Thursday, July 2, 2015

ಹೋಗು ಹೋಗೋ...

ಏ ಹೋಗು ಹೋಗೋ
ನಿಧಾನಿಸಿ, ಯೋಚಿಸಿ
ಉಸಿರುಗಟ್ಟುವಷ್ಟು ಅಳು ಹರಳುಗಟ್ಟಿಸಿ
ಮತ್ತಷ್ಟೇ ಪೂರ್ವಿಕಲ್ಯಾಣಿ ಹಾಡಬೇಕಂತೆ.
ಗೊತ್ತು ನಿನಗೆ
ನಿಧಾನಿಸಿದರೆ ಇಲ್ಲೊಂದು ಸಾವಾಗುವುದು
ಒಂದು ಕೋಪದ್ದೂ ಮತ್ತೊಂದು ಸಾಸುವೆಯಷ್ಟು ಧೈರ್ಯದ್ದೂ .
ಕತ್ತಲಲಿರಿಸಿ ಮೆತ್ತಗಾಗಿಸುವುದು, ಬೆಚ್ಚಿಸಿ ಚುಚ್ಚುವುದು
ಹೀರಿ ಹೊರಗೆಳೆದು ಸತ್ವ ಬರಿದಾಗಿಸುವುದು
ನಿನದೂ, ಆ ಕೊಂಡಿಯದೂ ಜಾಯಮಾನ..
ಒಳಗುಳಿವುದಾಗದಂತೆ ಸುಮ್ಮನೆ
ಕದ ಮೊದಲು ಮೆಲ್ಲ,
ಮತ್ತಷ್ಟು ಗುಲ್ಲು ಮಾಡಿಯೇ ತಟ್ಟಿದ್ದೆ.
ಕದವೋ ಕಾದ ಕಾವಲಿಯಂತೆ
ಮರುಭೂಮಿಯ ಮರಳಂತೆ
ಚಾತಕದಂತೆ
ಹನಿಯೊಂದು ಸಾವ ಸಾಯಿಸುವ ಅಮೃತದ್ದೇನೋ ಎಂಬಂತೆ
ಯಾರು ಎತ್ತ ಎನ್ನದೆ ಊರಗಲ ತೆರಕೊಂಡಿದೆ.
ನಿನಗೋ ಒಳಗನು ಪರೀಕ್ಷಿಸುವ,
ಕೆದಕಿ ಕಣಕಣವನೂ ಒಡೆದು ಸೂಕ್ಷ್ಮದಾಳಕ್ಕೆ,
ಬಣ್ಣ, ವಾಸನೆ, ರುಚಿ ನೋಡುವ
ಎಲ್ಲ ಕೂಡಿ, ಕಳೆದು, ಭಾಗಿಸಿ, ಹರಿದು, ಹಂಚಿ
ಒಂದಷ್ಟು ಪಾತ್ರಗಳಲಿ,
ಕತೆ ಹೆಣೆವ, ಓದಿಹೇಳಿ
ಮತ್ತಿನ್ನೊಂದಷ್ಟು ಮಂತ್ರಮುಗ್ಧ
ಪಾಪಗಳ, ಪಾಪಿಗಳ ಸೆಳೆವ ಚಪಲ..
ಹೋಗೋ.. ಇಲ್ಲಾರೂ ಪಾಸಾಗಲಿಲ್ಲ
ಅಸಲು ನಿನಗುತ್ತರಿಸಲೇ ಇಲ್ಲ.
ಇಲ್ಲಾರೂ ಒಡೆಯುವುದೂ ಇಲ್ಲ
ಕೆದಕುವುದು ಬಿಡು,
ಅಸಲು ನೀ ಮುಟ್ಟುವುದೂ ಆಗಿಲ್ಲ.
ಕತೆಯಾಗಿಸುವುದು ಬಿಡು
ಒಂದಕ್ಷರಕೂ ಇಲ್ಲಾರನೂ ಎಳೆತರುವುದಾಗಿಲ್ಲ.
ಹೋಗು ಹೋಗೋ..
ಕದವಂದು ತೆರೆದದ್ದು
ಇಂದೂ ಹಾಗೇ ಇದೆ.
ಮುಂಚೆಯೂ ಬದುಕೆಂಬುದಿತ್ತು,
ನಂತರವೂ ಬದುಕಿರುವುದು.
ಕನಿಷ್ಠ ಇಲ್ಲದನು ಬಾಡಿಸುವ ಸುಳ್ಳಿನ ಕಣ್ಕಟ್ಟಿಲ್ಲ
ಸುಳ್ಳು ಬೇಟೆಯಾಡಿದ ಗಾಯದ ನಿಟ್ಟುಸಿರಿಲ್ಲ.
ಇಲ್ಲಾರ ನೋವನೂ ಗೇಲಿಯಾಗಿಸಿಲ್ಲ,
ಯಾರ ಒಲವನೂ ಆಟಿಕೆಯಾಗಿಸಿಲ್ಲ.
ಹೋಗು ಹೋಗೋ ನೋವೇ,
ಜೋಳಿಗೆಯಲಿ ನಿನದು ಸ್ವರ್ಗಸುಖವಿದ್ದರೂ
ನಿನ್ನ ಮೋಜಿಗೆ ಇಲ್ಲಾರೂ ಕುಣಿವವರಿಲ್ಲ.
ನೀ ಪ್ರೀತಿಯ ಜೊತೆ ಬರಲಿಲ್ಲ,
ಇಲ್ಲಾರೂ ನಿನನುಳಿಸಿಕೊಳುವವರಿಲ್ಲ.







No comments:

Post a Comment