Thursday, May 23, 2013

ನಿನ್ನ ಜಾಡು, ನನ್ನ ಪಾಡು.


ನೀ ಬೆಳೆವ ಮಾತಾಡುತ್ತೀ,
ನಾನುಳಿಸಿಕೊಳುವ ಬಗೆ ಹುಡುಕುತ್ತೇನೆ.

ನೀ ವಿಸ್ತಾರಕೆಲ್ಲೆಡೆ ಶೋಧಿಸುತ್ತೀ,
ನಾ ಅಸ್ತಮಿಸುವ ರವಿಗಾಗಿ ಅಳುತ್ತೇನೆ.

ನೀ ಅರಳುವ ಗಳಿಗೆಗೆ ಕಾಯುತ್ತೀ,
ನಾ ಉದುರುವೆಲೆಯೊಳ ನಡೆಯುತ್ತೇನೆ.

ನಾನೇನು ಹೇಳಲಿ ಒಲವೇ...
ನೀನೇರುವೆತ್ತರ, ನಿನಗಾಗಿ ನನ್ನೆಲ್ಲಾ
ಆಶಯದಾಶ್ರಯತಾಣವೂ ಹೌದು.
ಅಲ್ಲೆನ್ನ ಕಲ್ಪಿಸಿಕೊಳಲಾಗದ
ಅಳುಕಿನಡಗುದಾಣವೂ ಹೌದು.

ನಿಜ, ನರಗೂ ಮರಕೂ ಒಂದೇ ವಿವಶತೆ.
ಅಲ್ಲಿ ಬೆಳೆವುದೆಂದರೆ ದೂರಾಗುವುದು ಅಷ್ಟೇ..
ಬೇರಿಗಂಟಿಕೊಂಡರೆ ಮರವೆನಿಸದ
ನೆಲಕೆ ದೂರಾಗದೆ ವಿಶಾಲವಾಗದ
ಅಸಹಾಯಕತೆ ಗ್ರಾಸ ಬೆಳವಣಿಗೆಗೆ ...

ಬೇರಿಳಿಸಿ ಮಕಾಡೆ ನೆಲಕಂಟುವ ನಿರ್ಧಾರ ನಾನು
ಸೂತ್ರವದೇ ಬಿಂದುವಪ್ಪಿದ ನಿರ್ಭಾರ ಗಾಳಿಪಟ ನೀನು.
ಬಿಡಿಸುವುದೇನು, ಸಡಿಲಿಸಲೂ ಆಗದ,
ಗಂಟಿನೆರಡು ತುದಿಗಳು ನಾವೀಗ.
ನೀ ಸಾಗಬೇಕು, ನಾ ಬರಲಾರೆ.

ಭಯ ನಾನು, ನಿಸ್ಸಂಶಯ ನೀನು,
ಜಡ ನಾನು, ನಿರಂತರ ನೀನು.
ನಿಂತಲ್ಲೇ ಹಿಂಬಾಲಿಸುವ ಕನಸೊಳಗೆ ನಾ,
ನಡೆಯುತಾ ನನ್ನೊಸಗೆಯ ಕಲ್ಪನೆಯಲಿ ನೀ.
ದಿನ ಹೀಗೇ ಸಾಗುತಿರಲು ಅಲ್ಲಲ್ಲೊಮ್ಮೊಮ್ಮೆ..

ನೀ ಮತ್ತೆ ಬೆಳೆಯುವ ಮಾತಾಡುತ್ತೀ..
ನಾನುಳಿಸಿಕೊಳುವ ಬಗೆ ಹುಡುಕುತ್ತೇನೆ.



2 comments:

  1. ನಾನುಳಿಸಿಕೊಳುವ ಬಗೆ... ಅಬ್ಬಾ!! ಏನು ಕಲ್ಪನಾ ಶಕ್ತಿ! ಏನು ಭಾವ ಶಕ್ತಿ!
    ಓದಿ ಮೌನವಾಗಿಬಿಟ್ಟೆ.. ಶಬ್ದಗಳ ಭಂಡಾರ ಖಾಲಿಯಾಗಿದೆ..
    Hats off Anu!

    ReplyDelete
  2. ನಿಜ ಅಲ್ಲ್ವಾ ಶೀಲಾ, ನಾನು ಎಂಬುದು ಅದು ಯಾರೇ ಆಗಿರಲಿ, ನನ್ನ ವಸ್ತುವಿನ ಅಥವಾ ನನ್ನ ಅನುಬಂಧಗಳ ಮಾತು ಬಂದಾಗ ಅದನ್ನ ನನಗಾಗಿ ಉಳಿಸಿಕೊಳ್ಳುವದಷ್ಟೇ ನನ್ನ ಗುರಿಯಾಗಿರ್ತದೆ...ಸ್ವಾರ್ಥ ಅನ್ನುವದ್ದೇ ಬದುಕಿನ ದೊಡ್ಡ ಸತ್ಯ..

    ReplyDelete