Friday, January 4, 2013

ಏಕೆ ಮತ್ತು ಹೇಗೆ???

------------------

ಬಾಯಲ್ಲಿ ಜರಡಿಯಿರಲಿ ತಮ್ಮಾ...


ಈ ನೆಲದಿ ನಾವು ನಿನ್ನಣ್ಣಂದಿರು,

ಕಣ್ತೆರೆದು, ತೆರೆಸಿದ್ದು ನಮ್ಮಜ್ಜ

ನೋಡಬಂದು ತಣಿದದ್ದು ನಿನ್ನಜ್ಜ

ನಮ್ಮ ಹೆತ್ತವಳು, ನಿಮ್ಮ ಸಾಕಿದಳು.


ಅಭಿವಂದನೆಗೆಂದು ಚಾಚಿದ ಕೈ,

ಬೆರಳೆಡೆಯಲಿ ತೂರಿಬಂದ ನಿನಗೆ

ಅಂಗೈಗೆರೆ ಕೊರೆದು, ತಿದ್ದಿತೀಡುವ

ಕನಸೀಗ ಏಕೆ ಮತ್ತು ಹೇಗೆ??


ಎಸರಿಗಿತ್ತು ತಿನಿಸಿ ಬೆಳೆಸಿದ ನಗುಮೊಗ,

ಅದರ ಬಿಂಬದೊಂದು ಬಿಂದು ನಿನಗೆ

ಮುಗಿಬಿದ್ದು ಮುಖಮೂತಿ ತಿರುಚುವ

ಆಸೆಯೀಗ ಏಕೆ ಮತ್ತು ಹೇಗೆ??


ಅಡಿನಡೆಸಿ, ಮುಡಿಸವರಿ, ನೆಲೆಯಿತ್ತೆದೆ,

ಆ ನೆಲದೊಂದು ಮಣ್ಣಕಣ ನಿನಗೆ,

ಅದಬಗಿದು ಅಧಿಪತ್ಯ ಸಾಧಿಸುವ

ತೆವಲೀಗ ಏಕೆ ಮತ್ತು ಹೇಗೆ??


ಬಿಗಿಹಿಡಿದ ಅಭಿವ್ಯಕ್ತಿ ಮುತ್ತಹಾರ,

ಸಡಿಲಾದರದೆ ನೋಡು ಮೃತ್ಯುದ್ವಾರ..

ನಿನ್ನ, ನನ್ನವರು ನಮ್ಮ ನೋಡದವರು

ನೋಯ್ವರು, ಸಾಯ್ವರು ನಿನ್ನ ಅಜಾಗ್ರತೆಗೆ.


ವಾಕ್ಸ್ವಾತಂತ್ರ್ಯ ಆತ್ಮರಕ್ಷಣೆಗೆ,

ರಕ್ತಪಾತಕಲ್ಲ, ತಡೆತಡೆದು ನಡೆ, ನುಡಿ.

ಗಾಯವಿರದೆಡೆ ರಕ್ತದ ಹರಿವಿಗೆ

ಋಣಸಂದಾಯ ಸುಲಭವಲ್ಲ, ತಿಳಿ.








ಸಂತೆ


-----------------

ಸಂತೆ ನೆರೆದಿದೆ ಜಗದಗಲ,

ಅಲ್ಲಿದ್ದಿಲ್ಲಿದ್ದಲ್ಲ, ಅದಕೆಲ್ಲೆಯಿಲ್ಲ.

ಬೆಲೆ, ವೇಳೆ ನಿರ್ದಿಷ್ಟವಲ್ಲ,

ತೆರೆದಾಗಿದೆ, ಮುಚ್ಚ್ಚುವುದಿಲ್ಲ.



ಹೆಸರಿದೆ, ಅನುಭವಸಂತೆ....

ಹೊರಗಿದ್ದಲ್ಲದೆ ಒಳಗಣ್ಣಿಗೂ ಸಲುವ

ರಾಶಿರಾಶಿ ಸರಕಿದೆ,

ಎಲ್ಲೋ ಒಮ್ಮೊಮ್ಮೆ ಆಯ್ಕೆಯೂ ಇದೆ.



