Wednesday, July 24, 2013

**

ಹಸಿದಿದ್ದಾಗ ಜೊಲ್ಲು ಸುರಿಸುವ ಬಾಯಿ
ತುಂಬಿದ ಹೊಟ್ಟೆ ಕೈ ಸವರುತ್ತಿದ್ದಾಗ,
ಕಂಡು ತಲೆಕೆಳಗಾಗಿ ನೇತಾಡುವ ಕೋಳಿ,
ಹೇಳುತಿತ್ತು- "ಛೇ...ಅಯ್ಯೋ ಪಾಪ!"
-------------------------------
ತನ್ನಂಗಳದ ಹೂ ಪಕಳೆಯುದುರುವವರೆಗೂ
ಗಿಡದಲೇ ಕಾಣಬಯಸುವ ಕಣ್ಣು
ಇನ್ನೊಂದರ ಹೂವರಳುವ ಮುನ್ನವೇ
ಕೊಯ್ಯುವಂತೆ ಕೈಯ್ಯ ಪ್ರೇರೇಪಿಸುವುದೇಕೆ?!

ಹೆಳವ ಸುಳ್ಳು

ಕಣ್ಣೆಷ್ಟು ಕಂಡರೂ ತಿವಿತ, ಇರಿತ
ಮತ್ತವು ಹರಿಸುವ ರಾಮಾರಕ್ತ,

ಕಿವಿಯೆಷ್ಟು ಕೇಳಿದರೂ ಮೋಸ, ದ್ವೇಷ

ಮತ್ತವು ರೂಪಿಸುವ ವ್ಯಥಾನಕ,

ಬಾಯೆಷ್ಟು ಹಾಡಿದರೂ ನೋವು, ಕಾವು
ಮತ್ತವು ಸುರಿಸುವ ಕಣ್ಣೀರು,

ಉಸಿರೆಷ್ಟು ಹೊತ್ತರೂ ಭಾರಗಾಳಿ
ಮತ್ತದರೊಳಗಿನ ಕಲ್ಮಶ,

ಎಲ್ಲ ನೆಲೆಸಿದ ಮೈ ತನ್ನ ತಾನೊಡ್ಡಿಕೊಳದೇ
ಸತ್ಯವಲ್ಲಿ ಅಭಿವ್ಯಕ್ತವಾಗದು..

ಸುಳ್ಳು ಕುಣಿದು-ಕುಪ್ಪಳಿಸಬಹುದು ನಿಂತಲ್ಲೇ.
ಹೆಚ್ಚೆಂದರೆ ತೆವಳಬಹುದು..

ಹೆಜ್ಜೆಯೊಂದಿಡಲಿಕೂ ಮುಂದೆ ಬೇಕದಕೆ
ಆಸರೆ ಸತ್ಯದೂರುಗೋಲಿನದು...
 
 

Tuesday, July 23, 2013

**

ಕಾಡಿ ಕರೆವ ಭಾವ
ಹೊತ್ತಿರದಿದ್ದರಷ್ಟು ನೋವ
ನಿನಗೆಲ್ಲಿ ಮುಟ್ಟುವುದೋ ದೇವ?!
ನೋವು ತಲುಪುವ ವೇಗ
ಬೆಳಕಿಗಿಂತಲೂ ಹೆಚ್ಚು...
ಅದಕೇ ಇರಬೇಕು
ಒಟ್ಟಿಗೇ ನಿನ್ನಲ್ಲಿಂದ ಹೊರಟವು,
ಇದು ನೋಡು ನನ್ನ ತಾಗಿ
ಪ್ರತಿಫಲಿಸಿ ನಿನ್ನ ಮುಟ್ಟಿದ್ದಾಗಿದೆ,
ನಿನ್ನುತ್ತರವೆನ್ನ ನೇವರಿಸಿದ್ದೂ ಆಗಿದೆ...

ಅದಿನ್ನೂ ಬಹುಶಃ ದಾರಿಯಲಿದೆ...
-------------------------------
ದಯವಿಟ್ಟು ಮರೆಯದಿರು..
ಕಹಿಯಲೊಮ್ಮೆ
ಸಿಹಿಯಲೊಮ್ಮೆ
ಬಾರಿಬಾರಿ ಅದ್ದಿ
ನಿನ್ನ ರಚನೆ ಮಾಡಿದವನೇ
ನನ್ನದೂ ಮಾಡಿದ್ದು....
------------------------
ಕಣ್ಣು ಸಾಗರ ತುಂಬಿಕೊಳುತಿತ್ತು,
"ಅಬ್ಬಾ ಸುಂದರ.." ಮನ ಗುನುಗುತಿತ್ತು.
ಕಣ್ಣು ಸೋಲುವ ದೂರದಲೆಲ್ಲೋ ಮಿಣುಮಿಣುಕೆನುತಿತ್ತು,
ಬಳಿಬಂದ ಹಡಗು ತುಂಬಿ ದೃಷ್ಟಿ ಮೀರಿ ಹಬ್ಬುವಷ್ಟಿತ್ತು.
ಅದೆಷ್ಟೋ ಬಾರಿ ಕೇಳಿದ್ದರೂ ದೂರದ ಬೆಟ್ಟದ ಗಾದೆ
ನೂರೊಂದನೆಯ ಬಾರಿ ಸಾಪೇಕ್ಷತೆ ಬೆರಗು ಹುಟ್ಟಿಸಿದೆ.

Monday, July 22, 2013

ನಮನ

ಅಡಕ ಸ್ವಂತಿಕೆಯ
ಗುರುತಿಸಿ, ಹೊರತರಿಸಿ
ಬೀಜದೊಳಡಕ ಮೊಳಕೆಯಂಥ
ಅರಿವಿಗೆ ಕಣ್ತೆರೆಸುವ,

ನೋಯದೆ, ನೋಯಿಸದೆ
ಸಾಗುವ ದಾರಿ, ನಡೆವ ಪರಿ
ಬೆಳೆವ ದಿಶೆ, ಮುಟ್ಟುವ ಗುರಿ
ಸ್ಪಷ್ಟಗೊಳಿಸುವ,

ತಮದ ತೊಡಕು ತರಿದು,
ಒಡಲಾಳದ ನಗೆಯ ಛವಿಯಲೇ
ನೇರ ಸಾಗುತಲಿರುವ
ಸರಿ ಉಪಾಯವರುಹುವ,

ಕಣ್ಕಟ್ಟಿದೆಡೆ ಪಟ್ಟಿ ಬಿಚ್ಚಿ,
ಕಣ್ಣು ತಿಕ್ಕಿ, ತನ್ನಂಗೈ ಶಾಖವಿತ್ತು,
ಮಂಜುಮಂಜಾಗಿದ್ದುದೆಲ್ಲ
ತಿಳಿಯಾಗಿಸುವ,

ತನ್ನೊಡಲ ಬಗೆದು ತೋರಿ,
ಒಡಲ ಜಾಲಾಡುವುದ ಕಲಿಸಿ
ಒಳಗುಟ್ಟು ಶೋಧಿಸಿಸಿ
ಸ್ವಪರಿಚಯವೀವ,

ಅಂತಃಸತ್ವ ಜತನದಲೆತ್ತಿ
ಮೇಲ್ಮೈಗೆ ತಂದಿಟ್ಟು
ಪ್ರಯತ್ನಪೂಜೆಯಲಿ ಔನ್ನತ್ಯಕ್ಕೇರಿಸಿ,
ಹೊಸದಾಗಿಸಿ ತೋರುವ,

ಕೀಳರಿಮೆ ಕಳೆ ಕಿತ್ತು,
ಒಲುಮೆಯಲ್ಲೆಲ್ಲ ಬಿತ್ತಿ,
ತನ್ನ ತಾನೆಂದಷ್ಟೇ ಪ್ರೀತಿಸುವ
ಬಗೆ ಕಲಿಸಿಕೊಟ್ಟ,

ಗುರುವಿಗೆನಮನಗಳು.

(ಇದುವರೆಗೆ ನಾವು ಅರಿತಿರದ ಹೊಸತೊಂದಕ್ಕೆ ನಮ್ಮನ್ನ ಪರಿಚಯಿಸಿ ನಮ್ಮನ್ನದಕ್ಕೆ ಒಗ್ಗಿಕೊಳ್ಳುವ ಹಾಗೆ ಮಾಡಿ, ಅದನ್ನು ಜೀವನಕ್ಕೆ ಅಳವಡಿಸಿಕೊಳ್ಳುವ ಜ್ಞಾನ ಪಡೆದುಕೊಳ್ಳುವಲ್ಲಿ ಸಹಾಯವಾಗುವ ವ್ಯಕ್ತಿತ್ವಗಳನ್ನು ಗುರುಗಳು ಅಂತ ಗುರುತಿಸುತ್ತೇವೆ. ಎದುರಾದ ವ್ಯಕ್ತಿತ್ವಗಳೆಲ್ಲ ಅನುಭವಗಳನ್ನು, ಆ ಮೂಲಕ ಹೊಸಪಾಠ, ಹೊಸಅರಿವು, ಹೊಸಗುರಿ, ಹೊಸದಾರಿ, ಹೊಸಸಂತಸ ಇವುಗಳಲ್ಲಿ ಒಂದಲ್ಲ ಒಂದನ್ನು ಪರಿಚಯಿಸಿದಂಥವುಗಳೇ ಹೌದು. ಹಾಗಾಗಿ ಆ ಹಂತದಲ್ಲಿ ಅವರೆಲ್ಲರೂ ಗುರುವಿನ ಚೈತನ್ಯವನ್ನು ಆವಾಹಿಸಿಕೊಂಡವರೇ ಆಗಿರುತ್ತಾರೆ. ಹಾಗಾಗಿ ನನ್ನ ಪರಿಚಯದ ಪರಿಧಿಯೊಳಗಿನ ಎಲ್ಲ ಚೈತನ್ಯಗಳಿಗೂ ಗುರುಪೂರ್ಣಿಮೆಯ ಸಂದರ್ಭದ ನಮನಗಳು.)
 
 
 
 

Saturday, July 20, 2013

ಧ್ಯಾನದ ನಡುವೊಮ್ಮೆ

ಶಬ್ಧಗಳೊಡಲೊಳಗೆ
ವಿರುದ್ಧಾತ್ಮಕತೆಗಳ
ಪೂರಕ ತತ್ವದಡಿ
ನಿಶ್ಯಬ್ಧ ಹುಡುಕಿ
ತಲೆಗೇರಿಸಿಕೊಂಡೆ...

ಅರೆ ಪದ್ಮಾಸದ
ಧ್ಯಾನಮುದ್ರೆಯಲಿ
ದೀರ್ಘ ಶ್ವಾಸದ
ನಿರಾಳತೆಯಲಿ
ಮುಚ್ಚಿದ ಕಣ್ಣಡಿಯೇನೋ
ಮಹತ್ತು ಕಾಣುವ
ಭರವಸೆಯಲಿದ್ದೆ..

ನಿಶ್ಯಬ್ಧ ಮೌನವಾಗಿ
ಎದೆಗಿಳಿದು.....
ಎಡ, ಬಲ, ಮೇಲೆಕೆಳಗೆಲ್ಲಾ
ಆವರಿಸಿ ಎತ್ತಲೋ ಹೊತ್ತೊಯ್ದು
ನಾ ಕಳೆದು ಹೋದ ಗಳಿಗೆ..
ಬೇಕಾದ್ದೇನೋ ಸಮೀಪಿಸಿದ ಹಾಗೆ,
ಮೆಲ್ಲ ಮುಟ್ಟಿ ಛೇಡಿಸುವ ಮಗು
ಮತ್ತೆ ದೂರಕೋಡಿದ ಹಾಗೆ..
 
ಇನ್ನೇನು ನಸುನಗು ಆ ಮಗುವ
ಹಿಡಿದು ಬಿಡುತಿತ್ತು, ಅಷ್ಟರಲಿ..
ಮುರಿದು ಚಂದ ದೃಶ್ಯಾವಳಿ
ಸರಪಳಿ, ಎಲ್ಲಾ ಚಲ್ಲಾಪಿಲ್ಲಿ...
ಹಸಿದ ಹೊಟ್ಟೆಯ ಎಲುಬು,
ಕಜ್ಜಿನಾಯಿಯ ಕೂಗು,
ತೆರಳಿದ ಬಂಧಗಳ ನೋವು,
ಮುರಿದ ಬಂಧಗಳ ಅಳು,
ತುಳಿತದಡಿಯ ಕಣ್ಣೀರು..

ಹೀಗೇ...
ಇಲ್ಲಗಳ ಸರದಿಸಾಲಿನ ಮುಂದೆ
ಬೇಕುಗಳೆಲ್ಲಾ ನಿಲುಕದೆತ್ತರದ
ಕಪಾಟಿನ ಹಲಬೀಗದೊಳಗೆ
ಭದ್ರವಾಗಿರುವೆಡೆ ಸಾಗುತಾ ಆಸೆ,
ಬೆಳೆಬೆಳೆದು ನಿರಾಸೆಯಾಗಿ ಬಿಟ್ಟ ಗೋಳು..
ಕಣ್ಬಿಡಿಸಿತು, ತಲೆ ತಿರುಗಿತು..

ಭ್ರೂ ಮಧ್ಯವೇ ಇರಲಿ
ನೆತ್ತಿ ಮಧ್ಯವೇ ಇರಲಿ
ಇದ್ದುದೆಲ್ಲ ಹಾಗೇ ಇರಲಿ.
ತುಂಬಿದ ಹೊಟ್ಟೆಯ
ಮೇಲಿನವು ಬೆಳಕಾಗುವ ಬದಲು
ಹಸಿದುದು ತಣಿವುದಾಗಲಿ...
ಬಿಚ್ಚಿದೆವೆ ಮತ್ತೆ ಮುಚ್ಚಿದವು
ಆಗ ಬೇಕೆನಿಸಿದುದ
ಕೈ ದೂರ ಸರಿಸಿತು,
ಇಲ್ಲಗಳ ಆಸೆ ನಿರಾಸೆಯಾಗುವಷ್ಟು
ಬೆಳೆಯದಿರುವ ಆಶಯ
ಧ್ಯಾನದ ಕೇಂದ್ರವಾಯಿತು.

**

ಮೋಡ ಸರಿಯುತಿದೆ
ಚಂದ್ರ ತೆರೆಮರೆಯಿಂದೀಚೆ
ಬರಲಾರಂಬಿಸಿದ ಸುದ್ಧಿ...
ಮಾತಾಡಿಯಾನೇ, ನಕ್ಕಾನೇ,
ಸುರಿದೀತೇ ಚಂದ್ರಿಕೆ?!
ತುಸು ದೂರವಿದ್ದರೂ ಹುಣ್ಣಿಮೆ
ಎದುರು ನೋಡುತಿದೆ ಈ ರಾತ್ರಿ....
ಕ್ಷಣ ಯುಗವಾಗುತಿದೆ,
ಪಕ್ಷವಲ್ಲ, ವರ್ಷದಿಂದ ಕಾದಿರುವ ಇರುಳು...
ಕಾದಿದೆ ಗಾಢ ಕಪ್ಪಾಗಿ.
ಕಂಗಳ ದಾಹ ಹಿಂಗೀತೇ?
ಗಂಟಲಷ್ಟು ತಣಿದೀತೇ?
ಮನಸಷ್ಟು ತುಂಬೀತೇ?

ಕತ್ತಲಿತ್ತಿತ್ತು ಬೆಳಕೀಯದ್ದು.

ರಾತ್ರಿ ಕರೆದಿತ್ತು ಹೊರಗೆ..
"ಅನುಭವಿಸು ನನ್ನನೂ,
ಸ್ವಲ್ಪ ನಿನ್ನನೂ ಜೊತೆಗೆ...

ಬೆಚ್ಚನೆ ಗೂಡು
ಅಚ್ಚಬಿಳಿ ಸ್ಪಷ್ಟಬೆಳಕು
ಹಚ್ಚಹಸಿರ ಒಳಮೆತ್ತೆ
ಮೆಚ್ಚುವೆಲ್ಲ ನಿನ್ನವುಗಳ
ಬಿಟ್ಟು ಬರೀ
ನಿನನಷ್ಟೇ ಹೊರತಾ,
ನೀನಷ್ಟೇ ಆಗಿ ಬಾ.
ಕಾದಿದೆ ಕತ್ತಲಲಿ ನೀ ಕಾದದ್ದು."

