Saturday, February 16, 2013

ಗಾನಯಾನ


---------------

ಏಳು ಸ್ವರದ ಬಟ್ಟಲಲ್ಲಿ,

ನೂರು ರಾಗ ಜನಿಸಿತು..

ನೂರು ರಾಗದೊಡಲಿನಿಂದ

ಅಸಂಖ್ಯ ಭಾವ ಹೊಮ್ಮಿತು..

ಭಾವ ಲಹರಿಯೆಳೆಯ ಹೆಕ್ಕಿ

ಅರ್ಥ ಗೂಡು ಕಟ್ಟಿತು

ಭಾಷೆ ತತ್ತಿಯೊಡೆದು

ಅಕ್ಷರ ರಾಶಿ ಹುಟ್ಟಿತು.

ಸೇರಿ ಒಪ್ಪುವಂಥವೆಲ್ಲ

ಗುಂಪು ಶಬ್ಧವಾಯಿತು..

ಶಬ್ಧ ಸಾಲುಸಾಲುಗಳಿಗೆ,

ಲಯ ನಡಿಗೆಯ ಕಲಿಸಿತು.

ಯತಿ ನಿಲಿಸಿ ಅರ್ಥದೆಡೆಗೆ

ಅವಲೋಕನ ಕೊಡಿಸಿತು.

ಪ್ರಾಸ ಓರೆಕೋರೆ ತಿದ್ದಿ,

ದೃಷ್ಟಿ ಚುಕ್ಕೆಯಿಟ್ಟಿತು.

ಸಿದ್ಧ ಕವಿತೆ ನಾಚಿ ಮೆಲ್ಲ

ಹೊಸಿಲ ದಾಟಿ ಹೊರಟಿತು.

ದನಿ ಹಾಗೇ ಸಾಗುತಿತ್ತು

ಕವಿತೆಯದನು ಸೆಳೆಯಿತು.

ಮಿಲನ ಫಲಿಸಿ ಜನಿತ ಗಾನ,

ಪ್ರಕೃತಿ ನೋಡಿ ಮೆಚ್ಚಿತು.

ಮಡಿಲಲಿರಿಸಿ ಜತನಮಾಡಿ

ಸೂಕ್ತ ನೆಲೆಯ ಹುಡುಕಿತು.

ಗಾನಯಾನ ಶುಭವೇಳೆಗೆ

ಗುರಿಯ ಮುಟ್ಟಿಬಿಟ್ಟಿತು.

ನರನ ಕಂಠ ಮನದ ನಡುವೆ

ಮನೆಯ ಮಾಡಿ ಬಿಟ್ಟಿತು.

ಪ್ರಕೃತಿ ಒಂದು ಸೃಷ್ಟಿಯೊಳಗೆ

ಇನ್ನೊಂದನ್ನಿಟ್ಟಿತು.

ತಾಳಮೇಳ ಬೆರೆತ ಮೋಡಿ

ಜಗಕೇ ವರವಾಯಿತು.







1 comment:

  1. ಸಂಗೀತ ಮತ್ತು ಬದುಕು, ಎರಡನ್ನೂ ಸಮೀಕರಿಸಿ, ತೂಗಿ ತೆರೆದಿಟ್ಟ ಉತ್ತಮ ಕವನ.

    ReplyDelete