Saturday, July 13, 2013

**

ಶ್ರೀ ಬಸವರಾಜ ಸೂಳಿಭಾವಿಯವರ ದೀಪದ ಗಿಡ ದ್ವಿಪದಿಗಳ ಪುಸ್ತಕ ಓದಿದೆ, ಒಂದು ಬಾರಿಯಲ್ಲ ತುಂಬಾ ಸಲ ಓದಿದೆ. ಅಂತರ್ಜಾಲದಲ್ಲಿ ಅವರ ದ್ವಿಪದಿಗಳ ಪ್ರಕಟಣೆಗಳ ಮೂಲಕವಷ್ಟೇ ಪರಿಚಯವಿದ್ದ ಆ ದಿನಗಳಲ್ಲೂ ಸೀದಾ ಮನದ ಕೇಂದ್ರಕ್ಕೇ ತಲುಪುವ ಅವರ ಅಭಿವ್ಯಕ್ತಿಯ ಶೈಲಿಯಿಂದಾಗಿ ಆತ್ಮೀಯರೆನಿಸುತಿದ್ದವರು ಅವರು.
ಅಷ್ಟರವರೆಗೆ ಅದೆಷ್ಟೋ ದ್ವಿಪದಿಗಳು ತುಂಬಾ ಪ್ರಭಾವಶಾಲಿಗಳೆನಿಸಿ "ಆಹಾ!" ಎಂಬ ಮಾತು ಅಪ್ರಯತ್ನ ಮನಸಿಂದ ಹೊರಟಿದ್ದವಾದರೂ ಈ ಕೆಳಗಿನ ದ್ವಿಪದಿ ಪ್ರತಿಕ್ರಿಯೆಯೊಂದನ್ನು ಮೊದಲ ಬಾರಿಗೆ ನನ್ನಿಂದ ಬರೆಸಿತು.
"ನಿನ್ನ ಬಳಿ ಬರುವುದೆಂದರೆ ನಾನೇ ಇಲ್ಲವಾಗುವುದು
ನಾನಿದ್ದರೆ ಬೆಟ್ಟ ಮಳೆ ಮಂಜು ಮುಳ್ಳಕಂಟಿ ಮತ್ತು ಆ ಸುಡುವ ಸಮಾಜ ಎದುರಾಗುವುದು"
ಇದಕ್ಕೆ ನಾನು
" ಸರ್, ದೇವರ ದರ್ಶನಕ್ಕೆಂದು ಹೋಗುವಾಗ ಅಡೆತಡೆಗಳನ್ನು ದಾಟಿ, ಮುಳ್ಳುಕಂಟಿಗಳನ್ನು ಹಾದು ಹೋದರೆನೇ, ಆ ನಂತರ ಅವನ ದರ್ಶನವಾದರೆನೇ ಸಾರ್ಥಕ ಅಂತ ಹೇಳ್ತಾರೆ ಹಿರಿಯರು" ಅಂತ ಬರೆದಿದ್ದೆ. ಅದಕ್ಕವರು "ನನ್ನ ಮನಸಲ್ಲಿ ಇದನ್ನು ಬರೆಯುವಾಗ ದೇವರ ಪರಿಕಲ್ಪನೆಯಂತೂ ಖಂಡಿತಾ ಇರಲಿಲ್ಲ, ನಿಮ್ಮ ಸ್ಪಂದನೆಗೆ ನಮನ" ಅಂತ ಪ್ರತಿಕ್ರಿಯಿಸಿದ್ದು ನಮ್ಮ ನಡುವಿನ ಸಂಪರ್ಕವನ್ನು ಒಂದು ಪರಿಚಯವನ್ನಾಗಿಸಿತು.
