Tuesday, July 2, 2013

ಇಂದೇಕೋ ಬಲು ಕಾಡಿಹಳು ಮೇನಕೆ

ಎಂದಿನಂತಿರಲಿಲ್ಲ ಅಂದು,
ಏಳುತಲೇ ಅದುರಿದ ಬಲಗಣ್ಣು,
ಸ್ವರ್ಗದಲೂ ಮೂಡುವುದು ಭಯದ ಹುಣ್ಣು.

"ನಿನ್ನೂರು ನರಲೋಕವಿನ್ನಷ್ಟು ದಿನ
ಬೆಳೆಸು ಪ್ರಯಾಣ, ಒಲಿಸು ಋಷಿಯವನ"
ಹುಟ್ಟಿಗೇ ಬೆಸೆದ ಬದ್ಧತೆಗೆ ಒಡೆಯನಾಜ್ಞೆ....

ನರರ ವ್ಯಾಪಾರ ಪರದ ಬಾಳರಿತಿಲ್ಲ
ಇಹದ ಅನೇಕ ಬಂಧನಗಳು
ಚಂದವಂತೆ, ಮಾತ್ರ ಮುಕ್ತವಲ್ಲವಂತೆ...

ನಂಟು, ಒಸಗೆ, ಸಂಬಂಧ,
ದೃಶ್ಯಾದೃಶ್ಯ ಗಂಟಲಿ ಬೆಸೆವ ಬಂಧ,
ಬೆಳೆಸುವುದೇನೋ ಸರಿ, ಮತ್ತೊಡೆಯ ಕರೆದರೆ?!...

ಭಯವೆನಿಸಿತ್ತು, ಅಸ್ಪಷ್ಟವೆನಿಸಿತ್ತು,
ಹೋಗಲೇಬೇಕಿತ್ತು, ಕಾಯ ಕುಣಿಸಲೇ ಬೇಕಿತ್ತು,
ಇಳಿದು ನಲಿದು ಸೆಳೆದಳು, ಮರೆತೆಲ್ಲ ಕರ್ತವ್ಯಕೋಗೊಟ್ಟು..

ಧರೆ ಮೊದಲೇ ಚೆಲುವೆ,
ಮೇನಕೆ ಕಾಲಿಟ್ಟ ಕ್ಷಣ ಅಪ್ಸರೆಯಾಗಿ,
ವಸಂತ, ಕಾಮ ಸ್ಪರ್ಶಿಸಿ ಮದಭರಿತೆಯೂ ಆದಳು...

ಋಷಿಯ ಹನಿಹನಿತ್ಯಾಗಗೂಡಿದ ವೈರಾಗ್ಯತೊರೆಯಲಿ
ವಿಧಿ ತೆಪ್ಪವಾಗಿ, ಕಾಯಸುಖ ಹುಟ್ಟಾಗಿ
ಒಯ್ದು ಮತ್ತೆ ಬಿಟ್ಟದ್ದಾತನ ಹೊರಟ ಬಿಂದುವಿಗೆ...

ಗುರಿಯತ್ತ ನಡೆದ-ಉಳಿದ ದೂರ ತೆರೆಮರೆಗೆ
ನಿಂತ ನೆಲೆ ಸ್ವರ್ಗ ಸುರಿದೊಲವ ಮಳೆಗೆ
ದೇವ-ಮಾನವ ಕೂಟ ಮಾಯೆಯೊಳಗೆ...

ಮಿಲನವಿನ್ನೇನು ಬರೀ ಸುಖಿಸುವುದಲ್ಲವಲ್ಲಾ.,
ಫಲಿಸುತ್ತದೆ ಕೂಡಾ...ಫಲವಾಯ್ತು
ಅಂಥಿಂಥದ್ದಲ್ಲ, ಹೂವಂಥ ಹೆಣ್ಣಾಯ್ತು...

ಸ್ವರ್ಗವೀಗ ಬೇಕಿಲ್ಲ ಸ್ವರ್ಗದಾಕೆಗೆ
ಒಲವ ಸವಿಯುಂಡ ಮನಕೆ, ಸುಖವುಂಡ ದೇಹಕೆ
ದೈವತ್ವ, ಅಮರತ್ವ ಪೊಳ್ಳೆನಿಸಿದ ಮೇನಕೆಗೆ...

ಕಿಚ್ಚೇನು ಸ್ವರ್ಗದೊಡಲನೂ ಬಿಟ್ಟಿಲ್ಲ
ಅಮೃತವುಂಡವಳು ನೆಲದನ್ನ ಸವಿವುದಕೆ ದಹಿಸಿತು...
ಇಂದ್ರನ ಪ್ರಶ್ನೆ ಕರೆದಿತ್ತು-"ಮರೆತೆಯೇನು ನಿನ್ನೂರ, ನಿನ್ನವರ?"

ಅಳುವ ಕಂದ, ಅಸಹಾಯ ಸಂಗಾತಿ,
ಅನರ್ಘ್ಯ ನೆನಪು, ಅತೃಪ್ತ ಕನಸು
ನೋಯುವೆದೆ ತುಂಬ ಹಾಲು ಹೊತ್ತು..

ಭುಗಿಲೆದ್ದ ವಿರೋಧ ಅಸ್ವೀಕಾರಗಳ ನಡುವೆ
ಕಿತ್ತೆಲ್ಲ ಮತ್ತೆ ನಡೆವುದಿತ್ತು ಮೇಲ್ಮುಖ..
ದೇವತೆಗಿರುವಂತಿಲ್ಲವಲ್ಲಾ ಮನುಷ್ಯತ್ವ...

ಸ್ವರ್ಗದಸ್ತಿತ್ವವೊಂದು ನರಲೋಕದಿ ಜೀವತಳೆದು
ಮರಳಿದೆ ಮತ್ತೆ ಅತ್ತ, ಜೀವಂತಿಕೆಯಿಲ್ಲೇ ಬಿಟ್ಟು
ಇಂದ್ರನಾಸ್ಥಾನದ ಕುಣಿವ ಗೊಂಬೆ ಪಾತ್ರವುಟ್ಟು...

No comments:

Post a Comment