Thursday, December 10, 2015

ಆಗೆಲ್ಲ ಹೀಗೆ ಬೆಂದದ್ದು, ನೊಂದದ್ದು ನೆನಪಿಲ್ಲ.
ಕಾಯುವುದು, ಕಾಯಿಸುವುದು ಒಂದೂ ಇಲ್ಲ.
ಕಣ್ಣೆವೆ ಬಾಗಿದಾಗೆಲ್ಲ ಅದರಡಿ ನಗುತಿದ್ದವ
ಕಣ್ಣೆವೆಯೆತ್ತಿದಾಗ ಮಾತಾಗುತಿದ್ದ.
ಮತ್ತೆರಡರ ನಡು ಸಾಲುಸಂದೇಶ!

ಸ್ವರ್ಗಸಮಾನ ಅವೇ ಆ ದಿನಗಳಲಿ
ಬೊಗಸೆಗೊಂದು ಬೀಜವುದುರಿತ್ತು;
ತಲೆಬಾಗಿಲ ಬದಿ ಬೋಳು ಚಪ್ಪರದಡಿ ಬಿತ್ತಿದ್ದೆ;
ಕಾಲೆಡವಿತ್ತು; ಅಡಿಯಲಿ ಒಣಕೊರಡಿತ್ತು;
ಅಪನಂಬಿಕೆಯಲೇ ಒಯ್ದೆಲ್ಲೋ ಊರಿದ್ದೆ.

ಬೀಜ ಮೊಳಕೆಯೊಡೆಯಿತು,
ಕೊರಡು ಇನ್ನಷ್ಟು ಒಣಗಿತು.
ನನಗೆ ಪರಿವೆಯಿಲ್ಲ;
ಉಳಿದವರಿಗರಿವಿಲ್ಲ.
ಮತ್ತತ್ತ ಇಣುಕಲಿಲ್ಲ.
ಹೊಸತು ಹಳತಾಗುತಾ
ಕೆಲವುಳಿದು, ಕೆಲವು ಬೆಳೆದು, ಕೆಲವಳಿದವು.

ಇದೀಗ ಅವ ಹೇಳುತಾನೆ,
"ಬರುಬರುತಾ ಕಾಳರಾತ್ರಿಯಾದೆ ನೀನು.
ಹತ್ತಾರು ತಿರುವುಗಳೆದುರು ನಾನು
ಮತ್ತು ನನ್ನೆದುರು ನೀನು.
ಚೆಲುವಿತ್ತು; ನಿನ್ನ ಕಣ್ಕಪ್ಪು
ನನ್ನ ಕಣ್ಗತ್ತಲಾದದ್ದು ಯಾವಾಗ?"

ನಾನೀಗ ಬೀಜವೂರಿದೆಡೆ, ಕೊರಡನೂರಿದೆಡೆ ತಿರುಗಿದ್ದೇನೆ.
"ಅಯ್ಯೋ! ಚಿಗುರು ಕಮರಿದ್ದು ಯಾವಾಗ?
ಅರರೆ! ಕೊರಡು ಕೊನರಿದ್ದು ಯಾವಾಗ?"

ಅಪ್ಪ ಹೇಳುತ್ತಿದ್ದರು,
"ಪ್ರಶ್ನೆಗೆ ಪ್ರಶ್ನೆಯೊಂದು ಉತ್ತರವಾಗಬಾರದಮ್ಮಾ.."

ಎಲ್ಲೆಲ್ಲಿಂದಲೋ ಹತ್ತಾರು ಸುಳ್ಳು ಹಾರಿಬರುತಾವೆ.
ಹುಡುಹುಡುಕಿ ಕಣ್ಣೆವೆ ಮೇಲೆಕೆಳಗೆಲ್ಲ
ಪರಪರನೆ ಗೂಡುಕಟ್ಟುತಾವೆ.
ಇನ್ನೇನು ಮೊಟ್ಟೆ-ಮರಿ ಸಂಭ್ರಮವೂ ಶುರುವಾದೀತು!
ಕಣ್ಣೆವೆ ಮತ್ತೂ ಭಾರವಾದಾವು.
ಅದಕೋ  ಇದಕೋ ಎದಕೋ
ಅಂತೂ ನಾನೀಗ ಬರಿದೇ ಕಾಯುತ್ತೇನೆ.


No comments:

Post a Comment