ಆ ನಂತರದಲ್ಲಿ ಹಲವು ಬರಹಗಳು ಎದೆಯನ್ನೇ ತಾಕುತ್ತಾ ನಡೆದಿದ್ದವು. ಅದರಲ್ಲೂ
"ಈ ಬರಿ ಯಾತನೆಯ ಬದುಕನ್ನಲ್ಲ ಬರೆದದ್ದು ನಗುವಿನ ಬಗೆಗೆ
ದೋಷ ಎಲ್ಲಾಗಿತ್ತೋ ಅದನೋದಿಯೂ ಅವಳ ಕಣ್ಣಲಿ ನೀರಾಡಿತು" ಆಳವಾದೊಂದು ಸತ್ಯದ ಅನಾವರಣವನ್ನು ಸಹಜವಾಗಿ ನಮಗೆ ತಲುಪಿಸುವ ಅವರ ಬರವಣಿಗೆಯ ಶೈಲಿ ಮೋಡಿ ಮಾಡಿದ ಬರಹಗಳಲ್ಲಿ ಇದೂ ಒಂದು. ನೋವು ಅವರೊಳಗೆ ಚಿಗುರಿದ್ದರೆ ಅದು ಬರವಣಿಗೆಯ ಮೂಲಕ ನನ್ನೊಳಗೆ ಇಷ್ಟಗಲದ ಗಿಡವಾಗಿ ಹರಡಿಕೊಳ್ಳುತ್ತಿದ್ದದ್ದಂತೂ ನಿಜ.
"ಈ ಸಾಲುಗಳು ಯಾರಾದರೂ ಬರೆಯಬಹುದೆಂಬ ಮಾತಿಗೆ ಎದುರಾಡಲಾರೆ
ನನ್ನದೆಂಬ ಬದುಕೊಂದಿದ್ದರೆ ನನ್ನಲೂ ಈ ಸಾಲುಗಳು ಹುಟ್ಟುತಿರಲಿಲ್ಲ. "
ಈ ತಣ್ಣನೆಯ ಆದರೆ ಚುಚ್ಚುವ ಪ್ರತಿಕ್ರಿಯೆ,
"ಪ್ರೀತಿಯಕ್ಷರಗಳನು ತಿರುತಿರುಗಿ ರೂಪ ಬದಲಿಸಿ ಬರೆದೆ
ದ್ವೇಷದ ರೋಗಕ್ಕೆ ನನಗೆ ಗೊತ್ತಿರುವ ಮದ್ದು ಇದೊಂದೇ.."
ತನ್ನ ಬರಹದ ತಿರುಳಿನ ಆಯ್ಕೆಗೆ ಕಾರಣ ಕಂಡುಕೊಂಡ ಈ ಪರಿ,
"ಈಗಷ್ಟೇ ಅಲ್ಲ ಪ್ರತಿಸಾರಿಯೂ ಮನೆ ಬದಲಿಸುವಾಗ
ಏನು ಮಾಡಿದರೂ ಅಳಿಸಲಾಗಲಿಲ್ಲ ಗೋಡೆ ಮೇಲಿನ ಮೊಳೆಗಳ ಗುರುತು್"
ಈ ಹತಾಶೆ,
"ನನ್ನ ಆಸೆಯ ಸೂರ್ಯನನ್ನು ಚರಿತ್ರೆ ಚಿನ್ನದ ಕಾಗದದಲ್ಲಿ ಚಿತ್ರಿಸಿತು
ನನ್ನ ಬಯಕೆಯ ಬಟ್ಟಲು ಒಂದು ಚಮಚ ಸಕ್ಕರೆ ಉಪ್ಪು ಖಾರ ಕಣ್ಣೀರಿಂದ ತುಂಬಿತ್ತು"
ಈ ನೋವು,
"ನಿನ್ನೂರ ಬೆಲ್ಲವೇ ಸವಿಯೆಂದು ನಾಡು ನೀಡಿದ ಸರ್ಟಿಫಿಕೇಟು
ನಿನ್ನ ಗಲ್ಲದೆದುರು ಎಷ್ಟೊಂದು ಖೊಟ್ಟಿಯಾಗಿ ಕಂಡಿತು"
ಈ ರಸಿಕತೆ,
"ಎಲ್ಲ ದಿನಗಳಲ್ಲಿ ನಸುಕು ಮನೆಯೊಳಗೆ ಬರುವ ಪೇಪರ್ ತಣ್ಣಗಿರುವುದು
ಆ ಕರುಣಾಳು ಪೇಪರ್ ಹಂಚುವ ಹುಡುಗನ ಕಣ್ಣೀರ ಹಂಚಿಕೊಂಡಿರಬೇಕು"
ಈ ಸೂಕ್ಷ್ಮ ಸಂವೇದನೆ,
"ಮೌನದ ತುಟಿಗಳಿಗೆ ದುಃಖದ ಕಂದೀಲು ತೂಗಿಬಿದ್ದಿದೆ
ಗಾಯದ ತೈಲ ತುಂಬಿದ ಕಂದೀಲು ಗಾಳಿ ತಾಗಿತಾಗಿ ಉರಿದಿದೆ."
