Friday, February 15, 2013

ಅರಿಕೆಯಷ್ಟೇ, ಇನ್ನೇನಲ್ಲ..
----------------------
ಇಂದು ನೆನಪಿಸುತಿದೆ,
ಬಣ್ಣಗೆಟ್ಟ ಉಗುರಿಗೆ ಬಣ್ಣಹಚ್ಚಿದ್ದು,
ಮುರಿದ ಕೈಯಳಲಿಗೆ ತಲೆ ಬಾಚಿದ್ದು,
ಬಾಗಗೊಡದ ಬಸಿರಹೊಟ್ಟೆ ಮೀಯಿಸಿದ್ದು,
ಸೌಟು ಮುಟ್ಟದವ ಜ್ವರಕೆ ಗಂಜಿ ಬೇಯಿಸಿದ್ದು
ಹೀಗೇ....
ನಾ ಕೇಳಿದ್ದಕ್ಕಲ್ಲ, ಕೇಳದೆಯೇ ನೀನೊದಗಿದ್ದು..

ಎದುರು ಬದುರು ಕುರ್ಚಿಗಳಲಿ
ನಿಟ್ಟಿಸುತ ತಾಸೆಷ್ಟೋ ಕಳೆದು,
ಹುಣ್ಣಿಮೆಗೂ ಅಮಾವಾಸ್ಯೆಗೂ,
ತಕ್ಕುದಾದ ಹಾಡು ನುಡಿದು,
ಕಣ್ಣ, ಕೈಯ್ಯ ಬೆಸೆದುಕೂತು,
ಹಸಿವೆ-ನಿದ್ರೆ ಮೀರಿ ವೇಳೆ ಸವಿದದ್ದು..

ಅಂದಿನೊಡಲಿಂದಲೇ ಬಂದ ಇಂದು ಅಂತಿಲ್ಲ.
ಕುರ್ಚಿಯೆರಡಿವೆ, ಒಂದನೊಂದು ನೋಡುತಿಲ್ಲ,
ಹಾಡೂ ಸಾಕಷ್ಟಿವೆ, ರಾಗದೊಳಗೆ ಕೂರುತಿಲ್ಲ,
ಕಣ್ಣು ಮಂಜುಮಂಜು, ದೃಷ್ಟಿ ಶುದ್ಧವಿಲ್ಲ,
ಕೈ ಬೆಸೆದರೂ ಗಾಳಿ ತೂರದ ಬಿಗಿತವಿಲ್ಲ,
ಇದ್ದೂ, ಇದಲ್ಲ ಅನಿಸುವ ಯಾವವೂ ಆಪ್ತವಲ್ಲ..

ಇಂದೇನು ಬಂತೋ,
ಅಕಾರ, ಬಣ್ಣ, ದನಿಯಿಲ್ಲದ್ದು
ನನ್ನ ನಿನ್ನ ಪಾಲು ಮಾಡಿದ್ದು,
ಕಳ್ಳನಂತೆ ಸದ್ದಿಲ್ಲದೆ ನಡು ನುಸುಳಿ,
ಇದ್ದುದ ಸೂರೆಗೈದು, ಅಲ್ಲೆಲ್ಲ
ಅಳತೆಗೊದಗದ ದೂರ ತಂದಿಟ್ಟದ್ದು.

ಕಾಲವೇ, ವಯಸೇ, ಭ್ರಮನಿರಸನವೇ,
ಅನುಭವವೇ, ಪಕ್ವತೆಯೇ, ಏಕತಾನತೆಯೇ,
ಪರಸ್ಪರ ಹೊಂದಿ ಒಂದಾದ ಕುರುಹೇ,
ನಂಬಿಕೆಯೇ, ಭರವಸೆಯೇ, ವಿಶ್ವಾಸವೇ..
ಅಥವಾ.....
ನಿಜವಾಗಿಯೂ ನಾವು ದೂರಾಗಿದ್ದೇವೆಯೇ?

ಇಂದೂ ಉಗುರು ಬಣ್ಣಗೆಟ್ಟಿದೆ,
ನೋಡುವರಿಲ್ಲೆಂದು..
ವಯಸಿಗೆ ಶರಣಾಗಿ ಕೈಗಳು,
ಕೂದಲ ತುರುಬು ಕಟ್ಟಲಾರವು..
ಹೊತ್ತ ಹೊಟ್ಟೆಯಲ್ಲ, ಆಧರಿಸುವ ಬೆನ್ನು
ಬಾಗಗೊಡುತಿಲ್ಲ,
ಮಾಡಿದ್ದೇ ಮಾಡಿ, ಬಡಿಸಿ, ತೊಳೆದು
ಜೋಡಿಸಿ, ಅಡುಗೆ ಕೈಲಾಗುತಿಲ್ಲ...
ಅದೇ ಅವಳೇ ನಾನು, ಈಗಲೂ ಕೇಳಲಾರೆ,
ನೀನಾಗಿ ಒದಗಬೇಕು...
ವೇಳೆ ಬಹಳವಿಲ್ಲ, ಈಗ ಸವಿಯಲೇಬೇಕು,
ಮತ್ತದಕೆ ಕಣ್ಣು-ಕೈ ಬೆಸೆಯಲೇಬೇಕು


1 comment: