Monday, November 26, 2012

ಇರುವುದೆಲ್ಲವ ಬಿಟ್ಟು.


----------------------

ಸಸಿಯಲರಳದ, ಮರದಿ ಗೊಂಚಲಾಗಿ ಬಾಗಿತೂಗುವ

ಮುಗಿಲಮಲ್ಲಿಗೆಯ ಗೊಂಚಲಲಿ ಸೆರಗು ತುಂಬುವಾಸೆ....

ಉದುರಿದವ ನೆಯ್ದಾಯ್ತು, ಬಿಡುಕಟ್ಟಿ ಗೊಂಚಲಾಗಿಸಿದ್ದಾಯ್ತು,

ಮನಸೊಪ್ಪುತಿಲ್ಲ...



ಅಂಕೆಗೆ ಸಿಗದೆ, ನಿಲುಕದೆತ್ತರದಾಕಾಶದಿ ಚೆಲ್ಲಿ ಮಿನುಗುವ,

ನಕ್ಷತ್ರಗಳ ರೆಂಜೆಹೂ ಆಯ್ದಂತಾಯ್ದು ಸೂರನಲಂಕರಿಸುವಾಸೆ..

ಚಿತ್ರ ಬರೆಸಿದ್ದಾಯ್ತು, ಬಣ್ಣ ತುಂಬಿದ್ದೂ ಆಯ್ತು...

ಮನಸೊಪ್ಪುತಿಲ್ಲ.....



ತುಳಸಿಪೂಜೆ.. ನಕ್ಷತ್ರಕಡ್ಡಿ ಉರಿಸುತಿದ್ದ ಮಗಳು...

ಜೊತೆ ನಾನು.. ಕಣ್ಣು ಮುಗಿಲಮಲ್ಲಿಗೆ ಮರದತ್ತ, ಮತ್ತಾಕಾಶದತ್ತ.

"ಇಲ್ಲಿ ಚಂದ ನೋಡಮ್ಮಾ....:"ಅಂದವಳೊಡನಿರದಾದೆ, ದೃಷ್ಟಿ ಅತ್ತತ್ತ..

ಇರುವುದೆಲ್ಲವ ಬಿಟ್ಟು.......



ಅಮ್ಮಾನಾಸೆಗೆ ಮಗಳಿಗೋ ನಗು... "ಪುಟ್ಟ ಮಗು ನನ್ನಮ್ಮ...".

ಆ ನಗು ಹೀಗಂದಂತಾಯ್ತು........



"ನೋಡಿಲ್ಲಿ ರಾತ್ರಿರಾಣಿಯ..,

ಮುಗಿಲಮಲ್ಲಿಗೆಯಂತೆಯೇ ಅಧೋಮುಖಿಗೊಂಚಲು,

ಅವಳದು ಸೆಳೆವಘಮವಾದರೆ, ಇದು ಸಂತೈಸುವ ಮೆಲುಕಂಪು

ಅವಳಲ್ಲಿ ಎತ್ತರದಲ್ಲಿ, ಇವಳಿಲ್ಲೇ ನಿನ್ನ ಪಕ್ಕದಲ್ಲಿ..

ಅವಳೆಲ್ಲರಂತೆ ಹಗಲ ಪ್ರೇಮಿ, ಇವಳೆಲ್ಲರಂತಲ್ಲ....

ನೋಡಿಲ್ಲಿ ನಕ್ಷತ್ರ ಕಡ್ಡಿಯ.......

ತಾರೆಗಳಂತೆಯೇ ಫಳ ಫಳ ಹೊಳಪು,

ಒಂದೇ ಕಿಡಿಯಿಂದುದುರೊ ನೂರಾರು ಮಿನುಗ ತಾಣ

ಅವಲ್ಲಿ ನಿಲುಕದೆತ್ತರದಲ್ಲಿ, ಇವಿಲ್ಲೇ ನೀ ಬಯಸಿದಲ್ಲಿ...

ಅವಕೆಲ್ಲರಂತೆ ತಮ್ಮಳತೆಯದೇ ನಡೆ, ಇವು ನಿನ್ನಾಣತಿಯಡಿಯವು.."



ಹೌದಲ್ಲಾ....ಅವಳಂತೆ ಈ ಕ್ಷಣದ ಬಾಳು ಯಾಕೊದಗುತಿಲ್ಲ?!

ಮನೆಯೊಳ ನಡೆದೆ,

ಲಗುಬಗೆಯಲಿ ನಾ ಮಗುವಾಗಿದ್ದಾಗಿನ ಭಾವಚಿತ್ರ ತೆಗೆದೆ...

ನಾನೂ ಮಗುವಾಗಿದ್ದೆ,

ಅದೆ ಕಣ್ಣು, ಅದೆ ಮೂಗು, ಅದೆ ಬಾಯಿ-ಹಾಗೇ ಇವೆ

ಮನಸು ಮಾತ್ರ ಯಾಕಂತೇ ಉಳಿದಿಲ್ಲ...?

ದೇಹ ಬೆಳೆದಂತೆ ಮನ ಕಿರಿದಾಗಿ ಸಾಗಿದೆ..

ಇರುವುದೆಲ್ಲವ ಬಿಟ್ಟು ಸಿಗದುದಕೆ ಕೈ ಚಾಚಿದೆ..



1 comment:

  1. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂಬುದು ಎಲ್ಲರ ಮನದ ಹಾಡು, ಅದನ್ನು ಒಂದು ಪ್ರತೀಕವಾಗಿಸಿಕೊಂಡು ಇರುವಲ್ಲಿ ಬದುಕು ಎಂಬ ಜೀವನ ಸಾರವನ್ನು ಬಿಟ್ಟುಕೊಟ್ಟ ಪರಿ ಮನಮೆಚ್ಚುವಂತದ್ದು. ಮಲ್ಲಿಗೆಯ ನಗು, ಮಗುವಿನ ಸ್ಥಿತಿ ಪ್ರಜ್ಞ ಬದುಕಿನಿಂದ ಕಂಡುಕೊಂಡ ಸತ್ಯಗಳನ್ನು ಈ ಕಾವ್ಯದಲ್ಲಿ ಸಮೀಕರಿಸಿದ್ದು ಕವಯತ್ರಿಯ ಹೆಗ್ಗಳಿಕೆ. ಕವಿತೆ ಹಿಡಿಸಿತು ಅನಕ್ಕಾ. :)

    ReplyDelete