Saturday, December 8, 2012


ಆತ್ಮಸಖಿಗೊಂದು ಪತ್ರ...

........................................
  ಸಖೀ, ನಿನ್ನೊಡನೆ ಮನಸಲ್ಲೇ ನಿನ್ನೆ ತುಂಬಾ ಹೊತ್ತು ಮಾತಾಡಿದೆ ಕಣೇ... ಅದೇನು ಅಂತೀಯಾ....ಹೇಳ್ತೀನಿ ಇರು. ಎಷ್ಟು ವಿಚಿತ್ರ ನೋಡು, ನಾನು ನನ್ನ ಅನಿಸಿಕೆಯನ್ನು ತೋಡಿಕೊಳ್ಳಲು ಮತ್ತು ಅದಕ್ಕೆ ಪ್ರತಿಕ್ರಿಯಿಸಲು ನಿನ್ನನ್ನು ನನ್ನ ಕಲ್ಪನೆಯೊಳತಂದು ಅದೆಷ್ಟೋ ಹೊತ್ತು ನಿನ್ನೊಡನೆ ಕಳೆದೆ...ನೀನೂ ಅಲ್ಲಿ ಆ ಚಿಂತನಾಸರಣಿಗೆ ಅದೆಷ್ಟೋ ಕೊಂಡಿಗಳ ರೂಪದಲ್ಲಿ ಒದಗಿದೆ... ಆದರೀಗ ಹೇಳು ನೋಡುವಾ... ಏನು ಮಾತಾಡಿದ್ದು ನಾವು...? ಹೇಳಲಾರೆ... ಯಾಕೆಂದರೆ ಅಲ್ಲಿದ್ದದ್ದು ನಿನ್ನ ಅಮೂರ್ತವ್ಯಕ್ತಿತ್ವ....ಅದೂ ನನ್ನ ಭಾವಪ್ರಪಂಚದೊಳಗಷ್ಟೆ....ಅದು ಹೇಗೆ ಅಂತೀಯಾ....ಅದು ಹೀಗೇ ಕಣೇ......ಸ್ನೇಹ ಅಮೂರ್ತವೆಂದರೆ ನಿರಾಕಾರನನೊಪ್ಪಿದಂತೆ

ಸ್ನೇಹ ಮೂರ್ತವೆಂದರೆ ದೇಗುಲವ ಹೊಕ್ಕಂತೆ

ನಿರೂಪಣೆ, ಬಣ್ಣನೆ, ವಿವರಣೆಗದು ಹೊರತು....

ಕಾರಣ, ಉದ್ದೇಶ, ಸಾಕ್ಷಿ, ಆಧಾರಕೂ ...

ಇದೆಯೆಂದರೂ ಇಲ್ಲವೆಂದರೂ.....