ಹಿಂಜರಿವವಳು ಇಂದು
ಮುನ್ನಡೆಯಿಟ್ಟೆ..
ನಸುಕಪ್ಪು ಜಗತ್ತಲಿ
ಎಲ್ಲ ಅಸ್ಪಷ್ಟ
ಅಪೂರ್ಣ ಚಂದ್ರ
ಗೂಬೆ ಪಾರಿವಾಳಗಳ
ಕೊರಳಲಿ ಮೌನವೂ ಚಿಂದಿ.
ಅಪರಿಪೂರ್ಣತೆ ಆಪ್ತವೆನಿಸಿ...

ಬಿರುಬೆಳಕಿಗಲ್ಲ,
ಕತ್ತಲಿಗೇ ಕಣ್ಮುಚ್ಚಿದವು.
ನೆರಳೊಂದು ದೃಷ್ಟಿಯಲ್ಲದ
ಕಾಣ್ಕೆಯೊಳಗೆ...ಥೇಟ್
ಈ ಗರ್ಭಗುಡಿಯ ಅಭಿನ್ನ
ಮೂಲಬಿಂಬದ ಕಲ್ಪನೆಯ ಹಾಗೇ..

ನಗದ್ದು ಎಂದೂ ನಗುತ್ತಾ,
ನುಡಿಯದ್ದು ನುಡಿಯುತ್ತಾ,
ಭಾವತೀವ್ರತೆಗೇರದ್ದು ಕರಗುತಾ
ನನ್ನೊಳಗಿಳಿಯಿತು,
ಬಿಂಬವಲ್ಲವೀಗ,
ನೆರಳಲ್ಲವೀಗ,
ಅದು ಒಂದು ಸತ್ಯ.

ಕತ್ತಲಿತ್ತಿತ್ತು ಬೆಳಕೀಯದ್ದು.
ಅಭಿವಂದಿಸಿ ವಾಪಾಸಾದೆ,
ಬೆಳಕು ಕಾಯುತಿತ್ತು..
ಕತ್ತಲ ಸತ್ಯವೊಳಗಿತ್ತು.
ಬೆಳಕು ಎಚ್ಚರವಾಗಿತ್ತು...
ಬಾಳು, ಇರುಳ ಜೊತೆಗೆ
ಹಗಲು; ಪಾಠ ಮನನವಾಗಿತ್ತು...

Friday, July 19, 2013

ಮೋಡವಿರದಾಗಸದ ಮಳೆ ಸುರಿದಾಗ..

ಮೋಡ ದಟ್ಟವಾಗುತಲೇ ಸಾಗಿತು
ಸುರಿಯದೇ ಕಣ್ಮರೆಯಾಯಿತು
ಕಣ್ಬಿಟ್ಟು ತೋಳ್ಚಾಚಿ ಕಾದವಳ
ನಿಟ್ಟುಸಿರುಸುರಿದ್ದು ಹೀಗೆ
"ಇಂದು, ಇದು ಎರಡೂ ನನವಲ್ಲ."

ನಕ್ಕು ಕಣ್ಮುಚ್ಚಿದಳು, ಕೈ ಮಡಚಿಟ್ಟು
ಭಾರವಾದೆದೆಯ ಮೇಲೆ...
ಮುಗಿಯಿತೆನಿಸಿದಾಗೊಮ್ಮೆ
ಪರಪರನೆ ಸುರಿಯಿತು
ಹೌದೋ ಅಲ್ಲವೋ ಎಂಬಂತೆ
ಮೋಡ ಸಾಗಿದಾಗಿನ
ಅಳಿದುಳಿದ ಮಳೆ....

ತಡವಿರಲಿಲ್ಲ, ಅಡಿಯಲಿದ್ದ
ಸತ್ವ ಮೊಳೆತು ಮೇಲೆದ್ದವು,
ಮೇಲಿದ್ದವು ದಟ್ಟವಾದವು.
ಸೂರ್ಯ ಅಚ್ಚರಿಯಲಿ
ಕಣ್ಣಗಲಿಸುತಾನೆ..

ಮುಚ್ಚಿದೆವೆಯಡಿಯಿಂದಲೇ
ಇವಳಲ್ಲಿನ ಪ್ರಶ್ನೆಯೋದುತಾಳೆ.
ಉತ್ತರಿಸುತಾಳೆ...
"ಹೂವರಳಲು ನೆಲದಮೇಲೆ..
ಈ ಕಣ್ಬಿಟ್ಟಿರಲೇಬೇಕಿಲ್ಲ,
ತೋಳ್ಚಾಚಿರಲೇಬೇಕಿಲ್ಲ.
ದೊರೆಯೇ, ನೀರಿರದೆ ಹುಟ್ಟಿದ
ಕಳ್ಳಿಯಲೂ ಹೂವರಳಿಸುವ
ಮನಸೆನ್ನಲೊಂದಿದೆ..
ಸದಾ ಎದ್ದಿರುತದೆ, ಕಾದಿರುತದೆ.
ದೊರೆತಾಗ ಎಡೆ, ಒದಗುತದೆ,
ಹೂವಾಗಿ, ಕಾಯಾಗಿ, ಮತ್ತಾಗಿ ಹಣ್ಣು,
ಒಂದೆನೆರಡಾಗಿಸಿ ನೂರ್ಮಡಿಸುತದೆ.

ನನ್ನ ಬರಿದಾಗಿಸುವುದು,
ನಾ ಬರಿದೆನುವುದು
ಅಷ್ಟು ಸುಲಭವಲ್ಲ,
ನಾನೊಂದು ಹೆಣ್ಣು..."

ಹೀಗಿರಲಿ ಕೊನೆ...

ಗರಗರ ತಿರುಗುತಿದೆ ಕಾಲಚಕ್ರ
ತ್ರಿಜ್ಯವಸಂಖ್ಯ ಸುತ್ತಿವೆ ಬಿಡುವಿಲ್ಲದಂತೆ.
ಕಣ್ಣು ಮಯಮಯ,
ಗತಿ-ಸ್ಥಿತಿ ಅಯೋಮಯ..


ಒಲವೇ,
ಅಲ್ಲೆಲ್ಲೋ ನಾನೂ ನೀನೂ
ಎಲ್ಲೆಲ್ಲೋ ಸಾಗಿ ಮತ್ತದೇ
ಕೇಂದ್ರವನೇ ಸುತ್ತುತಿರುವ
ತ್ರಿಜ್ಯಗಳೇ ಆಗಿ ಕಂಡಿಲ್ಲವೇ ನಿನಗೆ?!


ಹೊರಟ ಬಿಂದುವದೇ, ಅದೊಂದೇ..
ದೇಹಗಳ ಜಗಕೂ ,ಮನಸುಗಳ ಜಗಕೂ
ಸಾಮಾನ್ಯ ಕೇಂದ್ರ.
ಜೀವಂತ ಕೇಂದ್ರ.
ಒಲವೇ ನಿಲುವಾದ
ಮೆಲುಗಾನವದಕೆ,
ಸಾಹಿತ್ಯ-ಪ್ರೇಮ,
ರಾಗ-ಪ್ರೇಮ,
ತಾಳ-ಪ್ರೇಮ.
ಸ್ಥಾಯಿಯದೇ.. ಬಲು ಮಂದ್ರ.


ದಿಕ್ಕೆಂಟರಿಂದಲೂ ಒಂದೇ ತರ,
ತಿರುಗುಮುರುಗಿಲ್ಲ, ಅಡಿಮೇಲಿಲ್ಲ.
ಕೊನೆ-ಮೊದಲಿಲ್ಲದ

ಇದೆಯೆಂಬುವಷ್ಟೇ ಇರುವು.
ಇರುವ ಮೀರಿದ ಅಸ್ತಿತ್ವದರಿವು..


ಯಾನದಾರಂಭ ಒಂದೇ ಬಿಂದು,
ಕೊನೆಯೂ ಒಂದು ಬಿಂದು; ಆದರೆ
ನಿನಗೇ ಒಂದು, ನನಗೇ ಒಂದು...


ಇಲ್ಲೆಲ್ಲೋ ಭ್ರಮಣದ ಮಧ್ಯ
ಆಶಯವೊಂದೇ, ಪ್ರಾರ್ಥನೆಯೊಂದೇ..
ನಿಲುವೆಡೆ ಚಲನೆ,
ಹೊರಟ ಬಿಂದುವಿನ
ಪ್ರತಿಬಿಂಬವೇ ಇರಲಿ.
ಎಡಬಲವಾಗದ,

ಬಲಎಡವಾಗದ
ಕನ್ನಡಿಯದ್ದಲ್ಲದ
ಶುಭ್ರ ತಿಳಿಮನಗೊಳದಲಿ
ಪ್ರತಿರೂಪವೇ ಆಗಿ ಬಂದ
ಅಚ್ಚಂಥ ಪ್ರತಿಬಿಂಬ....

Thursday, July 18, 2013

ತಂತಿ ಮೇಲಿನ ಕೋಗಿಲೆ
ಕೂಗಿದೆ ಎಂದಿನಂತೆ.
ಒಡಕುದನಿ ಸೆಳೆದಿಲ್ಲ

ನಿನ್ನೆ-ಮೊನ್ನೆಯಂತೆ.
ಮೆಚ್ಚಿ ಅರಳುವ ಕಣ್ಣು-ಕಿವಿ,
ಕೂತು ಹಾಡುವ ನೆಲೆ,

ದನಿಯಂದದ ಸೆಲೆ
ಅದಕ್ಯಾವುದೂ ಅರಿವಿಲ್ಲ....
ಕೂಗುವುದಷ್ಟೇ ಗೊತ್ತದಕೆ.
ಹಸಿರಿದ್ದಾಗ ಸ್ವಲ್ಪ ಹೆಚ್ಚು
ಒಣಗಿದ್ದಾಗ ಸ್ವಲ್ಪ ಕಮ್ಮಿ

---------------------
ಜಡಿಮಳೆಯಲಿ ಛತ್ರಿಯಿಲ್ಲದೆ ನಡೆದ ಹಾದಿ
ನುಡಿಸಿದ್ದೊಂದೇ ಮಾತು
"ಮಳೆಯಲಿ ನೆನೆಯುವುದರಷ್ಟು

ಮುದ ಇನ್ನೊಂದಿಲ್ಲ..."
ನಿನವಷ್ಟೂ ನುಡಿ ಹೊರಡಿಸಿದ ಧ್ವನಿ
ಹುಟ್ಟಿಸಿದ್ದೊಂದೇ ಮಾತು
"ಪ್ರೀತಿ ನನ್ನಲಿ ಬಲಿಯುತಲೇ ಸಾಗಿರುವಷ್ಟು
ಖಾತ್ರಿ ಇನ್ನೊಂದಿಲ್ಲ..." 

Wednesday, July 17, 2013

ಬೇನಾಮಿನೆಲೆಯಲೊಂದು ಗುನುಗು...

ಬೇನಾಮಿನೆಲೆಯಲೊಂದು ಗುನುಗು...
--------------------------
ಮೌನರಾಗದ ವಿಹ್ವಲ ಆಲಾಪ
ಶತಶತಮಾನಗಳ ಹೊಸಿಲು ದಾಟಿ
ತಲುಪಿದಾಗ ಆ ಬೇನಾಮಿ ನೆಲೆ,
ಅಲ್ಲಿತ್ತು ಎಂದಿಗೂ ಕುಂದದ ಚಂದ್ರಬಿಂಬ.
ತಪ್ತಕಣ್ಣ ಕೊಳದಲದರ ಪ್ರತಿಬಿಂಬ.
ಭಾವದೆಸೆತಕೆ ಏಳುವಲೆಗಳು
ಬಾಗಿಬಳುಕಿದಂತೆ ಆಕಾರವಷ್ಟೇ
ಬದಲಾಗಿ ಗಾತ್ರ ಅಳಿಯದುಳಿವ
ಶುದ್ಧ ಸಾಂತ್ವನದ ಪ್ರತೀಕ
ಮುದ್ದು ಮಿದುಮೊಲದ ಶಶಾಂಕ.
ಸಿಡಿವೆಲ್ಲ ಕಿಡಿ ತಣಿಸೋ ತಂಪು
ಒಡೆದೆಲ್ಲ ಗಡಿ, ಮಣಿಸೋ ಸೊಂಪು
ತಲ್ಲಣ-ಹಲ್ಲಣ ಶಾಂತವಾಗಿಸಿ
ಸ್ವರವೆಲ್ಲ ಶ್ರುತಿಸೇರಿಸುವ ಇಂಪು.

ಬಿಡು,
ಕಾಣಲಾರೆ ಕೇಳಲಾರೆ
ನಿನದದಕೆ ವಿಮುಖತೆ.
ಬೆಳ್ಳಂಬೆಳಕು, ಬಿರುಬಿಸಿಲ
ಬರಿಶಾಖದ ದಾಹ ನಿನಗೆ
ನೀ ಸೂರ್ಯನಭಿಮಾನಿ.
ತಂಪನರಿತಿಲ್ಲ ನೀನದ ಕುಡಿದಿಲ್ಲ...
ಉರಿಯೇ ಸೆಳೆದರೆ ಬಳಿಸಾರುತಿರು
ತಣಿಸುವುದನೆಂದೂ ಜರೆಯದಿರು.
ತಂಪು ನೀರಸವಲ್ಲ,
ಉರಿವುದಷ್ಟೇ ಹಿರಿದಲ್ಲ.

ಓ ಮನಸೇ,
ಒಮ್ಮೊಮ್ಮೆ ಉರಿಗೆ
ಶಮನೋಪಾಯವೂ
ಬೇಕೆನಿಸೀತು, ಆಗ ಬಂದೀಯ
ನೀನೀ ಕಡೆಗೆ, ಈ ಮಡಿಲ ತಂಪಿಗೆ.
ಹರಡಿಹುದು ಪ್ರೇಮಚಂದ್ರಿಕೆಯ
ಈ ಒಡಲ ತುಂಬ ಕಣ್ಣ ತುಂಬಿಹ
ಪೂರ್ಣ ಚಂದ್ರಬಿಂಬ
ಕಾಯಬಲ್ಲುದದು, ಕಾಯುವುರಿಯಲೇ
ಜನ್ಮಾಂತರಕೂ ತಂಪುಳಿಸಿಕೊಳುವುದು.
ಇದು ಚಂದ್ರನಭಿಮಾನಿ.

Monday, July 15, 2013

ಬರಹದೊಳಗಿನ ಓಟ...

ಪೆನ್ನೇನು ಬರೆದೀತು
ತನ್ನೊಳಗಿನ ಶಾಯಿಯ ಕತೆ?!
ಬರೆವ ಸಾಧನವಷ್ಟೇ,
ಒಳಗನೆಲ್ಲೂ ಬಿಚ್ಚಿಡಲಾಗದು..
 
ಶಾಯಿ ಹಾಳೆಯ ತಾಗಲು,
ಹಾಳೆ ಅಕ್ಷರವನುಡಲು
ಅಕ್ಷರ ಕತೆಯ ತಲುಪಲು
ಬಯಸುತಲೋಡುತಲೇ ಇವೆ...
 
ಬರೆವವನ ಖಾಲಿಯಾಗುವಾಸೆಯ
ಓದುವವನ ತುಂಬಿಕೊಳುವಾಸೆ
ಬೆಂಬತ್ತಿದೆ...ಒಂದೂ ಸ್ಥಿರ ನಿಂತಿಲ್ಲ...
 
ಬರೆವಾಗ ಒಳಗಿದ್ದುದನು
ಅಲ್ಲಿಲ್ಲದ್ದರ ಹಿಂದಟ್ಟಿ,
ಓದುವಾಗ ಮುಂದಿದ್ದುದ
ಅಲ್ಲಿಲ್ಲದ್ದರ ಹಿಂದಟ್ಟಿ
ಮನಸೂ ಅಷ್ಟೇ
ಓಡುವೆಲ್ಲವುಗಳನೂ
ಬಿಡದೆ ಹಿಂಬಾಲಿಸುತಿದೆ....
 
 
 
 

**

ಹಿರಿಯಕ್ಕ ಹಗಲು ಬೆಳಕ ಹೆತ್ತ ಬಾಣಂತಿ, ಎರೆದವಳ ಮಲಗಿಸಿ
ಇರುಳ ಹೊತ್ತ ಕಿರಿಯವಳ ಹೆರಿಗೆಗಣಿ ಮಾಡುತಿರುವ
ತವರು ಸಂಜೆ...
ಕಣ್ತುಂಬಿದಂತಿರುವ
ಕಣ್ತಪ್ಪಿಸಿದ್ದಲ್ಲದ
ಕೆಲ ಸತ್ಯಗಳು
ನಾವಿದ್ದಲ್ಲಿಗೆ
ಬರಲಾರವಾದಾಗ
ನಾವೇ ದಾಟಿ
ಅವಿದ್ದ ಜಾಗ
ಹೊಕ್ಕಬಾರದೇಕೆ?
ಹೊಂದಬಾರದೇಕೆ?
ಸತ್ಯ ತಾನಿದ್ದ ನೆಲೆಯಲಷ್ಟೇ
ಅತಿ ಶಕ್ತಿಶಾಲಿ.
ಸಾಗಿ ತಲುಪಬೇಕಾದಲ್ಲಿ
ಹಲಬಾರಿ ನಿತ್ರಾಣಿ..

ಬೆಳಕು ಕತ್ತಲ ಕಸವೆನಿಸಿದಾಗ

ಕತ್ತಲ ಮೂಲೆಯೊಂದ ಗುಡಿಸುತ್ತಿದ್ದೆ
ಬೆಳಕೆಂದೂ ಇರದೆಡೆಯೆಂದು ಕಣ್ಣಗಲಿಸಿದ್ದೆ.
ಕಿಂಚಿತ್ ಕಸವಾದರೂ ಬಿಡದ ಹಠದಲಿದ್ದೆ.
 
ಪೊರಕೆಯೊತ್ತಿ ಅಡ್ಡಡ್ದ ಹಾಕಿ ಗುಡಿಸಿದರೂ,
ನೆಲೆ ಬಿಟ್ಟೇಳದೊಂದು ಬಿಳಿ ತುಣುಕು.
ಕಪ್ಪಷ್ಟೇ ಕತ್ತಲ ಪತ್ತಲಲಿರಬೇಕು,
ಬಿಳಿಯಲ್ಲಿ ಕಸಿವಿಸಿಯೇ ಕಿರಿದಾದರೂ...
 
ಬಾಗಿದ ಬೆನ್ನು, ಅರಳುಗಣ್ಣೆರಡೂ
ನೋಯುತಿವೆ, ನೆಟ್ಟಗಾದೆ.
ಕಸದಿಂದ ಕಣ್ಕಿತ್ತು,
ತಲೆಯೆತ್ತಿ ಊರ್ಧ್ವದೃಷ್ಟಿ ನೆಟ್ಟು
 
ಅರೇ.. ಇಲ್ಲೊಂದು ಬೆಳಕಿಂಡಿಯೂ ಇದೆ
ಈಗೇನು ಇದೆಯೆನುವುದು?
ಮುಂಚಿಂದಲೂ ಇದ್ದದ್ದೇ ಇರಬೇಕು,
ಕಪ್ಪು ಗಳಿಸಿದ ಗಮನ ಸೆಳೆಯದುಳಿದಿದೆ..
 
ನಸುಕಿನ ಶುಭ್ರಬಿಳಿಕಿರಣ ತೂರಿ
ಇಳಿದು ಕರಿನೆಲಕೆ ಕಿರುಗಾಲೂರಿ
ಪುಟ್ಟ ಬೆಳಕ ತುಣುಕಾಗಿದೆ.
ಗುಟ್ಟು ಬಯಲು, ಮನ ಹಗುರಾಗಿದೆ.
 
ಕಗ್ಗತ್ತಲ ಮೂಲೆಗಳಲೆಲ್ಲ
ಮರೆಮಾಡಿ ಬೆಳಕಡಗಿಸುವ
ಗೋಡೆ-ಮಾಡುಗಳ ಕರ್ತೃ
ಬೆಳಕಿಂಡಿಯನೂ ಇಟ್ಟಿರುತಾನೆ.
 
ಕಸಕು ರಸಕು ಅಂತರವರಿಯೆ,
ತಲೆಯೆತ್ತಿ ನೋಡಬೇಕು.
ಅದು ಬೆಳಕಿಂಡಿಯೆನಿಸಬೇಕು.
ತೂರಿಬಂದುದು ಬೆಳಕೆನಿಸಬೇಕು ಅಷ್ಟೇ.

Sunday, July 14, 2013

ಹಗಲೆಲ್ಲ ನಿದ್ರಿಸುವ ಕನಸು ಏಳುವ ಹೊತ್ತು
ಚಂದ್ರನ ದಿಂಬಿನಡಿ ಹುದುಗಿ ಕೂತಾಗ
ಕಚಗುಳಿಯಿಟ್ಟೆಚ್ಚರಿಸಿ ನಿದ್ರಾದೇವಿಯ
ನಿಶಾಯಾನಕೆ ಜೊತೆಯಾಗೆ
ಕಳಿಸಿದ ಚುರುಕುಸಂಜೆ

Saturday, July 13, 2013

ಎಲ್ಲ ಮುಗಿಯಿತೆನಿಸಿದ ಹಗಲ ಕೊನೆ
ಮತ್ತೆ ಕತ್ತಲ ಅಸ್ಪಷ್ಟ ಆರಂಭ
ದಿಗಿಲು ಹುಟ್ಟಿಸುವಾಗ
ಅದರ ಚಂದ ಇದರಲಿ ಪ್ರತಿಫಲಿಸಿ
ಎರಡರ ಸ್ವಾರಸ್ಯ ಸಾಮರಸ್ಯ
ತೋರಿದ ಕನ್ನಡಿ ಸಂಜೆ...

ನಡುನಡುವೆ..

ಹಾದಿಯ ಹದವರಿತು
ಜೊತೆಜೊತೆಗೆ ಹೆಜ್ಜೆ ಹಾಕಿದ
ಪಾದವೆರಡು ಜೊತೆ.
 
ಹೆಜ್ಜೆಗನುಗುಣವಾಗಿ
ತಾಕುತಾ ಮತ್ತೆ ತಾಕದುಳಿಯುತಾ
ಹಸ್ತಗಳೂ ಎರಡು ಜೊತೆ.
 
ನಡುವೇನೇನೋ ಬಂದು ಹೋದವು
ಕೆಲವು ತಾಕಲೆಳಸಿದವು
ಕೆಲವು ದೂರ ನೂಕಿದವು...
 
ಆ ಸಾವು ಮತ್ತು ತಾಜಮಹಲು
ಸಾವಿತ್ರಿಯೆದುರಿನ ಯಮನ ಸೋಲು
ಕುಂತಿಯೊಳಗಿನ ಅನಂತ ದಿಗಿಲು
ಸೀತೆಯ ಮಹಾನತೆಯ ಅಮಲು
ದ್ರೌಪದಿಯ ದ್ವೇಷದ ಘಮಲು
ಅಮ್ಮನ ಮುಸುಕಿನ ಮೂಕಅಳು
ಅಕ್ಕನ ಮುರುಟಿದ ಕವನ-ಗೀತೆಗಳು
ಹೀಗೇ ಅವಳ ಕೈ ಸೋಕಿದವುಗಳು...
 
ಹಂಚಿಕೊಂಡ ಅರ್ಜುನನ ಪಾಡು
ಹಂಚಿಹೋದ ಕೃಷ್ಣನ ಕೊಳಲ ಹಾಡು
ಬಿಟ್ಟು ನಡೆದ ಸಿದ್ಧಾರ್ಥನ ಜಾಡು
ಚೂರಾದ ರಾಮನೊಲವ ಗೂಡು
ಗೆಳೆಯಗೆರೆದ ಕರ್ಣನೆದೆಯ ಗುಟ್ಟು
ಹೂತುಹೋದ ಅಪ್ಪನೆದೆಯ ಮಾತು
ಮುರಿದ ನೆರೆಯ ವಿವಾಹದ ಚೌಕಟ್ಟು
ಹೀಗೇ ಅವನದನೂ ನೂಕಿದವುಗಳು..
 
ತಾಕಿದವನೂ ತಾಕದಂತಿಟ್ಟು
ಮತ್ತೆ ಬೆಸೆವ ಮಹದಾಸೆ ಕೊಟ್ಟು
ಮುನ್ನಡೆಸುವ ಚಿಂತನೆಗಳು
ಬಹುಕ್ರೂರವೆನಿಸಿದ ಗಳಿಗೆ
ಬುದ್ಧಿ ಬೇಕಿರಲಿಲ್ಲ,
ಮನಸಷ್ಟೇ ಸಾಕಿತ್ತನಿಸಿ
ಸುಮ್ಮನೇ ಅದರ ಹಿಂದಿದು
ಅಲೆವ ನಾಯಿಜೋಡಿ, ಬೆಕ್ಕುಜೋಡಿ
ಮನಃಪಟಲ ತುಂಬಿದವು..

