Monday, June 3, 2013

ಹಗಲ ಚಂದ್ರ


ಶಶಿಗೊಮ್ಮೊಮ್ಮೆ ರವಿಯ ಸಾಮೀಪ್ಯದಾಸೆ
ಹಗಲಲೂ ಕದ್ದು ಮೂಡುವುದುಂಟು
ನೆರಳಂಥ ಬಲು ತೆಳು ಅಸ್ತಿತ್ವದಲಿ
ಪುಷ್ಟಿಯಿಲ್ಲದ ಅಸುವಂತೆ ಕೃಶರೂಪಲಿ

ಇತ್ತದ್ದವನೇ ಗುರುತು
ಧರಿಸಿದ್ದವನದೇ ಹೊಳಪು
ಹೊರೆ ಸ್ಮರಿಸಿ ಎರಗಲಿಕಾದರೂ
ಬರುವೆನೆಂದರೆ ಧಗಧಗನುರಿಯುತಾನೆ
ನಿರಾಕರಿಸುತಲೇ ಪ್ರಕಾಶಿಸಿ
ಕಳೆಗೆಡಿಸಿ ಮುಖಮುರಿಯುತಾನೆ.

"ಇದ್ದೂ ಕಾಣದಿರುವಂತಿರುವುದಾದರಿರು
ಹೊಳಪು, ಆಕಾರ, ಕೊನೆಗಿರುವೇ ಇಲ್ಲದೆ.
ನೀನಿರುವೆಡೆ ನಾ ನಿರಾಳನಲ್ಲ,
ನಾ ಬೆಳಗುವೆಡೆ ನೀನಿರುವುದು ಸಲ್ಲ"
"ಬರಲೇ" ಅನ್ನುತಳುಕುವ ಇವಗೆ ಅವನುತ್ತರ..

ಚಂದ್ರ ಬೆಪ್ಪಾಗಿ ಸಪ್ಪಗಾಗುತಾನೆ
ಕತ್ತಲಲಷ್ಟೇ ಹೊಳೆಯುತಾನೆ
ಬೆಳಕನೇ ಬೆಳಗಿಸುವ ಸೂರ್ಯನ ನೇರ ನೋಡುವ
ತಂಪಷ್ಟೆ ಅಲ್ಲ, ಉರಿಯನೂ ಹೊರುವ
ಆಸೆ ಹತ್ತಿಕ್ಕಿ ಹಿಂತಿರುಗುತಾನೆ.
ಅವಗಿವನು ಬೇಕಿಲ್ಲ, ಇವಗವನ ಸನಿಹದ ಋಣವಿಲ್ಲ.













2 comments:

  1. ಹ್ಮೂಂ, ಬೇಕಿಲ್ಲದ ಮೇಲೆ ಅವನಲ್ಲಿ ಇರುವ ಹಾಗಿಲ್ಲ.
    ಹೌದಲ್ಲವೆ, ಮೊದಲಬಾರಿಗೆ ಭಾನುವಿನ ಮೇಲೆ ಕೋಪ ಬಂತು.

    ReplyDelete
    Replies
    1. ಹೌದಾ..ಪಾಪ ಭಾನು..haa haa...

      Delete