Monday, July 15, 2013

ಬೆಳಕು ಕತ್ತಲ ಕಸವೆನಿಸಿದಾಗ

ಕತ್ತಲ ಮೂಲೆಯೊಂದ ಗುಡಿಸುತ್ತಿದ್ದೆ
ಬೆಳಕೆಂದೂ ಇರದೆಡೆಯೆಂದು ಕಣ್ಣಗಲಿಸಿದ್ದೆ.
ಕಿಂಚಿತ್ ಕಸವಾದರೂ ಬಿಡದ ಹಠದಲಿದ್ದೆ.
 
ಪೊರಕೆಯೊತ್ತಿ ಅಡ್ಡಡ್ದ ಹಾಕಿ ಗುಡಿಸಿದರೂ,
ನೆಲೆ ಬಿಟ್ಟೇಳದೊಂದು ಬಿಳಿ ತುಣುಕು.
ಕಪ್ಪಷ್ಟೇ ಕತ್ತಲ ಪತ್ತಲಲಿರಬೇಕು,
ಬಿಳಿಯಲ್ಲಿ ಕಸಿವಿಸಿಯೇ ಕಿರಿದಾದರೂ...
 
ಬಾಗಿದ ಬೆನ್ನು, ಅರಳುಗಣ್ಣೆರಡೂ
ನೋಯುತಿವೆ, ನೆಟ್ಟಗಾದೆ.
ಕಸದಿಂದ ಕಣ್ಕಿತ್ತು,
ತಲೆಯೆತ್ತಿ ಊರ್ಧ್ವದೃಷ್ಟಿ ನೆಟ್ಟು
 
ಅರೇ.. ಇಲ್ಲೊಂದು ಬೆಳಕಿಂಡಿಯೂ ಇದೆ
ಈಗೇನು ಇದೆಯೆನುವುದು?
ಮುಂಚಿಂದಲೂ ಇದ್ದದ್ದೇ ಇರಬೇಕು,
ಕಪ್ಪು ಗಳಿಸಿದ ಗಮನ ಸೆಳೆಯದುಳಿದಿದೆ..
 
ನಸುಕಿನ ಶುಭ್ರಬಿಳಿಕಿರಣ ತೂರಿ
ಇಳಿದು ಕರಿನೆಲಕೆ ಕಿರುಗಾಲೂರಿ
ಪುಟ್ಟ ಬೆಳಕ ತುಣುಕಾಗಿದೆ.
ಗುಟ್ಟು ಬಯಲು, ಮನ ಹಗುರಾಗಿದೆ.
 
ಕಗ್ಗತ್ತಲ ಮೂಲೆಗಳಲೆಲ್ಲ
ಮರೆಮಾಡಿ ಬೆಳಕಡಗಿಸುವ
ಗೋಡೆ-ಮಾಡುಗಳ ಕರ್ತೃ
ಬೆಳಕಿಂಡಿಯನೂ ಇಟ್ಟಿರುತಾನೆ.
 
ಕಸಕು ರಸಕು ಅಂತರವರಿಯೆ,
ತಲೆಯೆತ್ತಿ ನೋಡಬೇಕು.
ಅದು ಬೆಳಕಿಂಡಿಯೆನಿಸಬೇಕು.
ತೂರಿಬಂದುದು ಬೆಳಕೆನಿಸಬೇಕು ಅಷ್ಟೇ.

2 comments:

  1. ನೀವು ಬರೆದಂತೆ, ನನ್ನ ಪಾಳೆಗೆ ಆ ಕರ್ತೃ ಯಾವತ್ತೂ ಬೆಳಕಿಂಡಿಯನೂ ಇಟ್ಟಿಲ್ಲ! ಅಸಲು ತೂರಿಬಂದುದು ಬೆಳಕೆ ಎನ್ನುವುದು ನನ್ನ ಪಾಲಿಗೆ ಅನುಮಾನವೇ!

    ReplyDelete
    Replies
    1. ಅದು ಕಾಣಿಸುವವರೆಗೆ ಎಲ್ಲರಿಗೂ ಹಾಗೇ ಅನಿಸುವುದು ಸರ್, ಈ ಬರಹದಲ್ಲಿ ನಿಮ್ ಹತ್ರ ಹಂಚಿಕೊಳ್ತಾ ಇರುವ ವ್ಯಕ್ತಿತ್ವಕ್ಕೂ ಹಾಗೇ ಅನಿಸಿತ್ತಲ್ಲವಾ?

      Delete