ಮೂರ್ತ- ಅಮೂರ್ತಗಳ ಮೀರಿದ್ದು

ಸ್ನೇಹವೂ ಹೌದು ಮತ್ತು ದೇವನೂ....ಈ ಭಾವನೆಗಳೇ ಹಾಗೆ...ಗಾಳಿಯ ಹಾಗೆ...ಸಮುದ್ರದ ಹಾಗೆ....ಕಾಲದ ಹಾಗೆ....ತಮ್ಮಷ್ಟಕ್ಕೆ ತಾವು ಇಷ್ಟಬಂದಂತೆ ವರ್ತಿಸುತ್ತಲೇ ಸಾಗುತ್ತವೆ. ಅವು ಹಾಗಿರುವುದು ಬೇಕಿರಲಿ, ಬೇಡದಿರಲಿ,.. ಸಾಕಿರಲಿ, ಸಾಲದಿರಲಿ...ಸೂಕ್ತವಿರಲಿ, ಇಲ್ಲದಿರಲಿ...ಅವಕೆ ತಮ್ಮದೇ ದಾರಿ, ತಮ್ಮದೇ ನಿರ್ದೇಶನ ಮತ್ತೆ ತಮ್ಮದೇ ಗುರಿ. ಒಮ್ಮೊಮ್ಮೆ ನಮ್ಮೊಳಗವೇ ಬೇಡವೆನಿಸುವ ರೀತಿಯ ಅಧಿಪತ್ಯ ಸಾಧಿಸಿ ತಬ್ಬಿಬ್ಬುಗೊಳಿಸುವಷ್ಟು ಆಕ್ರಮಣಕಾರಿ.... ಒಮ್ಮೊಮ್ಮೆ ಪುಳಕಿತಗೊಳಿಸುವಷ್ಟು ಮಾರ್ದವ...ಇಲ್ಲದ್ದ ಕಲ್ಪಿಸಿ ಒಮ್ಮೊಮ್ಮೆ ದುಖಃದಾಯಕ, ಒಮ್ಮೊಮ್ಮೆ ಆಶಾದಯಕ, ...ತೀವ್ರವಾಗಿ ಒಮ್ಮೊಮ್ಮೆ ಎದುರಿದ್ದವರ ದೂರವಾಗಿಸುವಷ್ಟು ಕಠೋರ, ಒಮ್ಮೊಮ್ಮೆ ಸೀದಾ ಎದೆಗಿಳಿಸುವಷ್ಟು ಮಧುರ....ಹೀಗೆ ನಮ್ಮವೇ ಆಗಿದ್ದು ನಮ್ಮಾಧೀನಕ್ಕೆ ಹೊರತಾಗಿದ್ದರೂ ಇವು ಎಲ್ಲಾ ಹೊತ್ತಲ್ಲೂ ಸಂಗ ಬಿಡದ ಸಂಗಾತಿಗಳಂತೂ ಹೌದು...ಅದರಲ್ಲೂ ನನ್ನ ನಿನ್ನಂಥ ಸೂಕ್ಷ್ಮಮತಿಗಳು ಅವಕ್ಕೆ ತುಂಬಾ ಸದರ ಕೊಟ್ಟು ಬಿಟ್ಟಿರುತ್ತೇವೇನೋ ಹಲವು ಬಾರಿ...ಏನಂತೀಯಾ? ಅದಿರಲಿ ನಿನ್ನೆಯ ಮಾತುಕತೆಗೆ ಬರೋಣ..

ನಿನ್ನೆ ನಾನೊಂದು ಕವನ ಬರೆದು ಸಾರ್ವಜನಿಕರ ದೃಷ್ಟಿಗೆ ಅದನೊಪ್ಪಿಸಿದೆ ನೋಡು...ಅದು ಹೀಗಿತ್ತು....ಬೆಲೆ ತೆರಲೇ ಬೇಕು

---------------------------------------

ಅಲ್ಲೊಂದು ಹೃದಯ- ಎಲ್ಲರದರಂತೆ

ದೇಹಕೂ ಮನಸಿಗೂ ಜೀವನದಿಯ ಸೆಲೆಗೋಡೆ ಮಾತ್ರ ಬಹಳ ಮೆದು, ತೇವ ಸ್ವಲ್ಪ ಜಾಸ್ತಿ.

ಆರ್ದೃತೆಯುಳಿಸಿಕೊಂಡುದಕೆ ಇತ್ತ ಸೆಳೆತ ಜಾಸ್ತಿ

ಮೊದಲ ಮಳೆಯುಂಡ ಹಸಿಮಣ್ಣ ಘಮಲಂತೆ,

ತನ್ನತನ ಎಲ್ಲರಂತಿಲ್ಲೆಂಬ ಗರ್ವವಂತೆ.ದಾರಿಹೋಕರೆಲ್ಲ ಒಣಗದ್ದು ವಿಶೇಷವೆಂದರು,

ಬಳಿಸಾರಿ ಮುಟ್ಟಿದರು, ಉಗುರಿಂದ ಕೆರೆದರು,

ಬೆರಳಲಿ ಬರೆದರು, ದೂರ ಸಾಗಿ ಜೋರು ಕಲ್ಲೆಸೆದರು,

ಅಳಿಯದ ಛಾಪು ಮೂಡಿಸಿ ಅಮರರೆನಿಸಬಯಸಿದರು.ಗುರುತು ಮೂಡಿಸಲೀಗ ಸೂಜಿಮೊನೆ ಜಾಗವಲ್ಲಿಲ್ಲ.

ಹಸಿಗೋಡೆ ಜೊತೆಗಾರೂ ಇಲ್ಲ, ಇವೆ ಗುರುತು ಮಾತ್ರ.