ಸತ್ಯ, ನಿಷ್ಠೆ, ಪ್ರೀತಿ, ಸೌಜನ್ಯ

ತುಂಬಿರುವ ಪುಟ್ಟ ಚೀಲಗಳು.

ಸುಳ್ಳು, ನೋವು, ದೌರ್ಜನ್ಯ

ತುಳುಕುವ ಭಾರೀ ಮೂಟೆಗಳು.



ನಗು, ಚೆಲುವು-ಒಲವು ಗ್ರಾಮ್ ಲೆಕ್ಕದಲ್ಲಿ,

ಅಸಮಾನತೆ, ಅಸಹಾಯಕತೆ ಕೆಜಿಗಟ್ಟಲೆ.

ಹಣದ ಝಣಝಣವಿಲ್ಲ, ಚಿಲ್ಲರೆಯ ಗೋಜಿಲ್ಲ,

ಅಲ್ಲಿ ಕೊಂಡದ್ದಿಲ್ಲಿ, ಇಲ್ಲಿದ್ದಲ್ಲಿ ವ್ಯಾಪಾರ.



ಹೊರಗೊಬ್ಬ ಕೂತಾತ ಧಣಿಯಿದಕಂತೆ.

ಹೊಕ್ಕ ಹೆಜ್ಜೆಹೆಜ್ಜೆಗು ಬಾಡಿಗೆಯಿದೆಯಂತೆ.

ಹಾದವಗೆ ಪ್ರವೇಶ ಅನಿವಾರ್ಯವಂತೆ,

ನಿಂತುಸಿರಿಗೇ ಹೊರದಾರಿ ತೆರೆವುದಂತೆ.



ಚಕ್ರವ್ಯೂಹವಂತೆ, ಬಿಡುಗಡೆ ದೂರವಂತೆ.

ಕಣ್ಣೀರು, ಕಣ್ಣು ಮಂಜಾಗಿ ದಾರಿತಪ್ಪುವುದಂತೆ.

ಕಂಗೆಡಿಸೆ ಭಾರ, ಸೋಲು ಖಚಿತವಂತೆ.

ನಗುವಿನಾಧಾರವೇ ಹಗುರಾಗಿಸುವುದಂತೆ.







Thursday, January 3, 2013

ಹುಟ್ಟಿಂದ ಕಲ್ಲದು

----------------

ಸಾಗಿದ್ದೆ ದಾರಿ, ತಲುಪಿದ್ದೆ ಗುರಿ.

ಸರಾಗಹಾದಿ, ಇಂತಿಪ್ಪ ಯಾನದಲೊಮ್ಮೆ

ಧುತ್ತೆಂದೊಂದು ಬಂಡೆ...

ಶತಮಾನದಿಂದಿತ್ತು, ಹಾಗೇ...

ಅಲುಗದೆ, ನುಡಿಯದೆ, ಅರಳದೆ, ನೋಯದೆ...

ಇಟ್ಟಿರಿಸಿದಂತೆ, ಗಮನದೊಳ-ಹೊರಗಿರದಂತೆ.

ನಡಿಗೆಗದು ಅಡ್ಡ... ಕಣ್ಣುರಿ......



ಸುತ್ತಿಗೆಯ ತಂದೊಮ್ಮೆ, ಮದ್ದುಗುಂಡಿಂದೊಮ್ಮೆ

ಒಡೆವ ಹುನ್ನಾರ....ಸ್ಥಿರವಸ್ಥಿರಕೆ ಬಾಗಿದಂತೆ

ಒಡೆಯಿತು.... ಅಡ್ಡವಿಲ್ಲವಾಯಿತು..

ಇಲ್ಲವಾಗಿಸಿದ ಜಯದ ಭ್ರಮೆಯದಕೆ,

ಇಲ್ಲವಾಗದುಳಿದ ನಗೆಯಿದಕೆ.....

ದೊಡ್ಡದೀಗ ಸಣ್ಣದಷ್ಟೇ..

