Thursday, June 2, 2016

ನೀರ ನೈದಿಲೆ ಆಕಾಶಮಲ್ಲಿಗೆಗನುತಾಳೆ...

ತೋಳ್ಚಾಚಿ ಕರೆದೊಂದು ದಿನ ಆಗಸ
ಕಾರ್ಮೋಡಕೆ ಆತ್ಮಸಾಕ್ಷಾತ್ಕಾರ!
ಸೋನೆ ಹನಿ ಮೀಸಿದೊಂದು ದಿನ ಎಳೆಬಿಸಿಲ
ಹಸಿರಕಣ್ಣಲಿ ಮಳೆಬಿಲ್ಲ ವಯ್ಯಾರ!
ಉಕ್ಕೇರಿದಾಗೊಮ್ಮೆ ಮುಚ್ಚಿಟ್ಟ ಉದ್ವೇಗ
ಮೈಮುರಿದು ನಸುನಕ್ಕೀತು ಬರ!
ಬಿಚ್ಚಿ ಸುರಿದಾಗಲೊಮ್ಮೆ ಎದೆಯಾವೇಗ
ಮಣ್ಣಿನೆದೆ ಪರಿಮಳಕಾಗ ಎಚ್ಚರ!
ಜಾಜಿಚಪ್ಪರದಲಿ ಎಳೆಬಸಿರ ಪುಳಕ
ಕಂಪಿನಲೆಯಲಿ ಗಾಳಿಗೆ ಸ್ವಯಂಸಾಕಾರ!
ಅಚ್ಚರಿಯೇಕೇ?!
ಇರುಳನೂ ಹಾದಿಯಾಗಿಸುವ ಅದ್ಭುತವೇ,
ಕೇಳು ಕತ್ತಲಿನೊಂದು ಹೊಳೆಹೊಳೆವ ಕಣ್ಣೇ,
ಪ್ರೀತಿಯೂರಿನೊಂದು ಅದ್ಭುತ, ಓ ಹೆಣ್ಣೇ,
ವಸಂತನ ಹಿಂದೆ ತಾನೇ ಚಿಗುರು ತುತ್ತೂರಿಯೊಂದು
ಕೋಗಿಲೆಯೆದೆಗೆ ಜೀವ ತುಂಬುವುದು?
ಪಕ್ಕಾ ಸ್ವಯಂಭುವೊಂದು ಮೋಹಕೆ ತಾನೇ
ಸುಮ್ಮಸುಮ್ಮನೆ ನರನಾಡಿಯವನನೇ ಮಿಡಿವುದು?
ಎಲೆ ನಭದ ಮಡಿಲ ಮುದ್ದು ತಾರೆಯೇ,
ಸಿಕ್ಕಿದಾಗ ಹೇಗೋ ಬೆಳಕತುಣುಕೊಂದು
ಫಳ್ಳನೆ ನಗದೆ ಇದೇನು ವರಸೆಯೇ?
ಯಾರಂದವರು ಚಂದ್ರನೆಂದರೆ
ಲೋಕಕೊಬ್ಬನೇ ಎಂದು?!
ನೋಡು,
ನಿನ್ನೂರಿನಾಗಸದ ಬೆಳ್ಳಿತುಂಡೇ ಬೇರೆ,
ನನ್ನೂರ ಸೂರ ಬೆಳಕಿಂಡಿಯೇ ಬೇರೆ..
ಅಲ್ಲವ ನಿನ್ನ ಕಣ್ಮಣಿ, ಇಲ್ಲಿ ನಾನಿವನದು!


No comments:

Post a Comment