Saturday, April 20, 2013

ರಾಮನವಮಿಯಂದು..


-----------------------

ರಾಮಾ, ನೀನಿಂದು ಮತ್ತೆ ಹುಟ್ಟಿಬಿಟ್ಟೆ.

ನೇರ ಒಳಗಿಂದಲೇ ಉದಯಿಸಿಬಿಟ್ಟೆ.

ಪೂರಾ ಬದಲಾದ ರೂಪದಲಿ,

ನನದಲ್ಲದ ಚಿಂತನೆಯ ಬೀಜದಲಿ..



ವ್ಯಕ್ತಿಯಾಗಲ್ಲ ನೀ ಬೆಳೆದದ್ದು,

ಸಮಷ್ಟಿಯ ಮುಕ್ತಿಮಾರ್ಗಕೆ ದೀಪ್ತಿಯಾಗಿ.

ಮಾದರಿಯಾಗೋ ಹಾದಿಗೆ ಮುನ್ನುಡಿಯಾಗಿ.

ತ್ಯಾಗಪಥಕೊಂದು ಮಾರ್ಗದರ್ಶಿಯಾಗಿ.

ತಾಳ್ಮೆ-ಸಂಯಮ ರೂಪವೆತ್ತ ಮೂರ್ತಿಯಾಗಿ.

ಚಂದಮಾಮನ ಬೇಡಿದ್ದೇ ಕೊನೆ,

ಮುಂದೆಂದೂ ನಿನ್ನ ಹಠಕಾಸ್ಪದವೇ ಇರಲಿಲ್ಲವೇನೋ.

ಜಗ ನಿನ್ನೆದುರು ಹಠವಿಟ್ಟದ್ದು,

ನೀ ಒಪ್ಪಿದ್ದು, ಮಣಿದದ್ದು...

ಕೊನೆಗದು ಮಹಾತ್ಮನಾಗುವ ನಿನ್ನ

ತಂತ್ರವೆನಿಸಿದ್ದು....



ಪಿತೃವಾಕ್ಯಕೆ ಬಗ್ಗಿದ್ದು ನೀನಲ್ಲ,

ಬಗ್ಗಿಸಿದ್ದು ಪಿತನ ಹತಾಶೆ ಮತ್ತು ನಂಬಿಕೆ.

ಸೀತೆಗೆ ನಾರುಡಿಸಿದ್ದು ನೀನಲ್ಲ,

ಪತಿಭಕ್ತಿ ಮೆರೆವ ಅವಳ ಹಠಸಾಧನೆ.

ತಮ್ಮಗೂ ಬೇಕಿತ್ತು ಭ್ರಾತೃಪ್ರೇಮದ ಕಿರೀಟ,

ತ್ರೇತಾಯುಗಕೆ ರಾಮನ ಪರಮನಾಗಿಸುವ ಜಪ...

ಕಪಿಸೈನ್ಯದ ಬಲಮೆರೆಸೆ ಸೇತು ಕಟ್ಟಿಸಿದೆ,

ತಾಳ್ಮೆಬಲ ನಿರೂಪಣೆಗಷ್ಟು ವರುಷ ಏಕಾಂಗಿಯಾದೆ,

ನಿನಗಸಾಧ್ಯವೆಂದಲ್ಲ, ನೀ ಅವತಾರ ಪುರುಷ...

ತಾರೆಗಾಗಿ ಮರೆಯಾಗಿ ಗೆದ್ದಪವಾದ ಹೊತ್ತೆ

ತುಮುಲವಡಗಿಸಿ ತೋರಬೇಕಿತ್ತು ಸಮಚಿತ್ತ,

ಸಾಮಾನ್ಯನಲ್ಲವಲ್ಲಾ, ನೀನದೇ ಅವತಾರ ಪುರುಷ...



ಧರ್ಮ ಧರ್ಮವೆನುತಲೇ ವನದಿ ಕಳೆದ

ಹದಿನಾಲ್ಕು ವರುಷದ ನಿನ್ನ ಯೌವ್ವನ

ಕಾಣಲೇ ಇಲ್ಲ ಜನಕೆ, ಮಹಾನ್ ಎನಿಸಿದ್ದು

ಸೀತೆಯ ತ್ಯಾಗ.

ಅದು ಮರುಗಿದ್ದು,

ಸೌಮಿತ್ರಿಯ ನಿಷ್ಠೆಗೆ,

ಹನುಮನ ಭಕ್ತಿಗೆ.

ಬೆರಗಾದದ್ದು ರಾವಣನ ಪೌರುಷಕೆ,

ಕಪಿಸೈನ್ಯದ ಸಾಹಸಕೆ.

ನಿನ್ನ ತ್ಯಾಗ ಅವತಾರದ ಹೆಸರಲಿ ನಗಣ್ಯ.



ಸೀತೆಯ ದೇಹಕೆ ಅಗ್ನಿಪರೀಕ್ಷೆ,

ನೀ ವಿಧಿಸಿ ಕೆಳಗಿಳಿದದ್ದು, ಅವಳು ಗೆದ್ದು ಮೇಲೇರಿದ್ದು..