ತನದೋ ಅಥವಾ ಇನ್ಯಾರದೋ ಆದ ನೋವಿನ ಬೆಳವಣಿಗೆಯನ್ನು ನೋಡುವ ಈ ನಿರ್ಲಿಪ್ತದಂತೆ ಕಾಣುವ ಆದರೆ ನೊಂದ ದೃಷ್ಟಿ
"ಮನ್ನಿಸು ಹೂಗಳನ್ನಲ್ಲ ನಿನ್ನ ಸಮಾಧಿಯ ಮೇಲೆ ಅಕ್ಷರಗಳನ್ನಿಟ್ಟೆ
ಓದಿದವರ ಎದೆಯಲ್ಲಿ ಅಕ್ಷರಗಳು ನಿನಗೆ ಮರುಹುಟ್ಟು ಕೊಟ್ಟವು"
ಈ ಸತ್ಯಪೂರ್ಣ ನಿವೇದನೆ ಮತ್ತದರ ಪ್ರಾಮಾಣಿಕತೆ
"ನೀ ಹರ್ಷದಿಂದ ಹೂಮಾಲೆ ತಂದಾಗ ತಲೆಬಾಗದೆ ಇರಲಾರೆ
ಹೂಗೋಣು ಮುರಿದು ಮಾಲೆ ಮಾಡಿರುವಾಗ ತಲೆಯೆತ್ತುವುದಾದರೂ ಹೇಗೆ?"
ಮೂಕ ಹೂವಿನ ಗೋಣು ಮುರಿದುದಕೆ ಸ್ಪಂದಿಸಿದ ಈ ರೀತಿ
"ಲೋಕವ ಮಲಗಸಿ ತಾನಷ್ಟೇ ಎಚ್ಚರಿರುವ
ಇರುಳ ನಿದ್ದೆ ಕದ್ದವರಾರು?"
ಇಲ್ಲಿ ಮೂರ್ತ ಹಾಗೂ ಅಮೂರ್ತ ನೋವುಗಳೆರಡನ್ನು ಸಮೀಕರಿಸಿದ ರೀತಿ
"ಹಣತೆ ಹಚ್ಚಿಟ್ಟ ಮೇಲೂ ಎದುರಿನ ಮುಖ ಕಾಣಲಿಲ್ಲವೆಂದಾದರೆ
ದೋಷ ಎಲ್ಲಿದೆಯೆಂದು ಈಗಲಾದರೂ ಹುಡುಕು"
ಇಲ್ಲಿನ ದಾರ್ಶನಿಕ ಸಾರ್ವಕಾಲಿಕಸತ್ಯ.
"ಬರಿಬರಿ ಎನುವ ನಿನ ಸೊಲ್ಲು ಕೇಳಿಸಿಕೊಂಡಾಗಿದೆ ಜೀವವೇ
ಒಮ್ಮೆ ಎದೆಗೊರಗು, ಮಣ್ಣ್ಣಿಗೆ ಬೀಜ ಬೀಳದೆ ಹೋದರೆ ಮೊಳಕೆ ಏಳದು"
ಈ ಸರಳ ಸ್ಪಷ್ಟೀಕರಣ
"ಬೇರು ಕಾಮದ ಕೂಂಡದಲ್ಲಿತ್ತು ನಾನು ಪ್ರೇಮದ ದೇಟಿಗೆ ನೀರುಣಿಸಿದೆ
ಹೌದು ಬೆಳಕಿಗಾಗಿ ಕತ್ತಲೆಯ ಕೌದಿ ಹೊದ್ದು ಮಲಗಲೇಬೇಕು"
ಅರಿವಾದ ಸತ್ಯವೊಂದನ್ನು ಹೋಲಿಕೆಯೊಂದರ ಮೂಲಕ ಹೇಳಿದ ಈ ಸುಂದರ ರೀತಿ
"ಲೋಕವೇ ನೀ ಏನೇ ಮುಂದಿಟ್ಟರೂ ಈ ಕಾಲು ಜಾರದು
ಅವಳು ಭೂಮಿ ಮೇಲಿದ್ದೇ ನಕ್ಷತ್ರ ನೋಡುವುದ ಕಲಿಸಿದಳು"
ಇಲ್ಲಿನ ದೃಢತೆ
"ಈ ಹೊತ್ತು ಹೃದಯಕ್ಕೇನೋ ಆಗಿದೆಯೆಂದು ಮುಟ್ಟಿಕೊಂಡೆ
ನಿನ್ನ ಹೃದಯ ತಾಕಿ ಮುಟ್ಟಿಕೊಂಡ ಬೆರಳು ಒದ್ದೆಯಾದವು"
ಒಂದಾದ ಪರಿಯನ್ನು ಹೇಳಿದ ಚಂದದ ರೀತಿ
"ಅವಳೆಡೆಗೆ ಕೈ ಚಾಚಿದಾಗ ರಾಧೆಯಾಗಿದ್ದಳು, ತಲೆ ಚಾಚಿದಾಗ ಯಶೋದೆಯಾದಳು"
ಈ ಕಾಣ್ಕೆ,
"ಕಣ್ಣೆ ಮಂಜಾಗಿರುವಾಗ ಕನ್ನಡಿಯದೇನು ತಪ್ಪು?"
"ನೀ ಕೇಳಿದೆ ಕಲ್ಲಿನ ಕತೆಯೇನು, ಹೇಗೆ ಹೇಳುವುದ ಕಲ್ಲಾದ ಮೇಲೆ ಕತೆ"
ಇಲ್ಲಿನ ಅಸಹಾಯಕತೆ
"ಕತ್ತಲಲಿ ದೀಪ ಹಚ್ಚಿಡುವ ದಡ್ಡತನವಷ್ಟೇ ಜತೆಯಲಿತ್ತು
ಬೆಳಕಿನ ಬಗ್ಗೆ ಉದ್ದುದ್ದ ವ್ಯಾಖ್ಯಾನ ಮಾಡುವುದು ನನಗೊಲಿಯಲಿಲ್ಲ"
ಇಲ್ಲಿ ಬಿಚ್ಚಿಟ್ಟ ತನ್ನ ಚಿಂತನೆಗಳ ವಾಸ್ತವಿಕ ತಳಹದಿ
"ನಿನ್ನ ಕಾಲುನೋವಿನ ಸುದ್ದಿ ಈಗಷ್ಟೇ ತಲುಪಿತು
ರಾತ್ರಿ ನನ್ನ ಕನಸಲ್ಲಿ ನೀ ಅಷ್ಟು ಓಡಾಡಬಾರದಿತ್ತು"
ಇಲ್ಲಿನ ಚಿತ್ರಣ ಮತ್ತೆ ಕಲ್ಪನೆ
"ಸುಮ್ಮನೆ ದೀಪ ಹಚ್ಚಿಟ್ಟೆ
ಕಾಣುವುದು ನಿಚ್ಚಳವಾದಂತೆ ಹುಡುಕುವ ಉತ್ಸಾಹವೇ ತಣ್ಣಗಾಯಿತು"
ಇಲ್ಲಿನ ಭ್ರಮನಿರಸನ
