Wednesday, August 20, 2014

ನಾನು ನಾನೆನಿಸುವುದು



ನಿದ್ದೆಯ ಕೊನೆಯ ಜಾವ
ಎಚ್ಚರದೊಳಹೊಗುವ ಹೊಸ್ತಿಲ ಮೇಲೆ
"ಹೊಸಿಲು ತುಳಿಯಬಾರದಮ್ಮಾ"
ಅಜ್ಜಿಯ, ಅಮ್ಮನ, ಅತ್ತೆಯ,
ಮತ್ತಕ್ಕನದೂ ತುಸುಕ್ಷೀಣ
ದನಿಗಳೆಲ್ಲ ಮೀರಿ ನಿಂತ
ನನ್ನ ಹೆಜ್ಜೆ ಗೆಜ್ಜೆಯುಲಿಯಲಿ
ನನಗೆ ನಾ ನಾನೆನಿಸುತ್ತೇನೆ.

ಜಾಗೃತಿ ಸ್ವಪ್ನಾವಸ್ಥೆಗಳೆಲ್ಲ
ತಪ್ಪೆಂದು ಎದೆತಟ್ಟಿ ಸಾರಿದ್ದು
ಸರಿಯೆನಿಸುತಾ;
ಸರಿಯೆಂದು ಏರಿಸಿದ ಧ್ವಜ
ದಶದಿಕ್ಕಿನ ಏರುವೇಗದ
ಗಾಳಿಗಾಡಿಯಾಡಿ ಚಿಂದಿಯಾಗುತಾ...
ನಡೆದದ್ದು ಮೊತ್ತಕ್ಕೆ ಸೇರಿ,
ನಡೆಯಬೇಕಿದ್ದೂ ನಡೆಯದ್ದು
ಅಲ್ಲಿಂದಲೇ ಸೋರಿ...
ಕೈಗೊಂಡು ಮುದಗೊಳಿಸಿದ್ದು,
ಮತ್ತೆ ಕೈಜಾರಿ ಮತ್ತದೇ
ಕತ್ತಲ ಕಂಬನಿ ಹಗಲಿನಿಬ್ಬನಿಯೆನಿಸಿದ್ದು..

ಇವೆಲ್ಲ ಲೆಕ್ಕಾಚಾರ ಮೀರಿ
ನೀ ನನಗೆ ಬೇಕೇ ಬೇಕೆನಿಸುವ,
ಎಚ್ಚರದ ಅದೇ ಆ ಮೊದಲ ಜಾವ
ನಿದ್ದೆ ಕಳಚಿಹೋಗುವ ಅದೇ ಆ ಹೊಸ್ತಿಲಲಿ
ಒಂದಿಷ್ಟೂ ತಡಬಡಾಯಿಸದ ಹೆಜ್ಜೆಯೂರಿ
ನಿಂತಾಗ, ಮತ್ತಚ್ಚರಿಯೆಂದರೆ ಆಗ ಮಾತ್ರ
ನನಗೆ ನಾ ನಾನೆನಿಸುತ್ತೇನೆ.

1 comment:

  1. "ನಿಂತಾಗ, ಮತ್ತಚ್ಚರಿಯೆಂದರೆ ಆಗ ಮಾತ್ರ
    ನನಗೆ ನಾ ನಾನೆನಿಸುತ್ತೇನೆ."
    ಅದೇ ಅಲ್ಲವೇ ನಿಜವಾದ ಸ್ವಂತಿಕೆ.

    ReplyDelete