Friday, November 30, 2012

ಆತ್ಮಸಖಿಗೊಂದು ಪತ್ರ.....


---------------------------------------------------------------------------

ಸನ್ಮಿತ್ರರೇ, ದೈನಂದಿನ ಜೀವನದಲ್ಲಿ ಎದುರಾಗುವ ಅದೆಷ್ಟೋ ಸನ್ನಿವೇಶಗಳು, ಸಿಕ್ಕುವ ಮಾಹಿತಿಗಳು ನಮ್ಮೊಳಗೆ ಭಾವನೆಗಳ ಮಹಪೂರವನ್ನೇ ಹರಿಸುವಷ್ಟು ಪರಿಣಾಮಕಾರಿಗಳಾಗಿರುತ್ತವೆ. ಎಷ್ಟೋ ಬಾರಿ ಆ ಭಾವನೆಯ ಜಾಡು ಹೇಗಿರುತ್ತದೆ ಅಂದರೆ, ಅನಿವಾರ್ಯ ಕಾರಣಗಳಿಗಾಗಿ ತೀರಾ ಹತ್ತಿರದ ಸುತ್ತಮುತ್ತಲಿ ಅದನ್ನ ಹರಿಯಬಿಡಲಾಗುವುದಿಲ್ಲ. ಹಾಗಾಗಿ ಅಂಥ ಕೆಲ ಸಂದರ್ಭಗಳಲ್ಲಿ ನನಗನಿಸಿದ ಭಾವನೆಗಳನ್ನು ಅವು ಮೂಡಿದ ಹಾಗೆ ನನ್ನ ಕಾಲ್ಪನಿಕ ಗೆಳತಿಯೊಬ್ಬಳಲ್ಲಿ ಹಂಚಿಕೊಳ್ಳುವ ಹಾಗೂ ಅಮೂಲಕ ನಿಮಗೂ ಆ ಅನಿಸಿಕೆಗಳನ್ನು ಪರಿಚಯಿಸುವ ಯತ್ನ ಮಾಡುತ್ತಿದ್ದೇನೆ. ಕಾಲ್ಪನಿಕ ಗೆಳತಿ ಯಾಕೆಂದರೆ, ಮಧ್ಯೆ ಮಧ್ಯೆ ತಡೆಯುವ ಹಾಗೂ ತನ್ನ ಅಭಿಪ್ರಾಯ ತೂರಿಸುವ ಗೋಜಿಗವಳು ಹೋಗಲಾರಳು ಅನ್ನುವ ಕಾರಣ- ಅಷ್ಟೆ. ಆ ಕಾಲ್ಪನಿಕ ಪಾತ್ರದಲ್ಲಿ ನನ್ನ ನಿಜಜೀವನದ ಗೆಳೆತನದ ಛಾಯೆ ಖಂಡಿತಾ ಅಡಗಿಕೂತಿರುತ್ತದೆ. ಅನುಭವವಲ್ಲದ ಅಭಿವ್ಯಕ್ತಿ ಹೇಗೆ ತಾನೇ ರೂಪ ತಾಳೀತು ಅಲ್ಲವೇ? ಈ ಶೃಂಖಲೆಯ ಮೊದಲ ಪತ್ರ.......