ಗಟ್ಟಿಯಾಗಬೇಕದಕೀಗ, ಆಗಲೊಲ್ಲದು,

ಹುಟ್ಟುಗುಣ ಸುಟ್ಟರೂ ಬಿಟ್ಟು ಮಾತ್ರ ಹೋಗದು.ಗಟ್ಟಿಯಾದರೂ ಮುಂದೊಮ್ಮೆ ಗುಳಿಗಳು, ಗೀಚುಗಳು,

ಗೀರುಗಳು, ಗಾಯಗಳು ಕಲೆಯಾಗುಳಿಯುವವು.

ಸುಲಭವಲ್ಲವಲ್ಲಾ... ಎಲ್ಲರಂತಿಲ್ಲದಿರುವುದು?!

ಬೇರೆ ಎನಿಸಿಕೊಳಲಿಕೆ ಬೆಲೆಯ ತೆರಲೇಬೇಕು.ಸರಿ, ಅಭಿಪ್ರಾಯಗಳು, ಟೀಕೆಗಳು, ಮೆಚ್ಚುಗೆಗಳೂ ಬಂದವು, ಜೊತೆಗೊಂದು ಪ್ರಶ್ನೆ..."ಹಳೆಯ ಗಾಯ ಮರೆಯಲು ಹೊಸ ಸ್ನೇಹದ ಅವಶ್ಯಕತೆ ಇದೆಯಾ..." ಈ ಪ್ರಶ್ನೆ ನನ್ನ ಚಿಂತನೆಗೆ ಹಚ್ಚಿತು ಕಣೇ... ಬರಹಕ್ಕೂ ಅದರ ಬರಹಗಾರನಿಗೂ ಇರುವ ಮತ್ತು ಇರಬೇಕಾದ ಸಂಬಂಧದ ಸ್ವರೂಪ ಯಾವುದು... ನಿಜ, ಸಂಬಂಧ ಅಂದರೆ ಸಂಬಂಧ ... ಅದಕ್ಕೊಂದು ಸ್ವರೂಪ ಎಂಬ ನಿರ್ದಿಷ್ಟತೆ ಇರದು, ಮತ್ತು ಇರಬಾರದು, ಒಪ್ಪಿದೆ. ಆದರೂ ಅದಕ್ಕೊಂದು ಹೀಗಿರಬೇಕೆಂಬ ಕನಿಷ್ಠ ಹಾಗೂ ಸ್ಥೂಲನಿಯಮವಿರಬೇಕಲ್ಲವೇನೇ..ಹನ್ನೆರಡನೇ ಶತಮಾನದ ವಚನಕಾರರ ಬಗ್ಗೆ ಓದುವಾಗ ಹೀಗೆ ಓದಿದ್ದೆ- "ವಚನಚಳುವಳಿಯು ಅಷ್ಟೊಂದು ಪ್ರಭಾವಶಾಲಿಯಾಗಿ ಬೆಳೆಯಲು ಕಾರಣವೇನೆಂದರೆ ವಚನಕಾರರು ಸಾಮಾನ್ಯರ ನಡುವೆ ಬಾಳಿದರು, ಕಷ್ಟ ಸುಖಗಳನ್ನು ಅವರೊಂದಿಗೆ ಅನುಭವಿಸಿ, ಅದನ್ನು ಅನುಭಾವವಾಗಿಸಿ ಬದುಕಿದ್ದನ್ನು ಬರೆದರು, ಬರೆದದ್ದನ್ನು ಬದುಕಿದರು....." ಅಂದರೆ, ನಾವು ಅನುಭವಿಸಿದ್ದನ್ನ ಬರೆಯುವುದಷ್ಟೇ ಪ್ರಭಾವಶಾಲಿಯಾಗುವುದು ಸಾಧ್ಯವೇ... ಅಥವಾ ಕಲ್ಪಿಸಿ ಬರೆಯುವುದು , ಪರಕಾಯ ಪ್ರವೇಶದಿಂದುತ್ಪನ್ನ ಭಾವಗಳನ್ನು ಬಿಂಬಿಸುವುದು ಕೂಡಾ ಅಷ್ಟೇ ಪ್ರಭಾವಶಾಲಿಯಾಗುವುದು ಸಾಧ್ಯನಾ ಅಂತ...

