Tuesday, April 23, 2013

ನೋವಿಗಿಲ್ಲ ಜಗದ ಹಂಗು..

----------------------
ಬಣ್ಣವಂತೆ, ಕುಸುರಿಯಂತೆ,
ರಾಗವಂತೆ, ತಾಳವಂತೆ,
ಮಿದುವಂತೆ, ನವಿರಂತೆ,
ಸಿಹಿಯಂತೆ, ಪಕ್ವವಂತೆ,
ಕಂಪಂತೆ, ಸೊಂಪಂತೆ..
ಅಳುವ ಕಣ್ಣಿಂದ, ಬಾಯಿಯಿಂದ,
ಮನದಿಂದ ಚಂದ ಬೇಡುತಿದೆ ಲೋಕ.

ನುಂಗಬೇಕು, ಇಂಗಬೇಕು,
ಒಳಗೇ ಹೆಪ್ಪುಗಟ್ಟಿ ಹರಳಾಗಬೇಕು,
ಕಿರುಬೆರಳುಂಗುರ ಮಾಡಿ ಧರಿಸಬೇಕು..
ಕಕ್ಕಬಾರದು, ಇಕ್ಕಬಾರದು,
ಬರೀ ಪಡೆಯಬೇಕು, ಹೊಂದಬೇಕು,
ಚುಚ್ಚುತಿದ್ದರೂ ಒಡವೆಯಾಗಿಸಬೇಕು.

ಬಿದ್ದವಗೊಂದು ಗುದ್ದು, ಮತ್ತೆದ್ದೇರಬೇಕು.
ಗೆದ್ದವ ಬಾವುಟದ ಗರುಡ ಪಟ...
ಕಹಿಯುಂಡು, ಉಟ್ಟು, ಹೊದ್ದು ಮಲಗೆದ್ದವ
ಸಕ್ಕರೆ ಲೇಪದ ಮಿಠಾಯಿ ಹೇಗಾದಾನು?!
ಉಣುವ ಬಾಯಿ ಸವಿಯೇ ಬಯಸುವುದು,
ಬಾಯನಲ್ಲ, ನೋವು ಕಿವಿಯ ಹುಡುಕುವುದು.
ಮುಚ್ಚಿಟ್ಟರೂ ಬೂದಿ ಒಳಗಿನ ಕೆಂಡ,
ಬಳಿಸಾರಿದವರ ಸುಟ್ಟೇ ಸುಡುವುದು.

ಮುಟ್ಟಲಿ ಬೆರಳು ಕೆಂಡ ಸುಡದಷ್ಟು ತಂಪ ಧರಿಸಿ.
ದಮ್ಮಿದ್ದರೆ ಬನ್ನಿ,
ಕರಾಳ ಬಿಕ್ಕಿಗೆ ಕೊನೇಪಕ್ಷ ಮೂಕಕಿವಿಯಾಗಿ,
ಒಡೆದ ಒರಟು ಹಸ್ತವ ಮಿದುಮಾಡುವ ಬೆಣ್ಣೆಯಾಗಿ,
ಕಹಿಯ ಮರೆಮಾಡುವ ಸಿಹಿ ರಸಗ್ರಂಥಿಯಾಗಿ,
ವಾಸನೆಯ ಕಂಪಾಗಿಸುವ ಕಸ್ತೂರಿಯಾಗಿ..

ಬೇಡುತಿಲ್ಲ ನೋವು ನಿಮ್ಮ ಸಾಂಗತ್ಯ,
ಅದು ಅಯಸ್ಕಾಂತ, ನೀವೇ ಕಪ್ಪುಕಬ್ಬಿಣದ ಚೂರುಗಳು..
ಸಾಧ್ಯವಾದರೆ ನಿಲ್ಲಿ ಸೆಳೆತ ಮೀರಿ
ಆಗದಿದ್ದರೆ ನಿರೀಕ್ಷೆಯ ಗಾಳಿಗೆ ತೂರಿ.
ನೋವು ಸಿಂಗರಿಸಿಕೊಳಬೇಕಿಲ್ಲ,
ಪ್ರಸ್ತುತ ಪಡಿಸಿಕೊಳಬೇಕಿಲ್ಲ, ಅಡಗಬೇಕಿಲ್ಲ,
ಅಷ್ಟೇ ಯಾಕೆ, ಮೆಚ್ಚಿಸಬೇಕಿಲ್ಲ.

1 comment:

  1. ಓದಿದಷ್ಟೂ ಆಗಸದಷ್ಟು ಅಗಲ ಅರ್ಥದ ರೆಕ್ಕೆ ಅಗಲಿಸುವ ಕವನ ಇದು!

    ReplyDelete