ಹೀಗೆ ಬರೆಯುತ್ತಾ ಹೋದರೆ ಅಲ್ಲಿರುವ ಐದುನೂರಕ್ಕೆ ಮಿಕ್ಕಿದವೆಲ್ಲವನ್ನೂ ನೆನೆಸುವಾ ಅನಿಸುತ್ತದೆ. ಆ ಎಲ್ಲಾ ಬರಹಗಳೂ ಒಂದಲ್ಲ ಒಂದು ರೀತಿಯಲ್ಲಿ ಮುದಗೊಳಿಸಿದವು, ಅಚ್ಚರಿಗೊಳಿಸಿದವು, ಕಣ್ತೆರೆಸಿದವು, ಕಣ್ತುಂಬಿಸಿದವು, ಎದೆ ಭಾರ ಮಾಡಿದವು, ಭ್ರಮೆಯ ಪೊರೆ ಕಳಚಿದವು, ಚುಚ್ಚಿದವು, ಆತ್ಮವಿಮರ್ಶೆಗೆ ಹಚ್ಚಿದವು, ವಿಧಿ ಎನುವದ್ದರ ಮೇಲೆ ಮುನಿಸಾಗುವಂತೆ ಮಾಡಿದವು, ಅವರ ಮನಸು ತುಂಬಿದ ಆ ಪ್ರೇಮಕ್ಕೆ ಅರ್ಹವಾಗಿ ಈಗಿಲ್ಲವಾದ ವ್ಯಕ್ತಿತ್ವದ ಬಗ್ಗೆ ಅತೀವ ಗೌರವ ಹುಟ್ಟಿಸುವವು ಮತ್ತೆಲ್ಲಕ್ಕಿಂತ ಹೆಚ್ಚಾಗಿ ಅವರನ್ನು ನಮಗೆ ತುಂಬಾ ಬೇಕಾದವರು ಅನಿಸುವಂತೆ ಮಾಡಿ ಅವರ ಎಲ್ಲಾ ಬರಹಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಇಣುಕುವ ಅವರೊಳಗನ್ನೆಲ್ಲ ಗಾಢವಾಗಿ ಆವರಿಸಿಕೊಂಡಿರುವ ದುಃಖವನ್ನು ಹೇಗಾದರೂ ಪರಿಹರಿಸಪ್ಪಾ ಅಂತ ಈ ಜಗನ್ನಿಯಾಮಕ ಶಕ್ತಿಯಲ್ಲಿ ಅರಕೆ ಮಾಡಿಕೊಳ್ಳುವಂತೆ ನನ್ನನ್ನು ಪ್ರಭಾವಿಸಿದವುಗಳು. ಇನ್ನೂ ಒಂದಿದೆ, ಗಗನಕುಸುಮಕ್ಕೆ ಕೈಚಾಚುವುದು ಅನಿಸಿದರೂ ಸರಿ, ನಾನೂ ಇದೇ ರೀತಿ ಇಷ್ಟೇ ಪ್ರಭಾವಶಾಲಿಯಾಗಿ ಬರೆಯಬೇಕೆಂಬ ಆಸೆಗೆ ಕಾರಣವಾದವು ಮತ್ತೆ ಸೀಮಿತ ಓದಿನ ನನ್ನ ಅತಿಸಣ್ಣ ಸಾಹಿತ್ಯ ಪ್ರಪಂಚದಲ್ಲಿನ ಪುಟ್ಟಪುಟ್ಟ ಪ್ರಯತ್ನಗಳಿಗೆ ಸ್ಫೂರ್ತಿಯಾದವುಗಳು.
"ಬರೆವ ಎರಡು ಸಾಲು ಕವಿತೆಯಾಗಿಸದೆ ಹೋದರೆ
ಕವಿಯೇ, ನೂರುಸಾಲು ಬರೆದರೂ ಕವಿತೆ ಹುಟ್ಟದು"
ಈ ಸಾಲುಗಳು ಅವರ ಈ ದ್ವಿಪದಿಗಳ ಬರವಣಿಗೆಯ ಸತ್ವದ ಗುಟ್ಟನ್ನು ಮತ್ತದರ ಸತ್ಯವನ್ನು ಸಾರಿ ಹೇಳುತ್ತವೆ.