ಸಾಮಾನ್ಯವಾಗಿ ಕವನಗಳ ಬಗ್ಗೆ ಮಾತಾಡುವಾಗ ಆರಿಸಿಕೊಳ್ಳುವ ಪ್ರಕಾರಗಳ ವೈವಿಧ್ಯತೆ ತುಂಬಾ ವಿಸ್ತಾರದ್ದು. ಅಲ್ಲಿ ವರ್ಣನೆಯದ್ದೊಂದು ಪ್ರಕಾರವಾದರೆ ಕಲ್ಪನೆಯದ್ದೊಂದು, ಹೇಳಿಕೆಯದ್ದೊಂದಾದರೆ ನಿವೇದಿಸಿಕೊಳ್ಳುವದ್ದೊಂದು, ಉಪದೇಶದ್ದೊಂದಾದರೆ ಪ್ರಶ್ನಿಸುವದ್ದೊಂದು, ಖಂಡನೆಯದ್ದೊಂದಾದರೆ ಹೊಗಳುವದ್ದೊಂದು...ಸಂವಾದದ್ದೊಂದಾದರೆ ಸ್ವಗತದ್ದೊಂದು ಹೀಗೆ ನೂರಾರು ತರಹದವುಗಳು... ಮತ್ತವುಗಳ ಜಾಡಿನ ರಚನೆಗಳು. ನನ್ನ ಮಟ್ಟಿಗಂತೂ ಮನಸಿನೊಳಗೆ ಒಂದು ವಿಷಯದ ಬಗೆಗಿನ ಭಾವನೆಗಳು ತುಂಬಿ ತುಳುಕಾಡಿದಾಗ ಉಳಿದವುಗಳಿಗೆಡೆ ಮಾಡಿಕೊಳ್ಳಲು, ಅಥವಾ ಭಾವನೆಗಳು ದಟ್ಟಮೋಡಗಳಂತಾದಾಗ ಸುರಿಯುವುದು ಅನಿವಾರ್ಯತೆಯಾದಾಗ...ಹೀಗೆ.. ಒಟ್ಟಿನಲ್ಲಿ ಹಗುರಾಗಲು ಒಂದು ಮಾಧ್ಯಮ ಈ ಬರವಣಿಗೆ. ಈ ಎಲ್ಲಾ ಪ್ರಕಾರಗಳಲ್ಲೂ ಮನುಷ್ಯನ ಕುರಿತಾಗಿ ಬರೆದ ಬರಹಗಳನ್ನು ತೆಗೆದುಕೊಳ್ಳುವಾ.ಅಲ್ಲಿನ ಭಾವನೆಗಳು ಸ್ವಾನುಭವದ ಶಿಶುಗಳಾಗಿಯೂ ಇರಬಹುದು ಅಥವಾ ಎದುರಾದದ್ದೊಂದು ಸಂದರ್ಭದಲ್ಲಿ ಕೇಂದ್ರದಲ್ಲಿ ತನ್ನನ್ನು ಕಲ್ಪಿಸಿಕೊಂಡು ಮೂಡಿದವೂ ಇರಬಹುದು, ಇಲ್ಲ ಪರರಿಗಾಗಿ ತುಡಿತದ ಫಲವೂ ಇರಬಹುದು. ಮುಖ್ಯವಾಗಿ ವಸ್ತುವೆಂದು ರಮ್ಯವಿಷಯವೊಂದನ್ನು ಆರಿಸಿ ಬರೆದಾಗಲಂತೂ ಅದೂ ಸ್ವಗತ ಮಾದರಿಯ ಅಥವಾ ಸಂವಾದ ಮಾದರಿಯ ಕವನಗಳಲ್ಲಿ ಬಿಂಬಿತ ಭಾವಗಳು ಮತ್ತು ಹೇಳಿಕೆಗಳು ಬಹುಶಃ ಓದುಗನ ಮನಸಿನಲ್ಲಿ ಒಂದೋ ಬರೆದವನನ್ನು ಅಥವಾ ತನ್ನನ್ನು ಆ ರಚನೆಯ ಕೇಂದ್ರವಾಗಿಸಿ ತೋರಿಸುವುದೇ ಹೆಚ್ಚು... ಏನಂತೀಯಾ...?

