Saturday, August 24, 2013

**

ಉತ್ತರ ಗೊತ್ತಿದ್ದ ಪ್ರಶ್ನೆಗಳವು,
ಉತ್ತರ ಮರೆತ ಪ್ರಶ್ನೆಗಳವು,
ಉತ್ತರ ಗೊತ್ತಿರದ ಪ್ರಶ್ನೆಗಳವು..
ಹೀಗೇ ಪ್ರಶ್ನೆಗುತ್ತರ ಬಯಸುವವು
ಬಂದು, ಬಂದಂತೆ ಹೋದವೆಷ್ಟೋ ಪರೀಕ್ಷೆಗಳು..
ಕೆಲವು ಮುನ್ನಡೆಸುವ,
ಕೆಲವು ನಿಂತಲ್ಲೇ ಹುದುಗಿಸುವ,
ಇನ್ನೂ ಕೆಲವು ಸಾಗಿಬಂದ ಹಾದಿಯ
ಮೊದಲ ಬಿಂದುಗೊಯ್ದುಬಿಟ್ಟವುಗಳು...
ಇದೆಂಥಹುದೋ
ಜೀವವೇ?!
ಪ್ರಶ್ನೆಗಳೇ ಇಲ್ಲದ ಬರೀ ಉತ್ತರಗಳ ಸಾಮ್ರಾಜ್ಯ.
ಕಾರಣ, ಸಮಜಾಯಿಷಿ,
ತಪ್ಪೊಪ್ಪಿಗೆ, ಸಾಕ್ಷಿಪುರಾವೆ,
ಅರೋಪ-ಪ್ರತ್ಯಾರೋಪಗಳೆಂಬ
ಉತ್ತರಗಳೆಲ್ಲಾ ಭೂತಗನ್ನಡಿ ಹಿಡಿದು..
ಭರದಿ ಹುಡುಕಾಡುವಾಗ
ಪ್ರಶ್ನೆ ಹೆದರಿ ಭೂಗತ.
ಸುತ್ತಿ ಸವೆದು ಕುಸಿದುಕೂತಿವೆ ಉತ್ತರಗಳು.
ಗೊಂದಲ; ಪ್ರಶ್ನೆಯಂತನಿಸಿದಾಗ ತಮದೇ ನೆರಳು
ಅದಲುಬದಲಾದ ಪಾತ್ರಗಳಲಿ
ಒಂದಕೆ ಮುಖತಪ್ಪಿಸುವ ಗೋಳು..
ಉಳಿದುದಕೆ ಮುಗಿಯದ ಪರೀಕ್ಷೆ ಬಾಳು..

1 comment:

  1. ಈಗಿನ ಜಗದ ನಿಯಮವೇ ಅಂತು, ಪ್ರಶ್ನೆಗಳೇ ಇಲ್ಲದ ಬರೀ ಉತ್ತರಗಳ ಸಾಮ್ರಾಜ್ಯ.
    ವ್ಯವಸ್ಥೆ ಮತ್ತು ಮನುಜ ಈಗ ಪೂರಾ ಭ್ರಷ್ಟ!

    ReplyDelete