Tuesday, April 16, 2013

ಈ ಹಾಡುಗಳೇ ಹೀಗೆ.


------------------------------
ಈ ಹಾಡುಗಳೇ ಹೀಗೆ.
ರಾಗ ಸಂಯೋಜಿಸಿಕೊಂಡೂ,
ಭಾವ ಸಂವೇದಿಸಿಕೊಂಡೂ,
ಎಡವದಂತೆ ಮೆತ್ತನೆ ನಡೆಸಿದ
ಕೊರಳಲಿ ಹಾಡಿಸಿಕೊಂಡೂ
ಕೆಲವೊಮ್ಮೆ ವಶವಾಗದುಳಿಯುತ್ತವೆ.

ಅಪರಿಚಿತವಾಗಿಯೇ ಉಳಿಯುತ್ತವೆ
ಹಾಡುವಾತಗೆ, ಕೇಳುವಾತಗೆ,
ಓದುವಾತಗೆ ಒಮ್ಮೊಮ್ಮೆ ಬರೆದಾತಗೂ...
ಕಹಿಯೆಂದು ಮೂಡಿಸಿದ್ದು ಸಿಹಿಯ ನಕ್ಷತ್ರದಿ ಹುಟ್ಟಿ
ಜನಕಗೇ ಕಣ್ಣುಮೂಗು ತನದಲ್ಲವೆನಿಸುವಂತೆ...

ಸೂರ್ಯಗರ್ಪಿತ ಕವನ ಅಪ್ಪನಿಗೆ,
ಭೂಮಿಗರ್ಪಿತವಾದದ್ದು ಅಮ್ಮನಿಗೆ,
ಹೂವಿಗರ್ಪಿತವಾದುದು ಪ್ರೀತಿಯಲ್ಪಾಯುಸ್ಸಿಗೆ,
ದುಂಬಿಗರ್ಪಿತವಾದುದು ಪ್ರಿಯತಮಗೆ...
ತುತ್ತು ಯಾರಿಗೋ, ಬಾಯಿ ಯಾರದೋ...

ಅನುಭವದ ಕೂಸಿಗೆ ಭಾವತೀವ್ರತೆಯಲಂಕಾರ,
ಪರಕಾಯಪ್ರವೇಶಕ್ಕೆ ಬರೀ ಆವೇಶದಾಡಂಬರ
ಅದು ಇದರಂತೆ, ಇದು ಅದರಂತೆ...
ನೋಡುಗನ ಕಣ್ಣಲಿನ್ನಷ್ಟು ಬಣ್ಣ ಸಾವಿರ
ಧ್ವನಿತಂತಲಿನ್ನೂ ನೂರು ತರಂಗಾಂತರ,
ಕೇಳುವ ಕಿವಿಗೆ ಕೊನೆಗೊಂದು ರೂಪಾಂತರ.

ಎಲ್ಲೋ ಹುಟ್ಟಿ ಬೆಳೆದು, ಎಲ್ಲೋ ಮನೆ ಬೆಳಗುವ
ಮನೆಮಗಳಂತೆ,
ಎಲ್ಲೋ ಅರಳಿ ಎಲ್ಲೋ ಪೂಜೆಗೊದಗುವ
ಹೂಮಾಲೆಯಂತೆ,
ಕೆಲಗಳಿಗೆಯಷ್ಟೇ ಕೆಲ ಕೈಗಳ ವಶ..
ಹಲ ಮಜಲುಗಳಲಿವಕೆ ಹಲವಾರು ವೇಷ...

ಹುಟ್ಟಿಸಿದವ, ಬೆಳೆಸಿದವ, ಅರ್ಥೈಸಿದವ,
ಅಭಿವ್ಯಕ್ತಿಸಿದವ, ಜಗಕೊಪ್ಪಿಸಿದವ
ಎಲ್ಲ ಬೇರೆಬೇರೆ..
ಒಳಗೊಳುವವರ ಹುಡುಕುತಲೇ ಸಾಗುತವೆ,
ಅರ್ಥ ಅನರ್ಥಗಳ ನಡು ನರಳುತವೆ,
ಅಯೋಗ್ಯ ತಾಣದಲೇ ಮೆರೆಸಲ್ಪಡುತವೆ,
ಮೈಮರೆಯದೆ, ಶರಣಾಗದೆ ಕೃತಘ್ನವೆನಿಸುತವೆ...





1 comment:

  1. ಭಾರತೀಯ ಮನಸ್ಸುಗಳು ಮತ್ತು ಚಿತ್ರಗೀತೆಗಳೂ ಅವಿಭಾಜ್ಯ ಅಂಗ. ನಮ್ಮ ಹಾಡುಗಳ ಹುಚ್ಚನ್ನು ಇಲ್ಲಿ ನೀವು ಕಟ್ಟಿಕೊಟ್ಟ ರೀತಿಯೂ ಅನಿರ್ವಚನೀಯ ಆನಂದ ಕೊಟ್ಟಿತು.

    ReplyDelete