Friday, June 3, 2016


ಬರಲೇನು ಅನುತಾ
ಬರುವ ಆರಡಿಯೆತ್ತರದ ನನಸಲ್ಲ;
ಅಲ್ಲೆಲ್ಲಿಂದಲೋ ನಿದ್ದೆಗೆ ಕನಸ ಕಚಗುಳಿಯಿಟ್ಟು
ಝುಮ್ಮೆನಿಸುವ ತುದಿಬೆರಳ ಸ್ಪರ್ಶ ಅವನು!

ತುಂಬಿ ಸಿಹಿ ತರುತಾ
ಕಹಿಯೆಲ್ಲ ಮರೆ ಮಾಡುವ ತುತ್ತಲ್ಲ;
ಅಲ್ಲೆಲ್ಲೋ ನಗೆ ಮೊಗ್ಗಿನಡಿಯಿಂದ ಸಾರ ಹಾರಿಸಿತಂದು
ಒದ್ದೆ ಒಡಲಿಗೆ ಬೇರಿಳಿಸುವ ಸತ್ವ ಅವನು!

ಅಬ್ಬರದ ಕಡಲಡಿಯಿರುವ
ಬಲು ಅಪೂರ್ಪ ರತ್ನಹವಳವಲ್ಲ;
ಈ ಕತ್ತಿನಿಳಿಜಾರಲಿ ಹರಿವ ಕಣ್ಣಹನಿ ಕುಡಿದು
ಸ್ವಾತಿಮುತ್ತಾಗಿಸುವ ಸಿಂಪಿಯ ಮೌನ ಅವನು!

ಹೋಗುಹೋಗೋ ಕಾಲವೇ,
ಮುಳ್ಳು ನಡೆಸುವ ನಡೆ ನೀನು;
ಹೆಚ್ಚೇನು ಬಯಸಲಾದೀತು?
ಬಾಯ್ದೆರೆದಲ್ಲೆಲ್ಲ ತೊಟ್ಟಿಕ್ಕೀತೆ ಜೇನು?

ಅವನೆಂಬುದ ಭಟ್ಟಿಯಿಳಿಸಿಕೊಂಡು
ಮುಚ್ಚಿಟ್ಟ ಅಟ್ಟದ ಮೇಲಿನೊಂದು ಪಾತ್ರೆಯಲಿ
ಕೆನೆಹಾಲು ದಿನವೂ ಮೊಸರಾಗುತದೆ..
ಹೆಪ್ಪಿಟ್ಟ ನೆನಪು ಸದಾ ಸವಿ ಮೆತ್ತುತವೆ.

ಕಾಯುವರಮನೆಗಾಗಲೇ ಕೆಸರುಕಲ್ಲಿಟ್ಟಾಗಿದೆ,
ಪ್ರತಿ ನಾಳೆಯೂ ಶುಭವೆ ನನ್ನ ಮನೆಯೊಕ್ಕಲಿಗೆ..
ಕಿಂಡಿಯೆದುರಿಡುವೆ ಅವನ ಹೆಸರಿನೊಂದು ಗಾಳಿಗಂಟೆ
ಅಲೆ ಸಣ್ಣದೊಂದೂ ಸಾಕು ಪುಳಕವೆಬ್ಬಿಸಿ ಹರಡಲಿಕೆ!

No comments:

Post a Comment