-----------------------------------------------------------------------------

ಸಖೀ, ಯಾವತ್ತಿನಂತೆ ಇಂದೂ ಆ ಬೆಕ್ಕು ಅದರ ಪುಟಾಣಿಗಳೊಂದಿಗೆ ಬಂದಾಗ ನಿನ್ನ ನೆನಪು ತುಂಬ ಹೊತ್ತು ಮನ ತುಂಬಿತ್ತು ಕಣೇ...ನಾನೂ ನೀನೂ ನಿಮ್ಮನೆ ಬೆಕ್ಕಿನ ಕರ್ರಗಿನ ಮೂರುಕಾಲಿನ ಒಂದು ನಿತ್ರಾಣಿ ಮರಿಗೆ ತಮ್ಮನಿಗೆ ಮದ್ದುಣಿಸಲು ತಂದಿದ್ದ ಪಿಲ್ಲರ್ ನಲ್ಲಿ ಹಾಲುತುಂಬಿ ಸಾಕಿದ್ದು, ಮೊರವೊಂದಕ್ಕೆ ಗೋಣಿಚೀಲ ಹಾಸಿ ಮಲಗಿಸಿ, ಗಳಿಗೆಗೊಮ್ಮೆ ಜೀವಂತವಾಗಿದೆಯೇ ಎಂದು ನೋಡುತ್ತಿದ್ದುದು, ಕ್ಷಣಕ್ಷಣ ಬಿಗಡಾಯಿಸುತ್ತಿದ್ದ ಅದರ ಆರೋಗ್ಯಕ್ಕಾಗಿ ಕಣ್ಣೀರಿಡುತ್ತಾ ಮನಸಿಲ್ಲದಿದ್ದರೂ ಅದರ ಸಾವಿಗೆ ಕಾಯುತ್ತಿದ್ದೇವೇನೋ ಅನಿಸುತ್ತಿದ್ದುದು... ಈ ಎಲ್ಲಾ ಭಾವನೆಗಳೂ ನಿನ್ನೆಯವೇನೋ ಅನಿಸುವಷ್ಟು ತಾಜಾವಾಗಿವೆ ಕಣೆ ಎದೆಗೂಡಲ್ಲಿ. ಈಗ ಒಂದಾರೇಳು ತಿಂಗಳ ಹಿಂದೆ ಇದೂ ಒಂದು ಪುಟಾಣಿಯೇ. ಹೇಗೋ ಅಮ್ಮನೊಂದಿಗೆ ಮಾಳಿಗೆಯೇರಿ ಬಿಟ್ಟಿತ್ತು. ಮುಂದೊಂದು ದಿನ ಜಾಗ ಬದಲಿಸಲು ಆ ಅಮ್ಮ ಕೆಳಗಿಂದ ಕರೆವಾಗ ಹಾರುವ ಧೈರ್ಯವಾಗದೆ, ಅಮ್ಮ ಕಣ್ಣಿಂದ ಮರೆಯಾಗುವುದನ್ನೂ ತಡೆಯಲಾರದೆ, ಹೃದಯವಿದ್ರಾವಕವಾಗಿ ಕೂಗುತ್ತಾ ದಿನವೆಲ್ಲ ಚಿಟ್ಟೆನಿಸುವಂತೆ ಮಾಡಿತ್ತು. ತಡೆಯದೇ ನಾನು ಹರಸಾಹಸ ಮಾಡಿ ಅದರಮ್ಮನ ಗುರ್ರ್ರ್ ಗಳ ನಡುವೆ ಹೇಗೋ ಧೈರ್ಯ ಮಾಡಿ ಕೆಳಗೆ ತಂದಿಟ್ಟಿದ್ದೆ. ಈಗ ನೋಡು ಅದರ ಮರಿಗಳಿಗಾಗಿ ವಾರಕೊಂದರಂತೆ ಹೊಸಹೊಸ ಜಾಗ ಹುಡುಕಿ ಠೀವಿಯಿಂದ ಕರೆದೊಯ್ಯುವ ಪರಿ...! ಜಗತ್ತೆಷ್ಟು ದೊಡ್ಡ ದೊಡ್ಡ ಹೆಜ್ಜೆಯಿಟ್ಟು ಮುನ್ನಡೆಯುತ್ತಿದೆ, ಅದರದೇ ಅಂಗಗಳಾದ ನಮ್ಮ ಮನಸ್ಸಿನ ನಡಿಗೆ ಇನ್ನೂ ಅದೆಷ್ಟೋ ಹೆಜ್ಜೆ ಹಿಂದಿದೆ ಅನಿಸುವುದಿಲ್ಲವೇನೇ ಒಮ್ಮೊಮ್ಮೆ? ಅದುಬಿಡು.... ನಾನಿಂದು ನಿನ್ನಲ್ಲಿ ಹಂಚಿಕೊಳ್ಳಬೇಕಾಗಿರುವ ಅರ್ಥವಾಗದ ವಿಷಯ ಯಾವುದು ಗೊತ್ತೇನೇ? ಈ ಬೆಕ್ಕಿನ ಅಪ್ಪನೇ ಅದರ ಮರಿಗಳಿಗೂ ಅಪ್ಪ!! ಇದು ಪ್ರಕೃತಿಯ ಅತ್ಯಂತ ಸಹಜ ನಿಯಮವೇನೋ ಅನ್ನುವಷ್ಟರ ಮಟ್ಟಿಗೆ ವಂಶಾಭಿವೃದ್ಧಿಯ ವೇಳೆ ಅವು ನಿರಾಳ. ಅದನ್ನ ಒಪ್ಪಿಕೊಳ್ಳುವುದು ನಮಗೆ ಅತ್ಯಂತ ಕಷ್ಟದ ವಿಷಯವೆನಿಸುವುದು ಮತ್ತು ಆ ಬಗ್ಗೆ ಯೋಚಿಸುವುದೂ ಅಸಹ್ಯವೆನಿಸುವುದು- ಇದಕ್ಕೆ ಕಾರಣ, ನಮ್ಮಲ್ಲಿರುವ ಮನಸು ಅಂತೀಯಾ? ಮನಸು ಬೆಕ್ಕಿಗಿರುವುದಿಲ್ಲವಾ? ನಾನು ನಗುಮುಖದಿಂದಿಕ್ಕಿದರೆ ಮಾತ್ರ ಧೈರ್ಯವಾಗಿ ಓಡಿಬಂದು ಕಾಲುನೆಕ್ಕಿ,ಮೈಯೆಲ್ಲ ನನ್ನ ಕಾಲಿಗುಜ್ಜಿ ಮುದ್ದಿಸಿ ಹಾಲು ಕುಡಿದೋಡುವ ಇದೇ ಬೆಕ್ಕು, ಅದರ ಕೂಗಿಗೆ ಸಿಟ್ಟಿಗೆದ್ದು ಹಾಳಾಗಿ ಹೋಗು ಎನ್ನುವ ಭಾವದಲ್ಲಿಕ್ಕಿದ ಹಾಲು ಕುಡಿಯಲು ಬರುವ ಮಂದಗತಿಯ ನಡೆಯೇ ಬೇರೆ ಗೊತ್ತಾ? ಮನಸೆಂಬುದಿಲ್ಲದಿದ್ದರೆ ಇದು ಸಾಧ್ಯವೇನೇ ಸಖೀ? ಇರಲಿ ಬಿಡು ಅದರದ್ದು ನಮಗರ್ಥವಾಗದ ಜೀವನ ಶೈಲಿ ಅಂದುಕೊಂಡು ಬಿಡಬಹುದೇನೋ....ಆದರೆ ನಿನ್ನೆ ಪೇಪರ್ ನಲ್ಲಿ ಓದಿದ ಒಂದು ಸುದ್ಧಿ ಸಾಮಾನ್ಯವಾಗಿ ಒಂದು ಓದಿಗೆ ಅಥವಾ ಒಂದು ದೃಶ್ಯ ವೀಕ್ಷಣೆಗೆ ಕಣ್ಣೀರಾಗದ ನನ್ನನ್ನೂ ಅಳಿಸಿತ್ತು ಕಣೇ.. ಬಿಕ್ಕಿಬಿಕ್ಕಿ ಅತ್ತು ಬಿಟ್ಟೆ.. ನನಗೇ ಗಾಭರಿಯಾಗುವಷ್ಟು..ಯಾಕೆಂದರೆ ಆ ಪಾಟಿ ಅಳುತ್ತಿರುವುದು ಯಾಕೆ ಅಂತನೇ ಗೊತ್ತಿರದ ಅಳು ಅದು. ಸಣ್ಣ ಮಕ್ಕಳು ಒಪ್ಪಿಕೊಳ್ಳಲಾರದ್ದೇನಾದರೂ ನಡೆಯುತ್ತಿದ್ದಾಗ ಪ್ರತಿಕ್ರಿಯಿಸುವಂತಿತ್ತು ನನ್ನ ಮನಸಿನ ಅಸಹಾಯಕತೆಯ ಅಭಿವ್ಯಕ್ತಿ...

