Saturday, July 13, 2013

ನಡುನಡುವೆ..

ಹಾದಿಯ ಹದವರಿತು
ಜೊತೆಜೊತೆಗೆ ಹೆಜ್ಜೆ ಹಾಕಿದ
ಪಾದವೆರಡು ಜೊತೆ.
 
ಹೆಜ್ಜೆಗನುಗುಣವಾಗಿ
ತಾಕುತಾ ಮತ್ತೆ ತಾಕದುಳಿಯುತಾ
ಹಸ್ತಗಳೂ ಎರಡು ಜೊತೆ.
 
ನಡುವೇನೇನೋ ಬಂದು ಹೋದವು
ಕೆಲವು ತಾಕಲೆಳಸಿದವು
ಕೆಲವು ದೂರ ನೂಕಿದವು...
 
ಆ ಸಾವು ಮತ್ತು ತಾಜಮಹಲು
ಸಾವಿತ್ರಿಯೆದುರಿನ ಯಮನ ಸೋಲು
ಕುಂತಿಯೊಳಗಿನ ಅನಂತ ದಿಗಿಲು
ಸೀತೆಯ ಮಹಾನತೆಯ ಅಮಲು
ದ್ರೌಪದಿಯ ದ್ವೇಷದ ಘಮಲು
ಅಮ್ಮನ ಮುಸುಕಿನ ಮೂಕಅಳು
ಅಕ್ಕನ ಮುರುಟಿದ ಕವನ-ಗೀತೆಗಳು
ಹೀಗೇ ಅವಳ ಕೈ ಸೋಕಿದವುಗಳು...
 
ಹಂಚಿಕೊಂಡ ಅರ್ಜುನನ ಪಾಡು
ಹಂಚಿಹೋದ ಕೃಷ್ಣನ ಕೊಳಲ ಹಾಡು
ಬಿಟ್ಟು ನಡೆದ ಸಿದ್ಧಾರ್ಥನ ಜಾಡು
ಚೂರಾದ ರಾಮನೊಲವ ಗೂಡು
ಗೆಳೆಯಗೆರೆದ ಕರ್ಣನೆದೆಯ ಗುಟ್ಟು
ಹೂತುಹೋದ ಅಪ್ಪನೆದೆಯ ಮಾತು
ಮುರಿದ ನೆರೆಯ ವಿವಾಹದ ಚೌಕಟ್ಟು
ಹೀಗೇ ಅವನದನೂ ನೂಕಿದವುಗಳು..
 
ತಾಕಿದವನೂ ತಾಕದಂತಿಟ್ಟು
ಮತ್ತೆ ಬೆಸೆವ ಮಹದಾಸೆ ಕೊಟ್ಟು
ಮುನ್ನಡೆಸುವ ಚಿಂತನೆಗಳು
ಬಹುಕ್ರೂರವೆನಿಸಿದ ಗಳಿಗೆ
ಬುದ್ಧಿ ಬೇಕಿರಲಿಲ್ಲ,
ಮನಸಷ್ಟೇ ಸಾಕಿತ್ತನಿಸಿ
ಸುಮ್ಮನೇ ಅದರ ಹಿಂದಿದು
ಅಲೆವ ನಾಯಿಜೋಡಿ, ಬೆಕ್ಕುಜೋಡಿ
ಮನಃಪಟಲ ತುಂಬಿದವು..

1 comment:

  1. ತಾಕಿದವನೂ ತಾಕದಂತಿರುವ ಆ ಕೈಗಳು ವಾಸ್ತವಕ್ಕೆ ಹಿಡಿದ ಕನ್ನಡಿ.

    ಇಲ್ಲಿ ಬರುವ ಪೌರಾಣಿಕ ಮತ್ತು ಐತಿಹಾಸಿಕ ಪಾತ್ರಗಳು ನಿಮ್ಮ ಓದಿನ ಹರವನ್ನು ತೋರಿಸುತ್ತವೆ. ನಿಮ್ಮ ಬರಹಗಳು ಓದುವುದೇ ನಮಗೆ ವಿಶ್ವದರ್ಶನ.

    ReplyDelete