**

ಶ್ರೀ ಬಸವರಾಜ ಸೂಳಿಭಾವಿಯವರ ದೀಪದ ಗಿಡ ದ್ವಿಪದಿಗಳ ಪುಸ್ತಕ ಓದಿದೆ, ಒಂದು ಬಾರಿಯಲ್ಲ ತುಂಬಾ ಸಲ ಓದಿದೆ. ಅಂತರ್ಜಾಲದಲ್ಲಿ ಅವರ ದ್ವಿಪದಿಗಳ ಪ್ರಕಟಣೆಗಳ ಮೂಲಕವಷ್ಟೇ ಪರಿಚಯವಿದ್ದ ಆ ದಿನಗಳಲ್ಲೂ ಸೀದಾ ಮನದ ಕೇಂದ್ರಕ್ಕೇ ತಲುಪುವ ಅವರ ಅಭಿವ್ಯಕ್ತಿಯ ಶೈಲಿಯಿಂದಾಗಿ ಆತ್ಮೀಯರೆನಿಸುತಿದ್ದವರು ಅವರು.
ಅಷ್ಟರವರೆಗೆ ಅದೆಷ್ಟೋ ದ್ವಿಪದಿಗಳು ತುಂಬಾ ಪ್ರಭಾವಶಾಲಿಗಳೆನಿಸಿ "ಆಹಾ!" ಎಂಬ ಮಾತು ಅಪ್ರಯತ್ನ ಮನಸಿಂದ ಹೊರಟಿದ್ದವಾದರೂ ಈ ಕೆಳಗಿನ ದ್ವಿಪದಿ ಪ್ರತಿಕ್ರಿಯೆಯೊಂದನ್ನು ಮೊದಲ ಬಾರಿಗೆ ನನ್ನಿಂದ ಬರೆಸಿತು.
"ನಿನ್ನ ಬಳಿ ಬರುವುದೆಂದರೆ ನಾನೇ ಇಲ್ಲವಾಗುವುದು
ನಾನಿದ್ದರೆ ಬೆಟ್ಟ ಮಳೆ ಮಂಜು ಮುಳ್ಳಕಂಟಿ ಮತ್ತು ಆ ಸುಡುವ ಸಮಾಜ ಎದುರಾಗುವುದು"
ಇದಕ್ಕೆ ನಾನು
" ಸರ್, ದೇವರ ದರ್ಶನಕ್ಕೆಂದು ಹೋಗುವಾಗ ಅಡೆತಡೆಗಳನ್ನು ದಾಟಿ, ಮುಳ್ಳುಕಂಟಿಗಳನ್ನು ಹಾದು ಹೋದರೆನೇ, ಆ ನಂತರ ಅವನ ದರ್ಶನವಾದರೆನೇ ಸಾರ್ಥಕ ಅಂತ ಹೇಳ್ತಾರೆ ಹಿರಿಯರು" ಅಂತ ಬರೆದಿದ್ದೆ. ಅದಕ್ಕವರು "ನನ್ನ ಮನಸಲ್ಲಿ ಇದನ್ನು ಬರೆಯುವಾಗ ದೇವರ ಪರಿಕಲ್ಪನೆಯಂತೂ ಖಂಡಿತಾ ಇರಲಿಲ್ಲ, ನಿಮ್ಮ ಸ್ಪಂದನೆಗೆ ನಮನ" ಅಂತ ಪ್ರತಿಕ್ರಿಯಿಸಿದ್ದು ನಮ್ಮ ನಡುವಿನ ಸಂಪರ್ಕವನ್ನು ಒಂದು ಪರಿಚಯವನ್ನಾಗಿಸಿತು.
ಆ ನಂತರದಲ್ಲಿ ಹಲವು ಬರಹಗಳು ಎದೆಯನ್ನೇ ತಾಕುತ್ತಾ ನಡೆದಿದ್ದವು. ಅದರಲ್ಲೂ
"ಈ ಬರಿ ಯಾತನೆಯ ಬದುಕನ್ನಲ್ಲ ಬರೆದದ್ದು ನಗುವಿನ ಬಗೆಗೆ
ದೋಷ ಎಲ್ಲಾಗಿತ್ತೋ ಅದನೋದಿಯೂ ಅವಳ ಕಣ್ಣಲಿ ನೀರಾಡಿತು" ಆಳವಾದೊಂದು ಸತ್ಯದ ಅನಾವರಣವನ್ನು ಸಹಜವಾಗಿ ನಮಗೆ ತಲುಪಿಸುವ ಅವರ ಬರವಣಿಗೆಯ ಶೈಲಿ ಮೋಡಿ ಮಾಡಿದ ಬರಹಗಳಲ್ಲಿ ಇದೂ ಒಂದು. ನೋವು ಅವರೊಳಗೆ ಚಿಗುರಿದ್ದರೆ ಅದು ಬರವಣಿಗೆಯ ಮೂಲಕ ನನ್ನೊಳಗೆ ಇಷ್ಟಗಲದ ಗಿಡವಾಗಿ ಹರಡಿಕೊಳ್ಳುತ್ತಿದ್ದದ್ದಂತೂ ನಿಜ.
"ಈ ಸಾಲುಗಳು ಯಾರಾದರೂ ಬರೆಯಬಹುದೆಂಬ ಮಾತಿಗೆ ಎದುರಾಡಲಾರೆ
ನನ್ನದೆಂಬ ಬದುಕೊಂದಿದ್ದರೆ ನನ್ನಲೂ ಈ ಸಾಲುಗಳು ಹುಟ್ಟುತಿರಲಿಲ್ಲ. "
ಈ ತಣ್ಣನೆಯ ಆದರೆ ಚುಚ್ಚುವ ಪ್ರತಿಕ್ರಿಯೆ,
"ಪ್ರೀತಿಯಕ್ಷರಗಳನು ತಿರುತಿರುಗಿ ರೂಪ ಬದಲಿಸಿ ಬರೆದೆ
ದ್ವೇಷದ ರೋಗಕ್ಕೆ ನನಗೆ ಗೊತ್ತಿರುವ ಮದ್ದು ಇದೊಂದೇ.."
ತನ್ನ ಬರಹದ ತಿರುಳಿನ ಆಯ್ಕೆಗೆ ಕಾರಣ ಕಂಡುಕೊಂಡ ಈ ಪರಿ,
"ಈಗಷ್ಟೇ ಅಲ್ಲ ಪ್ರತಿಸಾರಿಯೂ ಮನೆ ಬದಲಿಸುವಾಗ
ಏನು ಮಾಡಿದರೂ ಅಳಿಸಲಾಗಲಿಲ್ಲ ಗೋಡೆ ಮೇಲಿನ ಮೊಳೆಗಳ ಗುರುತು್"
ಈ ಹತಾಶೆ,
"ನನ್ನ ಆಸೆಯ ಸೂರ್ಯನನ್ನು ಚರಿತ್ರೆ ಚಿನ್ನದ ಕಾಗದದಲ್ಲಿ ಚಿತ್ರಿಸಿತು
ನನ್ನ ಬಯಕೆಯ ಬಟ್ಟಲು ಒಂದು ಚಮಚ ಸಕ್ಕರೆ ಉಪ್ಪು ಖಾರ ಕಣ್ಣೀರಿಂದ ತುಂಬಿತ್ತು"
ಈ ನೋವು,
"ನಿನ್ನೂರ ಬೆಲ್ಲವೇ ಸವಿಯೆಂದು ನಾಡು ನೀಡಿದ ಸರ್ಟಿಫಿಕೇಟು
ನಿನ್ನ ಗಲ್ಲದೆದುರು ಎಷ್ಟೊಂದು ಖೊಟ್ಟಿಯಾಗಿ ಕಂಡಿತು"
ಈ ರಸಿಕತೆ,
"ಎಲ್ಲ ದಿನಗಳಲ್ಲಿ ನಸುಕು ಮನೆಯೊಳಗೆ ಬರುವ ಪೇಪರ್ ತಣ್ಣಗಿರುವುದು
ಆ ಕರುಣಾಳು ಪೇಪರ್ ಹಂಚುವ ಹುಡುಗನ ಕಣ್ಣೀರ ಹಂಚಿಕೊಂಡಿರಬೇಕು"
ಈ ಸೂಕ್ಷ್ಮ ಸಂವೇದನೆ,
"ಮೌನದ ತುಟಿಗಳಿಗೆ ದುಃಖದ ಕಂದೀಲು ತೂಗಿಬಿದ್ದಿದೆ
ಗಾಯದ ತೈಲ ತುಂಬಿದ ಕಂದೀಲು ಗಾಳಿ ತಾಗಿತಾಗಿ ಉರಿದಿದೆ."
ತನದೋ ಅಥವಾ ಇನ್ಯಾರದೋ ಆದ ನೋವಿನ ಬೆಳವಣಿಗೆಯನ್ನು ನೋಡುವ ಈ ನಿರ್ಲಿಪ್ತದಂತೆ ಕಾಣುವ ಆದರೆ ನೊಂದ ದೃಷ್ಟಿ
"ಮನ್ನಿಸು ಹೂಗಳನ್ನಲ್ಲ ನಿನ್ನ ಸಮಾಧಿಯ ಮೇಲೆ ಅಕ್ಷರಗಳನ್ನಿಟ್ಟೆ
ಓದಿದವರ ಎದೆಯಲ್ಲಿ ಅಕ್ಷರಗಳು ನಿನಗೆ ಮರುಹುಟ್ಟು ಕೊಟ್ಟವು"
ಈ ಸತ್ಯಪೂರ್ಣ ನಿವೇದನೆ ಮತ್ತದರ ಪ್ರಾಮಾಣಿಕತೆ
"ನೀ ಹರ್ಷದಿಂದ ಹೂಮಾಲೆ ತಂದಾಗ ತಲೆಬಾಗದೆ ಇರಲಾರೆ
ಹೂಗೋಣು ಮುರಿದು ಮಾಲೆ ಮಾಡಿರುವಾಗ ತಲೆಯೆತ್ತುವುದಾದರೂ ಹೇಗೆ?"
ಮೂಕ ಹೂವಿನ ಗೋಣು ಮುರಿದುದಕೆ ಸ್ಪಂದಿಸಿದ ಈ ರೀತಿ
"ಲೋಕವ ಮಲಗಸಿ ತಾನಷ್ಟೇ ಎಚ್ಚರಿರುವ
ಇರುಳ ನಿದ್ದೆ ಕದ್ದವರಾರು?"
ಇಲ್ಲಿ ಮೂರ್ತ ಹಾಗೂ ಅಮೂರ್ತ ನೋವುಗಳೆರಡನ್ನು ಸಮೀಕರಿಸಿದ ರೀತಿ
"ಹಣತೆ ಹಚ್ಚಿಟ್ಟ ಮೇಲೂ ಎದುರಿನ ಮುಖ ಕಾಣಲಿಲ್ಲವೆಂದಾದರೆ
ದೋಷ ಎಲ್ಲಿದೆಯೆಂದು ಈಗಲಾದರೂ ಹುಡುಕು"
ಇಲ್ಲಿನ ದಾರ್ಶನಿಕ ಸಾರ್ವಕಾಲಿಕಸತ್ಯ.
"ಬರಿಬರಿ ಎನುವ ನಿನ ಸೊಲ್ಲು ಕೇಳಿಸಿಕೊಂಡಾಗಿದೆ ಜೀವವೇ
ಒಮ್ಮೆ ಎದೆಗೊರಗು, ಮಣ್ಣ್ಣಿಗೆ ಬೀಜ ಬೀಳದೆ ಹೋದರೆ ಮೊಳಕೆ ಏಳದು"
ಈ ಸರಳ ಸ್ಪಷ್ಟೀಕರಣ
"ಬೇರು ಕಾಮದ ಕೂಂಡದಲ್ಲಿತ್ತು ನಾನು ಪ್ರೇಮದ ದೇಟಿಗೆ ನೀರುಣಿಸಿದೆ
ಹೌದು ಬೆಳಕಿಗಾಗಿ ಕತ್ತಲೆಯ ಕೌದಿ ಹೊದ್ದು ಮಲಗಲೇಬೇಕು"
ಅರಿವಾದ ಸತ್ಯವೊಂದನ್ನು ಹೋಲಿಕೆಯೊಂದರ ಮೂಲಕ ಹೇಳಿದ ಈ ಸುಂದರ ರೀತಿ
"ಲೋಕವೇ ನೀ ಏನೇ ಮುಂದಿಟ್ಟರೂ ಈ ಕಾಲು ಜಾರದು
ಅವಳು ಭೂಮಿ ಮೇಲಿದ್ದೇ ನಕ್ಷತ್ರ ನೋಡುವುದ ಕಲಿಸಿದಳು"
ಇಲ್ಲಿನ ದೃಢತೆ
"ಈ ಹೊತ್ತು ಹೃದಯಕ್ಕೇನೋ ಆಗಿದೆಯೆಂದು ಮುಟ್ಟಿಕೊಂಡೆ
ನಿನ್ನ ಹೃದಯ ತಾಕಿ ಮುಟ್ಟಿಕೊಂಡ ಬೆರಳು ಒದ್ದೆಯಾದವು"
ಒಂದಾದ ಪರಿಯನ್ನು ಹೇಳಿದ ಚಂದದ ರೀತಿ
"ಅವಳೆಡೆಗೆ ಕೈ ಚಾಚಿದಾಗ ರಾಧೆಯಾಗಿದ್ದಳು, ತಲೆ ಚಾಚಿದಾಗ ಯಶೋದೆಯಾದಳು"
ಈ ಕಾಣ್ಕೆ,
"ಕಣ್ಣೆ ಮಂಜಾಗಿರುವಾಗ ಕನ್ನಡಿಯದೇನು ತಪ್ಪು?"
"ನೀ ಕೇಳಿದೆ ಕಲ್ಲಿನ ಕತೆಯೇನು, ಹೇಗೆ ಹೇಳುವುದ ಕಲ್ಲಾದ ಮೇಲೆ ಕತೆ"
ಇಲ್ಲಿನ ಅಸಹಾಯಕತೆ
"ಕತ್ತಲಲಿ ದೀಪ ಹಚ್ಚಿಡುವ ದಡ್ಡತನವಷ್ಟೇ ಜತೆಯಲಿತ್ತು
ಬೆಳಕಿನ ಬಗ್ಗೆ ಉದ್ದುದ್ದ ವ್ಯಾಖ್ಯಾನ ಮಾಡುವುದು ನನಗೊಲಿಯಲಿಲ್ಲ"
ಇಲ್ಲಿ ಬಿಚ್ಚಿಟ್ಟ ತನ್ನ ಚಿಂತನೆಗಳ ವಾಸ್ತವಿಕ ತಳಹದಿ
"ನಿನ್ನ ಕಾಲುನೋವಿನ ಸುದ್ದಿ ಈಗಷ್ಟೇ ತಲುಪಿತು
ರಾತ್ರಿ ನನ್ನ ಕನಸಲ್ಲಿ ನೀ ಅಷ್ಟು ಓಡಾಡಬಾರದಿತ್ತು"
ಇಲ್ಲಿನ ಚಿತ್ರಣ ಮತ್ತೆ ಕಲ್ಪನೆ
"ಸುಮ್ಮನೆ ದೀಪ ಹಚ್ಚಿಟ್ಟೆ
ಕಾಣುವುದು ನಿಚ್ಚಳವಾದಂತೆ ಹುಡುಕುವ ಉತ್ಸಾಹವೇ ತಣ್ಣಗಾಯಿತು"
ಇಲ್ಲಿನ ಭ್ರಮನಿರಸನ
ಹೀಗೆ ಬರೆಯುತ್ತಾ ಹೋದರೆ ಅಲ್ಲಿರುವ ಐದುನೂರಕ್ಕೆ ಮಿಕ್ಕಿದವೆಲ್ಲವನ್ನೂ ನೆನೆಸುವಾ ಅನಿಸುತ್ತದೆ. ಆ ಎಲ್ಲಾ ಬರಹಗಳೂ ಒಂದಲ್ಲ ಒಂದು ರೀತಿಯಲ್ಲಿ ಮುದಗೊಳಿಸಿದವು, ಅಚ್ಚರಿಗೊಳಿಸಿದವು, ಕಣ್ತೆರೆಸಿದವು, ಕಣ್ತುಂಬಿಸಿದವು, ಎದೆ ಭಾರ ಮಾಡಿದವು, ಭ್ರಮೆಯ ಪೊರೆ ಕಳಚಿದವು, ಚುಚ್ಚಿದವು, ಆತ್ಮವಿಮರ್ಶೆಗೆ ಹಚ್ಚಿದವು, ವಿಧಿ ಎನುವದ್ದರ ಮೇಲೆ ಮುನಿಸಾಗುವಂತೆ ಮಾಡಿದವು, ಅವರ ಮನಸು ತುಂಬಿದ ಆ ಪ್ರೇಮಕ್ಕೆ ಅರ್ಹವಾಗಿ ಈಗಿಲ್ಲವಾದ ವ್ಯಕ್ತಿತ್ವದ ಬಗ್ಗೆ ಅತೀವ ಗೌರವ ಹುಟ್ಟಿಸುವವು ಮತ್ತೆಲ್ಲಕ್ಕಿಂತ ಹೆಚ್ಚಾಗಿ ಅವರನ್ನು ನಮಗೆ ತುಂಬಾ ಬೇಕಾದವರು ಅನಿಸುವಂತೆ ಮಾಡಿ ಅವರ ಎಲ್ಲಾ ಬರಹಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಇಣುಕುವ ಅವರೊಳಗನ್ನೆಲ್ಲ ಗಾಢವಾಗಿ ಆವರಿಸಿಕೊಂಡಿರುವ ದುಃಖವನ್ನು ಹೇಗಾದರೂ ಪರಿಹರಿಸಪ್ಪಾ ಅಂತ ಈ ಜಗನ್ನಿಯಾಮಕ ಶಕ್ತಿಯಲ್ಲಿ ಅರಕೆ ಮಾಡಿಕೊಳ್ಳುವಂತೆ ನನ್ನನ್ನು ಪ್ರಭಾವಿಸಿದವುಗಳು. ಇನ್ನೂ ಒಂದಿದೆ, ಗಗನಕುಸುಮಕ್ಕೆ ಕೈಚಾಚುವುದು ಅನಿಸಿದರೂ ಸರಿ, ನಾನೂ ಇದೇ ರೀತಿ ಇಷ್ಟೇ ಪ್ರಭಾವಶಾಲಿಯಾಗಿ ಬರೆಯಬೇಕೆಂಬ ಆಸೆಗೆ ಕಾರಣವಾದವು ಮತ್ತೆ ಸೀಮಿತ ಓದಿನ ನನ್ನ ಅತಿಸಣ್ಣ ಸಾಹಿತ್ಯ ಪ್ರಪಂಚದಲ್ಲಿನ ಪುಟ್ಟಪುಟ್ಟ ಪ್ರಯತ್ನಗಳಿಗೆ ಸ್ಫೂರ್ತಿಯಾದವುಗಳು.
"ಬರೆವ ಎರಡು ಸಾಲು ಕವಿತೆಯಾಗಿಸದೆ ಹೋದರೆ
ಕವಿಯೇ, ನೂರುಸಾಲು ಬರೆದರೂ ಕವಿತೆ ಹುಟ್ಟದು"
ಈ ಸಾಲುಗಳು ಅವರ ಈ ದ್ವಿಪದಿಗಳ ಬರವಣಿಗೆಯ ಸತ್ವದ ಗುಟ್ಟನ್ನು ಮತ್ತದರ ಸತ್ಯವನ್ನು ಸಾರಿ ಹೇಳುತ್ತವೆ.
ನೋವು ತನ್ನನ್ನು ತಾನು ಅಭಿವ್ಯಕ್ತಿಸಿಕೊಂಡಷ್ಟು ಪ್ರಭಾವಶಾಲಿಯಾಗಿ ಇನ್ನು ಯಾವ ಸಂವೇದನೆಯೂ ಮಾಡಿಕೊಳ್ಳಲಾಗದು- ಇದು ಈ ಬರಹಗಳನ್ನು ನೋಡಿದಾಗಲೆಲ್ಲಾ ನನಗನಿಸುವುದು. ಅವರ ನೋವು ನಮ್ಮನ್ನು ಆಕರ್ಷಿಸಿ, ಪ್ರಭಾವಿಸಿ, ಅವರ ಬರಹಗಳನ್ನು, ಅಲ್ಲಿನ ಸರಳಸಹಜ ಸತ್ಯವನ್ನು ನಾವು ಸಂಭ್ರಮಿಸುವಂತೆ ಮಾಡಿದೆ ಎಂಬುವುದು ನಿಜ. ಅವರಿನ್ನೂ ತುಂಬಾ ಬರೆಯಬೇಕೆಂಬುವ, ಅದನ್ನೋದಿ ನಾವು ಸಂಭ್ರಮಿಸುತ್ತಲೇ ಇರಬೇಕು ಅನ್ನುವ ಆಶಯವಿರುವುದೂ ನಿಜ. ಆದರೆ ಕಾಲ ಅವರ ನೋವಿಗೆ ತಕ್ಕ ಲೇಪ ಹಚ್ಚಲಿ, ಅವರ ಮನಸು, ಬದುಕು ತಂಪಾಗಿರಲಿ ಅನ್ನುವ ಹಾರೈಕೆ ಅದಕ್ಕಿಂತಲೂ ಹೆಚ್ಚು ಪ್ರಾಮಾಣಿಕವಾದದ್ದು ಎನ್ನುವುದೂ ಅಷ್ಟೇ ನಿಜ.
(ಬಸವರಾಜ ಸೂಳಿಭಾವಿಯವರ ಸಂಪರ್ಕವಿಲ್ಲದವರಿಗಾಗಿ: ಅವರ ಬ್ಲಾಗ್ ನ ಹೆಸರು ಲಡಾಯಿ ಪ್ರಕಾಶನ
ladaiprakashanabasu.blogspot.com
, ಅವರ ಈ ಮೂರು ಕವನ ಸಂಕಲನಗಳು ಕವಿ ಪ್ರಕಾಶನ ಕವಲಕ್ಕಿ- ಹೊನ್ನಾವರ ಇವರಿಂದ ಪ್ರಕಟಣೆಯಾಗಿವೆ- ೧) ದೀಪದ ಗಿಡ ೨) ಬಟ್ಟೆಯೆಂಬುದು ಬೆಂಕಿಯ ಹಾಗೆ ೩) ತೇವಕಾಯುವ ಬೀಜ .ಅಲ್ಲಿನ ವಿಳಾಸ: ಕವಿ ಪ್ರಕಾಶನ, ಜಲಜ ಜನರಲ್ ಅಂಡ್ ಮೆಟರ್ನಿಟಿ ಕ್ಲಿನಿಕ್, ಕವಲಕ್ಕಿ, ಹೊನ್ನಾವರ, ಉತ್ತರಕನ್ನಡ.
ಫೋನ್: ೯೪೮೦೨೧೧೩೨೦)

Friday, July 12, 2013

ದುಗುಡ ತುಂಬಿದ ಮುಗುದೆ ಇಂದು
ಕಾರ್ಮೋಡ ನಖಶಿಖಾಂತ ಹರಡಿಯೂ
ಕಣ್ಣಿಗೊಂದು ಕಟ್ಟೆಕಟ್ಟಿ ಅಳು ತಡೆದಿದ್ದಳು.
ವಾತ್ಸಲ್ಯದೊಂದೇ ಮೆಲುಸ್ಪರ್ಶದಲಿ
ಕಟ್ಟೆಯೊಡೆಸಿ ಕಣ್ಣೀರ್ಗರೆಸಿ ಹಗುರಾಗಿಸಿದ
ಆತ್ಮಸಖಿ ಸಂಧ್ಯೆ...