ಒಂದು ಹನ್ನೆರಡು ವರ್ಷದ ಹೆಣ್ಣುಮಗುವನ್ನ ಅದರ ಅಪ್ಪ, ಅಣ್ಣ ಮತ್ತು ಚಿಕ್ಕಪ್ಪ ಸೇರಿ ಎರಡು ವರ್ಷಗಳಿಂದ ನಿರಂತರ ಅತ್ಯಾಚಾರಕ್ಕೊಡ್ಡುತ್ತಿದ್ದರಂತೆ. ಶಾಲೆಯಿಂದೊಂದು ದಿನ ಮನೆಗೆ ಹೋಗಲಾರೆ ಎಂದಳುತ್ತಿದ್ದ ಮಗುವನ್ನು ಪುಸಲಾಯಿಸಿ ಜಾಣತನದಿಂದ ಕೇಳಿ ತಿಳಿದ ಉಪಾಧ್ಯಾಯಿನಿಯೊಬ್ಬರು ಈ ವಿಷಯ ಬಯಲು ಮಾಡಿದ್ದರು..ಇಷ್ಟೇ ಕಣೆ ನನ್ನಿಂದ ಓದಲಾದದ್ದು. ಮುಂದೆ ಕೈಕಾಲೆಲ್ಲ ಕಸುವಳಿದಂತಾಗಿ ಕಣ್ಣುಕತ್ತಲಿಟ್ಟುಬಿಟ್ಟಿತ್ತು. ಅವಳಮ್ಮ ಇದ್ದಳೇ ಇಲ್ಲವೇ... ಈ ಮುಂತಾದ ಈಗ ಏಳುತ್ತಿರುವ ಪ್ರಶ್ನೆಗಳು ಆಗ ಏಳಲೇ ಇಲ್ಲ ನೋಡು. ಹೌದು ನಿಜವೇ, ಇದೇನೂ ಹೊಸದಲ್ಲ, ಎರಡು ವರ್ಷದ ಮಗುವನ್ನೂ ಲೈಂಗಿಕಶೋಷಣೆಗೊಳಪಡಿಸಿದ್ದನ್ನು ಓದಿದ್ದೇನೆ, ಸಂಕಟಪಟ್ಟಿದ್ದೇನೆ. ಆದರೆ, ಈ ಸಾಲುಗಳು ಒಂದು ಕ್ಷಣ ಕಾಲಕೆಳಗಿನ ನೆಲ ಕುಸಿಯುವಂತಾಗಿಸಿದವು...ಬಹುಶಃ ಆ ಮಗುವಿನದು ಹೆಚ್ಚುಕಮ್ಮಿ ನನ್ನ ಪುಟಾಣಿಯ ವಯಸ್ಸಾಗಿರುವುದರಿಂದ ಆ ಮಟ್ಟಿಗಿನ ಸಂಕಟವಾಯಿತೋ ಏನೋ.. ಇದೆಂಥ ಅಭದ್ರತೆಯಲ್ಲಿ ಇದೆ ಕಣೇ ನಮ್ಮ ಹೆಣ್ಣುಕಂದಮ್ಮಗಳ ಜೀವನ..?! ಕಿರುಚಿ ಅಳಬೇಕೆನಿಸುತ್ತಿದೆ.