ನಿನ್ನತನ ಸುಟ್ಟದ್ದು, ನೀ ಸ್ವಂತದೆದುರು ಸೋತದ್ದು-

ಜಗ ಕಂಡಿಲ್ಲ, ನೀ ತೋರಿಲ್ಲ.

ರಾಜಧರ್ಮ ಪಾಲನೆಯ ಮೋಡಿ ಕವಿದಿತ್ತಲ್ಲಾ..

ಸೀತೆ ವನ ಸೇರಿದಳು,

ಬಸುರಿಗೆ ತುಂಬುವನದ ಆರೈಕೆ,

ತುಂಬುಮನದ ಹಾರೈಕೆ...

ತಪ್ಪೆಸಗಿಲ್ಲದ ನೆಮ್ಮದಿ...

ಹಾಗೂ ಭಾರವನತ್ತು ಕಳೆಯಬಲ್ಲಳು..

ನಿನಗೆ ರಾಜ್ಯಭಾರ, ಅರಮನೆವಾಸ...

ಸುತ್ತುಮುತ್ತೆಲ್ಲಾ ಟೀಕೆ, ಪ್ರಶ್ನೆಗಳು ಬಲು ತೀಕ್ಷ್ಣ..

ಜೈಕಾರದ ಸದ್ದು ಅಲ್ಲೆಲ್ಲೋ ಬಲು ಕ್ಷೀಣ...

ಸಡಿಲಾಗುವಂತಿಲ್ಲ, ಭೋರ್ಗರೆದು ಅಳುವಂತಿಲ್ಲ

ಸುಮ್ಮನಿರಬೇಕು..ನೀ ಅವತಾರಪುರುಷ.



ಸೀತೆ ಕೊನೆಗವನಿಯ ಮಡಿಲು ಹೊಕ್ಕಳು

ಆತ್ಮಹತ್ಯೆ ಅದು ಅಂದದ್ದು, ನೀ ಕೊಂದೆ ಎಂದದ್ದು

ಮಾರ್ನುಡಿಯುತಿವೆ ಇಂದೂ ಎದೆಯಿಂದೆದೆಗೆ ಬಡಿದು...

ನೀ ಹೊಕ್ಕಿದ್ದೂ ಸರಯೂವಿನ ಮಡಿಲನೇ ಅಲ್ಲವೇ?

ಅವತಾರ ಪುರುಷನದು ಅವತಾರಸಮಾಪ್ತಿಯಷ್ಟೆಯೇ?!

ಎದೆಭಾರ ನಿನದೂ ಇದ್ದಿರಬಹುದು,

ತಪ್ಪಲ್ಲದ ತಪ್ಪೆಸಗುತಾ ನೀನೂ ಅತ್ತಿರಬಹುದು,

ಒಪ್ಪಲ್ಲದ ನಿರ್ಧಾರದಡಿ ಅಪ್ಪಚ್ಚಿಯಾಗಿರಬಹುದು,

ಪ್ರಶ್ನೆ- ಜೊತೆಗೊಂದಷ್ಟು ದೂರು ನನವೂ ಇವೆ,

ಇಂದವನು ಅಡಿಗಿಟ್ಟು, ನಿನ್ನ ಮೇಲಿಟ್ಟು ನೋಡುವಾಸೆ

ಈಗಷ್ಟೇ ಜನಿಸಿರುವೆ, ಹೊಸದಾಗಿ ಅಲಂಕರಿಸುವಾಸೆ...

ಸ್ವಲ್ಪ ತಿನಿಸಿ, ಕುಡಿಸಿ, ಆಡಿಸಿ, ಮಲಗಿಸಿ, ಮತ್ತೆಬ್ಬಿಸಿ,

ನಿನ್ನಂದ ಬರೀ ನಿನ್ನವತಾರದ ಚಂದಗಳ ಸವಿಯುವಾಸೆ...

3 comments:

  1. ಹೊಸ ನಿಟ್ಟಿನಲ್ಲಿ ಯೋಚಿಸಲು ಹಚ್ಚುವ ಈ ಕವನದ ಹೂರಣವು ಪ್ರಶ್ನೆಗಳ ಸರಮಾಲೆಯಂತಿದ್ದು, 'ಇಂದವನು ಅಡಿಗಿಟ್ಟು, ನಿನ್ನ ಮೇಲಿಟ್ಟು ನೋಡುವಾಸೆ' ಏನ್ನುವ ಪರೀಕ್ಷಕ ಗುಣವೂ ಮೆಚ್ಚುಗೆಯೇ.

    ReplyDelete
    Replies
    1. ಮೆಚ್ಚುಗೆಗೆ ಧನ್ಯವಾದ ಸರ್..

      Delete
  2. ರಾಮನೆಡೆಗಿನ ಹೊಸ ಯೋಚನೆಯ ಭಾವ ಲಹರಿ...
    ಇಷ್ಟವಾಯಿತು....

    ReplyDelete