Thursday, July 11, 2013

**

ಇನ್ನ್ಯಾವ ಭಾವ ಇನ್ನ್ಯಾವ ಬರಹ?
ಇನ್ನ್ಯಾವ ಹಾಳೆ ಇನ್ನ್ಯಾವ ಅಕ್ಷರ?
 
ಎದೆಗಿರಿದುಬಿಟ್ಟು
ಕೈ ಮುರಿದುಬಿಟ್ಟ ಮಾತು..
ಇನ್ನೆಲ್ಲಿ ಹುಟ್ಟೀತು ಯೋಚನೆ?
ಇನ್ನ್ಯಾವುದಾಗಿಸೀತು ಸ್ಪಂದನೆ?
.
ಬಗೆದೊಡಲು ಬಸಿದ ಸತ್ಯವ
ಕೆಂಪಲ್ಲದ ರಕ್ತವೆನುತಿರುವೆ.
ನಾನೂ ಮನುಷ್ಯಳೇ ಒಲವೇ...
ಇದಕಿಂತೇನು ಕೊಡಲಿ ಪುರಾವೆ?
 
ಕ್ಷಮಿಸು.. ನಿನ್ನ ಸೇರಿಸಿದ
ಅದೃಶ್ಯಸೇತು ಬಹುಶಃ ಜರಿಯುತಿದೆ...
ಮುರಿವ ಸದ್ದಿಗೆ ಹೃದಯ ದ್ರವಿಸುತಿದೆ
ಆ ನೆರೆಗೆಲ್ಲ, ಎಲ್ಲ ಕೊಚ್ಚಿ ಹೋಗುತಿದೆ.
 
ಕುರುಡು ಸಾಮ್ರಾಜ್ಯದಿ ನಾ ಬರಹವಾದೆ
ಕಿವುಡು ಬಯಲಲಿ ಮನಸ ಶ್ರುತಿ ಮಾಡಿ
ಪ್ರಾಣ ರಾಗ, ಎದೆಬಡಿತ ಲಯ ಮಾಡಿ
ಬಾಳು ಭಾವಗೀತೆ ಮಾಡಿದೆ, ಕಣ್ಮುಚ್ಚಿ ಹಾಡಿದೆ.
 
ನಿಜ, ಕಣ್ಬಿಟ್ಟದ್ದಿದ್ದರೆ ಬರೀ ನಿನಗಾಗಿ.
ಆ ಕಣ್ಣ ಮೆಚ್ಚುಗೆಯುಣಲಿಕಾಗಿ.
ನೀ ಕಣ್ತೆರೆದೇ ಇರಲಿಲ್ಲ, ಕಿವಿಗೊಟ್ಟೇ ಇರಲಿಲ್ಲ...
ಬಾಯಷ್ಟೇ ಹೇಳಿದ್ದು- "ನೀನೊಂದು ಸುಳ್ಳು..."
 
ಒಲವೇ, ಜಗದೆಲ್ಲಕಿಂತ
ಸ್ಪಷ್ಟ ಸತ್ಯ ನೀ ಮತ್ತೆನ್ನ ಬರಹವೆನಗೆ
ಸುಳ್ಳುಸತ್ಯದ ನಡುವಿರಬಾರದು ಬೆಸುಗೆ-ಒಸಗೆ
ಬಹುಶಃ ಮುಚ್ಚಿದ ಲೇಖನಿಯಿನ್ನೆನ್ನ ಗುರುತು
ಬೇಡ, ಇಣುಕುವುದೂ ಬೇಡಬಿಡು...
ಇನ್ನೇನಿದೆ ಇಲ್ಲಿದರ ಹೊರತು?!
ಬರೀ ಕಣ್ಣೀರ ಹೊಳೆಯೊಂದು
ಕಾಗದದ ದೋಣಿ ಸಾಲು ಹೊತ್ತು...
 
 
 

1 comment:

  1. ತುಂಬಾ ಆಳ ಅರ್ಥವ್ಯಾಪ್ತಿಯ ಕವನವಿದು. ಪ್ರಾಮಾಣಿಕ ಲೇಖನಿಯಿಂದ ಮಾತ್ರ ಇಂತಹ ಮಾರ್ಮಿಕ ಕವಿಯೇ ಸಾದ್ಯ. ನಾನೂ ಮನುಷ್ಯಳೇ ಒಲವೇ... ಎನ್ನುವಾಗ ಸಹಿಸಿಕೊಳ್ಳುವಷ್ಟೂ ಸಹಿಸಿ ಬಹುಶಃ ಈಗ ಬಾಯಿ ತೆರೆದಿತ್ತೀತು ಲೇಖನಿ! ಸ್ಪಷ್ಟ ಸತ್ಯ ನೀ ಮತ್ತೆನ್ನ ಬರಹವೆನಗೆ....

    ReplyDelete