Saturday, December 3, 2016

ದಾಖಲಾಗದ ಪಾದಗಳು ಮತ್ತು ದಾಖಲಿಸುವ ಪದಗಳು
------------------------------------------
ಅದೋ ಜರಿವ ಪರಿಧಿಯಿಂದಾಚೆ
ಸಿಡಿದು ಬಂದ ತುಣುಕೊಂದು
ಮೆತ್ತನೆ ಮುಟ್ಟಿ ಪಾದ ಮುತ್ತಿಕ್ಕುತಿದೆ;
ಪ್ರತಿಬಾರಿ ಕೊಡವುತಲೇ ಪಾದದ ಕುರುಡು ನೀಗುತದೆ!

ಮೀನು ಮನೆಯಲಿ ಈಜುಹೆಜ್ಜೆಯ
ಜಾಡನರಸಿ ಹೋಗುವ ಕಣ್ಣಲಿ
ಹಿಮ್ಮಡಿ ತೋರುವದದೇ ಪಾದದ,
ಮತ್ತದೇ ಅಚ್ಚುಮೆಚ್ಚೆನಿಸುವ ಹೆಬ್ಬೆರಳ ಬಿಂಬ!

ಅವಧೂತನುಳಿಸದೇ ಹೋದ ಹೆಜ್ಜೆಗುರುತಿನಡಿ
ವಿರಹ-ಪ್ರೀತಿ ಸಂಧಿಸುವಾಗ
ನೂರು ಕತೆ, ನೂರಾರು ಕಣ್ಣೀರ ಹನಿ;
ರಾತ್ರಿಯ ಬೀಳ್ಕೊಟ್ಟ ಇಬ್ಬನಿ, ಹಗಲ ಬೆನ್ನಿನ ಮಂಜುಹನಿ!

ಸದ್ದು-ಸುದ್ದಿಯಿಲ್ಲದ ಒಣಕಂಠದಲಿ
ಕೊರಡೊಂದು ಕೊಳಲಾಗುಲಿವುದಾದರೆ,
ಸದ್ದು-ಗದ್ದಲದ ದಿನದ ಮಿಡಿತದಲಿ
ಮೌನವೊಂದು ನಲಿವ ನವಿಲಾದುದಾದರೆ,
ಅದು ನೆನಪಿನಾಟವೇ ಇದ್ದೀತು!
ಹಣೆಯ ಪೂರ್ಣಚಂದ್ರನಲ್ಲೇನಾದರೂ
ಅಡಗಿದ್ದಾದರೆ ಅದು ಮುತ್ತೇ ಇದ್ದೀತು!

ಮೌನಕೂ, ಗಾನಕೂ ಒಂದೇಸಮ
ಹರಡಿದೆ ಬಟಾಬಯಲಂಥದೊಂದು ಗಮನ!
ಹುಣ್ಣಿಮೆಗೂ, ಆಮಾವಾಸ್ಯೆಗೂ
ಎದೆಯೊಡ್ಡಿದೆ ದಿಟ್ಟ ಇರುಳಂಥದೊಂದು ಮನ!

ಅಲ್ಲೆಲ್ಲೋ ಬಿತ್ತಿದ ಬೀಜ ಹಣ್ಣಾಗಿ ಕಳಿಯುವಾಗ
ಒದ್ದೆ ಅಂಗೈಯ್ಯಗಲ ನೆಲವೊಂದು ಇನ್ನೆಲ್ಲೋ
ಬರಲಿರುವ ಬೀಜಕಾಗಿ, ತೆರಳಿರುವ ಮಳೆಗಾಗಿ
ಅನಂತ ಕಾಯುವುದ ರೂಢಿಯಾಗಿಸಿಕೊಳುತಿದೆ..

ಜರಿವ ದಡ ಹಾದು ಚಿಮ್ಮುವ ನೀರಿನಲೆ
ನೇವರಿಸಿ ಅದೇ ಮಿದುಪಾದ ತೊಳೆಯುತಾ,
ಬೀರಿ ಬೆಳಕು, ಬರೆಯುತದೆ ದಾರಿ!
ಕಲ್ಪದುದ್ದದೊಂದು ಕರೆ-
"ಬಲಗಾಲಿಟ್ಟು ಒಳಬಾ.."
ಕದವಿಲ್ಲದೆದೆ, ಅಳಿಸದ ರಂಗೋಲಿ, ಬಾಡದ ತೋರಣ
ಬಿಡದೆ ಕಾತರಿಸುತವೆ...
ಮತ್ತಿನ್ನೊಂದು ದಿನ-ರಾತ್ರಿಯುರುಳುತವೆ!

No comments:

Post a Comment