Saturday, May 16, 2015

ನಾನಿನ್ನೂ.....

ನಾನು ಪ್ರೀತಿಸುತ್ತಿದ್ದೇನೆಂದೇ
ಎದೆಯಾಳಕೆ ಕೈ ಹಾಕುತ್ತಾ
ಶೂರ್ಪನಖಿಯಾಗುತ್ತಾ
ಬಗೆದು ಹೊರಗೆಳೆತಂದೆ
ಸಮಾಧಾನಿಸಿ ಕುಲುಕುಲು ನಗಿಸುವಾಸೆಯಲ್ಲಿ
ಒಳಗಲ್ಲಿ ಕುಸುಕುಸು ಅನ್ನುತ್ತಿದ್ದ
ಎಳೆಗಂದನಂತಿದ್ದ ಕೆಲ ಪ್ರಶ್ನೆಗಳನ್ನು.
ಬಲು ನಿರ್ಬಲ, ಅಂಜುತಳುಕುತಲೇ
ತಲೆ ನೆಗ್ಗಲು ಹವಣಿಸುತ್ತಿದ್ದವು,
ಅಡಿಗೆ ಹಾಕಿ ಹೊಸಕಿಬಿಟ್ಟ
ದಷ್ಟಪುಷ್ಟ ಕಾಲೊಂದು ನನ್ನೆಡೆಗೆ ತಿರುಗಿತು,
ನನ್ನಲ್ಲಿ ಅಪ್ರಯತ್ನ ಪ್ರೀತಿಯುಕ್ಕಿದೆ,
ಪಾದ ತೊಳೆದು, ಮುತ್ತಿಕ್ಕುತ್ತಿದ್ದೇನೆ,
ನಾನು ಪ್ರೀತಿಸುತ್ತಿದ್ದೇನೆ.

ನಾನು ಪ್ರೀತಿಸುತ್ತಿದ್ದೇನೆಂದೇ
ಎದೆಯೆರಡರ ನಡು
ನಿರಾಳ, ನಿರರ್ಗಳ, ನಿರಾತಂಕ
ಹರಿವ ನದಿಯೊಂದರ ಕನಸಿಗೆ
ಝರಿ, ತೊರೆ, ಉಪನದಿಗಳ ಜೋಡಿಸಿಕೊಂಡೆ.
ಒಂದೊಂದಕೂ ಹೆಸರಿಟ್ಟು
ಪ್ರತಿ ಹೆಸರಲೂ ನಾನೆಂಬ ನಾನು
ಇಣುಕುವಂತಿಟ್ಟು ಸಂಭ್ರಮಿಸಿಬಿಟ್ಟೆ.
ಸಿಹಿಗಷ್ಟು ಸಿಹಿ ಸೇರಿಸಿ
ಸಿದ್ಧಿ ಪ್ರಸಿದ್ಧಿ ಹೊಂದಿದವು,
ನಾನಪರಿಚಿತವುಳಿದುಬಿಟ್ಟೆ.
ಮುಳುಗಡೆಗೆ, ಕೊರೆತಕೆ,
ಮತ್ತೊಮ್ಮೊಮ್ಮೆ ಒಣಗುವುದಕೂ
ನೀನು ನಾನೆನುವ ಹೆಸರುಗಳ ಗೋಜಿನಲಿ
ನನ್ನ ಹೆಸರು ನಾ ಮರೆತುಬಿಟ್ಟಿದ್ದೇನೆ.
ನಾನು ಪ್ರೀತಿಸುತ್ತಿದ್ದೇನೆ.

