Thursday, July 2, 2015

ಹಾರಿ ಚಿಂವ್ ಎನುತ ಕಸಕಡ್ಡಿ ಹೆಕ್ಕಿದ್ದು
"ಅಯ್ಯೋ ಹೆಚ್ಚು ಹೊತ್ತಿಲ್ಲ; ತತ್ತಿಯ ಕಾಯಿಸುವಂತಿಲ್ಲ.."
ಗ್ರಾಸ  ಸಿಗದೆ ಬರೀ ಕಸವಾಯ್ದು ತರುತಾ
ಮೈಗಿಂತ ಭಾರ ಒಮ್ಮೊಮ್ಮೆ
ಸತ್ತು ಇಲ್ಲವಾದಂತೆ ಹಗುರ ಒಮ್ಮೊಮ್ಮೆ...
ತಂದು ಒಗ್ಗೂಡಿಸಿದ್ದು, ಗೂಡಾಗಿಸಿದ್ದು
ಕಾವಿತ್ತು, ತಿನಿಸಿತ್ತು, ರೆಕ್ಕೆಗೆ ಜೀವವಿತ್ತು
ಕಾಲಿಗೆ ಧೈರ್ಯವಿತ್ತು, ಬಿದ್ದಾಗ ರೋಧಿಸಿ
ಮೊದಲ ಹಾರಿಗೆ ಕುಪ್ಪಳಿಸಿದ್ದು,
ಮತ್ತೆಲ್ಲ ಹಾರಿಯೇ ಹೋದದ್ದು
ಯಾವುದೂ ಸ್ಪಷ್ಟ ಕಣ್ಮುಂದಿಲ್ಲ.
ಖಾಲಿಗೂಡು ನೇತಾಡಿ ಮಳೆಗಾಳಿಗುದುರಿದ್ದು ಬಿಟ್ಟು..
ಈಗೀಗ ಹೆಚ್ಚು ನೆನಪುಳಿವುದಿಲ್ಲ.

ಹಸಿವಿದೆ ಹೊಟ್ಟೆಯುದ್ದಗಲ ಅದೂ ಹಸಿಹಸಿ
ಹಲ್ಲಿಲ್ಲ; ಕಣ್ಮುಂದೆ ಕಡಲೆ ರಾಶಿರಾಶಿ
ಉಮ್ಮಳಿಸುವ ಭಾವನೆರೆ
ಒಳಗಬ್ಬರಿಸುವ ಕಡಲು
ಕಣ್ಣೀರ ಚೀಲದಲಿ ಬರ.
ಒಸರದು ಹನಿಯೊಂದೂ.
ಕಣ್ಣ ನೆಲದೊಡಲು ಬರಿದು.
ಮನಸಿಗೀಗ ವಯಸಾಯ್ತು.

ಕಣ್ಣ ಕಾಮನಬಿಲ್ಲು ಕ್ಷಣ ಹೊತ್ತಷ್ಟೇ
ಬಣ್ಣ ಬಿಡಿಸಿಬಿಡಿಸಿ ತೋರಿದ್ದು.
ಬೆನ್ನಲೇ ಬದುಕು ಬಿಸಿಲಾಗಿ
ಮೋಡವೂ ಮರೆ, ಹನಿಯೊಡೆದದ್ದೂ ಮರೆ.
ಹೊತ್ತೊಯ್ದ ಗಾಳಿಗೆ ಬಣ್ಣ ವಾಸನೆ ರುಚಿ ಹೆಸರುಗಳಿರಲಿಲ್ಲ,
ಈಗ ಅವನಿಲ್ಲ.
ಹುಡುಕುವುದೆಲ್ಲಿ, ತಿರುಗಿ ಕೇಳುವುದೆಲ್ಲಿ?
ನೆನಪು ಖಾಲಿ ಡಬ್ಬ
ಬರಿದೇ ಸದ್ದು ಮಾಡುತಿದೆ,
ರಾತ್ರಿಗಳಲಿ ನಿದ್ದೆಯೂ ಇಲ್ಲ.

ನೋವು ಥೇಟ್ ದೇವನ ಹಾಗೆ.
ಅರ್ಥಾನರ್ಥಕೆಟುಕುವುದಿಲ್ಲ, ಅರ್ಥವಿಲ್ಲದ್ದಲ್ಲ.
ಬೆರಳ ತುದಿಗಂಟಿದ್ದು ಅಷ್ಟೇ ಅಷ್ಟಲೂ
ಮೈದುಂಬಿ ತುಳುಕಿಸುವಷ್ಟು ಸಮೃದ್ಧಿ!.
ಅಳತೆಗೆಟುಕುವುದಿಲ್ಲ,
ನಗುವ ಲೋಕದ ಕೈದುಂಬುವಷ್ಟೂ ಇಲ್ಲ.

ಇಲ್ಲಗಳಲಿ ಮತ್ತು ಇದ್ದು ಇಲ್ಲವಾದವುಗಳಲಿ ಬಿಟ್ಟು
ನೋವು ಇನ್ನೆಲ್ಲೂ ಇಲ್ಲ.
ನನ್ನಲ್ಲಿಲ್ಲದ್ದು, ಇಲ್ಲವಾದುದು ನಿನಗೆಂತು ತೋರಲಿ ಹೇಳು?
ಕ್ಷಮಿಸು ಗೆಳತಿ,
ನೋವ ಬರೆವುದಾಗಲಿಲ್ಲ.
ಬರೆದಲ್ಲಿ ಅಲ್ಲಲ್ಲಿ ಕಣ್ಣುಮಿಟುಕಿಸಿ
ಮಿಂಚುಹುಳದ ವಿಸ್ಮಯದಂತೆ
ನಿನ್ನೆದುರು ಸುಳಿದುಹೋಗಿಲ್ಲದಿದ್ದರೆ
ನನಗಿನ್ನೂ ನೋವಾಗಿಯೇ ಇಲ್ಲ.

No comments:

Post a Comment