Thursday, February 21, 2013

ಎತ್ತಣಿಂದೆತ್ತ ಸಂಬಂಧವಯ್ಯಾ....
-------------------------------
ಇಂದೂ ಬರಲಿಲ್ಲ ಅವ, ಕಸ ಒಯ್ಯುವವ
ಇನ್ಯಾರಿಗಿಲ್ಲದಷ್ಟು ಕಾದು ಡಬ್ಬಿ ಒಳಗಿಡುವಾಗ
"ವಾರದ ರಜೆಯೋ, ಮುಷ್ಕರವೋ,
ಅನಾರೋಗ್ಯವೋ" - ಮನಸು ಚಿಂತಿಸುವುದು.
ಎತ್ತಣಿಂದೆತ್ತ ಸಂಬಂಧವಯ್ಯಾ....

ಮನೆಯೊಳ ಹೊರಗಿನ ಗಲೀಜೆತ್ತುವಾಗ
ವಾಸನೆಗೆ, ಹಾರುವ ಧೂಳಿಗೆ
ಮೂಗಿಲ್ಲದವನಂತೆ, ಕಣ್ಣಿಲ್ಲದವನಂತೆ
ನಿರ್ವಿಕಾರತೆಯಲೇ ಮುಳುಗಿರುತಾನೆ,
ಬೇತಾಳ ಪ್ರಶ್ನೆಯಾಗುತ್ತಾನೆ..

ಸಣ್ಣ ಕಟ್ಟು, ದೊಡ್ಡ ಕಟ್ಟು,
ಪಿಜ್ಜಾ ಕಾರ್ನರ್ ನ, ಮಕ್ಕಳಾಟಿಕೆಯ,
ಹೊಸಬಟ್ಟೆಯ ಖಾಲಿಡಬ್ಬಗಳು,
ಮುರಿಯದ, ಹಳೆಯದಷ್ಟೇ ಆದ ಮೆಟ್ಟುಗಳು..
ಏನೂ ಅನಿಸದಂತೆ ಸುಡುವದರ ಜೊತೆ ಸೇರಿಸುತಾನೆ..

ಮುರುಕು ಚಪ್ಪಲಿ, ಹರಕು ಬಟ್ಟೆ, ಕುರುಚಲು ಗಡ್ಡ
ಕಂದನ ಆಸೆಗಣ್ಣು, ಸಂಗಾತಿಯ ಬರಿಗಾಲು ಕಾಡವೇ?
ಅವನ ನಿರ್ಭಾವುಕ ಮೌನ ನನ್ನ ಕಾಡುತ್ತದೆ...
ಆಸೆ ಮೆಟ್ಟಿ ನಿಂತವನೇ?!- ಕ್ಷಣಕಾಲ ಅಸೂಯೆಯೂ..
ಕುತೂಹಲದ ಭಾರಕೆ ಬಾಗಿ ಕಾದುನಿಂತ ಆ ದಿನ....

ನಾನಿಟ್ಟ ಕಸದ ದೊಡ್ಡ ಮೂಟೆಯೆತ್ತಿದ ಕಣ್ಣು
ಕಲ್ಲಂತೆ ನಿಂತ ನನ್ನ ಕಣ್ಣಿಗೆ ತಾಕಿತ್ತಷ್ಟೇ..
ಉರಿವ ಕೆಂಪು ಕಣ್ಣು, ವೀಳ್ಯದೆಲೆ ಕೆಂಪಿನ ತುಟಿಯ
ಹೇಳಲಾಗದ ಹೇಳಬಾರದ ಸಿಟ್ಟು ಸುಡುವಷ್ಟು ಬಿಸಿ...
ಮೂಟೆಯಿಂದೀಚೆ ಇಣುಕಿದ್ದ ಚಪಾತಿಗಳು ಅಣಕಿಸಿದ್ದವು.

ಅದು ಮೌನವೂ ಅಲ್ಲ, ನಿರ್ವಿಕಾರತೆಯೂ ಅಲ್ಲ,
ಅಸಹಾಯಕತೆ ಅಸಹನೀಯವಾದ ನೋವು
ಅದು ಮತ್ತೂ ಬೆಳೆದು ಕಂದನ, ಸಂಗಾತಿಯ
ಚಿತ್ರದೊಳ ಸೇರಿ ಕೆಂಪಾದ ರೋಷ, ತಿರಸ್ಕಾರ.
ಅನಿವಾರ್ಯ, ಅವಿಭಾಜ್ಯ ಅಂಗವೇನೋ ಆಗಿದ್ದ,
ಆ ದಿನ ಇನ್ನೂ ಹತ್ತಿರದವನೆನಿಸಿದ್ದ...



2 comments:

  1. ನಾನಿಟ್ಟ ಕಸದ ದೊಡ್ಡ ಮೂಟೆಯೆತ್ತಿದ ಕಣ್ಣು
    ಕಲ್ಲಂತೆ ನಿಂತ ನನ್ನ ಕಣ್ಣಿಗೆ ತಾಕಿತ್ತಷ್ಟೇ..
    ಉರಿವ ಕೆಂಪು ಕಣ್ಣು, ವೀಳ್ಯದೆಲೆ ಕೆಂಪಿನ ತುಟಿಯ
    ಹೇಳಲಾಗದ ಹೇಳಬಾರದ ಸಿಟ್ಟು ಸುಡುವಷ್ಟು ಬಿಸಿ...
    ಮೂಟೆಯಿಂದೀಚೆ ಇಣುಕಿದ್ದ ಚಪಾತಿಗಳು ಅಣಕಿಸಿದ್ದವು.

    ಒಂದು ಹೊತ್ತು ಒಂದು ತುತ್ತಿಗಾಗಿ ಪರದಾಡುವ ಜೀವಕ್ಕೆ
    ಕಸದ ಮೂಟೆಯಲ್ಲಿ ಇಣುಕುವ ಚಪಾತಿ ಕಂಡರೆ ಹೇಗಿರಬೇಡ...
    ಎಲ್ಲೋ ಒಂದು ಕಡೆ ಮನಸ್ಸಿಗೆ ತುಂಬಾ ತಾಕಿ ಬಿಡುತ್ತದೆ.

    ತುಂಬಾ ಚನ್ನಾಗಿದೆ

    ReplyDelete
    Replies
    1. ನನ್ನ ತಾಕಿದ್ದು ನಿಮ್ಮನ್ನೂ ತಾಕುವಂತೆ ಬರೆದೆನಾದರೆ ಅದೇ ನನಗೆ ಬೇಕಾದದ್ದುಮತ್ತು ಬೇಕಾದಷ್ಟು ... ನಿಮ್ಮ ಪ್ರತಿಕ್ರಿಯೆಗಳೇ ನನಗೆ ಉತ್ತೇಜನ...ಧನ್ಯವಾದಗಳು.

      Delete