Wednesday, July 10, 2013

ಆತ, ಆಕೆ ಮತ್ತೆ ಅದು...

ಸಹಿಸಿಕೋ ನನ್ನ ದಯವಿಟ್ಟು
ಮುನಿಸಿಕೊಳದಿರು ಸಿಟ್ಟುಟ್ಟು
ನೀ ನನ್ನುಸಿರು ಕಣೇ..
ಸುಳ್ಳಲ್ಲ, ಪ್ರತಿಯೊಂದೂ
ಹೆಸರುಸುರುವುದು,
ಕಣ್ಮುಚ್ಚಿಸುವುದು,
ಗಾಳಿ ಮೊಗವ ಬರೆದು,
ನಗು ಮೂಡಿ ನಗಿಸುವುದು.
ಮಾತುದುರಿ ತಣಿಸುವುದು.
ಕದಪ ಕೆಂಪು ಮಣಿಸುವುದು.
ಚಿಂತೆ ಚಿತೆಯೇರುವುದು.
ಹುರುಪು ಮೈಮನ ಹೊಕ್ಕು
ಕ್ಷಣಗಳೆಲ್ಲವ ಅವಿಶ್ರಾಂತ
ಮಾಡಲನುವಾಗುವುದು.
ಕರ್ತವ್ಯ ಪ್ರಿಯವಾಗಿ,
ನಾನದರೊಳು ಹೊಕ್ಕು,
ಮತ್ತೆ ನಿನ್ನ ಕಾಣಲು
ಮಾತಾಡಲು ಹೊತ್ತಿಲ್ಲದೇ
ಗಂಟೆ ದಿನವಾಗಿ, ದಿನ ವಾರ
ವಾರ ಮಾಸವಾಗುರುಳುವುದು
ನನ್ನ ಅವಿರಾಮ ಗಳಿಗೆ
ನಿನ್ನ ಕಣ್ಣ ಹನಿಮುತ್ತಾಗುವುದು...
ಕೆನ್ನೆ ಮೇಲಿಳಿದ ಅದರ ಬಿಸಿ
ನನ್ನನೂ ತಲುಪುವುದು..
 
ಅಯ್ಯೋ ದೊರೆ..
ಸಹಿಸಿಕೊಳುವ ಮಾತೆಲ್ಲಿ?!
ಅಲಂಕಾರಪ್ರಿಯೆ ನಾನು,
ನಿನ್ನ ಧರಿಸಿ ಬಿಟ್ಟಿರುವೆ.
ಬೊಟ್ಟಾಗಿ, ನತ್ತಾಗಿ
ಓಲೆಯಾಗಿ ಬಳೆಯಾಗಿ
ಹಾರವಾಗಿ ಉಂಗುರವಾಗಿ.
ಬಟ್ಟೆಯಾಗಿ ಕಾಲ್ಗೆಜ್ಜೆಯಾಗಿ
ಮುಡಿಯಿಂದಡಿವರೆಗೂ ನೀನೇ.
ಕಳಚಲಾಗದ ಒಡವೆ ನಿನ್ನ
ನಾ ತೊಟ್ಟಿರುವಾಗ
ಬರುವ ಬರದಿರುವ
ದೇಹವ್ಯಾವ ಲೆಕ್ಕ?!
 
ಓ.. ಅದಾ..
ಅದಕೂ ಕಾರಣವುಂಟು
ಅಳುವಲ್ಲ ಅದು,
ಹೀಗಾಯ್ತು ನೋಡು..
ನಿನ್ನಾಸೆ ಹೊತ್ತು ತಂದ,
ಗೊತ್ತು, ನಿನ್ನೆದೆ ಸವರಿ ಬಂದ,
ಆ ಕಂಪನುಟ್ಟು ಬಂದ
ಗಾಳಿ ಬಿಡದೆ ಕಚಗುಳಿಯಿಟ್ಟದ್ದು.
ಅದೇ.. ಅದರಾಟಕೇ ಕಣೋ..
ನಕ್ಕೂನಕ್ಕೂ ಕಣ್ಣು ಹನಿಯಾದದ್ದು...
 
 

1 comment:

  1. ಇಲ್ಲಿನ ಅದು - ಅರ್ಥೈಸಿಕೊಂಡರೆ ಏನು ಬೇಕಾದರೂ ಆಗಬಹುದು ಅಲ್ಲವೇ ಮೇಡಂ. ನಿಮ್ಮ ಕವಿತಾ ಓಘ ಮತ್ತು ಅಗಾಧ ಸರಸ್ವತಿ ಅನುಗ್ರಹಿತ ಬೆಳಲಿಗೆ ನಮ್ಮ ಶರಣು.

    ReplyDelete