Wednesday, July 17, 2013

ಬೇನಾಮಿನೆಲೆಯಲೊಂದು ಗುನುಗು...

ಬೇನಾಮಿನೆಲೆಯಲೊಂದು ಗುನುಗು...
--------------------------
ಮೌನರಾಗದ ವಿಹ್ವಲ ಆಲಾಪ
ಶತಶತಮಾನಗಳ ಹೊಸಿಲು ದಾಟಿ
ತಲುಪಿದಾಗ ಆ ಬೇನಾಮಿ ನೆಲೆ,
ಅಲ್ಲಿತ್ತು ಎಂದಿಗೂ ಕುಂದದ ಚಂದ್ರಬಿಂಬ.
ತಪ್ತಕಣ್ಣ ಕೊಳದಲದರ ಪ್ರತಿಬಿಂಬ.
ಭಾವದೆಸೆತಕೆ ಏಳುವಲೆಗಳು
ಬಾಗಿಬಳುಕಿದಂತೆ ಆಕಾರವಷ್ಟೇ
ಬದಲಾಗಿ ಗಾತ್ರ ಅಳಿಯದುಳಿವ
ಶುದ್ಧ ಸಾಂತ್ವನದ ಪ್ರತೀಕ
ಮುದ್ದು ಮಿದುಮೊಲದ ಶಶಾಂಕ.
ಸಿಡಿವೆಲ್ಲ ಕಿಡಿ ತಣಿಸೋ ತಂಪು
ಒಡೆದೆಲ್ಲ ಗಡಿ, ಮಣಿಸೋ ಸೊಂಪು
ತಲ್ಲಣ-ಹಲ್ಲಣ ಶಾಂತವಾಗಿಸಿ
ಸ್ವರವೆಲ್ಲ ಶ್ರುತಿಸೇರಿಸುವ ಇಂಪು.

ಬಿಡು,
ಕಾಣಲಾರೆ ಕೇಳಲಾರೆ
ನಿನದದಕೆ ವಿಮುಖತೆ.
ಬೆಳ್ಳಂಬೆಳಕು, ಬಿರುಬಿಸಿಲ
ಬರಿಶಾಖದ ದಾಹ ನಿನಗೆ
ನೀ ಸೂರ್ಯನಭಿಮಾನಿ.
ತಂಪನರಿತಿಲ್ಲ ನೀನದ ಕುಡಿದಿಲ್ಲ...
ಉರಿಯೇ ಸೆಳೆದರೆ ಬಳಿಸಾರುತಿರು
ತಣಿಸುವುದನೆಂದೂ ಜರೆಯದಿರು.
ತಂಪು ನೀರಸವಲ್ಲ,
ಉರಿವುದಷ್ಟೇ ಹಿರಿದಲ್ಲ.

ಓ ಮನಸೇ,
ಒಮ್ಮೊಮ್ಮೆ ಉರಿಗೆ
ಶಮನೋಪಾಯವೂ
ಬೇಕೆನಿಸೀತು, ಆಗ ಬಂದೀಯ
ನೀನೀ ಕಡೆಗೆ, ಈ ಮಡಿಲ ತಂಪಿಗೆ.
ಹರಡಿಹುದು ಪ್ರೇಮಚಂದ್ರಿಕೆಯ
ಈ ಒಡಲ ತುಂಬ ಕಣ್ಣ ತುಂಬಿಹ
ಪೂರ್ಣ ಚಂದ್ರಬಿಂಬ
ಕಾಯಬಲ್ಲುದದು, ಕಾಯುವುರಿಯಲೇ
ಜನ್ಮಾಂತರಕೂ ತಂಪುಳಿಸಿಕೊಳುವುದು.
ಇದು ಚಂದ್ರನಭಿಮಾನಿ.