ಅತ್ಯಾಚಾರವೆಂಬುವುದೇ ತೀರಾ ಮನಸ್ಸನ್ನು ಘಾಸಿಗೊಳಿಸಿ, ಮನೋಸ್ಥೈರ್ಯವನ್ನ ಚೂರುಚೂರಾಗಿಸುವ ಅನುಭವ. ಅದರಲ್ಲೂ ಭದ್ರತೆಗೆ ಪೂರಕವಾಗಬೇಕಾದ ಅನುಬಂಧಗಳೇ ಆ ಜೀವಂತ ಸಾವಿನ ನೋವನ್ನಿತ್ತಾಗ... ಆ ಮಗುವಿಗೆ ಸತ್ತುಬಿಡುವಾ ಅನ್ನಿಸುವಷ್ಟೂ ವಯಸ್ಸಾಗಿಲ್ಲ ಕಣೇ... ಅದರ ಮನಸಿನ ನೋವು ಯಾವ ಪರಿಯದ್ದಿದ್ದೀತು..ಆಗತಾನೇ ಅರಳಿದ ಹೂವಿನಂಥ ಅದರ ಆ ಮೃದು ಮಧುರ ಮೈಮನಸು ಹೊಸಕಿಹಾಕಲ್ಪಟ್ಟಿತ್ತು ಅದೂ ಒಮ್ಮೆ ಅಲ್ಲ, ನೂರಾರು ಬಾರಿ.

