Wednesday, July 3, 2013

ಮುಗ್ಧತೆಯೆಂಬುದು... .

ಅಂಕಣವೊಂದರಲ್ಲಿ ಮನುಷ್ಯನ ಮುಗ್ಧತೆ ಮತ್ತದರ ಚೆಲುವಿನ ಬಗ್ಗೆ ಓದಿದೆ.

    ಮುಗ್ಧತೆ ಚೆಲುವಿನ ಕಿರೀಟದ ಗರಿ ಅನ್ನುವುದರಲ್ಲಿ ಎರಡು ಮಾತಿಲ್ಲ. ಕಣ್ಣಿಗಷ್ಟೇ ವೇದ್ಯವಾಗುವ ಹಂತದಲ್ಲಿ ಕೆಲವೊಂದು ಮುಖಗಳು ಕಾರಣವಿಲ್ಲದೇ ಚಂದ ಅನಿಸಿಬಿಡುತ್ತವೆ. ಅಲ್ಲಿ ಮುಗ್ಧತೆಯ ಭಾಗವಹಿಸುವಿಕೆ ಇದ್ದಿರಲೇಬೇಕಾಗಿಲ್ಲ. ಹಾಗೇ ಕೆಲವೊಂದು ಚಕ್ಕನೇ ಕಣ್ಸೆಳೆಯುವ ಮುಖಚರ್ಯೆಗಳಲ್ಲಿ ಎದ್ದುಕಾಣುವ ಮುಗ್ಧತೆಯೇ ಪ್ರಧಾನ ಆಕರ್ಷಣೆಯಾಗಿರುವುದೂ ಉಂಟು. ಇಲ್ಲಿ ಮುಗ್ಧತೆ ಎಂದರೆ ಏನು ಅನ್ನುವುದಕ್ಕೆ ನಾನು ತಿಳಿದುಕೊಂಡ ಉತ್ತರ- ನಿಷ್ಕಲ್ಮಶತೆ, ಮತ್ತದು ಕಾಲವುರುಳಿದರೂ ಹಾಗೆಯೇ ಉಳಿದುಕೊಳ್ಳಬಹುದಾದಾಗ ದೃಢ ಸ್ವಂತಿಕೆಯೆನಿಸಿಕೊಳ್ಳುತ್ತದೆ.
ಇದು ತನ್ನೊಳಗನ್ನು ತಾನು ನೇರ ಅಭಿವ್ಯಕ್ತಿಸುವ ಮುಖಭಾವದಲ್ಲಿ ಅತಿಹೆಚ್ಚು ಪ್ರಕಾಶವಾಗುತ್ತದೆ. ಇದರ ಹಿಂದೆ ಎದುರಿನವರದ್ದನ್ನ ನೇರ ಸ್ವೀಕರಿಸುವ ಮನೋಭಾವ, ಜೊತೆಗೆ ಸ್ವೀಕರಿಸಿದ್ದನ್ನ ತೂಕಕ್ಕೆ ಹಾಕಿ ಲೆಕ್ಕಾಚಾರಕ್ಕನುಗುಣವಾಗಿ ಅದರ ಗುಣಮಟ್ಟ ನಿರ್ಧರಿಸಿ, ಅದರೊಂದಿಗೆ ನಡೆದುಕೊಳ್ಳುವುದು ಗೊತ್ತಿಲ್ಲದ ಸಹಜತೆ ಇವೆರಡೂ ಕೆಲಸ ಮಾಡುತ್ತಿರುತ್ತವೆ. ಸುಮಾರಾಗಿ ಐದು ವರ್ಷದೊಳಗಿನ ಮಕ್ಕಳಲ್ಲಿ ಇದು ಸಹಜವಾಗಿ ಹಾಸುಹೊಕ್ಕಾಗಿ ಕಾಣಿಸುತ್ತದೆ. ಅದಕ್ಕೇ ಅವು ನಕ್ಕರೂ ಚಂದ, ಅತ್ತರೂ ಚಂದ, ಕಾಡಿದರೂ ಚಂದ...