ಸಾವಲೊಂದು ಹುಟ್ಟು

ಸಾವಾಗಿದೆ ಇಲ್ಲೊಂದು
ಉಸಿರು ನಿಂತದ್ದಲ್ಲದ
ಏನೂ ನಿಷ್ಕ್ರಿಯವಾಗದ
ಎಲ್ಲ ಮುಗಿದದ್ದಲ್ಲದ ಸಾವು.
 
ಸತ್ತ ದಾರುಣ ನೋವು
ಹುಟ್ಟುಹೊತ್ತ ಮೊಟ್ಟೆಗೆ ಕಾವು.
ಜನನಮರಣ ಆದ್ಯಂತರಹಿತ ಚಕ್ರ,
ಜನ್ಮಚಾಲನೆಗೆ ಅಂತ್ಯದ್ದೊಂದು ಪಾತ್ರ.
 
ಇದಕೆ ಸೂತಕವಿಲ್ಲ,
ಶೋಕಾಚರಣೆಯಿಲ್ಲ,
ಚಟ್ಟ, ಸ್ಮಶಾನಗಳಿಲ್ಲ,
ಸುಟ್ಟುಬಿಡುವ ಸಾವಿದಲ್ಲ.
ಅಮೂರ್ತ ಕೊನೆ, ಮತ್ತದರೊಳಗೆ
ಮೂರ್ತ ಹುಟ್ಟು. ಅಷ್ಟೇ....
 
ದೇಹವಲ್ಲದ್ದನುಂಡ ಸಾವಿಗೆ
ದೇಹ ಮೀರಿದ ಗ್ರಾಸ ದಕ್ಕಿತು.
ನೋವು ಹೀರಿ ಕಾವುರಿಸಿಕೊಂಡದ್ದಕೆ
ಶಾಖವೇರಿ ಗೆಲುವ ನಗೆ ನಕ್ಕಿತು.
 
ಮೊಳೆಮೊಳೆತು ಕೊಳೆಯುತಿದ್ದ ಕುಡಿಯೊಂದು
ಹುಡುಕುತಿತ್ತು ಜಾಗ, ಉರಿಯಲೇ ತಾ ಬೆಳೆವುದಿತ್ತು
ಬಂದಿಲ್ಲಿ ನೆಲವೂರಿತು, ಕೆಂಡವುಂಡು ನೆಲಬಿಟ್ಟೆದ್ದಿತು.
ಬಿತ್ತ ಮೆತ್ತನಿತ್ತು, ಮೊಳೆಯುತಲೇ ಗಟ್ಟಿಯಾಗಿಬಿಟ್ಟಿತು.
 
ಹೀರಲಿ ನೋವಿನನುಭವಸಾರ, ಆಗಲಿ ಸದೃಢಮರ.
ಅದು ಸತ್ತದ್ದು ಇದು ಹುಟ್ಟಿದ್ದು ಎಲ್ಲ ಸಾರಲಿ ಡಂಗುರ
ಇಲ್ಲ... ಸುಡುವಂಥ ಸಾವಿರದು ಇನ್ನಿದಕಿಲ್ಲಿ...
ಉರಿಯುಂಡು ಬೆಳೆದುದಕೆ ಕಾಳ್ಗಿಚ್ಚ ಭಯವೆಲ್ಲಿ?
 
 

Thursday, July 11, 2013

**

ಇನ್ನ್ಯಾವ ಭಾವ ಇನ್ನ್ಯಾವ ಬರಹ?
ಇನ್ನ್ಯಾವ ಹಾಳೆ ಇನ್ನ್ಯಾವ ಅಕ್ಷರ?
 
ಎದೆಗಿರಿದುಬಿಟ್ಟು
ಕೈ ಮುರಿದುಬಿಟ್ಟ ಮಾತು..
ಇನ್ನೆಲ್ಲಿ ಹುಟ್ಟೀತು ಯೋಚನೆ?
ಇನ್ನ್ಯಾವುದಾಗಿಸೀತು ಸ್ಪಂದನೆ?
.
ಬಗೆದೊಡಲು ಬಸಿದ ಸತ್ಯವ
ಕೆಂಪಲ್ಲದ ರಕ್ತವೆನುತಿರುವೆ.
ನಾನೂ ಮನುಷ್ಯಳೇ ಒಲವೇ...
ಇದಕಿಂತೇನು ಕೊಡಲಿ ಪುರಾವೆ?
 
ಕ್ಷಮಿಸು.. ನಿನ್ನ ಸೇರಿಸಿದ
ಅದೃಶ್ಯಸೇತು ಬಹುಶಃ ಜರಿಯುತಿದೆ...
ಮುರಿವ ಸದ್ದಿಗೆ ಹೃದಯ ದ್ರವಿಸುತಿದೆ
ಆ ನೆರೆಗೆಲ್ಲ, ಎಲ್ಲ ಕೊಚ್ಚಿ ಹೋಗುತಿದೆ.
 
ಕುರುಡು ಸಾಮ್ರಾಜ್ಯದಿ ನಾ ಬರಹವಾದೆ
ಕಿವುಡು ಬಯಲಲಿ ಮನಸ ಶ್ರುತಿ ಮಾಡಿ
ಪ್ರಾಣ ರಾಗ, ಎದೆಬಡಿತ ಲಯ ಮಾಡಿ
ಬಾಳು ಭಾವಗೀತೆ ಮಾಡಿದೆ, ಕಣ್ಮುಚ್ಚಿ ಹಾಡಿದೆ.
 
ನಿಜ, ಕಣ್ಬಿಟ್ಟದ್ದಿದ್ದರೆ ಬರೀ ನಿನಗಾಗಿ.
ಆ ಕಣ್ಣ ಮೆಚ್ಚುಗೆಯುಣಲಿಕಾಗಿ.
ನೀ ಕಣ್ತೆರೆದೇ ಇರಲಿಲ್ಲ, ಕಿವಿಗೊಟ್ಟೇ ಇರಲಿಲ್ಲ...
ಬಾಯಷ್ಟೇ ಹೇಳಿದ್ದು- "ನೀನೊಂದು ಸುಳ್ಳು..."
 
ಒಲವೇ, ಜಗದೆಲ್ಲಕಿಂತ
ಸ್ಪಷ್ಟ ಸತ್ಯ ನೀ ಮತ್ತೆನ್ನ ಬರಹವೆನಗೆ
ಸುಳ್ಳುಸತ್ಯದ ನಡುವಿರಬಾರದು ಬೆಸುಗೆ-ಒಸಗೆ
ಬಹುಶಃ ಮುಚ್ಚಿದ ಲೇಖನಿಯಿನ್ನೆನ್ನ ಗುರುತು
ಬೇಡ, ಇಣುಕುವುದೂ ಬೇಡಬಿಡು...
ಇನ್ನೇನಿದೆ ಇಲ್ಲಿದರ ಹೊರತು?!
ಬರೀ ಕಣ್ಣೀರ ಹೊಳೆಯೊಂದು
ಕಾಗದದ ದೋಣಿ ಸಾಲು ಹೊತ್ತು...
 
 
 

Wednesday, July 10, 2013

**

ಮೂಡಣದಿ ಹೊರಟು
ನಡುನೆತ್ತಿಯಲಿಷ್ಟು ವಿರಮಿಸಿ
ಪಡುವಣಕೆ ಸಾಗುವ
ದಿನಕರನ ನಡೆ
ಯಾಕೋ ನಿಧಾನವಾಗೆ,
ಕಾಲೆತ್ತಿ ತಲೆಮೇಲಿರಿಸಿ
ವೇಗವೇ ಮೈವೆತ್ತು
ಗುರಿ ತಲುಪಿಸಿದ
ರಾಗರಂಗಿನ
ಜಾರುಗಾಲಿ ಸಂಜೆ....

ಆತ, ಆಕೆ ಮತ್ತೆ ಅದು...

ಸಹಿಸಿಕೋ ನನ್ನ ದಯವಿಟ್ಟು
ಮುನಿಸಿಕೊಳದಿರು ಸಿಟ್ಟುಟ್ಟು
ನೀ ನನ್ನುಸಿರು ಕಣೇ..
ಸುಳ್ಳಲ್ಲ, ಪ್ರತಿಯೊಂದೂ
ಹೆಸರುಸುರುವುದು,
ಕಣ್ಮುಚ್ಚಿಸುವುದು,
ಗಾಳಿ ಮೊಗವ ಬರೆದು,
ನಗು ಮೂಡಿ ನಗಿಸುವುದು.
ಮಾತುದುರಿ ತಣಿಸುವುದು.
ಕದಪ ಕೆಂಪು ಮಣಿಸುವುದು.
ಚಿಂತೆ ಚಿತೆಯೇರುವುದು.
ಹುರುಪು ಮೈಮನ ಹೊಕ್ಕು
ಕ್ಷಣಗಳೆಲ್ಲವ ಅವಿಶ್ರಾಂತ
ಮಾಡಲನುವಾಗುವುದು.
ಕರ್ತವ್ಯ ಪ್ರಿಯವಾಗಿ,
ನಾನದರೊಳು ಹೊಕ್ಕು,
ಮತ್ತೆ ನಿನ್ನ ಕಾಣಲು
ಮಾತಾಡಲು ಹೊತ್ತಿಲ್ಲದೇ
ಗಂಟೆ ದಿನವಾಗಿ, ದಿನ ವಾರ
ವಾರ ಮಾಸವಾಗುರುಳುವುದು
ನನ್ನ ಅವಿರಾಮ ಗಳಿಗೆ
ನಿನ್ನ ಕಣ್ಣ ಹನಿಮುತ್ತಾಗುವುದು...
ಕೆನ್ನೆ ಮೇಲಿಳಿದ ಅದರ ಬಿಸಿ
ನನ್ನನೂ ತಲುಪುವುದು..
 
ಅಯ್ಯೋ ದೊರೆ..
ಸಹಿಸಿಕೊಳುವ ಮಾತೆಲ್ಲಿ?!
ಅಲಂಕಾರಪ್ರಿಯೆ ನಾನು,
ನಿನ್ನ ಧರಿಸಿ ಬಿಟ್ಟಿರುವೆ.
ಬೊಟ್ಟಾಗಿ, ನತ್ತಾಗಿ
ಓಲೆಯಾಗಿ ಬಳೆಯಾಗಿ
ಹಾರವಾಗಿ ಉಂಗುರವಾಗಿ.
ಬಟ್ಟೆಯಾಗಿ ಕಾಲ್ಗೆಜ್ಜೆಯಾಗಿ
ಮುಡಿಯಿಂದಡಿವರೆಗೂ ನೀನೇ.
ಕಳಚಲಾಗದ ಒಡವೆ ನಿನ್ನ
ನಾ ತೊಟ್ಟಿರುವಾಗ
ಬರುವ ಬರದಿರುವ
ದೇಹವ್ಯಾವ ಲೆಕ್ಕ?!
 
ಓ.. ಅದಾ..
ಅದಕೂ ಕಾರಣವುಂಟು
ಅಳುವಲ್ಲ ಅದು,
ಹೀಗಾಯ್ತು ನೋಡು..
ನಿನ್ನಾಸೆ ಹೊತ್ತು ತಂದ,
ಗೊತ್ತು, ನಿನ್ನೆದೆ ಸವರಿ ಬಂದ,
ಆ ಕಂಪನುಟ್ಟು ಬಂದ
ಗಾಳಿ ಬಿಡದೆ ಕಚಗುಳಿಯಿಟ್ಟದ್ದು.
ಅದೇ.. ಅದರಾಟಕೇ ಕಣೋ..
ನಕ್ಕೂನಕ್ಕೂ ಕಣ್ಣು ಹನಿಯಾದದ್ದು...
 
 

Tuesday, July 9, 2013

**

ಆ ಕ್ಷಣ ಮತ್ತೀ ಕ್ಷಣಗಳ ತೂಗಿ

ಬೆಳಕಿನದಕ್ಕೆ ಕತ್ತಲಿನದನ್ನು ಸರಿದೂಗಿಸಿ

ನ್ಯಾಯ ಹೇಳಿದ ತಕ್ಕಡಿ ಸಂಜೆ...

Monday, July 8, 2013

**

ಇದ್ದುದು ಇರಲಿಲ್ಲವೆಂದು

ಇಲ್ಲದಿದ್ದುದೇ ನನದೆಂದು

ಭ್ರಮೆಯಿಂದ ಹೊರತಂದುದೋ

ಭ್ರಮೆಯೊಳಗೆ ನೂಕಿದುದೋ

ಮಬ್ಬುಗತ್ತಲಲಿ ತಾ ಬೆತ್ತಲಾದ

ಅಸ್ಪಷ್ಟ ಸಂಜೆ...

**

ಮುಂದೋಡುವ ಮೃಗತೃಷ್ಣೆಯೇ,
ಏನನೋ ಹಿಂಬಾಲಿಸಿ ಹಿಂತಿರುಗಿ ನೋಡದೇ
ಸಾಗುವ ನಿನ್ನ ಹಿಂದೆ ನಾನಿರುವುದರರ್ಥ
ನಾ ಬಾಯಾರಿರುವುದಲ್ಲ, ನೀ ನೀರೆಂದೂ ಅಲ್ಲ,
ನೀರಷ್ಟೇ ಏನು, ಅದರ ಭ್ರಮೆಯೂ ನನಗಿಷ್ಟ.

**

ಮನಸು ಮನೆ ಮುಂದಿನ ಗಸಗಸೆ ಮರದಂತೆ
ಶಿಶಿರಕೆ ದಿನಕಾರು ಬಾರಿ ಗುಡಿಸಿದರೂ
ಬುಟ್ಟಿಬುಟ್ಟಿ ಸಿಗುವ ಹಳದಿಯೆಲೆಯುದುರಿಯೂ
ಹಸಿರು ಚಿಗುರೆಲೆ ಚಪ್ಪರದಲೊಂದೂ ತೂತಿಲ್ಲ.
ಎಂದಿಗೂ ಹಾಗೇ ಇರಲಿ ಮರವೂ, ಮನವೂ...

Sunday, July 7, 2013

**

ಬೆಳಕು ಮುಸುಕಿನೊಳಗೆ
ಬಿಸುಪು ಶೈತ್ಯದೊಳಗೆ
ವೇಳೆ ನಿಂತಯಡಿಯಡಿ
ನಗು ದುಗುಡದೊಳಗೆ
ಉತ್ಸಾಹ ವಿಷಾದದಡಿ
ಮಾತು ಮೌನದೊಳಗೆ
ಭಾವ ಕಣ್ಣೊಳಗೆ
ಹುದುಗಿಹೋದ
ನೀರವ ಸ್ತಬ್ಧಸಂಜೆ

Saturday, July 6, 2013

**

ಅಲ್ಲಿಂದ ಬಂದುದೊಂದು ಓಲೆ
"ಸಂಜೆ ಭಾರೀ ಕಾಡುತಿದೆಯಲ್ಲೇ...
ಹಗಲು-ರಾತ್ರಿ ನಡು ಸೇತುವಾದಂತೆ
ನಮ್ಮನೆಂದು ಸೇರಿಸುವುದಂತೆ?!"
ದೂರದೂರಲೂ ಇದು ಹೀಗೇ ಇತ್ತು ಬಹುಶಃ..
ಏಕಾಂತವ ಒಂಟಿತನ ಮಾಡಿದ ದುಷ್ಟಸಂಜೆ...



**

ಒಲವೇ,

ಬಾಣಗಳಿಗಷ್ಟೇ ಎದೆಯೊಡ್ಡುವುದೇಕೆ?
ಸ್ವಲ್ಪ ನೋಡು, ಗುರಿಯೋಡುತಿದೆ ಎನುತಾ
ಹಿಂದಿರುಗಿದ ಹೂರಾಶಿಯೇ ಇಲ್ಲಿದೆ ಬಾಡುತಾ.

**

ತಾನು ಹಚ್ಚಿಟ್ಟರೆ ದೀಪ
ಅವನು ಹಚ್ಚಿದರೆ ಬೆಂಕಿ
ಬೆಳಗಿದ ತಮಗಳಲ್ಲದಿದ್ದರೂ
ಸುಟ್ಟಿರುವ ಬಾಳುಗೋಳಿನದು
ಇಡುವುದು ಜಗ ನಿಖರ ಅಂಕಿ.
ಘರ್ಷಣೆಯ ಕೂಸು ಕಿಡಿ ಪಾಪ,
ತಾನೊಂದೇ; ಜಗವಿತ್ತದ್ದು ಮಾತ್ರ
ಗುರುತೊಂದಲ್ಲ, ತೊಟ್ಟಿಲೊಂದಲ್ಲ.
ಅನಾಮಿಕ ಕೈ, ಮನದ ತೆವಲಿಗೆ
ತುರಿಸುವ ಬಾಯಿ, ಕಣ್ಣ ವಿಕೃತಿಗೆ
ಬಗೆಬಗೆ ವೇಷ, ತಕ್ಕಂತೆ ಆವಾಸ.
ನೀರೂ, ಈ ಕಿಡಿಯೂ ಒಮ್ಮೊಮ್ಮೆ
ವಿರೋಧಾಭಾಸ ಅನಿಸಿದರೂ,
ಒಂದೇ ಅನಿಸುವುದುಂಟು..
ಇದ್ದೆಡೆಗನುಗುಣ ಪಾತ್ರ...

**

ಬೆಳಕು ತಡವರಿಸುತ್ತಿದೆ..
ಬೊಗಸೆ ತುಂಬಾ ಸತ್ಯವಿರುವುದಕೆ,
ಅಡಗಿಸುವುದು ತಾನರಿತಿಲ್ಲದ್ದಕೆ,
ಮತ್ತದು ನನ್ನ ಬಲು ಪ್ರೀತಿಸುತಿರುವುದಕೆ...


---------------------- ನೀರಗುಳ್ಳೆಯಾಗುವಾಸೆ...
ಅರೆಕ್ಷಣ ಕಣ್ಹಾಯಿಸಿದರೆ ನಿರ್ವರ್ಣ.
ಮರುಕ್ಷಣ ಗಮನಿಸಿದರೆ ಮಳೆಬಿಲ್ಲಿನೆಲ್ಲ ಬಣ್ಣ.
ನೆಲನೀರುಗಾಳಿಗೆ ನೇರ ಸಲುವ ಗಟ್ಟಿತನ
ಇದ್ದೆಲ್ಲ ಏನಿಲ್ಲದ ನಿರ್ಭಾವುಕ ಚಲನವಲನ.
ಅಳುಕು-ತಳುಕಿರದ ಪಾರದರ್ಶಕ ಬಾಳಯಾನ
ಗಾಳಿಬೆರಳೂ ಮುಟ್ಟಲಂಜುವ ಸದೃಢ ಮಿದುತನ
ಕೆಲಕ್ಷಣದಲೆ ಇರುವ-ಇಲ್ಲದಿರುವ ಭ್ರಮೆಯಗಾಧತೆಯಲಿ ವಿಲೀನ.







Friday, July 5, 2013

**



ದಣಿವು ಹೊತ್ತು ತಂದ ಹೆಗಲು,
ಶಬ್ಧಸಂತೆಯ ಮಾಲು ತುಂಬಿದ ಕಿವಿ,
ಬಣ್ಣದ ಗೋಜಲಿಗೆ ಭಾರ ರೆಪ್ಪೆ,
ಸಿಕ್ಕಿಸಿಕ್ಕಿದ್ದನೆಲ್ಲ ಹಿಂಬಾಲಿಸಿದ ಮನಸು.
ಒಟ್ಟಾರೆ ಒರಗಬಯಸಿದ ದೇಹ
ಮರಳಿವೆ ಎಂದಿನಂತೆ ಅಲ್ಲಿಗೇ...
ಕಿವಿಗೆ ಮೃದುಮೌನ, ಕಣ್ಣಿಗೆ ತಂಪು,
ಮನಸಿಗೆ ಶಾಂತಿ, ದೇಹಕೆ ವಿರಾಮ-
-ದುಡುಗೊರೆಯಿತ್ತು,
ಶಾಂತ ಮಡಿಲಲಿ ಭಾರವಿಳಿಸಿಕೊಂಡ
ತಾಯಿ ಸಂಜೆ...







ಅದಕೇ

ಸೆರಗೊಡ್ಡಿಹಳು ಭೂಮಿ ಬಯಸಿ ನಕ್ಷತ್ರವರ್ಷ
ಆಕಾಶ ಚೆಲ್ಲಲಾರ, ಇವಳು ಸುಮ್ಮನಾಗಳು...
ಕಾದು ರಾತ್ರಿಯಿಡೀ ಕಣ್ಣಿಬ್ಬನಿ ಸುರಿಸಿದೆ
ಖಾಲಿ ಸೆರಗು ಒದ್ದೆಒದ್ದೆ...
ಶಾಪಗ್ರಸ್ತ ಪಾರಿಜಾತಗಿಡ ಪರಿತಾಪ
ಯಾರದೇ ಆದರೂ ನೋಡಲಾರದು..
ಅಲ್ಲೆಲ್ಲೋ ಬಿದ್ದ ನೋವಿನ ನೆರಳಿಗೂ
ನಡುಗುವುದು, ನಲುಗುವುದು...
ಕಿತ್ತುದುರಿಸುವುದು ಪಟಪಟನೆ
ತನ್ನೆದೆಯ ತಾರಾಸಮೂಹ.
ಭೂರಮೆಯ ಸೆರಗ ತುಂಬ
ಬಿಳಿಕೆಂಪು ನಕ್ಷತ್ರರಾಶಿಯೀಗ...
ತಾ ಖಾಲಿಯಾಗಿ ಖಾಲಿಯೊಂದ
ತುಂಬಿಸಿದ ಹರ್ಷವದರದು..
ಅದಕೇ ಅಂಗಳದ ಈ ಗಿಡ
ಎಲ್ಲಕಿಂತ ಮೆಚ್ಚೆನಿಸುವುದು....





Thursday, July 4, 2013

***

ತನ್ನೊಡಲಿನದು ವಿಷವಲ್ಲ,
ಹಾಗೆಂದವ ನಿರ್ವೀರ್ಯ,
ಆಯುಷ್ಯಬಲವಿಲ್ಲದವ..
ಚೇಳೊಂದು ಕೊಂಡಿಗೆ
ಧ್ವನಿವರ್ಧಕ ಸಿಕ್ಕಿಸಿ ಹೀಗೆ
ಸಾರುತ್ತಾ ಹೊರಟರೆ,
ಕೊಂಡಿಗೆ ಮುತ್ತಿಕ್ಕಿ
ಪರಾಂಬರಿಸಿ ನೋಡಲಾದೀತೇ?!

*******

ಕುಟುಕಿ ನೋಯಿಸುವುದು, ವಿಷ ಹೊರುವುದು
ತಪ್ಪೆಂದು ಚೇಳಿಗೆ ಶಂಖಹುಳು,
ಭಾರಹೊತ್ತು ನಡೆವುದು, ಸಹಿಸುವುದು
ಹೇಡಿತನವೆಂದು ಶಂಖಹುಳುವಿಗೆ ಚೇಳು
ಎಂದಾದರೂ ತಿಳಿಹೇಳಿದ್ದುಂಟೇ?
ಹೇಳಿದರೂ ಹೇಳಿ ಜಯಿಸುವುದುಂಟೇ?

ಕೊಂಡಿ ಮತ್ತು ಕುಟುಕು ಚೇಳಿನ ಜೀವನಧರ್ಮ.
ಕುಟುಕುವುದಷ್ಟೇ ಗೊತ್ತು,
ಒಳಿತಿಗೂ ಕುಟುಕಿ, ಕೆಡುಕಿಗೂ ಕುಟುಕಿಯೇ
ಬಾಳುತ್ತದೆ, ಕುಟುಕುತ್ತಲೇ ಸಾಯುತ್ತದೆ....

ಚಿಪ್ಪು ಮತ್ತದರ ಭಾರ ಶಂಖಹುಳದ ಬಾಳಧರ್ಮ.
ಹೊರುವುದಷ್ಟೇ ಗೊತ್ತು,
ಲಾಭವಿರಲಿ, ಇಲ್ಲದಿರಲಿ ಚಿಪ್ಪನುಟ್ಟೇ
ಬಾಳುತ್ತದೆ, ಚಿಪ್ಪಿನಡಿಯೇ ಸಾಯುತ್ತದೆ

ಬದುಕು ಬಾಳುವ ಕರ್ಮವೆನುವುದಿಲ್ಲ...
ಬದುಕುವುದಷ್ಟೇ ಗೊತ್ತವಕೆ,
ಅತ್ತಿತ್ತ ಕಣ್ಹಾಯಿಸುವುದಲ್ಲ, ದೂರುವುದಲ್ಲ,
ತಿದ್ದುವುದೂ, ಮಾರ್ಪಡಿಸುವುದೂ ಅಲ್ಲ...

Wednesday, July 3, 2013

ಮುಗ್ಧತೆಯೆಂಬುದು... .

ಅಂಕಣವೊಂದರಲ್ಲಿ ಮನುಷ್ಯನ ಮುಗ್ಧತೆ ಮತ್ತದರ ಚೆಲುವಿನ ಬಗ್ಗೆ ಓದಿದೆ.

    ಮುಗ್ಧತೆ ಚೆಲುವಿನ ಕಿರೀಟದ ಗರಿ ಅನ್ನುವುದರಲ್ಲಿ ಎರಡು ಮಾತಿಲ್ಲ. ಕಣ್ಣಿಗಷ್ಟೇ ವೇದ್ಯವಾಗುವ ಹಂತದಲ್ಲಿ ಕೆಲವೊಂದು ಮುಖಗಳು ಕಾರಣವಿಲ್ಲದೇ ಚಂದ ಅನಿಸಿಬಿಡುತ್ತವೆ. ಅಲ್ಲಿ ಮುಗ್ಧತೆಯ ಭಾಗವಹಿಸುವಿಕೆ ಇದ್ದಿರಲೇಬೇಕಾಗಿಲ್ಲ. ಹಾಗೇ ಕೆಲವೊಂದು ಚಕ್ಕನೇ ಕಣ್ಸೆಳೆಯುವ ಮುಖಚರ್ಯೆಗಳಲ್ಲಿ ಎದ್ದುಕಾಣುವ ಮುಗ್ಧತೆಯೇ ಪ್ರಧಾನ ಆಕರ್ಷಣೆಯಾಗಿರುವುದೂ ಉಂಟು. ಇಲ್ಲಿ ಮುಗ್ಧತೆ ಎಂದರೆ ಏನು ಅನ್ನುವುದಕ್ಕೆ ನಾನು ತಿಳಿದುಕೊಂಡ ಉತ್ತರ- ನಿಷ್ಕಲ್ಮಶತೆ, ಮತ್ತದು ಕಾಲವುರುಳಿದರೂ ಹಾಗೆಯೇ ಉಳಿದುಕೊಳ್ಳಬಹುದಾದಾಗ ದೃಢ ಸ್ವಂತಿಕೆಯೆನಿಸಿಕೊಳ್ಳುತ್ತದೆ.
ಇದು ತನ್ನೊಳಗನ್ನು ತಾನು ನೇರ ಅಭಿವ್ಯಕ್ತಿಸುವ ಮುಖಭಾವದಲ್ಲಿ ಅತಿಹೆಚ್ಚು ಪ್ರಕಾಶವಾಗುತ್ತದೆ. ಇದರ ಹಿಂದೆ ಎದುರಿನವರದ್ದನ್ನ ನೇರ ಸ್ವೀಕರಿಸುವ ಮನೋಭಾವ, ಜೊತೆಗೆ ಸ್ವೀಕರಿಸಿದ್ದನ್ನ ತೂಕಕ್ಕೆ ಹಾಕಿ ಲೆಕ್ಕಾಚಾರಕ್ಕನುಗುಣವಾಗಿ ಅದರ ಗುಣಮಟ್ಟ ನಿರ್ಧರಿಸಿ, ಅದರೊಂದಿಗೆ ನಡೆದುಕೊಳ್ಳುವುದು ಗೊತ್ತಿಲ್ಲದ ಸಹಜತೆ ಇವೆರಡೂ ಕೆಲಸ ಮಾಡುತ್ತಿರುತ್ತವೆ. ಸುಮಾರಾಗಿ ಐದು ವರ್ಷದೊಳಗಿನ ಮಕ್ಕಳಲ್ಲಿ ಇದು ಸಹಜವಾಗಿ ಹಾಸುಹೊಕ್ಕಾಗಿ ಕಾಣಿಸುತ್ತದೆ. ಅದಕ್ಕೇ ಅವು ನಕ್ಕರೂ ಚಂದ, ಅತ್ತರೂ ಚಂದ, ಕಾಡಿದರೂ ಚಂದ...ಏನು ಮಾಡುತ್ತಿದ್ದರೂ ಅಲ್ಲೊಂದು ಸೆಳೆತವಿರುತ್ತದೆ . ಆ ಸೆಳೆತದ ಮೂಲವೇ ಆ ಎಲ್ಲ ಅವುಗಳ ಚಲನವಲನದ ಹಿಂದಿರುವ ಮುಗ್ಧತೆ. ಕತ್ತೆಯ ಮರಿಯೂ ಚಂದವೇ.. ಅನ್ನುವ ಮಾತಲ್ಲಿ ಹೇಳಲಾಗಿರುವುದು ಇದನ್ನೇ. ಎಲ್ಲಿಯವರೆಗೆ ಈ ಅಬೋಧತೆ ಮತ್ತು ಸಹಜತೆ ಎಂಬ ಗುಣವಿಶೇಷಗಳು ಮನಸ್ಸಿನಲ್ಲಿ ನೆಲೆಯಾಗಿರುತ್ತವೋ ಅಲ್ಲಿಯವರೆಗೆ ಮುಗ್ಧತೆ ಅಲ್ಲಿರುತ್ತದೆ ಮತ್ತದರ ಪ್ರತಿಫಲನ ಮುಖದಲ್ಲಿ, ನಡವಳಿಕೆಗಳಲ್ಲಿ ಎದ್ದುಕಾಣುತ್ತಿರುತ್ತದೆ. ಪ್ರಪಂಚಕ್ಕೆ ತೆರಕೊಳ್ಳುತ್ತಾ ಸಾಗಿದಂತೆ, ಪ್ರಪಂಚವನ್ನು ತಿಳಿದುಕೊಳ್ಳುತ್ತಾ ಸಾಗಿದಂತೆ ಮುಗ್ಧತೆಯಲ್ಲಿನ ಅಬೋಧತೆಯ ಅಂಶ ಕೊಂಚಕೊಂಚವೇ ಕಡಿಮೆಯಾಗುತ್ತಾ ಬರುತ್ತದೆ, ಅದು ಹಾಗಾಗಬೇಕು ಮತ್ತದು ಹಾಗಾಗುವುದು ತುಂಬಾ ಸಹಜ. ಅಂದರೆ ಅದರ ಅರ್ಥ ಮನುಷ್ಯ ಮುಗ್ಧತೆಯಲ್ಲಿ ಅಬೋಧತೆಯ ಅಂಶವನ್ನು ಪೂರ್ಣವಾಗಿ ಕಳೆದುಕೊಳ್ಳುತ್ತಾನೆ ಅನ್ನುವುದು ಸುಳ್ಳು. ಯಾಕೆಂದರೆ ಅತ್ಯಂತ ಹೆಚ್ಚು ತಿಳಿದುಕೊಳ್ಳಲೆತ್ನಿಸುವ ವ್ಯಕ್ತಿಯೊಬ್ಬನ ಅವಸ್ಥೆಯಲ್ಲೂ ಭೂಮಿಯ ಮೇಲಿನ ಸತ್ಯಗಳಲ್ಲಿ ಅಥವಾ ಸತ್ಯವಲ್ಲದವುಗಳಲ್ಲಿ ಒಂದು ಚೂರು ಅಂಶ ಮಾತ್ರವೇ ದಕ್ಕೀತು. ಹಾಗಾಗಿ ಉಳಿದವುಗಳ ಬಗ್ಗೆ ಅಬೋಧತೆ ಉಳಿದುಕೊಂಡಿರುತ್ತದೆಂಬುದು ಸುಳ್ಳಲ್ಲ. ಆ ಹಂತ ಅವನಿಗೆ ಅಲ್ಲಿದ್ದರೆ, ಇನ್ನೊಬ್ಬನಿಗೆ ಇನ್ನೂ ಸ್ವಲ್ಪ ಮುಂದಿರಬಹುದು ಅಥವಾ ಹಿಂದಿರಬಹುದು. ಅಥವಾ ಅವನು ಕೆಲವಿಷಗಳನ್ನರಿವಲ್ಲಿ ಮುಂದಿರಬಹುದು, ಇವನು ಅದಲ್ಲದ ಇನ್ನೊಂದನ್ನರಿಯುವಲ್ಲಿ. ಅವನರಿತ ವಿಷಯದ ಕ್ಷೇತ್ರದಲ್ಲಿ ಇವನು ಅಬೋಧತೆಯನ್ನೇ ಹೊಂದಿರುತ್ತಾನೆ. ನಮ್ಮಲ್ಲಿನ ಕನ್ನಡದ ಪ್ರಕಾಂಡ ಪಂಡಿತರು ಗ್ರೀಕ್ ಭಾಷೆಯ ಶಬ್ಧವೊಂದನ್ನೂ ತಿಳಿದಿರದವರಾಗಿದ್ದಲ್ಲಿ, ಗ್ರೀಕ ಪಂಡಿತನೆದುರು ಕಣ್ಕಣ್ ಬಿಟ್ಟು ಕೂರುವ ಸಣ್ಣ ಮಗುವಿನ ಅಬೋಧತೆಯನ್ನೇ ಪ್ರದರ್ಶಿಸುವುದು ಸಹಜ ತಾನೇ. ಅಲ್ಲಿ ಅವರು ಏನೂ ಗೊತ್ತಿಲ್ಲದ ಹಂತದ ಮುಗ್ಧತೆಯಲ್ಲಿರುತ್ತಾರೆ. ಅವನು ಏನು ಹೇಳಿದರೂ ಅದೇ ನಿಜವೆಂದು ಒಪ್ಪುವ ಮತ್ತೆ ತಾನೊಪ್ಪಿದ್ದನ್ನು ಅಪ್ರಯತ್ನವಾಗಿ ಮುಖದಲ್ಲಿ ಹಾವಭಾವಗಳಲ್ಲಿ ತೋರಿಸುವ ನೇರನಡವಳಿಕೆ ಅವರಲ್ಲಿ ಮನೆ ಮಾಡಿರುತ್ತದೆ. ಇದೂ ಆ ಸಂದರ್ಭದಲ್ಲಿನ, ಆ ಹಂತದಲ್ಲಿನ, ಆ ಕ್ಷಣದಲ್ಲಿನ ಅವರ ಮುಗ್ಧತೆಯಲ್ಲವೇ? ಆದರೆ ಸಹಜತೆ ಯಾವ ತೆರಕೊಳ್ಳುವಿಕೆ, ತಿಳಿದುಕೊಳ್ಳುವಿಕೆಗಳಿಂದಲೂ ಪ್ರಭಾವಿತವಾಗಲೇಬೇಕೆಂಬುದೇನೂ ಇಲ್ಲ.
     ಬುದ್ಧಿವಂತಿಕೆಯನ್ನೂ ಮುಗ್ಧತೆಯನ್ನೂ ಪರಸ್ಪರ ಬಾಧಕಗಳೆಂದು ಪರಿಗಣಿಸುವ ಅಗತ್ಯವಿಲ್ಲವೆಂದೇ ನನ್ನ ಭಾವನೆ. ಮುಗ್ಧನೊಬ್ಬ ಬುದ್ಧಿವಂತನಾಗಿರಬಾರದು ಅಥವಾ ಬುದ್ಧಿವಂತ ಮುಗ್ಧನಾಗಿರಬಾರದೆಂಬುದಿದೆಯೇ? ಮಹಾತ್ಮಾಗಾಂಧೀಜಿಯವರು ಇಡೀ ಭಾರತದೇಶವನ್ನು ತನ್ನ ಅಹಿಂಸಾವಾದದ ಪ್ರಭಾವದೊಳಗೆ ತೆಗೆದುಕೊಂಡು ಸ್ವಾತಂತ್ರ್ಯ ಗಳಿಕೆಯಲ್ಲಿ ತನ್ನ ಅಹಿಂಸಾವಾದವೊಂದನ್ನೇ ಪ್ರತಿಪಾದಿಸುವ ಮೂಲಕ ಬ್ರಿಟಿಷರನ್ನೂ ಹಿಮ್ಮೆಟ್ಟಿಸುವುದರಲ್ಲಿ ಭಾಗಿಯಾಗಲಿಲ್ಲವೇ? ಇದೆಲ್ಲದಕ್ಕೂ ಬುಧ್ಧಿವಂತಿಕೆಯ ಅಗತ್ಯವೇ ಇಲ್ಲವೇ? ಅವರ ಮುಖದಲ್ಲಿ ಮುಗ್ಧತೆಯ ನಿಷ್ಕಲ್ಮಶತೆ ಕಾಣುವುದಿಲ್ಲವೇ? ನನಗಂತೂ ಕಾಣುತ್ತದೆ.