ಇಲ್ಲ ಕಣೆ, ಪದೇ ಪದೇ ಅತ್ಯಾಚಾರವೆಸಗಿದ ಅವರಿಗೊಮ್ಮೆಯೂ ಹಿಂಜರಿಕೆಯಾಗಲಿಲ್ಲವೇ ಎಂಬ ಪ್ರಶ್ನೆ ಹುಟ್ಟಿದರೂ ಅಲ್ಲೇ ಮರೆಯೂ ಆಯಿತು. ಮೊದಲಬಾರಿ ಆ ಕಂದಮ್ಮನನ್ನು ಉಪಯೋಗಿಸಿಕೊಂಡಾಗ ಅಳುಕದ, ಹಿಂಜರಿಯದ ಮನಸು, ಅದು ಮನುಷ್ಯರ ಮನಸೇ ಅಲ್ಲ, ಮೃಗಗಳದು. ಅವರ ಬಗ್ಗೆ ಯಾವ ಯೋಚನೆಯೂ ಬರುತ್ತಿಲ್ಲ ನನಗೆ, ನನ್ನ ಕಾಡುತ್ತಿರುವುದು- ಆ ಮುಗ್ಧ ಜೀವದ ಅಸಹಾಯಕ ನೋವು.. ಮುಂದಿನ ಆ ಜೀವನದಲ್ಲಿ ಮತ್ತದರ ಪರಿಣಾಮ.

