Thursday, September 1, 2016

ಸುಖಾಸುಮ್ಮನೆ ಬಿಮ್ಮನೆ ಕವಿದ ಕರಿಮುಗಿಲು,
ಬಿನ್ನಾಣದಲಿ ನಾಚುತಿರುವಂತೆ ನವಿಲು.
ನಾಟ್ಯದೊಳದ್ದಿಯಾಡುವ ಮುದ್ದು ಕಾಲು,
ಸುತ್ತಸುತ್ತುತಾ, ನೆಲಕೆ ಕಚಗುಳಿಯಿಕ್ಕುತಾ
ಕಣ್ಮನದುಂಬುತಾ ಹೆಜ್ಜೆ ಬರೆದ ರಂಗವಲ್ಲಿ,
ಎದೆ ಮೇಲೆ ಚುಕ್ಕಿ ಸಾಲುಸಾಲು
ಹೆಣೆವ, ಬೆಸೆವ ಗೋಜಲೊಂದು ಉದ್ದುದ್ದ ಬಳ್ಳಿ.
ಮೆತ್ತನೆ ಕಿತ್ತುಕೊಂಡು ಗಾಳಿಗಾಡುತಾ ಸಾಗಿದ ಪಚ್ಚೆಗರಿ
ಅಯ್ಯಬ್ಬಾ! ಅಂದಿತೇ ಹಸಿರ ನಸೆಗಲ್ಲ ಸವರಿ?
ಕೊಡವಿ ನೂಕಿತೇನು ನೆಲ ಹುಸಿಮುನಿಸಲಿ?
ಎತ್ತಿಕೊಂಡಿದೆ ಗಾಳಿ..
ಮುಟ್ಟಿ, ತಾಕಿ, ಸವರಿ, ಸಾಗಿದೆ ಪಯಣ,
ಮೆತ್ತಿಕೊಂಡಿದೆ ವನಸುಮದ ಪರಾಗದಷ್ಟು ಹಸಿಕಣ.
ನಿನ್ನೆಗಳ ಗಜಗರ್ಭದಾಳದಿಂದ
ಎತ್ತಿ ತಂದಿದೆ ತುತ್ತು ಹೊಕ್ಕುಳಬಳ್ಳಿ.
ನೆನಪೆಂದರೆ ಬರೀ ಪುಳಕ ಎಳೆಯೆಳೆಯಲ್ಲಿ.
ಬಂದದ್ದು, ಕೂತದ್ದು, ಕಂಡದ್ದು, ಅಡಗಿಸಿದ್ದು,
ಹುಡುಕಿದ್ದು, ತಡಕಿದ್ದು, ಸಿಕ್ಕಿದ್ದು, ಕಳೆದುಹೋದದ್ದು...
ನೀನೆಂದರೆ ಉಕ್ಕುಕ್ಕುವ ಭೋರ್ಗಡಲು
ನಾ ಮಿಂದು, ಮಿಂದು ನಾಚಿನೀರಾಗುವ ತೀರ!
ಸುರಿಯದ ಮೋಡದೊಳಗೆಲ್ಲ ತೇವ ಹುಡುಕುತಾ
ವೃಂದಾವನವನೂ ಹೊಕ್ಕಿತ್ತಂತೆ; ಗರಿಯೀಗ ಹಾರಿ ಬಂದಿದೆ ..
ಸೀದಾ ಕಡಲತಡಿಯಲ್ಲಿ ವಿಧಿ ನಡೆಸಿದಂತಿದೆಯೇನೋ ಸಿಹಿಹುನ್ನಾರ!
ತೀರದಲಿ ಶ್ರಾವಣದ ಕೂಸಿನ ಕುಹೂಕುಹೂ ಚಿತ್ತಾರ
ಗರಿ ಬಣ್ಣ ತುಂಬುತಿದೆ;
ತಳೆಯಲಿದೆಯೇನೋ ಖಾಲಿಬಿಳಿಯೊಂದು ಮಳೆಬಿಲ್ಲಿನವತಾರ!

No comments:

Post a Comment