ಏನು ಮಾಡುತ್ತಿದ್ದರೂ ಅಲ್ಲೊಂದು ಸೆಳೆತವಿರುತ್ತದೆ . ಆ ಸೆಳೆತದ ಮೂಲವೇ ಆ ಎಲ್ಲ ಅವುಗಳ ಚಲನವಲನದ ಹಿಂದಿರುವ ಮುಗ್ಧತೆ. ಕತ್ತೆಯ ಮರಿಯೂ ಚಂದವೇ.. ಅನ್ನುವ ಮಾತಲ್ಲಿ ಹೇಳಲಾಗಿರುವುದು ಇದನ್ನೇ. ಎಲ್ಲಿಯವರೆಗೆ ಈ ಅಬೋಧತೆ ಮತ್ತು ಸಹಜತೆ ಎಂಬ ಗುಣವಿಶೇಷಗಳು ಮನಸ್ಸಿನಲ್ಲಿ ನೆಲೆಯಾಗಿರುತ್ತವೋ ಅಲ್ಲಿಯವರೆಗೆ ಮುಗ್ಧತೆ ಅಲ್ಲಿರುತ್ತದೆ ಮತ್ತದರ ಪ್ರತಿಫಲನ ಮುಖದಲ್ಲಿ, ನಡವಳಿಕೆಗಳಲ್ಲಿ ಎದ್ದುಕಾಣುತ್ತಿರುತ್ತದೆ. ಪ್ರಪಂಚಕ್ಕೆ ತೆರಕೊಳ್ಳುತ್ತಾ ಸಾಗಿದಂತೆ, ಪ್ರಪಂಚವನ್ನು ತಿಳಿದುಕೊಳ್ಳುತ್ತಾ ಸಾಗಿದಂತೆ ಮುಗ್ಧತೆಯಲ್ಲಿನ ಅಬೋಧತೆಯ ಅಂಶ ಕೊಂಚಕೊಂಚವೇ ಕಡಿಮೆಯಾಗುತ್ತಾ ಬರುತ್ತದೆ, ಅದು ಹಾಗಾಗಬೇಕು ಮತ್ತದು ಹಾಗಾಗುವುದು ತುಂಬಾ ಸಹಜ. ಅಂದರೆ ಅದರ ಅರ್ಥ ಮನುಷ್ಯ ಮುಗ್ಧತೆಯಲ್ಲಿ ಅಬೋಧತೆಯ ಅಂಶವನ್ನು ಪೂರ್ಣವಾಗಿ ಕಳೆದುಕೊಳ್ಳುತ್ತಾನೆ ಅನ್ನುವುದು ಸುಳ್ಳು. ಯಾಕೆಂದರೆ ಅತ್ಯಂತ ಹೆಚ್ಚು ತಿಳಿದುಕೊಳ್ಳಲೆತ್ನಿಸುವ ವ್ಯಕ್ತಿಯೊಬ್ಬನ ಅವಸ್ಥೆಯಲ್ಲೂ ಭೂಮಿಯ ಮೇಲಿನ ಸತ್ಯಗಳಲ್ಲಿ ಅಥವಾ ಸತ್ಯವಲ್ಲದವುಗಳಲ್ಲಿ ಒಂದು ಚೂರು ಅಂಶ ಮಾತ್ರವೇ ದಕ್ಕೀತು. ಹಾಗಾಗಿ ಉಳಿದವುಗಳ ಬಗ್ಗೆ ಅಬೋಧತೆ ಉಳಿದುಕೊಂಡಿರುತ್ತದೆಂಬುದು ಸುಳ್ಳಲ್ಲ. ಆ ಹಂತ ಅವನಿಗೆ ಅಲ್ಲಿದ್ದರೆ, ಇನ್ನೊಬ್ಬನಿಗೆ ಇನ್ನೂ ಸ್ವಲ್ಪ ಮುಂದಿರಬಹುದು ಅಥವಾ ಹಿಂದಿರಬಹುದು. ಅಥವಾ ಅವನು ಕೆಲವಿಷಗಳನ್ನರಿವಲ್ಲಿ ಮುಂದಿರಬಹುದು, ಇವನು ಅದಲ್ಲದ ಇನ್ನೊಂದನ್ನರಿಯುವಲ್ಲಿ. ಅವನರಿತ ವಿಷಯದ ಕ್ಷೇತ್ರದಲ್ಲಿ ಇವನು ಅಬೋಧತೆಯನ್ನೇ ಹೊಂದಿರುತ್ತಾನೆ. ನಮ್ಮಲ್ಲಿನ ಕನ್ನಡದ ಪ್ರಕಾಂಡ ಪಂಡಿತರು ಗ್ರೀಕ್ ಭಾಷೆಯ ಶಬ್ಧವೊಂದನ್ನೂ ತಿಳಿದಿರದವರಾಗಿದ್ದಲ್ಲಿ, ಗ್ರೀಕ ಪಂಡಿತನೆದುರು ಕಣ್ಕಣ್ ಬಿಟ್ಟು ಕೂರುವ ಸಣ್ಣ ಮಗುವಿನ ಅಬೋಧತೆಯನ್ನೇ ಪ್ರದರ್ಶಿಸುವುದು ಸಹಜ ತಾನೇ. ಅಲ್ಲಿ ಅವರು ಏನೂ ಗೊತ್ತಿಲ್ಲದ ಹಂತದ ಮುಗ್ಧತೆಯಲ್ಲಿರುತ್ತಾರೆ. ಅವನು ಏನು ಹೇಳಿದರೂ ಅದೇ ನಿಜವೆಂದು ಒಪ್ಪುವ ಮತ್ತೆ ತಾನೊಪ್ಪಿದ್ದನ್ನು ಅಪ್ರಯತ್ನವಾಗಿ ಮುಖದಲ್ಲಿ ಹಾವಭಾವಗಳಲ್ಲಿ ತೋರಿಸುವ ನೇರನಡವಳಿಕೆ ಅವರಲ್ಲಿ ಮನೆ ಮಾಡಿರುತ್ತದೆ. ಇದೂ ಆ ಸಂದರ್ಭದಲ್ಲಿನ, ಆ ಹಂತದಲ್ಲಿನ, ಆ ಕ್ಷಣದಲ್ಲಿನ ಅವರ ಮುಗ್ಧತೆಯಲ್ಲವೇ? ಆದರೆ ಸಹಜತೆ ಯಾವ ತೆರಕೊಳ್ಳುವಿಕೆ, ತಿಳಿದುಕೊಳ್ಳುವಿಕೆಗಳಿಂದಲೂ ಪ್ರಭಾವಿತವಾಗಲೇಬೇಕೆಂಬುದೇನೂ ಇಲ್ಲ.
     ಬುದ್ಧಿವಂತಿಕೆಯನ್ನೂ ಮುಗ್ಧತೆಯನ್ನೂ ಪರಸ್ಪರ ಬಾಧಕಗಳೆಂದು ಪರಿಗಣಿಸುವ ಅಗತ್ಯವಿಲ್ಲವೆಂದೇ ನನ್ನ ಭಾವನೆ. ಮುಗ್ಧನೊಬ್ಬ ಬುದ್ಧಿವಂತನಾಗಿರಬಾರದು ಅಥವಾ ಬುದ್ಧಿವಂತ ಮುಗ್ಧನಾಗಿರಬಾರದೆಂಬುದಿದೆಯೇ? ಮಹಾತ್ಮಾಗಾಂಧೀಜಿಯವರು ಇಡೀ ಭಾರತದೇಶವನ್ನು ತನ್ನ ಅಹಿಂಸಾವಾದದ ಪ್ರಭಾವದೊಳಗೆ ತೆಗೆದುಕೊಂಡು ಸ್ವಾತಂತ್ರ್ಯ ಗಳಿಕೆಯಲ್ಲಿ ತನ್ನ ಅಹಿಂಸಾವಾದವೊಂದನ್ನೇ ಪ್ರತಿಪಾದಿಸುವ ಮೂಲಕ ಬ್ರಿಟಿಷರನ್ನೂ ಹಿಮ್ಮೆಟ್ಟಿಸುವುದರಲ್ಲಿ ಭಾಗಿಯಾಗಲಿಲ್ಲವೇ? ಇದೆಲ್ಲದಕ್ಕೂ ಬುಧ್ಧಿವಂತಿಕೆಯ ಅಗತ್ಯವೇ ಇಲ್ಲವೇ? ಅವರ ಮುಖದಲ್ಲಿ ಮುಗ್ಧತೆಯ ನಿಷ್ಕಲ್ಮಶತೆ ಕಾಣುವುದಿಲ್ಲವೇ? ನನಗಂತೂ ಕಾಣುತ್ತದೆ.