ಪುಟ್ಟ ಪುಟ್ಟ ಕಣಕೂ ಅದೇ ಕಲ್ಲೆದೆ, ಗಟ್ಟಿತನ

ಹುಟ್ಟಿಂದ ಕಲ್ಲದು, ಒಡೆದು ಮತ್ತೂ ಕಲ್ಲೇ..

ನೀರೆಂದಾದರೂ ಆದೀತೆ?

----------------------------

ಹೀಗಾಗಬಹುದಿತ್ತು..

--------------------

ನಗೆಯಲ್ಲದ ನಗುವೊಂದು

ಹನಿಯಿಸಿ, ಬೆಳೆಸಿದೆ ನೋವಬೆಳೆ.

ಹೊತ್ತದ್ದು ಭಾವಗರ್ಭ,

ಮೊಳೆಸಿದ್ದು ನಾನೆಂಬ ನಾನೇ..

ಬಿತ್ತಿದ್ದ್ಯಾರು???

ತಪ್ಪು ದಾಟಿಸಿ ಹಗುರಾಗುವ ನಾನು,

ನೀನೆಂದು ತೋರುವ ಬೆರಳ ದೃಷ್ಟಿ

ಅಲ್ಲಿ ಇಲ್ಲಿ ಎಲ್ಲೂ ಇಲ್ಲದೆಡೆಗಿದೆ.

ನಾನಿಲ್ಲದೆಡೆ ಬೀಜ ಬಿತ್ತಲ್ಪಟ್ಟಿದ್ದರೆ,

ನಿರ್ವಿಕಾರತೆ ಹನಿಯಿಸಿದ್ದರೆ,

ನಿನ್ನ, ಅವರೆಲ್ಲರ ನಗುವೇ ಪೋಷಿಸಿ,

ನಲಿವೆಂಬ ಹೂವಿನ ಗಂಧದಲೆಯಲಿ ನಾ

ಕಂಡೂ ಕಾಣದಂತಿಣುಕಬಹುದಿತ್ತು...

ಹೀಗಿರಲಿ ಗೂಡು.


---------------------
ದಾಂಧಲೆಕೋರ ಗಿಡುಗ,

ಸುಮ್ಮನೆ ಹೋಗಲಿಲ್ಲ.

ಗುಬ್ಬಿಮರಿ ಕಚ್ಚಿಕೊಂಡೇ ಹೋಯಿತು..

ಗೂಡು, ಮೆತ್ತೆ, ಎಲ್ಲ ಮುತುವರ್ಜಿಯಿತ್ತು

ಇದ್ದು ಇಲ್ಲದಂತಿರುವ ವಿದ್ಯೆಯಿರಲಿಲ್ಲ

ನಾ-ನೀನೆನುತ ಚಿವ್ ಗುಟ್ಟಿದ್ದೇ...

ಮಾತಲ್ಲ, ಮೃತ್ಯು...

ಗುಟುಕಿಗೆ ತೆರೆದ ಬಾಯಿ ಸದ್ದಲ್ಲದ್ದಿ,

ಇರುವು ಬಯಲಾಗಿ, ತೆರವು ಬಾಳು ..



ಪ್ರೀತಿಯೊಂದು ಗುಬ್ಬಚ್ಚಿ.

ಎದೆಗೂಡೊಳಗೆ ಬೆಚ್ಚಗಿತ್ತು.

ನೋವು ಅದರುಸಿರು,

ಕಂಬನಿ ನರನಾಡಿಯ ರಕ್ತ.

ಕಣಕು, ಹನಿಗು ಲೆಕ್ಕ ಕೇಳಿ,

ನಂದು ನಿಂದೆಂತು... ಸದ್ದೇ ತಾನಾಗಿ.

ಕಾಲ ಕಾಯುತಿತ್ತು ಗಿಡುಗನಾಗಿ,

ಸುತ್ತಿಸುತ್ತಿ ಸಾಗಿ ಬಳಿ

ಹಿಡಿತ ಕೊರಳೊತ್ತಿತು..ಈಗ

ಉಸಿರಿಲ್ಲ, ನಾಡಿಯಿಲ್ಲ, ಪ್ರೀತಿ ಸತ್ತಿತು.