ಹಾಗಾದರೆ, ಕಲ್ಪಿಸಿ ಬರೆದ ಬರಹ ಅನುಭವಿಸಿ ಬರೆದದ್ದರಷ್ಟು ಪ್ರಭಾವಶಾಲಿಯಲ್ಲ ಅನ್ನುವುದಾದರೆ,ನನ್ನದಲ್ಲದ ಅನುಭವವೊಂದು ನನ್ನದೇ ಅನ್ನಿಸುವಷ್ಟು ಆ ಓದುಗನನ್ನು ಪ್ರಭಾವಿಸಿದ್ದು ಮತ್ತು ಆಮೂಲಕ ಆ ಪ್ರಶ್ನೆ ಹುಟ್ಟಿದ್ದು ಹೇಗೆ?

ಮನುಷ್ಯನಲ್ಲದ ವಿಷಯಗಳ ಬಗ್ಗೆ ಬರೆಯುವಾಗ ಪ್ರತಿಮೆಗಳು, ಉಪಮೆಗಳು ಎಷ್ಟೊಂದು ಹಿತವೆನಿಸುತ್ತವೆ!... ಉದಾಹರಣೆಗೆ ಭೂಮಿ ಬಾನುವಿನ, ಸೂರ್ಯ ಕಮಲದ, ಚಂದ್ರ ನೈದಿಲೆಯ ಪ್ರೇಮ, ಇಬ್ಬನಿಯ ಹನಿಯೊಂದು ಹಿಮಮಣಿಯೆನಿಸುವುದು, ಮೂಡಣದ ಬಾನಿನಲ್ಲಿ ರಕ್ತದೋಕುಳಿ ಚೆಲ್ಲಿದಂತನಿಸುವುದು, ಕ್ಷಿತಿಜದಲ್ಲಿ ಭೂಮಿ ಬಾನು ಸೇರಿ ಕಾಮನಬಿಲ್ಲಿನ ಜನನವೆಂದೆನಿಸುವುದು.. ಇವೇ ಮುಂತಾದ ಈ ರೀತಿಯ ಕಲ್ಪನೆಗಳು ನಮ್ಮ ಹಿರಿಯ ಕವಿಗಳ ರಚನೆಗಳಲ್ಲಿ ಪ್ರಮುಖ ಆಕರ್ಷಣೆಗಳೆನಿಸುವುದಲ್ಲದೆ, ಅವರವರ ರಚನೆಗಳ ಮೇರುಲಕ್ಷಣಗಳೆನಿಸುವುದು ಕಂಡಿದ್ದೇವೆ ಅಲ್ಲವೇ? ಅದೇ ರೀತಿ ಅವಲ್ಲದ ಆದರೆ ಅವಾಗಬಹುದಾದ ಮನುಷ್ಯನ ಗುಣಗಳು, ವರ್ತನೆಗಳು, ನಿರ್ಧಾರಗಳು, ಚಿಂತನೆಗಳು, ಲಕ್ಷಣಗಳು ಒಂದು ಕವನದಲ್ಲಿ ಕಲ್ಪನೆಯ ಫಲವಾಗಿ ಬಿಂಬಿಸಲ್ಪಟ್ಟರೆ, ಅದನ್ನೊಂದು ಸಾಧ್ಯತೆಯಾಗಿಯೇ ಅಥವಾ ನೈಜತೆಯಾಗಿಯೇ ನೋಡುವುದು ಯಾಕೆ? ಅದೊಂದು ಕಲ್ಪನೆಯಿರಬಹುದೆಂದು ಕನಿಷ್ಠ ಮೊದಲ ಓದಿನಲ್ಲಂತೂ ಅನಿಸುವುದಿಲ್ಲ..( ಹೆಚ್ಚಿನ ಸಲ ಇದು ಬೇರೆಯವರ ಬರಹಗಳ ಓದುಗಳಾದಾಗ ನನ್ನ ಚಿಂತನೆಯ ಜಾಡೂ ಹೌದು.) ಇದಕ್ಕೆ ನಮ್ಮ ಕ್ಲಿಷ್ಟ ಮನಸು ಕಾರಣ ಅಂತೀಯಾ,.. ಮನಸು ಎದುರಿಗಿನ್ನೊಂದು ಮನಸನ್ನು ಕಂಡಾಗ ಸಂಶಯದ ದೃಷ್ಟಿಯಿಂದಲೇ ನೋಡುವುದು ಅಂತೀಯಾ, ಅಥವಾ ಅನುಭವಕ್ಕೆ ಬರದ್ದು ಸತ್ಯವೇ ಅಲ್ಲ ಅನ್ನುವ ದೃಷ್ಟಿಕೋನ ಅಂತೀಯಾ..