   ಸಹಜತೆ ಮನಸಿನಲ್ಲಿದ್ದರೆ ಮತ್ತದು ಕಲುಷಿತವಾಗಿಲ್ಲದಿದ್ದರೆ ಅದು ಮುಖ, ಹಾವಭಾವಗಳಲ್ಲಿ ಸ್ಪಷ್ಟವಾಗಿ ಮತ್ತು ಸತ್ಯಪೂರ್ವಕವಾಗಿ ಕಂಡುಬರುತ್ತದೆ. ತನ್ನಲ್ಲಿಲ್ಲದ ಮುಗ್ಧತೆಯ ಚರ್ಯೆಯನ್ನು ಮುಖದಲ್ಲಿ ಪ್ರಯತ್ನಪೂರ್ವಕವಾಗಿ ಪ್ರದರ್ಶನ ಮಾಡಿದರೆ ಎದುರಿದ್ದ ವ್ಯಕ್ತಿ ಸ್ವಲ್ಪವೇ ಸ್ವಲ್ಪ ಪ್ರಬುದ್ಧನಾಗಿದ್ದರೂ ಸಾಕು, ಅದರ ಜೊಳ್ಳುತನ ಅವನಿಗೆ ವೇದ್ಯವಾಗದೇ ಇರುವುದುಂಟೇ? ಜೊಳ್ಳುತನವಿರುವುದು ಮುಗ್ಧತೆಯ ಚಂದವನ್ನು ತನಗೆ ಪ್ರಯತ್ನಪೂರ್ವಕವಾಗಿ ಆರೋಪಿಸಲು ಪ್ರಯತ್ನ ಪಡುವ ವ್ಯಕ್ತಿಯ ಜಾಯಮಾನದಲ್ಲೇ ಹೊರತು ಮುಗ್ಧತೆಯಲ್ಲಲ್ಲ. ಎದುರಿಗಿರುವವರು ಮುಗ್ಧತೆ ಮತ್ತು ನಾಟಕೀಯತೆಯನ್ನು ಬೇರ್ಪಡಿಸುವ ಸೂಕ್ಷ್ಮಮನಸ್ಕತೆ ಹೊಂದಿರಬೇಕು ಅಷ್ಟೇ.

  ಇನ್ನು ಹೆಣ್ಣುಮಕ್ಕಳು ಮುಗ್ಧರಾಗಿದ್ದಷ್ಟೂ ಅವರ ಸ್ವಾತಂತ್ರ್ಯಕ್ಕೆ ಸುರಕ್ಷಿತತೆಗೆ ಧಕ್ಕೆ ಎಂಬ ಭಾವನೆ ಅವರಲ್ಲೂ ಮತ್ತು ಉಳಿದವರಲ್ಲೂ ಇದೆ. ಜಗತ್ತಿನ ಆಗುಹೋಗುಗಳ ಬಗ್ಗೆ ತಿಳಿದುಕೊಂಡು ಬರಲಿರುವ ಸಂದರ್ಭವನ್ನೆದುರಿಸಲು ತಮ್ಮನ್ನು ತಕ್ಕವರನ್ನಾಗಿಸುವ ಪ್ರಕ್ರಿಯೆಯಲ್ಲಿ ಮುಗ್ಧತೆ ನಾಶವಾಗುತ್ತದೆ, ಆಗಬೇಕು ಅನ್ನುವ ಭಾವನೆಯಿದೆ. ಆದರೆ ಜಗತ್ಪ್ರಸಿದ್ಧ ಮದರ್ ತೆರೇಸಾರವರ ಮುಖದಲ್ಲಿ ಸ್ಪಷ್ಟ ವ್ಯಕ್ತವಾಗುತ್ತಿದ್ದ ಮಗುವಿನಂಥ ಮುಖಭಾವವನ್ನು ಯಾರೂ ಅಲ್ಲಗಳೆಯಲಾರರು. ಅವರು ಹೆಣ್ಣಾಗಿದ್ದುಕೊಂಡು ಆ ಮುಗ್ಧತೆಯ ಮುಕ್ತತೆಯನ್ನು ಕಳೆದುಕೊಳ್ಳದೆಯೇ ಪ್ರಪಂಚದಲ್ಲಿ ಸುರುವಿಂದ ಕೊನೆಯವರೆಗೆ ತನಗೆ ಬೇಕಾದಹಾಗೆ ಅಂದರೆ ತಾನಂದುಕೊಂದದ್ದನ್ನು ಮಾಡಿ, ತನ್ನ ಅರ್ಥದಲ್ಲಿ ಯಾವುದು ಸಾಧನೆಯೋ ಅದನ್ನು ಸಾಧಿಸಿ ತೋರಿಸಿ ತುಂಬು ಬಾಳನ್ನು ಬಾಳಲಿಲ್ಲವೇ? ವಯಸ್ಸು ಮತ್ತು ಅರಿವು ಎರಡರಲ್ಲೂ ವಯೋಮಾನಕ್ಕೆ ಬಂದಾಗಲೂ ನಿಷ್ಕಲ್ಮಶ ಸಹಜತೆ ಮತ್ತು ಮುಗ್ಧತೆ ಅಸಾಧ್ಯ ಅಥವಾ ಅಸಾಮಾನ್ಯವಾದದ್ದು ಖಂಡಿತಾ ಅಲ್ಲ. ಹೊರಗಿನ ಪ್ರಪಂಚದಲ್ಲಿ ತಮ್ಮನ್ನು ತಾವು ನಿರೂಪಿಸಲುಬೇಕಾಗಿ ಮುಗ್ಧತೆಯ ಹಂತವನ್ನು ದಾಟಿದಾಗಲಷ್ಟೇ ಎದುರಾಗುವ ಬುಧ್ಧಿವಂತಿಕೆಯ ಪರಿಧಿಯೊಳಗಡೆ ಹೆಜ್ಜೆಯಿಕ್ಕುವುದು ಅತೀ ಅಗತ್ಯ ಎಂಬುವ ವಾದವೂ ಇದೆ. ಯಾರೇ ಆಗಲಿ ಸಬಲತೆ, ಸ್ವಾತಂತ್ರ್ಯಗಳೆಂದರೆ ತಮಗೆ ಸರಿ ಅನ್ನಿಸುವ ಹಾಗೆ ಸುರಕ್ಷಿತವಾಗಿ ಬದುಕಲು ಸಾಧ್ಯವಾಗುವುದೇ ಹೊರತು ಜಗತ್ತಿನ ಆಶಯ, ಅಪೇಕ್ಷೆ ಅಥವಾ ತೃಪ್ತಿಗಳಿಗನುಗುಣವಾಗಿ ನಮ್ಮನ್ನು ನಾವು ನಿರೂಪಿಸುವುದು ಖಂಡಿತಾ ಅಲ್ಲ. ಅಂದರೆ ಆ ಮೂಲಕ ಸಮಾಜದ ಕುಟುಂಬವೆಂಬ ವ್ಯವಸ್ಥೆಯ ಏರುಪೇರಿಗೆ ಕಾರಣವಾಗುವ ಪ್ರಯತ್ನವಾಗಲಿ, ಇತರರಿಗೆ ಸವಾಲೆಸೆದು ನಮ್ಮನ್ನು ಅವರಿಗಿಂತ ಮೇಲೆಂದು ತೋರಲು ಹರಸಾಹಸ ಪಟ್ಟು ಉಳಿದೆಲ್ಲ ಹಿತಾಸಕ್ತಿಗಳನ್ನೂ ಉಪೇಕ್ಷಿಸಿ ಸಾಧಿಸಿ ತೋರಿಸುವುದಾಗಲಿ ಖಂಡಿತಾ ಅಲ್ಲ. ಸ್ತ್ರೀಯೇ ಇರಲಿ, ಪುರುಷನೇ ಇರಲಿ ನಮ್ಮ ಸಾಧನೆಗೆ ಇತರರ ಸಾಧನೆಗಳು ಅಳತೆಗೋಲಾಗಲಿ, ಮಿತಿಯಾಗಲಿ ಆಗಬಾರದು. ನಾವು ತಲುಪಬೇಕಾದ ಎತ್ತರ ನಮ್ಮದೇ ದೃಷ್ಟಿ ಹಾಯುವಷ್ಟು ದೂರದಲ್ಲಿನ ಒಂದು ನೆಲೆಯಲ್ಲಿರಬೇಕು. ಅಲ್ಲಿ ತಲುಪಿದ ಗಳಿಗೆ ಮತ್ತೆ ನಮ್ಮದೇ ಕಣ್ಣು ನಿಲುಕುವೆತ್ತರದಲ್ಲಿನ್ನೊಂದು ಗುರಿ ನಿರ್ಧರಿತವಾಗಬೇಕೇ ಹೊರತು ಇನ್ನೊಬ್ಬರ ಕಣ್ಣಳತೆಯ ತುದಿಯದಲ್ಲ. ಇನ್ನು ಸುರಕ್ಷಿತತೆಯ ಬಗ್ಗೆ ಹೇಳುವುದಾದರೆ ಸುರಕ್ಷಿತವಾಗಿರುವುದಕ್ಕೆ ದೊಡ್ದ ಘನವಾದ ಬುದ್ಧಿವಂತಿಕೆಯೇ ಬೇಕಿಲ್ಲ. ಅಪಾಯದ ಸುಳಿವನ್ನು ಗುರುತಿಸುವ, ಸಾಧ್ಯವಾದಲ್ಲಿ ತಪ್ಪಿಸುವ, ತಪ್ಪಿಸುವುದು ಸಾಧ್ಯವಾಗದಿದ್ದಲ್ಲಿ ನಿಭಾಯಿಸಿ ಪಾರಾಗುವ ಸಣ್ಣ ಮಟ್ಟಿನ ಸೂಕ್ಷ್ಮಸಂವೇದಿ ಚಿಂತನೆ ಮತ್ತು ಸಾಧಿಸುವ ಛಲವಿದ್ದರೆ ಸಾಕು. ಇದು ಮುಗ್ಧತೆಯಿದ್ದಲ್ಲಿ ಇರಲಾರದು ಎಂಬ ಸಂಶಯ ಹುರುಳಿಲ್ಲದ್ದು. ಯಾಕೆಂದರೆ ಆಗಷ್ಟೇ ನಡೆಯಲು ಕಲಿತ ಪುಟಾಣಿಯನ್ನೇ ನೋಡಿ, ಮೆಟ್ಟಿಲೊಂದು ಎದುರಾದರೆ ಎಷ್ಟು ಜಾಗರೂಕತೆಯಿಂದ ಅದನ್ನೇರುವ ಕೆಲಸ ನಿಭಾಯಿಸಲು ಯತ್ನಿಸುತ್ತದೆ. ಮೊದಲಬಾರಿಯೇ ಸಫಲವಾಗದೇ ಇರಬಹುದು. ಬಿದ್ದೀತು, ಏಟಾದೀತು, ಆದರೆ ಅದರ ಪ್ರಯತ್ನದಲ್ಲಿ ಎಷ್ಟು ಮುತುವರ್ಜಿಯಿರುತ್ತದೆ, ತನ್ನನ್ನು ತಾನು ಬೀಳದಂತೆ ಮೆಟ್ಟಿಲೇರುವುದರಲ್ಲಿ ಜಾಗರೂಕವಾಗಿ ಬಿಡದೆ ಪ್ರಯತ್ನಿಸಿ ಸಫಲವಾಗುವವರೆಗೂ ನಿಭಾಯಿಸುತ್ತದೆ ಅನ್ನುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಅದರ ಆ ಸಾಧನೆಗೆ ಅದರ ಮುಗ್ಧತೆ ಬಾಧಕವಾಗಲಿಲ್ಲ ಅಲ್ಲವೇ?

   ಮುಗ್ಧತೆಯೆನ್ನುವುದನ್ನು ಪೆದ್ದುತನವೆಂದೋ ಅಥವಾ ಒಂದು ಮಿತಿಯೆಂದೋ ಅಥವಾ ದೌರ್ಬಲ್ಯವೆಂದೋ ಅಂದುಕೊಳ್ಳಬೇಕಾಗಿಲ್ಲ. ಬದಲಿಗೆ ಅದು ಜೀವಿಗೆ ಸಿಗಬಹುದಾದ ಅತ್ಯುತ್ತಮ ಕೊಡುಗೆಗಳಲ್ಲೊಂದು ಮತ್ತು ಜೀವನದ ದಾರಿಯಲ್ಲಿ ಎಷ್ಟು ದೂರದವರೆಗೆ ವ್ಯಕ್ತಿಯ ಜೊತೆಯಿರುತ್ತದೋ ಅಷ್ಟರಮಟ್ಟಿಗೆ ಅದು ಆ ವ್ಯಕ್ತಿತ್ವದ ಗಟ್ಟಿತನಕ್ಕೆ ಒಂದು ಪುರಾವೆಯೆಂದು ಭಾವಿಸುವುದರಲ್ಲೇನೂ ತೊಂದರೆಯಿಲ್ಲ...

No comments:

Post a Comment