ಗೂಡಿನೊಡೆಯಾ,

ಭದ್ರ ಗೂಡೊಳಗಿರಲಿ

ಮೌನದ ನಡುವಿರಲಿ. ಮೃದುವಾದುದು..

ಸದ್ದಲಿ, ಜಿದ್ದಲಿ ಬಯಲಾದೀತು

ಹೊರಗು ನಲುಗಿಸೀತು,

ಅರಿವಿಲ್ಲದೆ ಅದೇ ಇಲ್ಲವಾದೀತು....







Wednesday, January 2, 2013

ಹೀಗೊಂದು ಸುದ್ಧಿ


------------------------

ಇಂದು ಅವನಿಗವ ಎಂದಿಗಿಂತ ಸನಿಹವಂತೆ

ಕೋಟಿ ಮೈಲಲು ಸಾಮೀಪ್ಯ ಕಾಣಬಲ್ಲ ಪ್ರೇಮ.

ಅವನೊಡಲ ಬೆಂಕಿಯ ಕಣ್ಕುಕ್ಕುವ ಶಾಖವೂ

ಇವಳೆದೆಗಿಂದು ನಿನ್ನೆ ನಾಳೆಗಿಂತ ತಂಪಂತೆ.

ಮೇಲವನ ಕಣ್ಣುಮುಚ್ಚಾಲೆಯಾಟಕೆ

ಕೆಳಗಿವಳು ದಿನಚರಿ ಬರೆದಿಟ್ಟಳು.

ಅವ ಕಣ್ಣುಬಿಟ್ಟಲ್ಲೆ ತಾ ಬೆಳಗ ಕಂಡಳು,

ಅತ್ತ ತಿರುಗಲು ಕಣ್ಮುಚ್ಚಿ ನಿದ್ರಿಸಿದಳು.

ನೀ ಮೇಲೆ, ನಾ ಕೆಳಗೆಂದಿವಳು ಅಳಲಿಲ್ಲ,

ನಾ ಮೇಲೆ ನೀ ಕೆಳಗೆಂದವ ತುಳಿಯಲಿಲ್ಲ

ಎದುರುಬದುರಾದರು, ಮುಗುಳ್ನಕ್ಕರು,

ಪ್ರೇಮಿಸಿದರು, ಸಂಧಿಸಬಯಸಿದರು,

ದೂರವಿದ್ದೇ ಒಂದಾದರು.

ನಗುವ ಹುಟ್ಟಿಸಿ, ಅದನೇ ಬದುಕಿಸಿದರು.

ಬಾನತೇರ ಬಾಗಿಸಿ ಇವಳೆಡೆಗೆ,

ತಲುಪಲಾರದ ದೂರ, ಕ್ಷಣಿಕ ಮಿಲನದ ಸ್ವಪ್ನ

ಮಿಲನವಿಲ್ಲದೇ ಬಿಸಿಲುಬೆಳಕ ಸ್ಖಲಿಸಿ ಅವ,

ಅವಳೊಡಲ ತುಂಬಿ, ಅಸಂಖ್ಯ ಸಂತಾನ ಮೊಳೆಸುವ

ಸದ್ದಿಲ್ಲದ ಬಸಿರು, ಹೆರಿಗೆ.. ಕೋಟಿ ಸಲ ಹೊತ್ತುಹೆತ್ತೂ

ಅಮ್ಮನೆಂದಿವಳು ನಿರೀಕ್ಷೆ ಮಂಡಿಸಳು

ಅಪ್ಪನೆಂದವ ಹೆಸರೂ ಹಚ್ಚುವುದಿಲ್ಲ.

ಮಧ್ಯೆ ಬಂದು, ಮರೆಯಾಗಿಸುವ ಗ್ರಹಣಕೆ

ತಾಳ್ಮೆ, ನಂಬಿಕೆಯುತ್ತರವಿತ್ತವರು.