ಹೀಗೆ ನಿನ್ನೆದುರಿಗಿಷ್ಟು ಜಿಜ್ಞಾಸೆಗಳನ್ನಿಟ್ಟು ಮುಗಿಸುತ್ತಿದ್ದೇನೆ....ನಿನಗೇನಾದರೂ ಇವಕ್ಕುತ್ತರವಾಗಿ ನಾನಿಲ್ಲಿ ಹೇಳದ್ದು ಹೊಳೆದರೆ ತಿಳಿಸುತ್ತೀಯಲ್ಲಾ.....ಇವತ್ತಿಗೆ ಮುಗಿಸಲಾ...

3 comments:

 1. ಚೆನಾಗಿದೆ ಮೇಡಮ್..ಇಷ್ಟವಾಯ್ತು..

  ReplyDelete
 2. ಇಷ್ಟವಾಯಿತು...ಮನದ ಭಾವದ, ಬರಹದ ಮೂಲದ ಭಾವಗಳ ಬಗೆಗಿನ ಭಾವ ಬರಹ...

  ReplyDelete
 3. ಮೇಡಮ್ ಮೊದಲ ಬಾರಿಗೆ ನಿಮ್ಮ ಬ್ಲಾಗಿಗೆ ಬಂದೆ....
  ತುಂಬಾ ಇಷ್ಟವಾಯ್ತು ಬರಹ...
  ಹಮ್ ನನ್ನ ಅನುಭವ ಇನ್ನೂ ಸಾಸಿವೆಯೇ..ಆದರೆ ನಾ ತಿಳಿದಿದ್ದನ್ನು ಹೇಳುತ್ತೇನೆ ಕೇಳಿ...
  ಬರವಣಿಗೆಯಲ್ಲಿ ನಾ ತಿಳಿದಂತೆ ಎರಡು ವಿಧ..
  ಅನುಭವ ಪ್ರಧಾನ,ಕಲ್ಪನಾ ಪ್ರಧಾನ ..
  ಕಲ್ಪನೆಯ ಬರಹಕ್ಕೂ ಮೂಲಭೂತವಾದ ಅನುಭವ ಬೇಕು..ಉದಾಹರಣೆಗೆ ಕ್ರಿಕೆಟ್ಟನ್ನೇ ನೋಡದವ,ಆಡದವ ಅದರ ಬಗ್ಗೆ ಕಾದಂಬರಿ ಬರೆದರೆ ಮೂರ್ಖತನವಾದೀತು...
  ಇನ್ನು ಅನುಭವವೊಂದೇ ಬರವಣಿಗೆಯಾದರೆ ಕಾದಂಬರಿಗಳ ಸಂಖ್ಯೆ ಎಷ್ಟಕ್ಕೆ ಸೀಮಿತಗೊಳ್ಳುವುದೋ ನಾ ಕಾಣೆ,ಏಕೆಂದರೆ ಜೀವನದ ಎಲ್ಲ ಪರ್ವವನ್ನೂ ಅನುಭವಸಿ ಬರೆಯುವಾ ಹೊತ್ತಿಗೆ ಪೆನ್ಶನ್ನು ಬಂದಿರಬಹುದು...
  ಹಮ್...ಕಲಿಯುವ ಹಂತದಲ್ಲಿರುವ ನಮ್ಮಂಥವರಿಗೆ ತುಂಬಾ ಸಹಾಯಕವಾಗುವ ಬರಹ...ಮುಂದುವರೆಸಿ...ಕವನವೂ ಇಷ್ಟವಾಯ್ತು..
  ನಮಸ್ತೆ :)

  ReplyDelete