ಎಲ್ಲ ಬಿಡು.. ಯಾವುದೋ ವಿಷಯಕ್ಕೆ ಹತ್ತಾರು ವರ್ಷಗಳಿಂದ ನಮ್ಮೊಡನಿದ್ದು ಬಾಳು ಹಂಚಿಕೊಂಡ ಗಂಡಂದಿರೇ ಒಮ್ಮೊಮ್ಮೆ ಮನಸಿನ "ಒಲ್ಲೆ" ಎನ್ನುವ ಮಾತನ್ನು ತಿಳಿದೋ ತಿಳಿಯದೆಯೋ ದೇಹವನ್ನು ಬಳಸಿಕೊಂಡರೆ ನಾವದೆಷ್ಟು ಅಸಹಾಯಕತೆ ಅನುಭವಿಸುವುದಿಲ್ಲಾ... ಹೇಳು.. ಅದೆಷ್ಟು ರೋಷ ಉಕ್ಕಿ ಬರುವುದಿಲ್ಲ, ಅದೆಷ್ಟು ಕಣ್ಣೀರಿಳಿಯುವುದಿಲ್ಲ..! ಅದೂ ನಾವವರ ಜೊತೆ ಬಾಳಿನ ಅತ್ಯಂತ ರಮಣೀಯ ಕ್ಷಣಗಳನ್ನೂ ಹಂಚಿಕೊಂಡಿರುತ್ತೇವೆ, ನಮ್ಮ ಎಷ್ಟೋ ಸಂತಸಗಳಿಗೆ, ರೋಮಾಂಚನಗಳಿಗವರೇ ಕಾರಣರಾಗಿರುತ್ತಾರೆ, ಅಲ್ಲದೆ ಆ ಸಂಬಂಧ ಆ ಕ್ರಿಯೆಯನ್ನು ತನ್ನೊಳಗಿನ ಅವಿಭಾಜ್ಯ ಅಂಗವಾಗಿ ಹೊಂದಿರುವಂಥದ್ದು .ಆದರಿಲ್ಲಿ ಈ ಮಗು ಇನೂ ಒಬ್ಬರೊಡನೆ ದೇಹ ಹಂಚಿಕೊಳ್ಳುವ ವಿಷಯವನ್ನೇ ತಿಳಿದಿರಲಾರದ ವಯಸಿನಲ್ಲಿ ಅವರ ಇಚ್ಚೆಗನುಗುಣವಾಗಿ ಅದನ್ನವರಿಗೊಪ್ಪಿಸಬೇಕು ಅಂದರೆ, ಅದೆಂಥ ಅಸಹಾಯಕತೆಯಿದ್ದೀತು ಅದರ ಮುಂದೆ, ವಿರೋಧಿಸಿದಾಗ ಎಂಥೆಂಥ ಶಿಕ್ಷೆಗಳಿಗೊಡ್ಡಿಕೊಂಡಿರಬಹುದು, ಎರಡು ವರ್ಷಗಳ ಕಾಲ ಮುಚ್ಚಿಟ್ಟುಕೊಂಡ ಆ ಮಗುವನ್ನು ಇನ್ಯಾವ್ಯಾವ ತರಹದ ನಿಯಂತ್ರಣಗಳಲ್ಲಿಟ್ಟಿರಬಹುದು, ಅಲ್ಲದೇ ಮುಂದಿನ ಜೀವಿತಕಾಲದಲ್ಲಿ ಅದರ ಮನಸು ಲೈಂಗಿಕ ಜೀವನದ ಬಗ್ಗೆ ಅಸಹ್ಯವೆಂದಲ್ಲದೆ ಇನ್ನೆಂಥ ಭಾವನೆಯುಳಿಸಿಕೊಂಡೀತು ಹೇಳು... ಮತ್ತಳುತ್ತಿದ್ದೇನೆ ಕಣೆ...

ನಾವು ಚಿಕ್ಕವರಿದ್ದಾಗ ಅಣ್ಣ ನಾನು ಸುಮಾರು ಹದಿಮೂರು ಹದಿನಾಲ್ಕರ ವಯಸಿನ ನಂತರ ಒಂದೇ ಕುರ್ಚಿಯಲ್ಲಿ ಕೂತು, ಮೈಕೈ ಮುಟ್ಟಿ ತಮಾಷೆಯಾಡುವುದಾಗಲಿ, ಒಂದೇ ಕೋಣೆಯಲ್ಲಿ ಮಲಗುವುದಾಗಲಿ ನಿಷಿದ್ಧವಿತ್ತು. ಎಷ್ಟೊ ಬಾರಿ ಇದನ್ನು ನೆನೆಸಿಕೊಂಡಾಗ ಮುಂದಿನ ದಿನಗಳಲ್ಲಿ ಅಪ್ಪ-ಅಮ್ಮ, ಅಜ್ಜ-ಅಜ್ಜಿಯರ ಈ ನಿರ್ಬಂಧದ ಬಗ್ಗೆ ಇರಿಸುಮುರುಸಿನ ಭಾವನೆ ಬರುತ್ತಿತ್ತು, ಅರ್ಥವಾಗುತ್ತಿರಲಿಲ್ಲ, ತುಂಬಾ ಸಂಕುಚಿತ ಮನೋಭಾವನೆಯೆನಿಸಿದ್ದೂ ಇತ್ತು. ಬಹುಶಃ ಇಂಥ ಒಂದು ಪ್ರವೃತ್ತಿ ಮಾನವನ ಮನಸಿನಲ್ಲಿ ಸಂಬಂಧಗಳ ಯಾವ ಪರಿವೆಯೂ ಇಲ್ಲದ ಒಂದು ರೀತಿಯಲ್ಲಿ ಎದ್ದೇಳುವ ಸಾಧ್ಯತೆಗಳ ಬಗ್ಗೆ ಮುಂಚಿನಿಂದಲೂ ಸುಳಿವಿತ್ತು, ಹಾಗಾಗಿ ಅವರು ಅದಕ್ಕೆಡೆ ಮಾಡಿಕೊಡದಂತೆ ಈ ನಿಯಮಗಳನ್ನು ರೂಪಿಸಿದ್ದರು. ಹಾಗಾದರೆ ಮೂಲತಃ ಮಾನವನಿಗೂ, ಮೃಗಗಳಿಗೂ ದೈಹಿಕ ತೃಷೆಯ ವಿಷಯದಲ್ಲಿ ಎಳ್ಳಷ್ಟೂ ವ್ಯತ್ಯಾಸವಿಲ್ಲ ಅಂತೀಯಾ?