   ಸಹಜತೆ ಮನಸಿನಲ್ಲಿದ್ದರೆ ಮತ್ತದು ಕಲುಷಿತವಾಗಿಲ್ಲದಿದ್ದರೆ ಅದು ಮುಖ, ಹಾವಭಾವಗಳಲ್ಲಿ ಸ್ಪಷ್ಟವಾಗಿ ಮತ್ತು ಸತ್ಯಪೂರ್ವಕವಾಗಿ ಕಂಡುಬರುತ್ತದೆ. ತನ್ನಲ್ಲಿಲ್ಲದ ಮುಗ್ಧತೆಯ ಚರ್ಯೆಯನ್ನು ಮುಖದಲ್ಲಿ ಪ್ರಯತ್ನಪೂರ್ವಕವಾಗಿ ಪ್ರದರ್ಶನ ಮಾಡಿದರೆ ಎದುರಿದ್ದ ವ್ಯಕ್ತಿ ಸ್ವಲ್ಪವೇ ಸ್ವಲ್ಪ ಪ್ರಬುದ್ಧನಾಗಿದ್ದರೂ ಸಾಕು, ಅದರ ಜೊಳ್ಳುತನ ಅವನಿಗೆ ವೇದ್ಯವಾಗದೇ ಇರುವುದುಂಟೇ? ಜೊಳ್ಳುತನವಿರುವುದು ಮುಗ್ಧತೆಯ ಚಂದವನ್ನು ತನಗೆ ಪ್ರಯತ್ನಪೂರ್ವಕವಾಗಿ ಆರೋಪಿಸಲು ಪ್ರಯತ್ನ ಪಡುವ ವ್ಯಕ್ತಿಯ ಜಾಯಮಾನದಲ್ಲೇ ಹೊರತು ಮುಗ್ಧತೆಯಲ್ಲಲ್ಲ. ಎದುರಿಗಿರುವವರು ಮುಗ್ಧತೆ ಮತ್ತು ನಾಟಕೀಯತೆಯನ್ನು ಬೇರ್ಪಡಿಸುವ ಸೂಕ್ಷ್ಮಮನಸ್ಕತೆ ಹೊಂದಿರಬೇಕು ಅಷ್ಟೇ.

  ಇನ್ನು ಹೆಣ್ಣುಮಕ್ಕಳು ಮುಗ್ಧರಾಗಿದ್ದಷ್ಟೂ ಅವರ ಸ್ವಾತಂತ್ರ್ಯಕ್ಕೆ ಸುರಕ್ಷಿತತೆಗೆ ಧಕ್ಕೆ ಎಂಬ ಭಾವನೆ ಅವರಲ್ಲೂ ಮತ್ತು ಉಳಿದವರಲ್ಲೂ ಇದೆ. ಜಗತ್ತಿನ ಆಗುಹೋಗುಗಳ ಬಗ್ಗೆ ತಿಳಿದುಕೊಂಡು ಬರಲಿರುವ ಸಂದರ್ಭವನ್ನೆದುರಿಸಲು ತಮ್ಮನ್ನು ತಕ್ಕವರನ್ನಾಗಿಸುವ ಪ್ರಕ್ರಿಯೆಯಲ್ಲಿ ಮುಗ್ಧತೆ ನಾಶವಾಗುತ್ತದೆ, ಆಗಬೇಕು ಅನ್ನುವ ಭಾವನೆಯಿದೆ. ಆದರೆ ಜಗತ್ಪ್ರಸಿದ್ಧ ಮದರ್ ತೆರೇಸಾರವರ ಮುಖದಲ್ಲಿ ಸ್ಪಷ್ಟ ವ್ಯಕ್ತವಾಗುತ್ತಿದ್ದ ಮಗುವಿನಂಥ ಮುಖಭಾವವನ್ನು ಯಾರೂ ಅಲ್ಲಗಳೆಯಲಾರರು. ಅವರು ಹೆಣ್ಣಾಗಿದ್ದುಕೊಂಡು ಆ ಮುಗ್ಧತೆಯ ಮುಕ್ತತೆಯನ್ನು ಕಳೆದುಕೊಳ್ಳದೆಯೇ ಪ್ರಪಂಚದಲ್ಲಿ ಸುರುವಿಂದ ಕೊನೆಯವರೆಗೆ ತನಗೆ ಬೇಕಾದಹಾಗೆ ಅಂದರೆ ತಾನಂದುಕೊಂದದ್ದನ್ನು ಮಾಡಿ, ತನ್ನ ಅರ್ಥದಲ್ಲಿ ಯಾವುದು ಸಾಧನೆಯೋ ಅದನ್ನು ಸಾಧಿಸಿ ತೋರಿಸಿ ತುಂಬು ಬಾಳನ್ನು ಬಾಳಲಿಲ್ಲವೇ? ವಯಸ್ಸು ಮತ್ತು ಅರಿವು ಎರಡರಲ್ಲೂ ವಯೋಮಾನಕ್ಕೆ ಬಂದಾಗಲೂ ನಿಷ್ಕಲ್ಮಶ ಸಹಜತೆ ಮತ್ತು ಮುಗ್ಧತೆ ಅಸಾಧ್ಯ ಅಥವಾ ಅಸಾಮಾನ್ಯವಾದದ್ದು ಖಂಡಿತಾ ಅಲ್ಲ. ಹೊರಗಿನ ಪ್ರಪಂಚದಲ್ಲಿ ತಮ್ಮನ್ನು ತಾವು ನಿರೂಪಿಸಲುಬೇಕಾಗಿ ಮುಗ್ಧತೆಯ ಹಂತವನ್ನು ದಾಟಿದಾಗಲಷ್ಟೇ ಎದುರಾಗುವ ಬುಧ್ಧಿವಂತಿಕೆಯ ಪರಿಧಿಯೊಳಗಡೆ ಹೆಜ್ಜೆಯಿಕ್ಕುವುದು ಅತೀ ಅಗತ್ಯ ಎಂಬುವ ವಾದವೂ ಇದೆ. ಯಾರೇ ಆಗಲಿ ಸಬಲತೆ, ಸ್ವಾತಂತ್ರ್ಯಗಳೆಂದರೆ ತಮಗೆ ಸರಿ ಅನ್ನಿಸುವ ಹಾಗೆ ಸುರಕ್ಷಿತವಾಗಿ ಬದುಕಲು ಸಾಧ್ಯವಾಗುವುದೇ ಹೊರತು ಜಗತ್ತಿನ ಆಶಯ, ಅಪೇಕ್ಷೆ ಅಥವಾ ತೃಪ್ತಿಗಳಿಗನುಗುಣವಾಗಿ ನಮ್ಮನ್ನು ನಾವು ನಿರೂಪಿಸುವುದು ಖಂಡಿತಾ ಅಲ್ಲ. ಅಂದರೆ ಆ ಮೂಲಕ ಸಮಾಜದ ಕುಟುಂಬವೆಂಬ ವ್ಯವಸ್ಥೆಯ ಏರುಪೇರಿಗೆ ಕಾರಣವಾಗುವ ಪ್ರಯತ್ನವಾಗಲಿ, ಇತರರಿಗೆ ಸವಾಲೆಸೆದು ನಮ್ಮನ್ನು ಅವರಿಗಿಂತ ಮೇಲೆಂದು ತೋರಲು ಹರಸಾಹಸ ಪಟ್ಟು ಉಳಿದೆಲ್ಲ ಹಿತಾಸಕ್ತಿಗಳನ್ನೂ ಉಪೇಕ್ಷಿಸಿ ಸಾಧಿಸಿ ತೋರಿಸುವುದಾಗಲಿ ಖಂಡಿತಾ ಅಲ್ಲ. ಸ್ತ್ರೀಯೇ ಇರಲಿ, ಪುರುಷನೇ ಇರಲಿ ನಮ್ಮ ಸಾಧನೆಗೆ ಇತರರ ಸಾಧನೆಗಳು ಅಳತೆಗೋಲಾಗಲಿ, ಮಿತಿಯಾಗಲಿ ಆಗಬಾರದು. ನಾವು ತಲುಪಬೇಕಾದ ಎತ್ತರ ನಮ್ಮದೇ ದೃಷ್ಟಿ ಹಾಯುವಷ್ಟು ದೂರದಲ್ಲಿನ ಒಂದು ನೆಲೆಯಲ್ಲಿರಬೇಕು. ಅಲ್ಲಿ ತಲುಪಿದ ಗಳಿಗೆ ಮತ್ತೆ ನಮ್ಮದೇ ಕಣ್ಣು ನಿಲುಕುವೆತ್ತರದಲ್ಲಿನ್ನೊಂದು ಗುರಿ ನಿರ್ಧರಿತವಾಗಬೇಕೇ ಹೊರತು ಇನ್ನೊಬ್ಬರ ಕಣ್ಣಳತೆಯ ತುದಿಯದಲ್ಲ. ಇನ್ನು ಸುರಕ್ಷಿತತೆಯ ಬಗ್ಗೆ ಹೇಳುವುದಾದರೆ ಸುರಕ್ಷಿತವಾಗಿರುವುದಕ್ಕೆ ದೊಡ್ದ ಘನವಾದ ಬುದ್ಧಿವಂತಿಕೆಯೇ ಬೇಕಿಲ್ಲ. ಅಪಾಯದ ಸುಳಿವನ್ನು ಗುರುತಿಸುವ, ಸಾಧ್ಯವಾದಲ್ಲಿ ತಪ್ಪಿಸುವ, ತಪ್ಪಿಸುವುದು ಸಾಧ್ಯವಾಗದಿದ್ದಲ್ಲಿ ನಿಭಾಯಿಸಿ ಪಾರಾಗುವ ಸಣ್ಣ ಮಟ್ಟಿನ ಸೂಕ್ಷ್ಮಸಂವೇದಿ ಚಿಂತನೆ ಮತ್ತು ಸಾಧಿಸುವ ಛಲವಿದ್ದರೆ ಸಾಕು. ಇದು ಮುಗ್ಧತೆಯಿದ್ದಲ್ಲಿ ಇರಲಾರದು ಎಂಬ ಸಂಶಯ ಹುರುಳಿಲ್ಲದ್ದು. ಯಾಕೆಂದರೆ ಆಗಷ್ಟೇ ನಡೆಯಲು ಕಲಿತ ಪುಟಾಣಿಯನ್ನೇ ನೋಡಿ, ಮೆಟ್ಟಿಲೊಂದು ಎದುರಾದರೆ ಎಷ್ಟು ಜಾಗರೂಕತೆಯಿಂದ ಅದನ್ನೇರುವ ಕೆಲಸ ನಿಭಾಯಿಸಲು ಯತ್ನಿಸುತ್ತದೆ. ಮೊದಲಬಾರಿಯೇ ಸಫಲವಾಗದೇ ಇರಬಹುದು. ಬಿದ್ದೀತು, ಏಟಾದೀತು, ಆದರೆ ಅದರ ಪ್ರಯತ್ನದಲ್ಲಿ ಎಷ್ಟು ಮುತುವರ್ಜಿಯಿರುತ್ತದೆ, ತನ್ನನ್ನು ತಾನು ಬೀಳದಂತೆ ಮೆಟ್ಟಿಲೇರುವುದರಲ್ಲಿ ಜಾಗರೂಕವಾಗಿ ಬಿಡದೆ ಪ್ರಯತ್ನಿಸಿ ಸಫಲವಾಗುವವರೆಗೂ ನಿಭಾಯಿಸುತ್ತದೆ ಅನ್ನುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಅದರ ಆ ಸಾಧನೆಗೆ ಅದರ ಮುಗ್ಧತೆ ಬಾಧಕವಾಗಲಿಲ್ಲ ಅಲ್ಲವೇ?

