Sunday, June 26, 2016

ಕಾಣಬೇಕು ಅಂದ.
ಮುಚ್ಚಿದ ಕಣ್ಣಡಿಯೀಗ
ಎಂದೂ ಮರೆಯಾಗದಾಗಸವಾಗುವ ಕನಸು..

ಮುಟ್ಟಬೇಕು ಅಂದ.
ಕಣ್ಣರಳಿವೆ ಇಷ್ಟಗಲ;
ಅವನೆಲ್ಲ ಹಾದಿಯೂ ಹೊದೆವ ನೆಲವಾಗುವ ಕನಸು..

ತಟ್ಟಬೇಕು ಅಂದ.
ಹರಳುಗಟ್ಟಿದೆ ಕಣ್ಣ ದಾಹ;
ಬಾಳಹರಿವಿನಡಿ ತೋಯ್ದು ನಸೆಗಲ್ಲಾಗುವ ಕನಸು...

ಆವರಿಸಬೇಕು ಅಂದ.
ಕಣ್ರೆಪ್ಪೆ ಗಾಳಿಗಾಡುತಿವೆ;
ಉಸಿರ ತೆಕ್ಕೆಯ ಹುಚ್ಚು ಜೋಕಾಲಿಯಾಗುವ ಕನಸು..

ಒಳಗಿಳಿಯಬೇಕು ಅಂದ.
ಕಣ್ಣಸುಳಿಯೀಗ ಧ್ಯಾನಸ್ಥ;
ಅವಗವನ ತೋರುವ ಏಕಾಂತಕ್ಷಣಪುಂಜವಾಗುವ ಕನಸು..

ಅಂಟಿಕೊಳಬೇಕು ಅಂದ.
ಕಣ್ಣೊಳಗೊಂದು ಕ್ಷಿತಿಜ;
ಅಂಗೈ ನಟ್ಟನಡುವೊಂದು ಹುಟ್ಟುಮಚ್ಚೆಯಾಗುವ ಕನಸು..

ಮರೆತುಬಿಡಬೇಕು ಅಂದ;
ಸುಳ್ಳುಸುಳ್ಳೇ ನಕ್ಕಿವೆ ಕಣ್ಣು;
ಕಾಣುವಾಸೆಗಷ್ಟೇ ಪ್ರಕಟ, ಬೆನ್ನಿಗಂಟುವ ನೆರಳಾಗುವ ಕನಸು..

ಕಳಚಿಕೊಳಬೇಕು ಅಂದ.
ಖಾಲಿಯಾಗುತಿವೆ ಕಣ್ಣಬಣ್ಣ;
ಮಿಸುಕಾಡಿದಾಗ ಅಲ್ಲೊಳಗೇನೋ, ಬೆರಳಡಿ ಹಾಳೆಯಾಗುವ ಕನಸು..

ಬಿಟ್ಟುಹೋಗಬೇಕು ಅಂದ.
ಆಗದೆಯೂ ತೆರೆಕೊಂಡ ಕಣ್ಣಕದ;
ನೂರೊಂದರಲಿ ಅವನದೊಂದಾದರೂ ಹಾಡ ಹೊಗುವ ಕನಸು..

ಬಿಡದೆ ಸಾಗಿವೆ ಕನಸು
ನಿದ್ದೆ ಹಾದಿಯ ತುದಿಗೆ ಉರಿದೊಂದಿ ಬೆಳಕು!
ದೀಪದಡಿಯ ಬೂದಿಯಿಂದೆದ್ದ
ಅಮೃತಹಕ್ಕಿ ರೆಕ್ಕೆ ಕಾವಿಗೆ
ಕೋಶ ಕಳಚಿ, ಕನಸ ಪತಂಗ ರೆಕ್ಕೆಬಿಚ್ಚಿ,
ಮತ್ತೆ ಹಾರಿವೆ ದೀಪದೆಡೆಗೆ!



No comments:

Post a Comment