ಬೆಸೆಯೆ ಚಾಚಿದ ಅತಿದಾಹಿ ಬೆರಳುಗಳ
ತುದಿಗಳಷ್ಟೇ ತಾಕಿದ ಅಂತರದಗಲಕೂ
ರಾತ್ರಿಯ ಕಪ್ಪುಸಮುದ್ರವಿತ್ತು.
ನಾನು ಪ್ರೀತಿಸುತ್ತಿದ್ದೇನೆಂದೇ
ನಗೆಯ ಹಾಯಿದೋಣಿ ತೇಲಿಬಿಟ್ಟೆ.
ತಳವಿರದ, ಜಾರುಗೋಡೆಯ,
ದೃಷ್ಟಿಗೆ ಸ್ಪಷ್ಟವಿದ್ದ
ಕೂಪವೊಂದರ ಕಗ್ಗತ್ತಲಿನಾಳಕೊಯ್ಯುವ
ದಿಕ್ಸೂಚಿಯನೇ ಅಲ್ಲಿಟ್ಟೆ.
ಮೌನದ ಮಂಜು ಕವಿದ ಅಸ್ಪಷ್ಟತೆ,
ನಂಬುಗೆ ದೀವಿಗೆಯಾರಿಸುವ ಬಿರುಗಾಳಿಗೆ
ತಬ್ಬಲಿಯಾದ ನನ್ನ ದಾರಿಯಲೆಲ್ಲೋ
ನಗೆ ಕಳೆದುಕೊಂಡಿದ್ದೇನೆ .
ನಾನಿನ್ನೂ ಪ್ರೀತಿಸುತ್ತಿದ್ದೇನೆ. 

4 comments:

  1. ಪ್ರೀತಿಸುತ್ತಿದ್ದೇನೆ ಎಂಬ ಕಾರಣಕ್ಕೆ ಅದೆಷ್ಟು ಸಹಿಸಿಕೊಳ್ಳಬೇಕಿದೆ ಅಲ್ಲವೇ ಮೈ ಮನವೂ!
    'ಹರಿವ ನದಿಯೊಂದರ ಕನಸಿಗೆ
    ಝರಿ, ತೊರೆ, ಉಪನದಿಗಳ ಜೋಡಿಸಿಕೊಂಡೆ'
    ಮನಸಿನಾಳಕ್ಕೆ ಇಳಿಯಿತು.

    ನನ್ನ ಒಂದು ಕಳಕಳಿಯ ಕರೆಗೆ ಬ್ಲಾಗಿಗೆ ಹಿಂದಿರುಗಿದ ತಮಗೆ ನಮನ.

    ReplyDelete
  2. eradane pyaara.... bahala bahala ishtavaayitu, kaaDithu saha !!!

    ನಾನು ಪ್ರೀತಿಸುತ್ತಿದ್ದೇನೆಂದೇ
    ಎದೆಯೆರಡರ ನಡು
    ನಿರಾಳ, ನಿರರ್ಗಳ, ನಿರಾತಂಕ
    ಹರಿವ ನದಿಯೊಂದರ ಕನಸಿಗೆ
    ಝರಿ, ತೊರೆ, ಉಪನದಿಗಳ ಜೋಡಿಸಿಕೊಂಡೆ.
    ಒಂದೊಂದಕೂ ಹೆಸರಿಟ್ಟು
    ಪ್ರತಿ ಹೆಸರಲೂ ನಾನೆಂಬ ನಾನು
    ಇಣುಕುವಂತಿಟ್ಟು ಸಂಭ್ರಮಿಸಿಬಿಟ್ಟೆ.
    ಸಿಹಿಗಷ್ಟು ಸಿಹಿ ಸೇರಿಸಿ
    ಸಿದ್ಧಿ ಪ್ರಸಿದ್ಧಿ ಹೊಂದಿದವು,
    ನಾನಪರಿಚಿತವುಳಿದುಬಿಟ್ಟೆ.
    ಮುಳುಗಡೆಗೆ, ಕೊರೆತಕೆ,
    ಮತ್ತೊಮ್ಮೊಮ್ಮೆ ಒಣಗುವುದಕೂ
    ನೀನು ನಾನೆನುವ ಹೆಸರುಗಳ ಗೋಜಿನಲಿ
    ನನ್ನ ಹೆಸರು ನಾ ಮರೆತುಬಿಟ್ಟಿದ್ದೇನೆ.
    ನಾನು ಪ್ರೀತಿಸುತ್ತಿದ್ದೇನೆ.

    ReplyDelete
  3. thank you badarinaath palavalli sir

    ReplyDelete