   ಮುಗ್ಧತೆಯೆನ್ನುವುದನ್ನು ಪೆದ್ದುತನವೆಂದೋ ಅಥವಾ ಒಂದು ಮಿತಿಯೆಂದೋ ಅಥವಾ ದೌರ್ಬಲ್ಯವೆಂದೋ ಅಂದುಕೊಳ್ಳಬೇಕಾಗಿಲ್ಲ. ಬದಲಿಗೆ ಅದು ಜೀವಿಗೆ ಸಿಗಬಹುದಾದ ಅತ್ಯುತ್ತಮ ಕೊಡುಗೆಗಳಲ್ಲೊಂದು ಮತ್ತು ಜೀವನದ ದಾರಿಯಲ್ಲಿ ಎಷ್ಟು ದೂರದವರೆಗೆ ವ್ಯಕ್ತಿಯ ಜೊತೆಯಿರುತ್ತದೋ ಅಷ್ಟರಮಟ್ಟಿಗೆ ಅದು ಆ ವ್ಯಕ್ತಿತ್ವದ ಗಟ್ಟಿತನಕ್ಕೆ ಒಂದು ಪುರಾವೆಯೆಂದು ಭಾವಿಸುವುದರಲ್ಲೇನೂ ತೊಂದರೆಯಿಲ್ಲ...

..

ಎಷ್ಟೋ ದಿನದ ನಂತರದ ಸ್ವಚ್ಛ ಆಗಸದಲಿ
ಬಿಸಿಲ ಕಿರಣದೊಡನೆ ಮೋಡದ ಕಣ್ಣಾಮುಚ್ಚಾಲೆಯಾಟಕೆ
ಕಾಡೆಗೂಡೆ ಉದ್ದಿನಮೂಟೆ ಉರುಳೇಹೋಯ್ತೆನ್ನುತಾ
ಕಣ್ಮುಚ್ಚಿ ಹಿಡಿದಾಡಿಸಿದ ಪ್ರೌಢಸಂಜೆ...

Tuesday, July 2, 2013

..

ಅವರಲ್ಲಿ ತುಂತುರಲಿ ತೊಯ್ದು
ಗಡಗಡ ನಡುಗುತ್ತಾ ನನದೇ
ನೆನಪು ಹೊದ್ದು ಬೆಚ್ಚಗಾದ ಸಂದೇಶ
ಹೊತ್ತ ತುಂತುರಿಲ್ಲಿಗೆ ತಂದು ನನ್ನ
ಸುಖದಿ ತೋಯಿಸಿದ ಸವಿಸಂಜೆ

ಇಂದೇಕೋ ಬಲು ಕಾಡಿಹಳು ಮೇನಕೆ

ಎಂದಿನಂತಿರಲಿಲ್ಲ ಅಂದು,
ಏಳುತಲೇ ಅದುರಿದ ಬಲಗಣ್ಣು,
ಸ್ವರ್ಗದಲೂ ಮೂಡುವುದು ಭಯದ ಹುಣ್ಣು.

"ನಿನ್ನೂರು ನರಲೋಕವಿನ್ನಷ್ಟು ದಿನ
ಬೆಳೆಸು ಪ್ರಯಾಣ, ಒಲಿಸು ಋಷಿಯವನ"
ಹುಟ್ಟಿಗೇ ಬೆಸೆದ ಬದ್ಧತೆಗೆ ಒಡೆಯನಾಜ್ಞೆ....

ನರರ ವ್ಯಾಪಾರ ಪರದ ಬಾಳರಿತಿಲ್ಲ
ಇಹದ ಅನೇಕ ಬಂಧನಗಳು
ಚಂದವಂತೆ, ಮಾತ್ರ ಮುಕ್ತವಲ್ಲವಂತೆ...

ನಂಟು, ಒಸಗೆ, ಸಂಬಂಧ,
ದೃಶ್ಯಾದೃಶ್ಯ ಗಂಟಲಿ ಬೆಸೆವ ಬಂಧ,
ಬೆಳೆಸುವುದೇನೋ ಸರಿ, ಮತ್ತೊಡೆಯ ಕರೆದರೆ?!...

ಭಯವೆನಿಸಿತ್ತು, ಅಸ್ಪಷ್ಟವೆನಿಸಿತ್ತು,
ಹೋಗಲೇಬೇಕಿತ್ತು, ಕಾಯ ಕುಣಿಸಲೇ ಬೇಕಿತ್ತು,
ಇಳಿದು ನಲಿದು ಸೆಳೆದಳು, ಮರೆತೆಲ್ಲ ಕರ್ತವ್ಯಕೋಗೊಟ್ಟು..

ಧರೆ ಮೊದಲೇ ಚೆಲುವೆ,
ಮೇನಕೆ ಕಾಲಿಟ್ಟ ಕ್ಷಣ ಅಪ್ಸರೆಯಾಗಿ,
ವಸಂತ, ಕಾಮ ಸ್ಪರ್ಶಿಸಿ ಮದಭರಿತೆಯೂ ಆದಳು...

ಋಷಿಯ ಹನಿಹನಿತ್ಯಾಗಗೂಡಿದ ವೈರಾಗ್ಯತೊರೆಯಲಿ
ವಿಧಿ ತೆಪ್ಪವಾಗಿ, ಕಾಯಸುಖ ಹುಟ್ಟಾಗಿ
ಒಯ್ದು ಮತ್ತೆ ಬಿಟ್ಟದ್ದಾತನ ಹೊರಟ ಬಿಂದುವಿಗೆ...

ಗುರಿಯತ್ತ ನಡೆದ-ಉಳಿದ ದೂರ ತೆರೆಮರೆಗೆ
ನಿಂತ ನೆಲೆ ಸ್ವರ್ಗ ಸುರಿದೊಲವ ಮಳೆಗೆ
ದೇವ-ಮಾನವ ಕೂಟ ಮಾಯೆಯೊಳಗೆ...

ಮಿಲನವಿನ್ನೇನು ಬರೀ ಸುಖಿಸುವುದಲ್ಲವಲ್ಲಾ.,
ಫಲಿಸುತ್ತದೆ ಕೂಡಾ...ಫಲವಾಯ್ತು
ಅಂಥಿಂಥದ್ದಲ್ಲ, ಹೂವಂಥ ಹೆಣ್ಣಾಯ್ತು...

ಸ್ವರ್ಗವೀಗ ಬೇಕಿಲ್ಲ ಸ್ವರ್ಗದಾಕೆಗೆ
ಒಲವ ಸವಿಯುಂಡ ಮನಕೆ, ಸುಖವುಂಡ ದೇಹಕೆ
ದೈವತ್ವ, ಅಮರತ್ವ ಪೊಳ್ಳೆನಿಸಿದ ಮೇನಕೆಗೆ...

ಕಿಚ್ಚೇನು ಸ್ವರ್ಗದೊಡಲನೂ ಬಿಟ್ಟಿಲ್ಲ
ಅಮೃತವುಂಡವಳು ನೆಲದನ್ನ ಸವಿವುದಕೆ ದಹಿಸಿತು...
ಇಂದ್ರನ ಪ್ರಶ್ನೆ ಕರೆದಿತ್ತು-"ಮರೆತೆಯೇನು ನಿನ್ನೂರ, ನಿನ್ನವರ?"

ಅಳುವ ಕಂದ, ಅಸಹಾಯ ಸಂಗಾತಿ,
ಅನರ್ಘ್ಯ ನೆನಪು, ಅತೃಪ್ತ ಕನಸು
ನೋಯುವೆದೆ ತುಂಬ ಹಾಲು ಹೊತ್ತು..

ಭುಗಿಲೆದ್ದ ವಿರೋಧ ಅಸ್ವೀಕಾರಗಳ ನಡುವೆ
ಕಿತ್ತೆಲ್ಲ ಮತ್ತೆ ನಡೆವುದಿತ್ತು ಮೇಲ್ಮುಖ..
ದೇವತೆಗಿರುವಂತಿಲ್ಲವಲ್ಲಾ ಮನುಷ್ಯತ್ವ...

ಸ್ವರ್ಗದಸ್ತಿತ್ವವೊಂದು ನರಲೋಕದಿ ಜೀವತಳೆದು
ಮರಳಿದೆ ಮತ್ತೆ ಅತ್ತ, ಜೀವಂತಿಕೆಯಿಲ್ಲೇ ಬಿಟ್ಟು
ಇಂದ್ರನಾಸ್ಥಾನದ ಕುಣಿವ ಗೊಂಬೆ ಪಾತ್ರವುಟ್ಟು...

Monday, July 1, 2013

..

ಬೆಳಕು ಸ್ಪಷ್ಟ ಮಾಡೆಸೆದ ಗೊಂದಲದ ಕಲ್ಲುಗಳ
ಹೂಗಳಾಗಿಸಿ ನಿದ್ದೆಯ ಮಡಿಲಿಗೆಸೆದ
ಮತ್ತಲ್ಲಿಗೆ ಸಾಂತ್ವನದ ಪಲ್ಲಕ್ಕಿಯಲಿ ನಮ್ಮ
ಹೊತ್ತೊಯ್ಯುವ ಪರುಷಮಣಿ ಸಂಜೆ..

ಹೊಕ್ಕರಷ್ಟೇ......

ಸ್ಫೂರ್ತಿಯಾಗ ಹೊರಟ
ಉಪಸ್ಥಿತಿಯೊಂದು
ಅನುಪಸ್ಥಿತಿಗಳ ಹುಟ್ಟಿಗೊಂದು
ಕಾರಣಕರ್ತೃವಾದಾಗ
ಅದೇ ಹೆಜ್ಜೆಯಡಿ ತನ್ನ
ಗುಳಿ ತೋಡತೊಡಗಿತು...

ನಾಲ್ಕಾರು ಗುಪ್ಪೆಮಣ್ಣು ಅಗೆದಿತ್ತಷ್ಟೇ..
ಮುಸುಮುಸು ನಗು..
ಉಸಿರಿಲ್ಲದವರ ಮನೆಯಲೂ
ಉಸಿರಿನುಸಿರಾದ ನಗುವೇ?!

ಮಣ್ಣಹೆಂಟೆ-ಕಲ್ಲ ಮಧ್ಯೆ
ಕಲ್ಲಲ್ಲದ ಅಂಥದೊಂದು ಗೆಡ್ಡೆ...
ಆಗಷ್ಟೇ ಕಣ್ಣೊಂದೆರಡು ಮೂಡಿದ್ದು
ಮೈತುಂಬಾ ನಗುತಿತ್ತು,
ಕೇಳುತಿತ್ತು...

"ಎಲ್ಲಿ ಹೊರಟೆ?
ನೆಲದ ಮೇಲಷ್ಟೇ ಜಂಜಡವೇ?
ಗುಳಿ ಹೊಕ್ಕುವುದೆ ಬಿಡುಗಡೆಯೇ?
ಇಲ್ಲಿನದಕೆ ಇನ್ನೆಲ್ಲಿಗೆ ಹೋಗುವೆ?

ಹೊಕ್ಕರಷ್ಟೇ ತೆರಕೊಳ್ಳುವ
ಕಣ್ಕಟ್ಟಿಸುವ ಹಲ ಮಜಲಿವೆ ಬಾಳಲಿ...

ನಾ ಕಾದಿಲ್ಲವೇ ದಿನ ನೂರಾರು
ಹನಿನೀರು ಈ ಕಣ್ಣೊಡೆಸುವುದಕೆ?
ಹಸಿರಾಗಿ ಹೆಸರಾಗುವ ಈ
ಎಳೆಗಣ್ಣನಾಧರಿಸಲಿಕೆ?
ಮತ್ತೆಂದಿಗೂ ನೆಲದಡಿಯೇ ಉಳಿವುದಕೆ?

ಯಾವ ಸ್ಫೂರ್ತಿಯೂ ಅಲ್ಲ,
ಯಾವ ಕೀರ್ತಿಯೂ ಇಲ್ಲ,
ಕಳುಹಿದವ ಎಳಕೊಳ್ಳುವವರೆಗಿರುವೆ.
ಇದ್ದ ನೆಲೆಯಲೇ ನಗುವೆ.

ಕಂಡರೆಷ್ಟು, ಬಿಟ್ಟರೆಷ್ಟು,
ಮೆಚ್ಚೆನಗೆ ನನ್ನ ಪಾಲಿಷ್ಟು.

ಕಲ್ಲಂತಿರುವುದೂ ನಿಜವೇ,
ಕಲ್ಲಲ್ಲದಿರುವುದೂ ನಿಜವೇ..
ಸತ್ತಂತಿರುವುದೂ ನಿಜವೇ,
ಹಸಿರಡಗಿಸಿರುವುದೂ ನಿಜವೇ...

ತಲುಪಿದವರಷ್ಟೇ ಮುಟ್ಟಿ,
ಮುಟ್ಟಿದವರಷ್ಟೇ ಅರಿತಾರು
ಹಾದು, ತುಳಿದು ಹೋಗುವಗೆ
ಅನುಪಸ್ಥಿತಿಯೇ ನನದು

ಬಾಳ್ವೆಯೆಂದರೆ
ಬಾಳುವುದಷ್ಟೇ..
ಹಿಂದುಮುಂದಿನದೆಲ್ಲ
ಹಿಂದುಮುಂದಿಗೆ ಬಿಟ್ಟು..
ಇಂದಿನಲಿ, ಈ ಕ್ಷಣದಲಿ..."

ಭಾರ ಹೆಜ್ಜೆಯದು ಗಾಳಿಪಟವಾಗಿ
ನೆಲದಡಿಯ ಬಾಳ್ವೆಯ ಸೂತ್ರ ಕಟ್ಟಿ
ಕೆಳಗಿನ್ನೆಂದೂ ಇಳಿಯದ ನಗೆಯ
ತೃಪ್ತಿಯಾಗಸವ ಮುಟ್ಟಿತು...

ಕಣ್ಮುಚ್ಚಿ ಕಿವಿಯಷ್ಟೇ ತೆರೆದ ಗಳಿಗೆ

ಕಣ್ಮುಚ್ಚಿ ಕಿವಿತೆರೆದು ಕೂತಾಗ
ಮೆತ್ತನೊಳಗಿಳಿದ ಶಬ್ಧಸಾಗರ
ಮೂಲೆಯಲೆಲ್ಲೋ ಇದ್ದ
ಮೌನಬೀಜಕೆ ತನ್ನನೆರೆಯಿತು.
ಮುರುಟಿದ್ದ ಮೌನದಂಕುರ
ಆರೈಸಿದ್ದಕೆ ಶಬ್ಧದಬ್ಬರ
ಚಿಗಿತು ನಳನಳಸಿತು..

ಬಣ್ಣದೊಂದು ಬಿಂದು
ಗಡಿಗೆ ನಿರ್ವರ್ಣದ ಬಣ್ಣವುಡುವ
ಕನಸ ನನಸಾಗಿಸಿದಂತೆ,
ಮೌನದೊಂದು ಕುಡಿ
ಮನದ ನಿರ್ವಾತದ
ಶಾಂತಿಯಾಸೆ ಪೂರೈಸಿತು.

ಬಂದ ಕೆಲಸ ತೀರಿದ್ದಕೋ,
ಆ ದಾರಿಗೆ ಸುಂಕವಿಲ್ಲದ್ದಕೋ,
ಶಬ್ಧ ನಿಶ್ವಾಸವಾಗಿ ಹೊರಹೊಮ್ಮಿತು
ಏರಿಳಿದ ಎದೆಯ ಚಲನೆಯಲಿ
ಒಳಹೊಕ್ಕ ಒಳಿತಲ್ಲೇ ಉಳಿದು
ಅದಲ್ಲದ್ದೂ ಅದನೇ ಮೊಳೆಸಿ ಹಿಂದಿರುಗಿತು.