ಇಂದು ಎಂದಿಗಿಂತ ಸನಿಹ ಬರುವರಂತೆ,

ಮದುವೆಯಿಲ್ಲದ ದಾಂಪತ್ಯ, ಹೆಸರಿಲ್ಲದ ಸಂಬಂಧ

ಮಿಲನವಿಲ್ಲದ ಪ್ರೀತಿ, ಸ್ವಾರ್ಥವಿಲ್ಲದ ಪ್ರೇಮ

ಸಂಭ್ರಮಿಸುವುದಕೆ ಸಾಕ್ಷಿಯಾಗುವಾ

ಸಾಧ್ಯವಾದರೆ ಸ್ವಲ್ಪ ಮೊಗೆದುಕೊಳ್ಳುವಾ,,,,

(ಇಂದು ಸೂರ್ಯ ಭೂಮಿಗೆ ಎಂದಿಗಿಂತ ಹತ್ತಿರಕ್ಕೆ ಅಂದರೆ ೧೪ ಕೋಟಿ ಕಿ ಮೀ ಅಂತರದಲ್ಲಿ ಇರ್ತಾನಂತೆ, ಅವನ ಅತ್ಯಧಿಕ ಬೆಳಕಿನ ಇಂದಿನ ಮಧ್ಯಾಹ್ನವೂ ಭೂಮಿಯ ಓರೆ ಅಕ್ಷದ ಕಾರಣದಿಂದ ತಾಪಮಾನ ಹೆಚ್ಚಾಗದಂತೆ ಇರುವುದಂತೆ. ಇವತ್ತಿನ ದಿನಪತ್ರಿಕೆಯಲ್ಲಿ ನನ್ನನ್ನ ತುಂಬಾ ಸೆಳೆದ ಸುದ್ದಿ...)



.

























ಬೆಳಗು


--------------

ಮುಂಜಾವಿನ್ನೂ ಬೆಳಕಾಗಿಲ್ಲ ,

ತಿರುತಿರುಗಿ ನೋಡುತಾ, ಬೆಳಕಿಗಡಿಯಿಟ್ಟ ದಿನ

ಅಮ್ಮನಿಲ್ಲದ ಶಾಲೆಗಡಿಯಿಡೋ ಕಂದನಂತೆ

ಆಗಸದಿ ಮಿನುಗುವ ಒಂಟಿ ಚುಕ್ಕಿ

ಒಲೆಯುರಿಯೆದುರಿನ ಒಂಟಿ ಮನದಂತೆ.

ತಂಪನಾವರಿಸಿ ಬೀಸೋ ಮೆಲುಗಾಳಿ

ಚಾದರದಡಿ ನಿದ್ದೆ ಹೊದ್ದೆಚ್ಚರದಂತೆ.

ಬಾಗಿಲ ಚಿಲಕ, ಅಂಗಳದ ನೀರಿನ ಸದ್ದು,

ರಾತ್ರಿ ಕನಸಿನ ಸವಿಮೆಲುಕಿನಂತೆ.

ಮೆತ್ತನೇರುವ ನೇಸರನ ನಸುಕೆಂಪು,

ಹಾಸಿಗೆ ಏನೋ ನೆನಪಿಗೆ ನಾಚಿದಂತೆ .

ನೀಲಿಯಿಂದಿಣುಕುವ ರವಿಕಿರಣಗಳು

ಇಚ್ಛೆಯಿಲ್ಲದೆ ಗಡಿಯಾರ ಹೊಕ್ಕ ಕಣ್ಣಂತೆ.

ಹಕ್ಕಿಚಿಲಿಪಿಲಿ, ಕರುಕೊರಳಿನ ಗಂಟೆ

ಮನಸೆದ್ದು ಮೈಮುರಿದ ನೆಟಿಗೆಯಂತೆ.



ಕ್ಷಣಕ್ಷಣವು ಬದಲು ಬಣ್ಣ, ಚರ್ಯೆ ಬಾನಲಿ

ಏರಿ ಬಂದ ರವಿ ಭರವಸೆಯ ತೇರಲಿ

ಚುರುಕು ಬೆಳಕಿಗೆ ಎಳೆಬಿಸಿಲ ಒತ್ತು,

ದಿನಕೀಗ ರವಿಯ ಜೊತೆ, ದಾಪುಗಾಲು



ರವಿಯುದರ ಹಲಪದರ ಬೆಂಕಿಯಂತೆ

ಬೆಳಕಾಗಿಸಿ, ತಿಳಿಬಿಸಿಲಾಗಿಸಿ,

ಅದೇ ಜಗಕನ್ನವಂತೆ.