1 comment:

  1. ತಂಪು ನೀರಸವಲ್ಲ,
    ಉರಿವುದಷ್ಟೇ ಹಿರಿದಲ್ಲ
    ಬದುಕಿನ ಸಾರವೇ ಇಲ್ಲಿ ಸಂಗ್ರಹಿಸಿ ಹಾಕಿದ್ದೀರಾ ಅನಿಸಿತು. ಏನೋ ಉರಿಯುತ್ತಾರೆ ಅಂದಕೊಂಡವರೂ ಏನೂ ಸಾಧಿಸರು ಕಡೆಗೆ, ತಂಪು - ಮೌನಿಗಳು ಸಪ್ಪೆಯಲ್ಲ ಜಗಕೆ!

    ನಮಸ್ಕಾರ ಅನುರಾಧ ಮೇಡಂ,
    ನಿನ್ನೆ ನಿಮ್ಮದೊಂದು ಮುಖಪುಟದ ಸಂದೇಶ ನನ್ನನ್ನು ಕದಲಿಸಿ ಹಾಕಿತು. ನಿಮಗೆ ಗೊತ್ತಿಲ್ಲ ನಾನು ದಿನವಿಡೀ ಅದನ್ನೇ ನೂರ ನಾಲ್ವತ್ತು ನಾಲ್ಕು ಸಾರಿ ಓಡಿಕೊಂಡೆ. ಅಲ್ಲಿಗೆ ನಿಮಗೆ ಉತ್ತರಿಸಬೇಕೆಂದಿದ್ದೆ, ಆದರೆ ನನಗೆ ಬ್ಲಾಗ್ ಎಂದರೆ ಪಂಚಪ್ರಾಣ ಅದಕ್ಕೆ ಇಲ್ಲಿಗೆ ಉತ್ತರಿಸುತ್ತಿದ್ದೇನೆ.

    ನಿಮಗೆ ಗೊತ್ತಿಲ್ಲ ಮೇಡಂ, ನನಗೆ ನಾನೇ ಕರೆದುಕೊಂಡ ಶಾಪಗ್ರಸ್ತ ಹೆಸರು 'ಅಜ್ಞಾತ ಕವಿ' ಅಂತ! ಈ ಬ್ಲಾಗ್ ಲೋಕ ಪರಿಚಯವಾಗುವ ಮುಂಚೆ ನಾನೊಬ್ಬ ಅಕ್ಷರಶಃ ಅನಾಮಿಕ. ಏನೋ ತಮ್ಮಂತ ನಾಲ್ಕಾರು ಜನ ಈಗ ನನ್ನ ಕವನಗಳನ್ನೂ ಓಡುತ್ತಿದ್ದಾರೆ, ತಿದ್ದುತ್ತಿದ್ದಾರೆ. ನನಗದೆ ಹೀರಿತು.

    ನಾನು ಬ್ಲಾಗುಗಳನ್ನು ಅಮಿತವಾಗಿ ಪ್ರೀತಿಸುತ್ತೇನೆ. ಅದು ಬ್ಲಾಗರ್ ಆಗಲಿ, ವರ್ಡ್ ಪ್ರೆಸ್ ಆಗಲಿ ಬ್ಲಾಗುಗಳನ್ನು ಹುಡುಕಿಕೊಂಡು ಹೋಗಿ ಓದಿ ಬರುತ್ತೇನೆ. ಪುನಃ ಅವರೂ ನನ್ನ ಕವಿತೆ ಓದಲಿ ಎನ್ನುವುದು ಸ್ವಾರ್ಥ.

    ನಾನು ಕಂಡಂತೆ, ನಿಮ್ಮ ಕವಿತೆಗಳು ನನಗೆ ಪಾಠಗಳು. ಭಾಷೆ - ಸಂಸ್ಕೃತಿ - ಲಯ - ಆಳಾರ್ಥ ಮತ್ತು ವೈವಿದ್ಯತೆ ಎಲ್ಲವೂ ನಿಮ್ಮ ಹಿರಿಮೆಯೇ.

    ನಿಮ್ಮಮ್ತೋಬ್ಬರು ದಕ್ಕಿದ್ದೇ ನನಗೆ ಗಿರಿಮೆ.

    ReplyDelete