Friday, November 23, 2012

ಕ್ಷಮಿಸು..ನಾ ಬದಲಾಗಿಬಿಟ್ಟಿರುವೆ....ನೀ ಕರೆದಿದ್ದೆ, ನಾನೊದಗಿದ್ದೆ,
ಈಗ ಒಲ್ಲೆಯಾದರೆ, ನಾ ಹಿಂದೆ ಹೋಗುವೆ...

ನೀ ಭಾವವಾಗಿದ್ದೆ, ನಾನಕ್ಷರಗಳಾಗಿಸಿದೆ,
ಈಗ ಓದಲಾರೆಯಾದರೆ, ನಾನವನಳಿಸುವೆ.

ನೀ ಕೇಳಬಯಸಿದ್ದೆ, ನಾ ಹಾಡಿದ್ದೆ,
ಈಗ ಕೇಳಲೊಲ್ಲೆಯಾದರೆ, ನಾ ಮೌನವಾಗುವೆ.

ನೀ ಸೂತ್ರ ಹಿಡಿದಿದ್ದೆ, ನಾ ಗಾಳಿಪಟವಾದೆ,
ಈಗ ಹಾರಿಸಲಾರೆಯಾದರೆ, ನಾ ಕೆಳಗಿಳಿಯುವೆ.

ನೀನೆಚ್ಚರಿಸಿದ್ದೆ, ನಾ ಚಿಟ್ಟೆಯಾಗಿ ಹಾರಿದ್ದೆ,
ಈಗ ನೀ ಬಯಸುವುದಾದರೆ, ಹಾರಾಟ ನಿಲಿಸುವೆ.

ನೀ ನನ್ನತ್ತ ನಡೆದಿದ್ದೆ, ನಾನೋಡಿ ಬಂದಿದ್ದೆ
ಈಗ ಹಿಂತಿರುಗುವೆಯಾದರೆ, ನಾನಲ್ಲೇ ಉಳಿಯುವೆ.

ನೀನೊಳಗೆ ಇಣುಕಿದ್ದೆ, ನಾ ಎದೆಬಗಿದು ತೋರಿದ್ದೆ,
ಈಗ ಕಣ್ತಪ್ಪಿಸುವೆಯಾದರೆ, ನಾ ಮತ್ತೆಲ್ಲ ಬಚ್ಚಿಡುವೆ.

ನೀ ಜೀವಂತಿಕೆಯನಿತ್ತೆ, ನಾ ಚೈತನ್ಯವಾದೆ,
ಈಗ ಮುಗಿಸಬಯಸುವೆಯಾದರೆ....ಕ್ಷಮಿಸು
ಬದುಕ ಪ್ರೀತಿಸುತಿರುವೆ.....ನಾನಳಿಯಲಾರೆ..

ನೀ ಪ್ರೀತಿಸುವೆನೆಂದಿದ್ದೆ, ನಾನನುಸರಿಸಿದ್ದೆ,
ಈಗ ದ್ವೇಷಿಸುವೆಯಾದರೆ.....ಕ್ಷಮಿಸು...
ನಿನ್ನ ಪ್ರೀತಿಸುತಿರುವೆ...ನಾ ದ್ವೇಷಿಸಲಾರೆ.... .

ಸೋಜಿಗ ನೋಡು ..ಈಗ್ಯಾವುದೂ ಅಂದಿನಂತಿಲ್ಲ....
ನಾ ಖಾಲಿ ಹಾಳೆಯಲ್ಲ... ನೀ ಬರೆದುಬಿಟ್ಟಿರುವೆ..
ನನ್ನ ಜೀವಸತ್ವವಾದ ಬರಹವದು...ಅಂತಿಂಥದ್ದಲ್ಲ,
ಅಳಿಸಲಾಗುವದ್ದಲ್ಲ.... ನಾ ಬದಲಾಗಿ ಬಿಟ್ಟಿರುವೆ......

1 comment:

  1. ಮನದ ಹಾಳೆಯಲಿ ಅಳಿಸಲಾಗದ ಒಲವ ಚಿತ್ತಾರ ನೀ ಬರೆದ ಮೆಲೆ ನಾ ಬದಲಾಗಿ ಬಿಟ್ಟಿರುವೆ......
    ಚಂದದ ಬರಹ...

    ReplyDelete