Friday, July 5, 2013

ಅದಕೇ

ಸೆರಗೊಡ್ಡಿಹಳು ಭೂಮಿ ಬಯಸಿ ನಕ್ಷತ್ರವರ್ಷ
ಆಕಾಶ ಚೆಲ್ಲಲಾರ, ಇವಳು ಸುಮ್ಮನಾಗಳು...
ಕಾದು ರಾತ್ರಿಯಿಡೀ ಕಣ್ಣಿಬ್ಬನಿ ಸುರಿಸಿದೆ
ಖಾಲಿ ಸೆರಗು ಒದ್ದೆಒದ್ದೆ...
ಶಾಪಗ್ರಸ್ತ ಪಾರಿಜಾತಗಿಡ ಪರಿತಾಪ
ಯಾರದೇ ಆದರೂ ನೋಡಲಾರದು..
ಅಲ್ಲೆಲ್ಲೋ ಬಿದ್ದ ನೋವಿನ ನೆರಳಿಗೂ
ನಡುಗುವುದು, ನಲುಗುವುದು...
ಕಿತ್ತುದುರಿಸುವುದು ಪಟಪಟನೆ
ತನ್ನೆದೆಯ ತಾರಾಸಮೂಹ.
ಭೂರಮೆಯ ಸೆರಗ ತುಂಬ
ಬಿಳಿಕೆಂಪು ನಕ್ಷತ್ರರಾಶಿಯೀಗ...
ತಾ ಖಾಲಿಯಾಗಿ ಖಾಲಿಯೊಂದ
ತುಂಬಿಸಿದ ಹರ್ಷವದರದು..
ಅದಕೇ ಅಂಗಳದ ಈ ಗಿಡ
ಎಲ್ಲಕಿಂತ ಮೆಚ್ಚೆನಿಸುವುದು....





1 comment:

  1. ಅಂಗಳದ ಗಿಡ ಮತ್ತು ನಾನು ಎರಡೂ ತುಂಬಾ ಹತ್ತಿರದ ಸಂಬಂಧಿಗಳು ಮೇಡಂ. :(

    ReplyDelete