Wednesday, June 19, 2013

ಈ ವಿನಾಶದ ಹಿಂದೆ...

ಹೆಣ್ತನದ ಕಣ್ಣೀರ ಹರಿವ
ಗಂಗೆ ಯಮುನೆಯರು ಮೈವೆತ್ತು
ಹೆಣ್ಣ ಮೈಮನಸು ರದ್ದಿಗಿಂತ ಕಡೆ
ಅಂದುಕೊಂಡ ಮನುಜ ಸಂತತಿಯ
ಕಡೆಗಾಣಿಸಹೊರಟರೇ?!

ನೆಲದೊಡಲ ತಾಯ್ತನವ
ಗಂಗೆ ಯಮುನೆಯರು ಮೈವೆತ್ತು
ಬಗೆಬಗೆದು ಅನ್ನನೀರು, ಮತ್ತದಕು
ಮೀರಿದ ಸುಖವ ಕಕ್ಕುವಷ್ಟುಣ್ಣುವನ
ಸದ್ದಡಗಿಸಹೊರಟರೇ?!

ದಾರಿ ತೋರಿದ ಗುರುವ
ಗಂಗೆ ಯಮುನೆಯರು ಮೈವೆತ್ತು
ಕಲಿಸಿದ್ದು ಮರೆಸಿ ಅಲ್ಲದ್ದು ಕಲಿಸಿದ
ಸಿದ್ಧದಾರಿಯ ಮೇಲೆ ಹರಡಿದಡ್ಡದಾರಿಗಳ
ಕತೆ ಮುಗಿಸಹೊರಟರೇ?!

ದೈವತ್ವದ ಧನಾತ್ಮಕತೆಯ
ಗಂಗೆ ಯಮುನೆಯರು ಮೈವೆತ್ತು
ದೈವತ್ವವನಿಳಿಸಿ ಸುಳ್ಳು ಮೋಸವ
ಪೀಠಕೇರಿಸಿದ ದೇಗುಲಗಳ
ನೆಲಸಮ ಮಾಡಹೊರಟರೇ?!

ಆತ್ಮದಾತ್ಮೀಯತೆಯ ಸಹಜತೆಯ
ಗಂಗೆ ಯಮುನೆಯರು ಮೈವೆತ್ತು
ಪುಣ್ಯ-ಪಾಪದ ಅಸಹಜ ಸೋಗಿಗೆ
ಯಾತ್ರೆಯ ಬಳಸಿಕೊಂಡ ಮೌಢ್ಯಕೆ
ಕೊನೆ ಹಾಡಹೊರಟರೇ?!









6 comments:

  1. ದೈವತ್ವದ ಧನಾತ್ಮಕತೆಯ
    ಗಂಗೆ ಯಮುನೆಯರು ಮೈವೆತ್ತು
    ದೈವತ್ವವನಿಳಿಸಿ ಸುಳ್ಳು ಮೋಸವ
    ಪೀಠಕೇರಿಸಿದ ದೇಗುಲಗಳ
    ನೆಲಸಮ ಮಾಡಹೊರಟರೇ?!

    ನದಿ ಪಾತ್ರಗಳನೆಲ್ಲ ನುಂಗಿ ನೀರು ಕೂಡಿದ ನಮಗೆ ಎಚ್ಚೃಕೆ ಗಂಟೆ ಈ ಜಾಲ ಪ್ರಳಯ.
    ಸಂತ್ರಸ್ತರೆಲ್ಲರೂ ಸುರಕ್ಷಿತವಾಗಿ ಮನೆ ಸೇರಲಿ ಎನ್ನುವುದು ಹಾರೈಕೆ.

    ReplyDelete
  2. wow... !!! adbutha shabdagalu... really loved it... Anu akka..:)

    ReplyDelete
    Replies
    1. thanks n welcome to bhaavasharadhi Sandhya..

      Delete
  3. ಕೊಂಬೆ ತನಗೆ ಜನ್ಮ ನೀಡಿದ ಮರದಿಂದ ಆದಷ್ಟು ದೂರ ಕೈಚಾಚಿ ಬೆಳೆಯುತ್ತದೆ. ಕೊಂಬೆಗೆ ಅರಿವಾಗಬೇಕಾದ್ದು ಮರದಿಂದ ಕೊಂಬೆಯೇ ಹೊರತು ಕೊಂಬೆಯಿಂದ ಮರವಲ್ಲ ಅಂತ. ನದಿಗಳು ಹರಿದು ಕ್ಷೇತ್ರವನ್ನು ಪುಣ್ಯ ಸ್ಥಳವಾಗಿಸಿದೆಯೇ ಹೊರತು.. ಕ್ಷೇತ್ರಗಳಿಂದ ನದಿಗಳಲ್ಲ. ಪ್ರತಿಸಾಲಿನಲ್ಲೂ ಮಾನವರ ನಿರ್ಮಿತ ಅಹಂ ಅನ್ನು ಕೊಚ್ಚಿ ಕೆಡುಹುವ ದೇವರ ರುದ್ರ ರೂಪ ಕಣ್ಣಿಗೆ ಕಾಣಿಸುತ್ತಿದೆ. ಸೂಪರ್

    ReplyDelete