ನೋವು ತನ್ನನ್ನು ತಾನು ಅಭಿವ್ಯಕ್ತಿಸಿಕೊಂಡಷ್ಟು ಪ್ರಭಾವಶಾಲಿಯಾಗಿ ಇನ್ನು ಯಾವ ಸಂವೇದನೆಯೂ ಮಾಡಿಕೊಳ್ಳಲಾಗದು- ಇದು ಈ ಬರಹಗಳನ್ನು ನೋಡಿದಾಗಲೆಲ್ಲಾ ನನಗನಿಸುವುದು. ಅವರ ನೋವು ನಮ್ಮನ್ನು ಆಕರ್ಷಿಸಿ, ಪ್ರಭಾವಿಸಿ, ಅವರ ಬರಹಗಳನ್ನು, ಅಲ್ಲಿನ ಸರಳಸಹಜ ಸತ್ಯವನ್ನು ನಾವು ಸಂಭ್ರಮಿಸುವಂತೆ ಮಾಡಿದೆ ಎಂಬುವುದು ನಿಜ. ಅವರಿನ್ನೂ ತುಂಬಾ ಬರೆಯಬೇಕೆಂಬುವ, ಅದನ್ನೋದಿ ನಾವು ಸಂಭ್ರಮಿಸುತ್ತಲೇ ಇರಬೇಕು ಅನ್ನುವ ಆಶಯವಿರುವುದೂ ನಿಜ. ಆದರೆ ಕಾಲ ಅವರ ನೋವಿಗೆ ತಕ್ಕ ಲೇಪ ಹಚ್ಚಲಿ, ಅವರ ಮನಸು, ಬದುಕು ತಂಪಾಗಿರಲಿ ಅನ್ನುವ ಹಾರೈಕೆ ಅದಕ್ಕಿಂತಲೂ ಹೆಚ್ಚು ಪ್ರಾಮಾಣಿಕವಾದದ್ದು ಎನ್ನುವುದೂ ಅಷ್ಟೇ ನಿಜ.
(ಬಸವರಾಜ ಸೂಳಿಭಾವಿಯವರ ಸಂಪರ್ಕವಿಲ್ಲದವರಿಗಾಗಿ: ಅವರ ಬ್ಲಾಗ್ ನ ಹೆಸರು ಲಡಾಯಿ ಪ್ರಕಾಶನ
ladaiprakashanabasu.blogspot.com
, ಅವರ ಈ ಮೂರು ಕವನ ಸಂಕಲನಗಳು ಕವಿ ಪ್ರಕಾಶನ ಕವಲಕ್ಕಿ- ಹೊನ್ನಾವರ ಇವರಿಂದ ಪ್ರಕಟಣೆಯಾಗಿವೆ- ೧) ದೀಪದ ಗಿಡ ೨) ಬಟ್ಟೆಯೆಂಬುದು ಬೆಂಕಿಯ ಹಾಗೆ ೩) ತೇವಕಾಯುವ ಬೀಜ .ಅಲ್ಲಿನ ವಿಳಾಸ: ಕವಿ ಪ್ರಕಾಶನ, ಜಲಜ ಜನರಲ್ ಅಂಡ್ ಮೆಟರ್ನಿಟಿ ಕ್ಲಿನಿಕ್, ಕವಲಕ್ಕಿ, ಹೊನ್ನಾವರ, ಉತ್ತರಕನ್ನಡ.
ಫೋನ್: ೯೪೮೦೨೧೧೩೨೦)

2 comments:

  1. ಹೌದು, ಬಸವರಾಜರು ಬರೇ ಎರಡು ಸಾಲುಗಳಲ್ಲಿ ಹೆಣೆಯುವ ಭಾವಗಳು ಹೃದಯದ ಆಳವನು ಹೊಕ್ಕು ಬಗೆದು ಅಲ್ಲೇ ಗೋರಿ ಕಟ್ಟುವವು.. ಎರಡು ಮಾತಿಲ್ಲ! ನೀವು ಅವನ್ನು ಬಣ್ಣಿಸಿದ ಪರಿಯೂ ಅಷ್ಟೇ ಚೆನ್ನಾಗಿತ್ತು ಅನು!

    ReplyDelete
  2. ಶ್ರೀ ಬಸವರಾಜ ಸೂಳಿಭಾವಿಯವರ "ದೀಪದ ಗಿಡ" ದ್ವಿಪದಿಗಳ ಪುಸ್ತಕದ ಬಗ್ಗೆ ಓದಿದ್ದೆ, ಈಗ ಅದನ್ನು ಕೊಂಡು ಓದಲೇ ಬೇಕಾದ ಪುಸ್ತಕ ಅನಿಸಿದೆ.

    ReplyDelete