Tuesday, May 14, 2013

ಅಕ್ಕನಂಥ ಅಕ್ಕತಂಗಿಯರಿಗೆ..


ನೀನೂ ಅಷ್ಟೇ ಕಣೇ, ನನಗೊಂದು ಪ್ರಶ್ನೆ.
ಅಕ್ಕನಾಗುವ ಹಕ್ಕು ನಿನ್ನದೂ ಇತ್ತು,
ಹುಟ್ಟುವಾಗದು ಸುಪ್ತಗುರಿಯೂ ನಿನದಿತ್ತು,
ಅಕ್ಕನಾಗದುಳಿದೆ, ಕಾರಣವದೇನೇ?

ನಿನ್ನ ಕ್ಷಣಗಳ ತಮ್ಮ ಹಕ್ಕೆನುವ ನಿನ್ನವರೂ ಇದ್ದರು.
ನೀ ನೀನಾಗ ಹೊರಟೆ, ಅವರು ಹೊರಗೆಳೆದರು,
ಬಿಟ್ಟೊಳನಡೆಯದೆ ಹೊರಗುಳಿದೆ, ಅವರೊಳಗಿಳಿದರು.
ಕುಬ್ಜಳಾದೆ ಅಕ್ಕನೆದುರು, ಅವರವರಾಗೇ ಉಳಿದರು.

ನಿನ್ನೊಳಗೂ ಚಿಮ್ಮಿದೆ ವೈರಾಗ್ಯವೆಲ್ಲೆಡೆ,
ಹಿಡಿದೆಳೆವ ಮೋಹಪಾಶ ಹತ್ತಿಕ್ಕುತಿದೆ.
ಎದ್ದೆಬ್ಬಿಸುವ ಕ್ರಾಂತಿಯ ಮೊಳಕೆಯಿದೆ,
ತಗ್ಗಿನಡೆವಮ್ಮನ ಬುದ್ಧಿಮಾತದ ಮುರುಟಿಸಿದೆ.

ಎದೆಗೆ ಕೈಹಾಕುತ ಎದೆಮೆಟ್ಟಿ ಒಳಹೊಕ್ಕುವ,
ಮತ್ತದೇ ಎದೆಗಧಿಪತಿಗಳೆನಿಸುವ,
ಎದೆಯಮೃತ ಮೆಲ್ಲುತ ಎದೆಗೊದೆದು ನಗುವ,
ಬೆಳೆದದೇ ಎದೆಯೆಳೆಯ ಕತ್ತರಿಸುವ ಬಂಧ ಬೇಕೇನೇ?!

ಕೈಬೇಡಿ ಬಳೆ, ಸರಪಳಿ ಗೆಜ್ಜೆಯೆಂದುದು ಸಾಕು.
ಒಳ್ಳೆಯತನದ ವಸ್ತ್ರ ಕಿತ್ತೊಗೆದು ಬೆತ್ತಲಾಗು.
ನಿನದೇ ಆಸ್ತಿ ನೀನು, ಬಯಸಿದಲ್ಲಿ ಬಯಲಾಗು,
ನಿನ್ನದೇ ಪರದೆಯಿದೆ, ಬೇಕಾದಲ್ಲಿ ಮರೆಯಾಗು.

ವ್ಯವಸ್ಥೆಯುಳಿಸುವ ಸೋಗು, ತಾಳ್ಮೆಸಹನೆಯ ಸೊಬಗು,
ಅಪರಿಚಿತ ಮಾಡುತಿವೆ ನಿನ್ನ ನಿನಗೆ
ಬಿಂಬವದೇ ಒಳಗುಂಟು ಶುಭ್ರ ಕನ್ನಡಿಯಲ್ಲಿರೆ,
ಪೀಠದಲಿಟ್ಟಲ್ಲ, ಅವಳನೆದುರಿಟ್ಟು ನೋಡು.







1 comment:

  1. ಅತ್ತ್ಯುತ್ತಮ ಕಿವಿ ಮಾತಿನ ಕವನ. "ಬಿಂಬವದೇ ಒಳಗುಂಟು ಶುಭ್ರ ಕನ್ನಡಿಯಲ್ಲಿರೆ" ಅಲ್ಲವೇ ಮತ್ತೆ?

    ReplyDelete