ಪ್ರಾಣಿಗಳಿಗಿಂತ ಮುಂದುವರಿದ, ಮೇಲ್ಮಟ್ಟದ ಮನೋಸ್ಥಿತಿ ನಮ್ಮದು ಎಂಬ ಪೊಳ್ಳು ಹೆಮ್ಮೆ ಈ ಸಂದರ್ಭದಲ್ಲಿ ತಲೆಕೆಳಗಾಗುವುದನ್ನು ನಾವೊಪ್ಪಿಕೊಳ್ಳಲೇಬೇಕು. ಅದೂ ಅವುಗಳಲ್ಲಿ ಹೀಗೆ ತಮ್ಮ ತೀಟೆ ತೀರಿಸಿಕೊಳ್ಳಲು ಬಹುಶಃ ಅಪ್ರಾಪ್ತ ವಯಸ್ಕ ಪ್ರಾಣಿಗಳನ್ನ್ಯಾವತ್ತೂ ಬಳಸಿಕೊಳ್ಳವು ಅನಿಸುತ್ತದೆ. ಅಷ್ಟರಮಟ್ಟಿಗಾದರೂ ನಿಯಮಗಳನ್ನು ಬಾಳಿನಲ್ಲಿ ಪರಿಪಾಲಿಸಿಕೊಂಡು ಬಾಳುವ ಅವುಗಳಿಗಿಂತ ನಾವು ಯಾವ ಅರ್ಥದಲ್ಲಿ ಮುಂದುವರಿದ ಜನಾಂಗದವರು ಕಣೇ..? ಅತೃಪ್ತಿಯ ಕೈಯ್ಯಲ್ಲಿ ಬುದ್ಧಿ, ದೇಹಗಳೆರಡನ್ನೂ ಕೊಟ್ಟು ನಾವು ಮನುಜರು, ಮಾನವ ಜನ್ಮ ದೊಡ್ಡದು ಅಂದುಕೊಳ್ಳುವುದರಲ್ಲಿ ಯಾವ ಪುರುಷಾರ್ಥವಿದೆ ಹೇಳು...