ಒಂದೊಂದುಯಕು ನೂರು ಅನುಭೂತಿ,

ಉರಿಯ ಮರೆಯ ನಗುವಿನ ಛಾತಿ

ಅಲ್ಲಿಲ್ಲ ತನ್ನುದ್ಧಾರದ ಭೀತಿ.

ಅದಕೆ ಹಂಚಬಲ್ಲ ಅಮಿತ ಪ್ರೀತಿ.



ನೂರು ಸಾಧನೆಯ ಹುಮ್ಮಸ್ಸು

ಕತ್ತಲೊಳಗಿದ್ದ ಎದ್ದುಬಂದ ಬೆಳಕಿಗೆ.

ಅರಿವ ಹೊರಗಿನದಲ್ಲ, ರವಿ ಕರ್ತೃವದಕೆ.

ಪವಾಡವಲ್ಲ, ಬರೀ ಕರ್ತವ್ಯಪರತೆ.

ಒಂದೊಂದು ಜೀವನ ನಿಂತನೆಲೆಯಲೆ

ಅಂಥದ್ದಾಗಲು ಬೇಕು ಮೌನತಪಸ್ಸು.





Tuesday, January 1, 2013

ಎದೆಯಿಂದಾಲಿಸು


------------------------

ತರಗೆಲೆಯುದುರುವ ಮೌನದಿ

ಚಿಗುರೆಲೆ ಹುಟ್ಟೋ ಪಿಸುಮಾತು.

ಮೊಗ್ಗರಳುವ ಮೌನದಿ

ದುಂಬಿಗಾಹ್ವಾನದ ಹಾಡು.

ಹೂವುದುರುವ ಮೌನದಿ

ಅಳುವ ತೊಟ್ಟ ಬಿಕ್ಕಳಿಕೆ.

ಮಂದಮಾರುತದ ಮೌನದಿ

ಗಂಧತೇರ ಯಾನಗಾನ.

ಬೆಟ್ಟ ಉಟ್ಟ ಗಾಢ ಮೌನದಿ

ದೇಗುಲದ ಗಂಟೆಯ ಮಾರ್ದನಿ.

ಗರ್ಭಗುಡಿಯ ದೈವೀಮೌನದಿ

ಭಕ್ತನ ಸವೆದ ಚಪ್ಪಲಿಯ ಸದ್ದು.

ಮನೆಯಂಗಳದ ಶಾಂತಮೌನದಿ

ಹೆಣ್ಮನದ ಕಣ್ಣೀರ ಭೋರ್ಗರೆತ.

ಆಗಸದ ಚಂದ್ರತಾರೆಯ ಮೌನದಿ

ಕತ್ತಲ ಅಸ್ಪಷ್ಟತೆಯಟ್ಟಹಾಸ.

ಕೆಡುಕು ಘಟಿಸದ ಇಂದಿನ ಮೌನದಿ

ನಾಳಿನ ಸಾಲುಸ್ಫೋಟಕದ ಗುಟ್ಟು.

ಪ್ರಕೃತಿಯ ನಗೆಯ ಮೌನದಿ

ಅಳಿವು ಮೊಳೆಯುತಿಹ ಡಂಗುರ.



ನನ್ನ ಮೌನದಲೂ ನಾನಿಲ್ಲ, ನೀನಿಲ್ಲ,

ನಿನ್ನೆನಾಳೆಗಳಿಲ್ಲ.

ಕೇಳಬಲ್ಲೆಯಾದರೆ ಕಿವಿಯಲ್ಲ,

ಎದೆಯಿಂದಾಲಿಸು...ಕಲ್ಪಿಸದಿರು,

ಮೌನವೂ ಇಲ್ಲಿ ಮೌನವಲ್ಲ....

ಹುಟ್ಟಿದ್ದರೂ, ಉಸಿರಿದ್ದರೂ, ಸಾವಿದ್ದರೂ

ಅದನನುವಾದಿಸು,

ನಿಜವನನುಮೋದಿಸು.