳೇ ಆದ ನಿನ್ನ ಯೋಚನೆ
ಒಮ್ಮೊಮ್ಮೆ ನಸುನಗೆಯ ಕಚಗುಳಿ,
ಒಮ್ಮೊಮ್ಮೆ ಉಸಿರುಗಟ್ಟಿಸುವ ಬಿಗುಮುಷ್ಟಿಯದಕೆ
ಪ್ರತಿತುತ್ತಲೂ ನಿನಗೊಂದು ಅಮೂರ್ತ ಪಾಲೆತ್ತಿಡುವ ತುರ್ತು;
ನೀನುಣ್ಣದೆ ಅದು ಹಳಸಿಹೋದ ದರ್ದು....

ಇದೆಂಥ ಪ್ರೀತಿ ಹೇಳು
ನಿನ್ನೆದೆ ಹರವಿನ ವಿಸ್ತಾರ ಹೇಳುವ ನಿನ್ನಕ್ಷರದೀಪ
ಕುಣಿಕುಣಿದೊಮ್ಮೆ, ಸ್ಥಿರ ನಿಂತೊಮ್ಮೆ
ಪ್ರಕಟವಾಗುವ ಬಿಸಿಬೆಚ್ಚನ್ನ ನಿಲುವಲಿ
ನನ್ನ ಛಾಯೆಯೊಮ್ಮೆಯಾದರೂ ಮಿಂಚುವ
ಗುರಿಯೆಡೆಗಿನ ನನ್ನ ನಡೆಗೆ,
ಆ ಭಾವಧಾರೆಯಡಿ ಇಷ್ಟೇ ಇಷ್ಟಾದರೂ ತೋಯ್ದು,
ಬರೆವ ಬೆರಳ ಲಾಸ್ಯಕೊಮ್ಮೆ ಲಯವಾಗುವ ಆಸೆ.

ಇದೆಂಥ ಪ್ರೀತಿ ಹೇಳು
ಸಖ್ಯ ನಿನದು, ಅದರಲಿ ಸೌಖ್ಯ ನನದು
ವಿರಹ ನಿನದು, ಅದರಲಿ ಹೊಳೆವುದು ನಾನು
ಮಾತು ನಿನದು, ಅದರಲಿ ಹುಡುಕುವುದು ನನನೇ ನಾನು
ಕಣಕಣವೂ ಆವರಿಸಿರುವ ನಿನ್ನ ಹುಚ್ಚು ಇದಕೆ
ಮುಂದೊಮ್ಮೆ ಹುಟ್ಟುತಾ
ನಿನ್ನ ಕರುಳಕುಡಿಯೋ, ಹೆತ್ತ ಮಡಿಲೋ, ಒಡಹುಟ್ಟೋ
ಒಟ್ಟಾರೆ ಸದಾ ನಿನನಾವರಿಸುವ ಬಂಧವಾಗುವ ಗುಂಗು! 

No comments:

Post a Comment