Wednesday, April 17, 2013

ಸತ್ಯವೂ ಅರ್ಧ, ಸುಳ್ಳೂ ಅರ್ಧ.


-----------------------

ಅರ್ಧ ತುಂಬಿದ ಚಂದ್ರ,

ಅರ್ಧ ದಾರಿ ಸವೆದ ರಾತ್ರಿ,

ಅರ್ಧ ನಿದ್ದೆಯಲಿ ಧಾತ್ರಿ,

ಅರ್ಧ ಜೋಗುಳ ಧಾಟಿ ಮಂದ್ರ...



ಗೂಬೆ ಕೂಗು ಸಾರಿದರ್ಥವೂ ಅರ್ಧ,

ಜೀರುಂಡೆಯ ದನಿಯಾನವೂ ಅರ್ಧ,

ಮಂದಮಾರುತ ಬೀಸಿದ್ದೂ ಅರ್ಧ,

ಕಾರ್ಮೋಡ ಹನಿಸಿದ್ದೂ ಅರ್ಧ...

ಅತೃಪ್ತಿ-ತೃಪ್ತಿಯ ಕಣ್ಣಾಮುಚ್ಚಾಲೆಯೂ ಅರ್ಧ,

ಅರ್ಪಣೆ-ಸ್ವೀಕೃತಿಯ ಹಿಡಿಹಿಡಿಯಾಟವೂ ಅರ್ಧ.

ಬೆವರಿಳಿಸೋ ಸೆಕೆ, ಅದನಾವಿ ಮಾಡೋ ತಂಗಾಳಿ,

ಅರೆಮುಚ್ಚಿದ ಕಣ್ಣ ನಿದ್ದೆ,

ಅರೆತೆರೆದ ಕಣ್ಣ ಕನಸು- ಎಲ್ಲ ಬರೀ ಅರ್ಧರ್ಧ...



ಅರ್ಧ ನುಡಿದ ಆ ಮಾತುಗಳ

ಪೂರ್ತಿ ಬರೆಯ ಹೊರಟ ಪತ್ರವೂ ಅರ್ಧ...

ಪ್ರೀತಿ ವ್ಯಕ್ತ ಮಾಡುವ ಆ ನೋಟದ

ಹಿಂದಿನೆರಡು ಕಣ್ಣು ತೆರೆದಿವೆ ಅರ್ಧ...

ರಾತ್ರಿರಾಣಿ ಅರಳಿದ್ದೂ ಅರ್ಧ,

ಹೇಳಿದ್ದೂ ಅರ್ಧ, ಕೇಳಿದ್ದೂ ಅರ್ಧ...

ಕಾಲದ ಹೆಜ್ಜೆ ಹೊರಳಿದ್ದೂ ಅರ್ಧ.

ಈ ಕ್ಷಣದ ನಡೆಯ ಹಣೆಬರಹವೇ ಅರ್ಧವಿರಲು

ಪೂರ್ತಿ ಅರ್ಥವಾಯಿತೆಂದು ನೀ ಬಗೆದದ್ದು ಹೇಗೆ,

ಅರ್ಥೈಸಿ ಗೆದ್ದೆನೆಂದು ನಾ ಬೀಗಿದ್ದು ಹೇಗೆ?



ಒಲವೇ, ಪ್ರತಿ ಗಳಿಗೆಯೂ ಅರ್ಧ ಸತ್ಯ

ಈ ಕ್ಷಣಕೆ ತಾ ಪೂರ್ಣ, ಹಿಂದಿನದು ಅಪೂರ್ಣ,

ಮುಂದಿನದು ಬಣ್ಣಿಸಲಾಗದೊಂದು ಬಣ್ಣ.

ತಿಳಿದೆನುನುವುದೂ, ಇಲ್ಲವೆನುವುದೂ ಸುಳ್ಳು

ಬಾಳುತಾ ಸಾಗುವುದಷ್ಟೇ ಸತ್ಯ.

ಅರಿವುದ್ಯಾಕೆ, ಮರೆವುದ್ಯಾಕೆ, ಮತ್ತೆ

ತಪ್ಪೆಂದು ಜರೆವುದ್ಯಾಕೆ?

ಜನ್ಮಾಂತರದ ಕಲ್ಪನೆಯಡಿ ಸಾವೂ ಅರ್ಧವೇ..

ಕೊನೆಯ ಗಮ್ಯವೂ ಅರ್ಧವಿರಲು,

ಪೂರ್ಣತೆಯ ಹಂಗೇಕೆ, ಹಂಬಲವೇಕೆ?

2 comments:

  1. ಅಬ್ಬಾ! ನಿಮ್ಮ ಕವನ ಕೊಡುವ ಖುಶಿ ಅರ್ಧವಲ್ಲ, ಪೂರ್ಣ!

    ReplyDelete
  2. ಕವನದ ಶೀರ್ಷಿಕೆಗೆ ನ್ಯಾಯ ಒದಗಿಸಿದ್ದು ಅಂತ್ಯ 'ಪೂರ್ಣತೆಯ ಹಂಗೇಕೆ, ಹಂಬಲವೇಕೆ?'. ಪದಗಳ ಗಾರುಡಿಯಲ್ಲಿ ಓದುಗರನ್ನು ಕೆಡವುವ ಕವಿಯತ್ರಿ ನಿಮಗೆ ಶರಣು.

    ReplyDelete