ಇಷ್ಟಕ್ಕೂ ಬರೀ ಮಾತುಗಳಲ್ಲಿ ರೋಷ ವ್ಯಕ್ತ ಪಡಿಸುವ ನಾವೂ ಒಂದು ರೀತಿಯಲ್ಲಿ ಮನುಷ್ಯತ್ವವಿಲ್ಲದವರೇ ಹೌದು. ಆ ಪಾಪಿಗಳಿಗೆ ಶಿಕ್ಷೆಯೇ ಆಗದೆ ಹೊರಬಂದು ರಾಜಾರೋಷವಾಗಿ ಬಾಳುವ ಸಂದರ್ಭಗಳೇ ಹೆಚ್ಚು. ಆದರೂ ಒಂದಷ್ಟು ವರ್ಷ ಕಾರಾಗೃಹವಾಸದ ಶಿಕ್ಷೆಯಾದೀತೇ ಹೊರತು ಇನ್ನದಕ್ಕಿಂತ ಹೆಚ್ಚಿನದೇನೂ ಅಲ್ಲ. ಮಾತಾಡುತ್ತಾ ಕೈಚೆಲ್ಲಿ ಕೂತುಬಿಡುವ ನಾವು ಪರೋಕ್ಷವಾಗಿ ಆ ಅಮಾನುಷತ್ವದ ಮುಂದೆ ಸೋಲೊಪ್ಪಿಕೊಂಡಂತೆಯೇ ಅಲ್ಲವೇನೇ? ನಮ್ಮ ನಮ್ಮ ಸ್ವಾರ್ಥದ ಕೋಟೆಯೊಳಗಡೆ ನಮ್ಮ ಸಮಯವನ್ನೂ, ಸತ್ವವನ್ನೂ ಬರೀ ನಮ್ಮೊಳಿತಿಗಾಗಿ ರಕ್ಷಿಸಿಕೊಳ್ಳುವುದನ್ನು, ಉಳಿಸಿ ಬಳಸಿಕೊಳ್ಳುವುದನ್ನು ಜೀವನದ ಪರಮಗುರಿಯಾಗಿಸಿಕೊಂಡ ಇಂದಿನ ಜೀವನಶೈಲಿಯಲ್ಲಿ ನಾನಾದರೂ ಏನು ಮಾಡಿಯೇನು, ನಾಲ್ಕಾರು ಗೆರೆ ಬರೆದು ಹಗುರಾದೇನು, ಮಗಳಿಗಿನ್ನೊಂದಷ್ಟು ಜಾಗ್ರತೆಯಾಗಿರು ಎಂದೆಚ್ಚರಿಸಿಯೇನು, ನಿನ್ನ ಜೊತೆ ಹಂಚಿಕೊಂಡೇನು ಅಷ್ಟೆ. ಮುಂದೆ ಮತ್ತದೇ ದಿನಚರಿಗಳಲ್ಲಿ ಮುಳುಗಿ ಹೋಗುವುದು .... ಇರಲಿಬಿಡು.. ಅಸಹಾಯಕತೆಯ ಕಾರಣ ಮುಂದೊಡ್ಡುವುದೂ ಒಂದೊಳ್ಳೆಯ ಕಳ್ಳನೆಪವಾಗಿಬಿಟ್ಟಿದೆ ಈಗೀಗ. ನೀರು ತುಂಬಿದ ಗುಳಿಯೆಡೆಗೇ ಹರಿದು ಬರುವ ನೀರು ಕೂಡಾ ದಾರಿ ಮಾಡಿಕೊಳ್ಳುವುದು ಎನ್ನುವ ನಿಜದಂತೆ ಅಸಹಾಯಕತೆಯೊಳಗಿದ್ದಷ್ಟೂ ಅದು ನಮ್ಮನ್ನು ಇನ್ನೂ ಇನ್ನೂ ಹುಡುಕಿಕೊಂಡು ಬರುವುದು ಎನ್ನುವ ಮಾತನ್ನರಿತುಕೊಳ್ಳಬೇಕಾಗಿರುವ ತುರ್ತು ಈಗ ಹೆಣ್ಣುಜನಾಂಗದ ಮುಂದೆ ಬೃಹದಾಕಾರವಾಗಿರುವುದಂತೂ ಸುಳ್ಳಲ್ಲ ಏನಂತೀಯಾ...

ಅವಳ ನೋವೊಳಗೆ ಕಳೆದುಹೋಗಿದ್ದೆ, ಬಾಕಿಯಿರುವ ನನ್ನ ಕೆಲಸಗಳು ಕಾಯುತ್ತಿವೆ, ಮತ್ತೊಮ್ಮೆ ಮಾತಾಡುವಾ, ಬರಲಾ...























No comments:

Post a Comment