Friday, September 6, 2013

ಇನ್ನೇನಲ್ಲ, ಅದು ನೀನೇ..

ನೀನಿತ್ತಿಲ್ಲವೆಂದು ಅಳುತಿರಲಿಲ್ಲ ಲೋಕವೇ,
ಈಗಿತ್ತಿರುವೆ, ಪ್ರೀತಿ ಮನಸ್ಪೂರ್ತಿ ಸ್ವೀಕರಿಸಿದೆ.
ತೇರ್ಗಡೆಪತ್ರವಿಲ್ಲದೆಯೂ ಮುನ್ನಡೆಯಬಲ್ಲುದು;
ನೀನಷ್ಟೇ ತೀರ್ಪೀಯದೆ ಕ್ಷಣವೂ ಇರಲಾರೆ.
 
ನೀ ಹಿಂಬಾಲಿಸಿದ್ದು ಪ್ರೀತಿಯನಲ್ಲ;
ದೂರ ಸಾಗುತಿದ್ದ ನಿನ್ನತನವನ್ನೇ.
ಸಮೀಪಿಸಿದ್ದೂ ಪ್ರೀತಿಯನಲ್ಲ;
ಸಾಗುವುದ ತಡೆಯಬಯಸಿದ ನಿನ್ನೊಳಗನ್ನೇ.
 
ನೀ ಮೆಚ್ಚಿದ್ದು ಪ್ರೀತಿಸಿದ್ದಕ್ಕಲ್ಲ;
ಅಲ್ಲಿದ್ದುದು ನಿನ್ನ ಅನಿಸಿಕೆಯದೇ ನೆರಳೆಂದು.
ನೀನೊಲಿದದ್ದೂ ಪ್ರೀತಿಸಿದ್ದಕ್ಕಲ್ಲ;
ಆ ನೆರಳು ಹಗಲಿರುಳೂ ನಿನಗೆ ಸ್ಥಿರವಿತ್ತೆಂದು.
 
ನೀ ಮಣಿದದ್ದು ಪ್ರೀತಿಗಲ್ಲ;
ನಿನಪಾದವೇ ಕುಣಿದಲ್ಲಿ ನೀ ಮೆತ್ತಗಾದುದಕೆ.
ಶರಣಾದದ್ದೂ ಪ್ರೀತಿಗಲ್ಲ;
ಸೆಟೆದೆದುರಿಸಿ ನಿಲುವ ಶಕ್ತಿಯಿಲ್ಲದ್ದಕೆ.
 
ನೀ ತಣಿದುದು ಪ್ರೀತಿಯಿಂದಲ್ಲ;
ತುಟಿ ಸವರಿದ ಜಿಹ್ವೆ ನಿನದೇ ಅಲ್ಲಿದ್ದುದಕೆ.
ತಂಪಾದುದೂ ಪ್ರೀತಿಯಿಂದಲ್ಲ;
ತಣಿಸುವೊರತೆ ನಿನದೇ ಅಲ್ಲಿ ಚಿಮ್ಮಿದ್ದಕೆ.
 
ನೀ ಉತ್ತೀರ್ಣವೆನುವುದಾದರೆ
ಅದು ಪ್ರೀತಿಯನ್ನಲ್ಲ;
ನಿನನೇ ಎದುರಿಸಿ, ಮಣಿಸಿ, ಒಲಿಸಿ, ಮೆಚ್ಚಿಸಿ,
ಒಪ್ಪಿಸಿ ನಿನ್ನೊಳಗೇ ಪ್ರೀತಿ ಕಂಡುಕೊಂಡ ನಿನ್ನನ್ನೇ...
 
ಜರೆಯುತಿರುವುದಾದರೂ ಪ್ರೀತಿಯನಲ್ಲ;
ತಲುಪಲಾಗದ ನಿನದೇ ಅಸಹಾಯಕತೆಯನ್ನ.
ತೊರೆಯುತಿರುವುದಾದರೂ ಪ್ರೀತಿಯನಲ್ಲ;
ನಿನ್ನೊಳಗಿನ ಜೀವಂತಿಕೆಯನ್ನ.
 
ಲೋಕವೇ,
ಪ್ರೀತಿಸಿ ಉದ್ಧರಿಸುವುದಲ್ಲ;
ಉದ್ಧಾರವಾಗುವುದು.
ನಿನ್ನ ನಂಬಿ ಏನೂ ಕಾದು ಕೂತಿಲ್ಲ;
ನೀನೆ ನಿನ್ನ ನಂಬಲು ಕಾದಿರುವುದು.
ಅಲ್ಲೆದುರಿರುವುದು, ನೀ ನಿಟ್ಟಿಸುತಿರುವುದು
ಇನ್ನೇನಲ್ಲ; ನೀನೇ, ಬರೀ ನೀನೇ..
 
ಪ್ರೀತಿ ನಿಸ್ವಾರ್ಥವಿರಬಹುದು; ನೀನಲ್ಲ.
ಪ್ರೀತಿ ನಿಷ್ಕಾಮವಿರಬಹುದು; ನೀನಲ್ಲ.
ಪ್ರೀತಿ ನಿರ್ಗುಣವಿರಬಹುದು; ನೀನಲ್ಲ.
ಸ್ವಾರ್ಥ, ಕಾಮ, ಗುಣಗಳ ಮಾಪಕದಲಿ
ಸ್ವಯಂಭು, ಸ್ವಯಂಪೂರ್ಣ, ಸ್ವತಂತ್ರ
ಪ್ರೀತಿಯನಳೆವುದು ಮೌಢ್ಯವೆನಿಸೀತು.
ಪ್ರೀತಿ ಬೆಳೆವದ್ದಲ್ಲ, ಅಳಿವದ್ದೂ ಅಲ್ಲ.
ನೀನುಳಿಯಲು ಬಿಡದೆ ಬಿಗಿಯಾಗಪ್ಪಬೇಕು,
ಕರಗಿ ನೆಲೆ ನಿಂತು ಪ್ರತ್ಯಕ್ಷವಾದೀತು.
ಸಡಿಲಬಿಟ್ಟರೆ ಕಾಣಿಸಿಕೊಳುವ ತುರ್ತಿಲ್ಲವದಕೆ,
ಇದ್ದೂ ಇರದಂತೆ ಅದೃಶ್ಯವಾಗುಳಿದೀತು.

No comments:

Post a Comment